ADVERTISEMENT

ವಿಶ್ವ ಸ್ಕ್ವಾಷ್‌: ಮೂರನೇ ಸುತ್ತಿಗೆ ಸೌರವ್‌

ಪಿಟಿಐ
Published 12 ಡಿಸೆಂಬರ್ 2017, 19:30 IST
Last Updated 12 ಡಿಸೆಂಬರ್ 2017, 19:30 IST

ಚೆನ್ನೈ: ಅಮೋಘ ಆಟ ಆಡಿದ ಭಾರತದ ಸೌರವ್‌ ಘೋಷಾಲ್‌, ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ ನಲ್ಲಿ ನಡೆಯುತ್ತಿರುವ ವಿಶ್ವ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಘೋಷಾಲ್‌ 11–4, 11–3, 11–4ರಲ್ಲಿ ಇಂಗ್ಲೆಂಡ್‌ನ ಬೆನ್‌ ಕೊಲೆಮನ್‌ ವಿರುದ್ಧ ಗೆದ್ದರು.

ಹಿಂದಿನ ಪಂದ್ಯಗಳಲ್ಲಿ ಬಲಿಷ್ಠ ಎದುರಾಳಿಗಳನ್ನು ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ ಸೌರವ್‌, ನಿಖರ ಸರ್ವ್‌ ಮತ್ತು ಆಕರ್ಷಕ ರಿಟರ್ನ್‌ಗಳ ಮೂಲಕ ಮೂರೂ ಗೇಮ್‌ಗಳಲ್ಲೂ ಎದುರಾಳಿ ಆಟಗಾರನನ್ನು ತಬ್ಬಿಬ್ಬುಗೊಳಿಸಿದರು.

ADVERTISEMENT

ಮುಂದಿನ ಸುತ್ತಿನಲ್ಲಿ ಸೌರವ್‌, ಈಜಿಪ್ಟ್‌ನ ಎರಡನೇ ಶ್ರೇಯಾಂಕಿತ ಆಟಗಾರ ಕರೀಂ ಅಬ್ದೆಲ್‌ ವಿರುದ್ಧ ಸೆಣಸಲಿದ್ದಾರೆ.

ಜೋಷ್ನಾಗೆ ನಿರಾಸೆ
ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದ ಜೋಷ್ನಾ ಚಿಣ್ಣಪ್ಪ ಮತ್ತು ದೀಪಿಕಾ ಪಳ್ಳಿಕಲ್‌ ಅವರು ಆರಂಭಿಕ ಸುತ್ತಿನಲ್ಲೇ ನಿರಾಸೆ ಕಂಡರು.

14ನೇ ಶ್ರೇಯಾಂಕಿತ ಆಟಗಾರ್ತಿ ಜೋಷ್ನಾ 9–11, 13–11, 5–11, 9–11ರಲ್ಲಿ ಈಜಿಪ್ಟ್‌ನ ಶ್ರೇಯಾಂಕ ರಹಿತ ಆಟಗಾರ್ತಿ ಸಲ್ಮಾ ಹ್ಯಾನಿ ವಿರುದ್ಧ ಆಘಾತ ಅನುಭವಿಸಿದರು.

ಅಮೆರಿಕದ 13ನೇ ಶ್ರೇಯಾಂಕಿತ ಆಟಗಾರ್ತಿ ಒಲಿವಿಯಾ ಬ್ಲಾಚ್‌ಫೋರ್ಡ್‌ 11–7, 5–11, 11–9, 12–14, 11–8ರಲ್ಲಿ ದೀಪಿಕಾ ಸವಾಲು ಮೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.