ADVERTISEMENT

‘ವೈಟ್ವಾಷ್‌’ನಿಂದ ಪಾರಾದ ಇಂಗ್ಲೆಂಡ್‌

ಮೂರನೇ ಏಕದಿನ ಪಂದ್ಯ: ಕೇದಾರ್‌ ಹೋರಾಟಕ್ಕೆ ಸಿಗದ ಫಲ; ಭಾರತಕ್ಕೆ 2–1ರಲ್ಲಿ ಸರಣಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 17:33 IST
Last Updated 23 ಜನವರಿ 2017, 17:33 IST
‘ವೈಟ್ವಾಷ್‌’ನಿಂದ ಪಾರಾದ ಇಂಗ್ಲೆಂಡ್‌
‘ವೈಟ್ವಾಷ್‌’ನಿಂದ ಪಾರಾದ ಇಂಗ್ಲೆಂಡ್‌   
ಕೋಲ್ಕತ್ತ: ರೋಚಕ ಘಟ್ಟದ ಹೋರಾಟದಲ್ಲಿ ಸೊಗಸಾಗಿ ಬೌಲಿಂಗ್‌ ಮಾಡಿದ ಬಲಗೈ ವೇಗಿ ಕ್ರಿಸ್‌ ವೋಕ್ಸ್‌ (75ಕ್ಕೆ2) ಆಂಗ್ಲರ ನಾಡಿನ ತಂಡವನ್ನು ‘ವೈಟ್‌ವಾಷ್‌‘ ಭೀತಿಯಿಂದ ಪಾರು ಮಾಡಿದರು.
 
ವೋಕ್ಸ್‌ ಅವರ  ಪರಿಣಾಮಕಾರಿ ದಾಳಿ ಹಾಗೂ ಬೆನ್‌ ಸ್ಟೋಕ್ಸ್‌ (ಔಟಾಗದೆ 57; 39ಎ, 4ಬೌಂ, 2ಸಿ) ಮತ್ತು (63ಕ್ಕೆ3) ಅವರ ಆಲ್‌ರೌಂಡ್‌ ಆಟದ ಬಲದಿಂದ ಇಂಗ್ಲೆಂಡ್‌ ತಂಡ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ 5ರನ್‌ಗಳಿಂದ ಭಾರತವನ್ನು ಮಣಿಸಿತು.
 
ಈ ಸೋಲಿನ ಹೊರತಾಗಿಯೂ ವಿರಾಟ್‌ ಕೊಹ್ಲಿ ಸಾರಥ್ಯದ ಆತಿಥೇಯ ತಂಡ  2–1ರಲ್ಲಿ ಸರಣಿ ಗೆದ್ದು ಬೀಗಿತು.
 
ಮೊದಲು ಬ್ಯಾಟ್‌ ಮಾಡಿದ ಎಯೊನ್‌ ಮಾರ್ಗನ್‌ ಬಳಗ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 321ರನ್‌ ಪೇರಿಸಿತು. ಈ ಮೂಲಕ ಪ್ರವಾಸಿ ತಂಡ ಸರಣಿಯಲ್ಲಿ ಸತತ ಮೂರನೇ ಬಾರಿ 300ಕ್ಕೂ ಅಧಿಕ ರನ್‌ ಕಲೆಹಾಕಿದ ಶ್ರೇಯಕ್ಕೆ ಭಾಜನವಾಯಿತು.
 
ಸವಾಲಿನ ಗುರಿ ಬೆನ್ನಟ್ಟುವ ಹಾದಿಯಲ್ಲಿ ಭಾರತ ತಂಡ ಕೆಚ್ಚೆದೆಯ ಹೋರಾಟ ನಡೆಸಿತಾದರೂ 50 ಓವರ್‌ಗಳಲ್ಲಿ 9ವಿಕೆಟ್‌ಗೆ 316ರನ್‌ ಕಲೆಹಾಕಿ  ಸವಾಲು ಅಂತ್ಯಗೊಳಿಸಿತು.
 
ಪ್ರಮುಖ ಆಟಗಾರರು ಬೇಗನೆ ಔಟಾಗಿದ್ದರಿಂದ ಭಾರತದ ಗೆಲುವು ಕಷ್ಟ ಎಂಬ ಭಾವನೆ ಕ್ರಿಕೆಟ್‌ ಪ್ರೇಮಿಗಳ ಮನದಲ್ಲಿ ನೆಲೆಸಿತ್ತು. ಆದರೆ ಹಾರ್ದಿಕ್‌ ಪಾಂಡ್ಯ (56; 43ಎ, 4ಬೌಂ, 2ಸಿ) ಮತ್ತು ಕೇದಾರ್ ಜಾಧವ್‌ (90; 75ಎ, 12ಬೌಂ, 1ಸಿ) ತಮ್ಮ ಸ್ಫೋಟಕ  ಬ್ಯಾಟಿಂಗ್‌ ಮೂಲಕ ‘ಸಿಟಿ ಆಫ್‌ ಜಾಯ್‌’ ಖ್ಯಾತಿಯ ಕೋಲ್ಕತ್ತದ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದರು.
 
ಈ ಜೋಡಿ ಆರನೇ ವಿಕೆಟ್‌ ಪಾಲುದಾರಿಕೆಯಲ್ಲಿ 13.5 ಓವರ್‌ಗಳಲ್ಲಿ 7.51ರ ಸರಾಸರಿಯಲ್ಲಿ 104ರನ್‌ ಕಲೆಹಾಕಿ ತಂಡವನ್ನು ಗೆಲುವಿನ ಹೆಬ್ಬಾಗಿಲಿಗೆ ತಂದು ನಿಲ್ಲಿಸಿತ್ತು. 
 
ಅಂತಿಮ ಓವರ್‌ನಲ್ಲಿ ನಿರಾಸೆ: 50ನೇ ಓವರ್‌ನಲ್ಲಿ ಭಾರತದ ಜಯಕ್ಕೆ 16 ರನ್‌ಗಳು ಬೇಕಿದ್ದವು. ಕ್ರೀಸ್‌ ವೋಕ್ಸ್‌ ಹಾಕಿದ ಮೊದಲ ಎಸೆತವನ್ನು ಎಕ್ಸ್‌ಟ್ರಾ ಕವರ್‌ನತ್ತ ಸಿಕ್ಸರ್‌ಗಟ್ಟಿದ ಮಹಾ ರಾಷ್ಟ್ರದ ಬಲಗೈ ಬ್ಯಾಟ್ಸ್‌ಮನ್‌ ಕೇದಾರ್‌ ಜಾಧವ್‌ ನಂತರದ ಎಸೆತವನ್ನು ಅದೇ ಜಾಗದಲ್ಲಿ ಬೌಂಡರಿ ಹೊಡೆದರು.
 
ಇನ್ನು ಆರು ರನ್‌ಗಳು ಬೇಕಿದ್ದರಿಂದ ಡ್ರೆಸಿಂಗ್‌ ಕೊಠಡಿಯಲ್ಲಿ ಕುಳಿತಿದ್ದ ನಾಯಕ ಕೊಹ್ಲಿ ಅದಾಗಲೇ ಸಹ ಆಟ ಗಾರರೊಂದಿಗೆ ಸಂಭ್ರಮ ಆಚರಿಸುತ್ತಿ ದ್ದರು. ದೋನಿ ಕೂಡಾ ಅದೇ ಭರವಸೆಯಲ್ಲಿ ನಗುತ್ತಾ ನಿಂತಿದ್ದರು.
 
ಆದರೆ ನಂತರದ ಎರಡು ಎಸೆತಗಳಲ್ಲಿ ಜಾಧವ್‌ ರನ್‌ ಗಳಿಸಲಿಲ್ಲ. ಹೀಗಾಗಿ ಕುತೂಹಲ ಇಮ್ಮಡಿಸಿತ್ತು. ಈ ಹಂತದಲ್ಲಿ ಜಾಧವ್‌  ಬ್ಯಾಟ್‌ ಬದಲಿ ಸಿದರು. ಐದನೇ ಎಸೆತದಲ್ಲಿ ಅವರು  ಡೀಪ್‌ ಪಾಯಿಂಟ್‌ನತ್ತ ಬಾರಿಸಿದ ಚೆಂಡು ಬೌಂಡರಿ ಗೆರೆಯ ಆಚೆ ಹೋಗಿ ಬೀಳಲಿದೆ ಎಂದು ಭಾವಿಸಿದ್ದ ಅಭಿಮಾನಿ ಗಳಿಗೆ ನಿರಾಸೆ ಕಾಡಿತು. ಜಾಧವ್‌ ಅಟ್ಟಿದ ಚೆಂಡನ್ನು ಸ್ಯಾಮ್‌ ಬಿಲ್ಲಿಂಗ್ಸ್‌ ಸುಲಭವಾಗಿ ಹಿಡಿತಕ್ಕೆ ಪಡೆದರು. 
 
ಹೀಗಾಗಿ ಅಂತಿಮ ಎಸೆತದಲ್ಲಿ ಆರು ರನ್‌ ಬೇಕಿತ್ತು. ಕ್ರಿಸ್‌ನಲ್ಲಿದ್ದ ಭುವನೇಶ್ವರ್‌ ಕುಮಾರ್‌ ಚೆಂಡನ್ನು ಸಿಕ್ಸರ್‌ಗೆ ಹೊಡೆಯಲೇಬೇಕಿತ್ತು.  ಭುವಿ, ಬ್ಯಾಟನ್ನು ವಂಚಿಸಿದ ಚೆಂಡು ವಿಕೆಟ್‌ ಕೀಪರ್‌ ಜಾಸ್‌ ಬಟ್ಲರ್‌ ಕೈ ಸೇರುತ್ತಿದ್ದಂತೆ ಮೈದಾನದಲ್ಲಿ ನೀರವ ಮೌನ ಆವರಿಸಿತು. ಇಂಗ್ಲೆಂಡ್‌ ಆಟಗಾರರ ಮೊಗದಲ್ಲಿ ಮಂದಹಾಸ ಅರಳಿತು.
 
ಆಸರೆ:  ಇನಿಂಗ್ಸ್‌ ಆರಂಭಿಸಿದ ಅಜಿಂಕ್ಯ ರಹಾನೆ (1) ಮತ್ತು ಕೆ.ಎಲ್‌. ರಾಹುಲ್‌ (11) ಬೇಗನೆ ಔಟಾದರು. ಆದರೆ ನಾಯಕ ಕೊಹ್ಲಿ (55) ಮತ್ತು ಯುವರಾಜ್‌ ಸಿಂಗ್‌ (45) ಮೂರನೇ ವಿಕೆಟ್‌ಗೆ 65ರನ್‌ ಗಳಿಸಿ ಆಸರೆಯಾದರು. ಆದರೆ ದೋನಿ (25) ಅಭಿಮಾನಿಗಳಿಗೆ ನಿರಾಸೆ ಕಾಡಿತು.
 
ದಿಟ್ಟ ಆರಂಭ: ಜಾಸನ್‌ ರಾಯ್‌ (65; 56ಎ, 10ಬೌಂ, 1ಸಿ) ಮತ್ತು ಸ್ಯಾಮ್‌ ಬಿಲ್ಲಿಂಗ್ಸ್‌ (35) ಮೊದಲ ವಿಕೆಟ್‌ಗೆ 98ರನ್‌ ಗಳಿಸಿ ಇಂಗ್ಲೆಂಡ್‌ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಇವರಿಬ್ಬರ ವಿಕೆಟ್‌ ಪತನದ ಬಳಿಕ ಜಾನಿ ಬೆಸ್ಟೋವ್‌ (56; 64ಎ, 5ಬೌಂ, 1ಸಿ), ಎಯೊನ್‌ ಮಾರ್ಗನ್‌ (43) ಚೆಂದದ ಆಟವಾಡಿ ತಂಡವನ್ನು 300ರ ಗಡಿ ದಾಟಿಸಿದರು.
 
**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.