ADVERTISEMENT

ಶ್ರೀಕಾಂತ್‌, ಸೈನಾ ಶುಭಾರಂಭ

ಬ್ಯಾಡ್ಮಿಂಟನ್‌: ಟೂರ್ನಿಯಿಂದ ಹೊರಬಿದ್ದ ಸಿಂಧು, ಕಶ್ಯಪ್‌

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST
ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದ ಸೈನಾ ನೆಹ್ವಾಲ್  ಪ್ರಜಾವಾಣಿ ಸಂಗ್ರಹ ಚಿತ್ರ
ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದ ಸೈನಾ ನೆಹ್ವಾಲ್ ಪ್ರಜಾವಾಣಿ ಸಂಗ್ರಹ ಚಿತ್ರ   

ಸಿಡ್ನಿ (ಪಿಟಿಐ/ ಐಎಎನ್‌ಎಸ್‌): ಆರಂಭದಲ್ಲಿ ಎದುರಾದ ಹಿನ್ನಡೆಯನ್ನು ಮೆಟ್ಟಿನಿಂತು ದಿಟ್ಟ ಆಟ ಆಡಿದ ಭಾರತದ ಕೆ.ಶ್ರೀಕಾಂತ್‌ ಮತ್ತು ಸೈನಾ ನೆಹ್ವಾಲ್‌ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಆದರೆ ಪಿ.ವಿ. ಸಿಂಧು ಹಾಗೂ ಪರುಪಳ್ಳಿ ಕಶ್ಯಪ್‌ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಪಂದ್ಯದಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ಶ್ರೀಕಾಂತ್‌ 14–21, 21–8, 22–20ರಲ್ಲಿ ಡೆನ್ಮಾರ್ಕ್‌ನ ಹಾನ್ಸ್‌ ಕ್ರಿಸ್ಚಿಯನ್‌ ವಿಟ್ಟಿಂಗುಸ್‌ ಎದುರು ಆಶ್ಚರ್ಯಕರ ರೀತಿಯಲ್ಲಿ ಗೆಲುವಿನ ನಗೆ ಚೆಲ್ಲಿದರು.

ಉಭಯ ಆಟಗಾರರು ಹಿಂದೆ ಒಮ್ಮೆ ಮುಖಾಮುಖಿಯಾಗಿದ್ದಾಗ ಶ್ರೀಕಾಂತ್‌ ಪರಾಭವಗೊಂಡಿದ್ದರು. ಈ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಲೆಕ್ಕಾಚಾರ ದೊಂದಿಗೆ ಕಣಕ್ಕಿಳಿದ ಭಾರತದ ಆಟಗಾರನ ಆರಂಭ ಉತ್ತಮವಾಗಿ ರಲಿಲ್ಲ.  ಆಟದ ಎಲ್ಲಾ ವಿಭಾಗಗ ಳಲ್ಲಿಯೂ ಪ್ರಭುತ್ವ ಸಾಧಿಸಿದ ವಿಟ್ಟಿಂಗುಸ್‌ ಸುಲಭವಾಗಿ ಗೇಮ್‌ ಗೆದ್ದು ಮುನ್ನಡೆ ಕಂಡುಕೊಂಡರು.

ಆದರೆ ಎರಡನೇ ಗೇಮ್‌ನಲ್ಲಿ ಶ್ರೀಕಾಂತ್‌ ಪುಟಿದೆದ್ದರು. ಆರಂಭಿಕ ನಿರಾಸೆಯಿಂದ ಕಿಂಚಿತ್ತೂ ವಿಶ್ವಾಸ ಕಳೆದುಕೊಳ್ಳದಂತೆ ಕಂಡ ಅವರು ಯೋಜನಾಬದ್ಧವಾಗಿ ಆಡಿದರು. ಅಂಗಳದಲ್ಲಿ ಚುರುಕಾಗಿ ಓಡಾಡು ವುದರ ಜತೆಗೆ ಆಕರ್ಷಕ ಸರ್ವ್‌ಗಳ ಮೂಲಕ ಎದುರಾಳಿ ಆಟಗಾರನನ್ನು ಕಂಗೆಡಿಸಿದರು. ಈ ಮೂಲಕ ಗೇಮ್‌ ಗೆದ್ದು 1–1ರಲ್ಲಿ ಸಮಬಲ ಸಾಧಿಸುವಲ್ಲಿ ಸಫಲರಾದರು.

ಮೂರನೇ ಗೇಮ್‌ನಲ್ಲಿ  ಆಕ್ರಮಣ ಕಾರಿ ಆಟಆಡಿದ ಭಾರತದ ಆಟಗಾರ ಸತತ ಆರು ಪಾಯಿಂಟ್ಸ್‌ಗಳನ್ನು ಕಲೆಹಾಕಿ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು. ಶ್ರೀಕಾಂತ್‌  ಸಿಡಿಸಿದ ಬಲಿಷ್ಠ ಸ್ಮ್ಯಾಷ್‌ ಮತ್ತು ರಿಟರ್ನ್‌ಗಳಿಂದ ತಬ್ಬಿಬ್ಬಾದ ಡೆನ್ಮಾರ್ಕ್‌ನ ಆಟಗಾರ 53ನೇ ನಿಮಿಷದಲ್ಲಿ ಸೋಲೊಪ್ಪಿಕೊಂಡರು.

ಇದರೊಂದಿಗೆ ಶ್ರೀಕಾಂತ್‌ ಎದುರಾಳಿ ಆಟಗಾರನ ವಿರುದ್ಧದ ಗೆಲುವಿನ ಅಂತರ ವನ್ನು 1–1ರಲ್ಲಿ ಸಮಬಲಗೊಳಿಸಿದರು.

ಸೈನಾಗೆ ಜಯ:  ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸೈನಾ ನೆಹ್ವಾಲ್‌ ಸಿಂಗಲ್ಸ್‌ ವಿಭಾಗದ ಮೊದಲ ಪಂದ್ಯದಲ್ಲಿ 21–12, 21–10ರಲ್ಲಿ ಮಲೇಷ್ಯಾದ ಚೆಹಾ ಲಿಡ್ಡಿಯಾ ಯಿ ಯು ಎದುರು ಗೆಲುವು ಗಳಿಸಿದರು.

ಸಿಂಧುಗೆ ನಿರಾಸೆ: ವಿಶ್ವ ಚಾಂಪಿಯನ್‌ ಷಿಪ್‌ನಲ್ಲಿ  ಎರಡು ಬಾರಿ ಕಂಚು ಗೆದ್ದ ಸಾಧನೆ ಮಾಡಿರುವ ಪಿ.ವಿ. ಸಿಂಧು ಮೊದಲ ಸುತ್ತಿನಲ್ಲೇ ಸೋತು ಟೂರ್ನಿ ಯಿಂದ ನಿರ್ಗಮಿಸಿದರು.

ವಿಶ್ವ ರ್‍ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ  ಸಿಂಧು 21–18, 15–21, 23–25ರಲ್ಲಿ ಮಾಜಿ ವಿಶ್ವ ಚಾಂಪಿ ಯನ್‌ ಚೀನಾದ ಯಿಹಾನ್‌ ವಾಂಗ್‌ ಎದುರು ಸೋಲು ಕಂಡರು.

ಈ ಜಯದೊಂದಿಗೆ ವಾಂಗ್‌ ಸಿಂಧು ಎದುರಿನ ಗೆಲುವಿನ ದಾಖಲೆಯನ್ನು  4–1ಕ್ಕೆ ಹೆಚ್ಚಿಸಿಕೊಂಡರು.

ಎಡವಿದ ಕಶ್ಯಪ್‌:   ಭಾರತದ ಭರವಸೆ ಎನಿಸಿದ್ದ ಪರುಪಳ್ಳಿ ಕಶ್ಯಪ್‌ ಆರಂಭದಲ್ಲೇ  ಮುಗ್ಗರಿಸಿದರು.
ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಹೆಗ್ಗಳಿಕೆ ಹೊಂದಿರುವ ಕಶ್ಯಪ್‌ ಮೊದಲ ಸುತ್ತಿನಲ್ಲಿ 26–24, 18–21, 20–22ರಲ್ಲಿ  ಚೀನಾದ ಜೆಂಗ್‌ಮಿಂಗ್‌ ವಾಂಗ್‌ ಎದುರು ಶರಣಾದರು.

ಈ ಹೋರಾಟ ಒಂದು ಗಂಟೆ 21 ನಿಮಿಷಗಳ ಕಾಲ ನಡೆಯಿತು.  ಉಭಯ ಆಟಗಾರರು ಇದುವರೆಗೂ ಆರು ಬಾರಿ ಮುಖಾಮುಖಿಯಾಗಿದ್ದು ಕಶ್ಯಪ್‌ ಕೇವಲ ಒಮ್ಮೆ ಮಾತ್ರ ಚೀನಾದ ಆಟಗಾರನನ್ನು ಮಣಿಸಿದ್ದಾರೆ. ಮತ್ತೊಂದು ಸಿಂಗಲ್ಸ್‌ನಲ್ಲಿ ಆರ್‌.ಎಂ.ವಿ. ಗುರುಸಾಯಿದತ್‌ 21–15, 9–21, 17–21ರಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಚೀನಾದ ಚೆನ್‌ ಲಾಂಗ್‌ ಎದುರು ಸೋತರು.

ಎರಡನೇ ಸುತ್ತಿಗೆ ಅಶ್ವಿನಿ–ಜ್ವಾಲಾ: ಮಹಿಳೆಯರ ಡಬಲ್ಸ್‌ ವಿಭಾಗದ ಆರಂಭಿಕ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ 21–13, 21–13ರಲ್ಲಿ ಸಮಂತಾ ಬಾರ್ನಿಂಗ್‌ ಮತ್ತು ಇರಿಸ್‌ ತಬೆಲಿಂಗ್‌ ಅವರನ್ನು ಮಣಿಸಿದರು.
ಅಶ್ವಿನಿ ಜೋಡಿಗೆ ನಿರಾಸೆ: ಮಿಶ್ರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಪ್ರಣವ್‌ ಜೆರ್ರಿ ಚೋಪ್ರಾ 19–21, 14–21ರಲ್ಲಿ ದಕ್ಷಿಣ ಕೊರಿಯಾದ ಚೊಯ್‌ ಸೊಲ್‌ಗ್ಯೂ ಮತ್ತು ಎಯೊಮ್‌ ಹೈ ಎದುರು ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.