ADVERTISEMENT

ವಿಶ್ವ ಸ್ನೂಕರ್‌: ಚಿತ್ರಾಗೆ ಅಗ್ರಸ್ಥಾನ

ಪ್ರಮೋದ ಜಿ.ಕೆ
Published 23 ನವೆಂಬರ್ 2014, 19:30 IST
Last Updated 23 ನವೆಂಬರ್ 2014, 19:30 IST

ಬೆಂಗಳೂರು: ಆಡಿದ ಎಲ್ಲಾ ಪಂದ್ಯಗಳಲ್ಲಿ  ಪ್ರಾಬಲ್ಯ ಮೆರೆದ ಬೆಂಗಳೂರಿನ ಚಿತ್ರಾ ಮಗಿಮೈರಾಜ್‌ ಐಬಿಎಸ್‌ಎಫ್‌ ವಿಶ್ವ ಸ್ನೂಕರ್ ಚಾಂಪಿ­ಯನ್‌ಷಿಪ್‌ನಲ್ಲಿ ‘ಡಿ’ ಗುಂಪಿ­ನಲ್ಲಿ ಅಗ್ರಸ್ಥಾನ ಗಳಿಸಿದರು. ಉಳಿದಂತೆ ಪಂಕಜ್‌ ಅಡ್ವಾಣಿ, ವಿದ್ಯಾ ಪಿಳ್ಳೈ ಕೂಡಾ ಗೆಲುವು ದಾಖಲಿಸಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯು­ತ್ತಿರುವ ಚಾಂಪಿಯನ್‌ಷಿಪ್‌­ನಲ್ಲಿ ಐದನೇ ದಿನವಾದ ಭಾನುವಾರ ಭಾರತದ ಎಲ್ಲಾ ಪ್ರಮುಖ ಸ್ಪರ್ಧಿಗಳು ಜಯಭೇರಿ ಮೊಳಗಿಸಿದರು.

ಚಿತ್ರಾ ಅವರು ಗುಂಪಿನ ತಮ್ಮ ಕೊನೆಯ ಪಂದ್ಯದಲ್ಲಿ 3–1 (32–67, 56–30, 65–64, 52–14) ಹಾಂಕಾಂಗ್‌ನ ಕಾ ಕೈ ವಾನ್‌ ಎದುರು ಗೆದ್ದರು. ಈ ಆಟಗಾರ್ತಿ ಈಗಾ­ಗಲೇ ನಾಕೌಟ್‌ ಹಂತ ತಲುಪಿ­ದ್ದಾರೆ.

ಅಮಿಗೆ ಗೆಲುವು: ಥಾಯ್ಲೆಂಡ್ ಆಟಗಾರ್ತಿ ಒಡ್ಡಿದ ಪ್ರಬಲ ಸವಾಲನ್ನು ಸಮರ್ಥವಾಗಿ ಎದುರಿಸಿದ ಭಾರತದ ಅಮಿ ಕಮಾನಿ 3–1ರಲ್ಲಿ ಥಾಯ್ಲೆಂಡ್‌ನ ಸಿರಾಫತ್‌ ಚಟ್ಕೊ­ಹೋಮರ್  ಎದುರು ಜಯ ಪಡೆದರು.

ಪಂಕಜ್‌ ಗೆಲುವು: ಹನ್ನೆರೆಡು ಬಾರಿಯ ವಿಶ್ವ ಚಾಂಪಿಯನ್‌ ಪಂಕಜ್‌ ಅಡ್ವಾಣಿ ಅವರ ಜಯದ ಓಟ ಮುಂದುವರಿದಿದೆ. ಪುರುಷರ ‘ಎಚ್‌’ ಗುಂಪಿನ ಪಂದ್ಯದಲ್ಲಿ ಬೆಂಗಳೂರಿನ ಆಟಗಾರ ಸತತ ಐದನೇ ಗೆಲುವು ಪಡೆದರು.ನಾಲ್ಕನೇ ಪಂದ್ಯದಲ್ಲಿ ಜಯ ಪಡೆ­ಯಲು ಪ್ರಯಾಸ ಪಟ್ಟಿದ್ದ ಪಂಕಜ್‌ ಅವರಿಗೆ ಬ್ರೆಜಿಲ್‌ನ ಟೆಡುಯಿ ಗಿನ್ನಿ­ಟ್ಟೆಸಿಯೊ ನೊಬ್ರಸ್‌ ಸವಾಲೊಡ್ಡಲು ಸಾಧ್ಯ­ವಾಗಲಿಲ್ಲ.  ಪಂಕಜ್‌ 4-0ರಲ್ಲಿ ಏಕಪಕ್ಷೀಯವಾಗಿ ಪಂದ್ಯ ಗೆದ್ದು­ಕೊಂಡರು.

ಈ ವರ್ಷದ ಬಿಲಿಯರ್ಡ್ಸ್‌ನಲ್ಲಿ ಎರಡು ಪ್ರಮುಖ ಪ್ರಶಸ್ತಿಗಳನ್ನು ಜಯಿಸಿರುವ ಪಂಕಜ್‌ ಮೊದಲ ಫ್ರೇಮ್‌ನಲ್ಲಿ 77-0ರಲ್ಲಿ ಮುನ್ನಡೆ ಗಳಿಸಿದರು. ಎರಡನೇ ಫ್ರೇಮ್‌ನಲ್ಲಿ 66-65ರಲ್ಲಿ ಜಯ ಗಳಿಸಿ ಮೂರನೇ ಫ್ರೇಮ್‌ನಲ್ಲಿ ‘ಶತಕ’ ಬಾರಿಸಿದರು. ಈ ಫ್ರೇಮ್‌ನಲ್ಲಿ ಅವರು 102 ಪಾಯಿಂಟ್‌ಗಳನ್ನು ಕಲೆ ಹಾಕಿದರೆ ಎದುರಾಳಿ ಆಟಗಾರ ಕಲೆ ಹಾಕಿದ್ದು 15 ಪಾಯಿಂಟ್ಸ್‌ ಮಾತ್ರ! ಆರಂಭದಲ್ಲಿ ಲಭಿಸಿದ ಮುನ್ನಡೆಯನ್ನು ಪಂಕಜ್ ಕೊನೆಯವರೆಗೂ ಉಳಿಸಿಕೊಂಡರು. ನಾಲ್ಕನೇ ಫ್ರೇಮ್‌ನಲ್ಲೂ ಅವರಿಗೆ 72-19ರಲ್ಲಿ ಜಯ ಒಲಿಯಿತು.

ಪಂಕಜ್‌ ಈಗಾಗಲೇ ನೌಕೌಟ್‌ ಹಂತ ಪ್ರವೇಶಿಸಿದ್ದಾರೆ. ಆದರೆ, ಗುಂಪಿ­ನಲ್ಲಿ ಅಗ್ರಸ್ಥಾನ ಗಳಿಸಬೇಕು ಎನ್ನುವುದು ಅವರ ಗುರಿಯಾಗಿದೆ. ಆದರೆ, ಚಾಂಪಿಯನ್‌ಷಿಪ್‌ನ ಅವ್ಯ­ವಸ್ಥೆಯ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಪಂದ್ಯ ಆಡುವ ವೇಳೆ ಎರಡು ಮೂರು ಬಾರಿ ಮೇಲಿನಿಂದ ಧೂಳು ಬಿದ್ದಿತು. ಆದ್ದರಿಂದ ಏಕಾಗ್ರತೆಯಿಂದ ಆಡಲು ಸಾಧ್ಯವಾಗಲಿಲ್ಲ. ಇಲ್ಲಿ ಎ.ಸಿ. ವ್ಯವ­ಸ್ಥೆಯೂ ಅಷ್ಟೊಂದು ಚೆನ್ನಾಗಿಲ್ಲ’ ಪಂಕಜ್ ಹೇಳಿದರು.

ಲಕ್ಕಿಗೆ ಗೆಲುವಿನ ಲಕ್‌: ಹಿಂದಿನ ಪಂದ್ಯದಲ್ಲಿ  ಸೋಲು ಕಂಡಿದ್ದ ಹೈದ­ರಾಬಾದ್‌ನ ಲಕ್ಕಿ ವಟ್ನಾನಿ ಭಾನುವಾರ 4-0ರಲ್ಲಿ ಸ್ವಿಟ್ಜರ್‌ಲೆಂಡ್‌ನ ಮೈಕ್ ಟಾಥ್‌ ಎದುರು ಜಯ ಪಡೆದರು.

ನಾಲ್ಕೂ ಫ್ರೇಮ್‌ ಸೇರಿದಂತೆ ಲಕ್ಕಿ ಒಟ್ಟು 282 ಪಾಯಿಂಟ್‌ಗಳನ್ನು ಕಲೆ ಹಾಕಿದರೆ, ಮೈಕ್ ಗಳಿಸಿದ್ದು 39 ಪಾಯಿಂಟ್ಸ್‌ ಮಾತ್ರ! ಭಾರತದ ಆಟಗಾರ ಮೂರನೇ ಫ್ರೇಮ್‌ನಲ್ಲಿ 99 ಪಾಯಿಂಟ್ಸ್‌ ಗಳಿಸಿದರು.

ಭಾರತದ ಸ್ಪರ್ಧಿಗಳ ಪ್ರಮುಖ ಪಂದ್ಯಗಳಲ್ಲಿ ವಿದ್ಯಾ ಪಿಳ್ಳೈ 3–0ರಲ್ಲಿ ಆಸ್ಟ್ರೇಲಿಯದ ಸುಯೆ ಮಾರ್ಟಿನ್‌ ಮೇಲೂ, ನೀತಾ ಸಾಂಘ್ವಿ 3–0ರಲ್ಲಿ ರಷ್ಯಾದ ಅನಸ್ತಾಸಿಜಾ ಸಿಂಗುರಿಂಟಿ ವಿರುದ್ಧವೂ, ಫೈಸಲ್ ಖಾನ್‌ 4–1ರಲ್ಲಿ ಮಹಮ್ಮದ್‌ ಫರೀಸ್ ಖಾನ್‌ ಮೇಲೂ, ಸೌರವ್‌ ಕೊಠಾರಿ 4–1ರಲ್ಲಿ ಲಿಮ್‌ ಚೂನ್‌ ಕೈಟ್ ವಿರುದ್ಧವೂ, ಜೂಡ್‌ ವಾಲಿಯಾ  3–2ರಲ್ಲಿ ಫಿಲಿಪ್ಪೀನ್ಸ್‌ನ ಡೇನಿಸ್‌ ಸಂಟೊಸ್ ಮೇಲೂ, ಶಿವರಾಮ್‌ ಅರೋರಾ 4–0ರಲ್ಲಿ ಕೆನಡಾದ ಅಲನ್‌ ವೈಟ್‌ಫೀಲ್ಡ್‌ ವಿರುದ್ಧವೂ ಜಯ ಸಾಧಿಸಿದರು.

ಮಾಸ್ಟರ್ಸ್‌ ವಿಭಾಗದ ಪ್ರಮುಖ ಪಂದ್ಯಗಳಲ್ಲಿ ಭಾರತದ ಎಸ್.ಎಚ್‌. ಕಾಮರಾಜ್‌ 3–2ರಲ್ಲಿ ಬ್ರೆಜಿಲ್‌ನ ಮಾರಿಕೊ ಡಿ ಸಿಲ್ವಾ ಬಾಟ್ರಾಲೊಮಿಯೊ ಮೇಲೂ, ಫರ್ಹಾದ್‌ ತೇಂಗ್ರಾ 3–1ರಲ್ಲಿ ಜಪಾನ್‌ನ ಹಷಿಟಿಕಾ ಕಾಮಿಹಿಷಿ ವಿರುದ್ಧವೂ, ಸಲೀಮ್‌ ಸೈಯದ್‌ ಅಬ್ದುಲ್‌ 3–0ರಲ್ಲಿ ಜಪಾನ್‌ನ ನೊಯಾಕಿ ಮಟುಸುಚಿಕಿ ಮೇಲೂ,  ಅಮರ್‌ ಚಾವ್ಲಾ 3–1ರಲ್ಲಿ ಸ್ವಿಟ್ಜರ್‌­ಲೆಂಡ್‌ನ ಸಿನಾನ್‌ ಸೆಟಿಕಯಾ ವಿರು­ದ್ಧವೂ, ಅಲೋಕ್‌ ಕುಮಾರ್‌ 3–1ರಲ್ಲಿ ಆಸ್ಟ್ರೇಲಿಯದ ರಿಚರ್ಡ್‌್ ಪೆರಿಕ್‌ ಮೇಲೂ ವಿಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.