ADVERTISEMENT

ಶುಭಾಶಯಗಳ ಮಹಾಪೂರ

41ನೇ ಹುಟ್ಟುಹಬ್ಬ ಆಚರಿಸಿಕೊಂಡ ಸಚಿನ್ ತೆಂಡೂಲ್ಕರ್‌

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 19:44 IST
Last Updated 24 ಏಪ್ರಿಲ್ 2014, 19:44 IST

ಮುಂಬೈ (ಪಿಟಿಐ): ಕ್ರಿಕೆಟ್ ದಿಗ್ಗಜ, ದಾಖಲೆಗಳ ಸರದಾರ, 24 ವರ್ಷ ಕಾಲ ಭಾರತ ತಂಡದ ಶಕ್ತಿಯಾಗಿ ಮೆರೆದ ಸಚಿನ್ ತೆಂಡೂಲ್ಕರ್‌ ಗುರುವಾರ 41ನೇ ಜನ್ಮದಿನ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮುಂಬೈ ಇಂಡಿಯನ್ಸ್ ತಂಡದ ಸಲಹೆಗಾರರಾಗಿರುವ ಸಚಿನ್‌, ಮತದಾನ ಮಾಡಲು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಿಂದ (ಯುಎಇ) ಎರಡು ದಿನಗಳ ಹಿಂದೆಯೇ ಮುಂಬೈಗೆ ಬಂದಿದ್ದರು. ಹಾಗಾಗಿ ತವರಿನಲ್ಲಿಯೇ ಕುಟುಂಬ ಹಾಗೂ ಸ್ನೇಹಿತರ ಉಪಸ್ಥಿತಿಯಲ್ಲಿ ಜನ್ಮದಿನ ಆಚರಿಸಿಕೊಂಡರು. ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಅವರು ಆಚರಿಸಿಕೊಂಡ ಮೊದಲ ಜನ್ಮದಿನವಿದು.

ಸ್ನೇಹಿತರು, ಹಾಲಿ, ಮಾಜಿ ಕ್ರಿಕೆಟಿಗರು ಹಾಗೂ ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ಅಭಿಮಾನಿಗಳು ‘ಮಾಸ್ಟರ್ ಬ್ಲಾಸ್ಟರ್‌’ಗೆ  ಟ್ವಿಟರ್‌ನಲ್ಲಿ ಜನ್ಮದಿನದ ಶುಭಾಶಯ ಕೋರಿದ್ದಾರೆ. ‘ನಾನು ಕ್ರಿಕೆಟ್‌ ಆಡಲು ಕಾರಣ ತೆಂಡೂಲ್ಕರ್‌. ಅವರಿಗೆ ಜನ್ಮದಿನದ ಶುಭಾಶಯಗಳು. ನೀವು ಎಂದೆಂದಿಗೂ ಕ್ರಿಕೆಟ್‌ ದಂತಕತೆ’ ಎಂದು ಭಾರತ ತಂಡದ ಉಪನಾಯಕ ವಿರಾಟ್‌ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ರೋಹಿತ್‌ ಶರ್ಮ, ಗೌತಮ್‌ ಗಂಭೀರ್‌, ಮೈಕಲ್‌ ವಾನ್‌, ರಸೆಲ್‌ ಅರ್ನಾಲ್ಡ್‌, ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಸೇರಿದಂತೆ ಪ್ರಮುಖರು ಟ್ವೀಟ್‌ ಮಾಡಿದ್ದಾರೆ. ‘ನನ್ನ ಕ್ರಿಕೆಟ್ ದೇವರು ಸಚಿನ್‌ಗೆ ಜನ್ಮದಿನದ ಶುಭಾಶಯಗಳು’ ಎಂದು ಶ್ರೀಶಾಂತ್‌ ಟ್ವೀಟ್‌ ಮಾಡಿದ್ದಾರೆ.

ವಿಶ್ವದಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳಿಗೆ ತೆಂಡೂಲ್ಕರ್‌ ಕೃತಜ್ಞತೆ ಸಲ್ಲಿಸಿದ್ದಾರೆ. ‘ನಾನು ವೋಟ್‌ ಮಾಡಿದೆ. ನೀವು? ಮತದಾನದ ದಿನವೇ ನನ್ನ ಜನ್ಮದಿನ ಬಂದಿದೆ. ಎಷ್ಟೊಂದು ಸುಂದರ ಕ್ಷಣವಿದು’ ಎಂದು ಸಚಿನ್‌ ತಮ್ಮ ಟ್ವಿಟರ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

ಸಚಿನ್‌ ಈಗ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ತಂಡವೊಂದರ ಜಂಟಿ ಮಾಲೀಕ ಕೂಡ. ಅವರು ಕೊಚ್ಚಿ ಫ್ರಾಂಚೈಸ್‌ ಖರೀದಿಸಿದ್ದಾರೆ. ಮಹೇಶ್‌ ಭೂಪತಿ ಸ್ಥಾಪಿಸಿರುವ ಟೆನಿಸ್‌ ಪ್ರೀಮಿಯರ್‌ ಲೀಗ್‌ನಲ್ಲಿಯೂ ಮುಂಬೈ ಫ್ರಾಂಚೈಸ್‌ ಖರೀದಿಸಿದ್ದಾರೆ ಎಂಬ ಸುದ್ದಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.