ADVERTISEMENT

ವೆನಿಸ್‌ ಚೆಸ್‌ ಟೂರ್ನಿ: ಕರ್ನಾಟಕದ ಸ್ಟ್ಯಾನಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 19:30 IST
Last Updated 18 ಜೂನ್ 2017, 19:30 IST
ಜಿ.ಎ.ಸ್ಟ್ಯಾನಿ
ಜಿ.ಎ.ಸ್ಟ್ಯಾನಿ   

ಶಿವಮೊಗ್ಗ: ಗ್ರ್ಯಾಂಡ್‌ಮಾಸ್ಟರ್‌ ಪಟ್ಟದತ್ತ ಹೆಜ್ಜೆಯಿಟ್ಟಿರುವ ಕರ್ನಾಟಕದ ಜಿ.ಎ.ಸ್ಟ್ಯಾನಿ, ಇಟಲಿಯ ವೆನಿಸ್‌ನಲ್ಲಿ ಶನಿವಾರ ಮುಕ್ತಾಯಗೊಂಡ ಫೋರ್ನಿ ಡಿ ಸೊಪ್ರಾ ಓಪನ್ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ನಾಲ್ವರು ಗ್ರ್ಯಾಂಡ್‌ಮಾಸ್ಟರ್‌ ಮತ್ತು 11 ಮಂದಿ ಇಂಟರ್‌ನ್ಯಾಷನಲ್‌ ಮಾಸ್ಟರ್‌ ಆಟಗಾರರು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಶಿವಮೊಗ್ಗದ ಸ್ಟ್ಯಾನಿ 9 ಸುತ್ತುಗಳಿಂದ 7 ಪಾಯಿಂಟ್ಸ್‌ ಸಂಗ್ರಹಿಸಿ ಉತ್ತಮ ಸಾಧನೆ ಪ್ರದರ್ಶಿಸಿದರು.

ಮೊದಲ ಸುತ್ತಿನಲ್ಲಿ ತಮಗಿಂತ ಕೆಳಕ್ರಮಾಂಕದ ಡೇನಿಯಲ್‌ ಅರ್ನಾಡ್‌ (ಫ್ರಾನ್ಸ್‌)  ಜೊತೆ ಡ್ರಾ ಮಾಡಿಕೊಂಡಿದ್ದರು. ಆದರೆ ಮೂರು ಮತ್ತು ನಾಲ್ಕನೇ ಸುತ್ತಿನಲ್ಲಿ ಕ್ರಮವಾಗಿ ಐಎಂಗಳಾದ ಕ್ರೊವೇಷಿಯಾದ ಮುಫಿಕ್‌ ಗೊರಾನ್‌ ಮತ್ತು ಅಲ್ಬೇನಿಯಾದ ಕ್ವೆಂಡ್ರೊ ಲಂಬಿ ವಿರುದ್ಧ ಜಯಗಳಿಸುವ ಮೂಲಕ ಯಶಸ್ಸಿನ ಹಾದಿಗೆ ಮರಳಿದರು. ಮುಂದಿನ ಸುತ್ತಿನಲ್ಲಿ ಜರ್ಮನಿಯ ಗ್ರ್ಯಾಂಡ್‌ಮಾಸ್ಟರ್‌ ರಾಟ್‌ಸ್ಟೀನ್‌ ಅರ್ಕಾಡಿ ವಿರುದ್ಧ ಜಯಗಳಿಸುವ ಮೂಲಕ ಟೂರ್ನಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದರು.

ADVERTISEMENT

‘ಇಂಗ್ಲಿಷ್‌ ಓಪನಿಂಗ್’ ನಿಪುಣ ಈಕ್ವೆಡಾರ್‌ನ ಜಿ.ಎಂ. ಫ್ರಾಂಕೊ ಕಾರ್ಲೊಸ್‌ ವಿರುದ್ಧ ಅಂತಿಮ ಸುತ್ತಿನಲ್ಲಿ ಆಕ್ರಮಣಕಾರಿ ಆಟವಾಡಿ ಅಗ್ರಸ್ಥಾನಕ್ಕೆ ಅನಿವಾರ್ಯವಾಗಿದ್ದ ಗೆಲುವನ್ನು ಪಡೆದರು.

ಈ ಟೂರ್ನಿಯಿಂದ ಒಟ್ಟು 11 ರೇಟಿಂಗ್‌ ಪಾಯಿಂಟ್ಸ್ ಪಡೆಯುವ ಮೂಲಕ ಸ್ಟ್ಯಾನಿ ಅವರ ಒಟ್ಟಾರೆ ರೇಟಿಂಗ್‌ 2,500ಕ್ಕೆ ತಲುಪಿದೆ. ಈ ಟೂರ್ನಿಯಲ್ಲಿ ಇನ್ನೊಬ್ಬ ಜಿ.ಎಂ. ಆಟಗಾರನನ್ನು ಎದುರಿಸುತ್ತಿದ್ದಲ್ಲಿ, ಎರಡನೇ ‘ಜಿಎಂ ನಾರ್ಮ್’ ಗಿಟ್ಟಿಸಲೂ ಕರ್ನಾಟಕ ಆಟಗಾರನಿಗೆ ಅವಕಾಶವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.