ADVERTISEMENT

ಸಾನಿಯಾ–ಹಿಂಗಿಸ್‌ಗೆ ವುಹಾನ್‌ಕಿರೀಟ

ಟೆನಿಸ್: ಸತತ ಏಳನೇ ಪ್ರಶಸ್ತಿ ಗೆದ್ದ ಭಾರತ–ಸ್ವಿಸ್ ಜೋಡಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST
ವುಹಾನ್‌ ಓಪನ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ ಸಾನಿಯಾ ಮಿರ್ಜಾ (ಬಲ) ಮತ್ತು ಮಾರ್ಟಿನಾ ಹಿಂಗಿಸ್‌ ಸಂಭ್ರಮ
ವುಹಾನ್‌ ಓಪನ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ ಸಾನಿಯಾ ಮಿರ್ಜಾ (ಬಲ) ಮತ್ತು ಮಾರ್ಟಿನಾ ಹಿಂಗಿಸ್‌ ಸಂಭ್ರಮ   

ವುಹಾನ್ (ಪಿಟಿಐ): ಅಗ್ರಶ್ರೇಯಾಂಕದ ಜೋಡಿ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ವುಹಾನ್ ಓಪನ್ ಡಬ್ಲ್ಯುಟಿಎ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಭಾರತದ ಸಾನಿಯಾ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಫೈನಲ್‌ ನಲ್ಲಿ  6–2, 6–3ರಿಂದ ರುಮೇನಿಯಾದ ಐರಿನಾ ಕಾಮೆಲಿಯಾ ಮತ್ತು ಮೋನಿಕಾ ನಿಕುಲೇಶು ವಿರುದ್ಧ ಜಯಿಸಿದರು.

ಪಂದ್ಯದ ಮೊದಲ ಹಂತದಲ್ಲಿ  ಮೂರು ಬಾರಿ ಸರ್ವೀಸ್ ಕಳೆದು ಕೊಂಡರೂ ಮತ್ತೆ ತಿರುಗೇಟು ನೀಡಿತು. ಮೊದಲ ಸೆಟ್‌ನಲ್ಲಿ 6–2ರ ಗೆಲುವು ಸಾಧಿಸಿತು.

ನಂತರದ ಸೆಟ್‌ನ ಆರಂಭದಲ್ಲಿ ತುರುಸಿನ ಪೈಪೋಟಿ ಕಂಡುಬಂದಿತ್ತು. ಆದರೆ, ಸಾನಿಯಾ ಜೋಡಿಯ ಛಲದ ಆಟದ ಮುಂದೆ ಶ್ರೇಯಾಂಕರಹಿತ ಎದುರಾಳಿ ಜೋಡಿಯು ಮಣಿಯಿತು. 6-3ರಿಂದ ಸಾನಿಯಾ–ಮಾರ್ಟಿನಾ ಗೆಲುವಿನ ಸಂಭ್ರಮ ಆಚರಿಸಿದರು.

ಈ ವರ್ಷದಲ್ಲಿ ಸಾನಿಯಾ ಜೋಡಿ ಗೆಲ್ಲುತ್ತಿರುವ ಏಳನೇ ಪ್ರಶಸ್ತಿ ಇದಾಗಿದೆ.  ಇಂಡಿಯನ್ ವೇಲ್ಸ್‌, ಮಿಯಾಮಿ, ಚಾರ್ಲ್ಸ್‌ಟನ್, ವಿಂಬಲ್ಡನ್, ಅಮೆರಿಕ ಓಪನ್, ಗುವಾಂಗ್ಜು ಪ್ರಶಸ್ತಿಗಳನ್ನು ಈಗಾಗಲೇ ಈ ಜೋಡಿಯು ಮುಡಿಗೇರಿಸಿಕೊಂಡಿದೆ.

ಕಳೆದ ಮೂರು ಟೂರ್ನಿಗಳಲ್ಲಿ ಈ ಜೋಡಿಯು ಸತತ ಗೆಲುವು ಪಡೆ ಯುತ್ತಿದೆ.  ಕಳೆದ 13 ಪಂದ್ಯಗಳಲ್ಲಿ ಒಂದೂ ಸೆಟ್ ಸೋಲದೇ ತಮ್ಮ ವಿಜಯ ಯಾತ್ರೆಯನ್ನು ಮುಂದುವರಿಸಿದೆ.  ಬೀಜಿಂಗ್‌ನಲ್ಲಿ ನಡೆಯಲಿರುವ ಚೀನಾ ಓಪನ್‌ ಟೂರ್ನಿಯಲ್ಲಿ ಸಾನಿಯಾ–ಹಿಂಗಿಸ್ ಆಡಲಿದ್ದಾರೆ.

ವೀನಸ್‌ಗೆ ಒಲಿದ ಪ್ರಶಸ್ತಿ: ವೀನಸ್ ವಿಲಿಯಮ್ಸ್ ಶನಿವಾರ ವುಹಾನ್ ಓಪನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಇದು ಅವರು ಜಯಿಸಿದ ಪ್ರಮುಖ ಪ್ರಶಸ್ತಿಯಾಗಿದೆ.

ಫೈನಲ್‌ನಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ್ 6–3, 3–0 ಸೆಟ್‌ಗಳಿಂದ ರಿಂದ  ವೆನೆಜುವೆಲಾದ ಗಾರ್ಬೈನ್ ಮುಗುರುಜಾ ಅವರ ವಿರುದ್ಧ ಗೆದ್ದರು. ಮೊದಲ ಸೆಟ್‌ನಲ್ಲಿ ಉತ್ತಮ ಆಟವಾ ಡಿದ ಮುಗುರುಜಾ ಎರಡನೇ ಸೆಟ್‌ನಲ್ಲಿ ಸ್ನಾಯುಸೆಳೆತದಿಂದ ಬಳಲಿದರು. ನಂತರ ಆಟದಿಂದ ಹಿಂದೆ ಸರಿದರು.  ವಿಲಿಯಮ್ಸ್‌ ಅವರನ್ನು ವಿಜಯೀ  ಎಂದು ಘೋಷಿಸಲಾಯಿತು. ಒಟ್ಟು 53 ನಿಮಿಷಗಳವರೆಗೆ ಪಂದ್ಯ ನಡೆಯಿತು.

ಇದು ವೀನಸ್ ಅವರಿಗೆ ವೃತ್ತಿ ಜೀವನದ 47ನೇ ಪ್ರಶಸ್ತಿಯಾಗಿದೆ. 2010ರಲ್ಲಿ ಅವರು ದುಬೈನಲ್ಲಿ ಡಬ್ಲ್ಯುಟಿಎ  ಪ್ರೀಮಿಯರ್ ಫೈವ್ ಟೂರ್ನಿಯಲ್ಲಿ ವಿಕ್ಟೋರಿಯಾ ಅಜರೆಂಕಾ ಅವರನ್ನು ಸೋಲಿಸಿದ್ದರು. ತದನಂತರ ಅವರು ಗೆದ್ದ ಡಬ್ಲ್ಯುಟಿಎ ಪ್ರಶಸ್ತಿ ಇದಾಗಿದೆ.

ಈ ಜಯದಿಂದಾಗಿ ಅವರು ಸಿಂಗ ಪುರದಲ್ಲಿ ನಡೆಯಲಿರುವ ಡಬ್ಲ್ಯುಟಿಎ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಿಟ್ಟಿಸಿ ದ್ದಾರೆ. 2009ರ ನಂತರ ಅವರು ಈ ಹಂತಕ್ಕೆ ಪ್ರವೇಶ ಪಡೆದಿರಲಿಲ್ಲ. ಮುಂದಿನ ವಾರ ನಡೆಯಲಿರುವ ಚೀನಾ ಓಪನ್ ಟೆನಿಸ್ ಟೂರ್ನಿಯಲ್ಲಿ ಅವರು ಆಡಲಿದ್ದಾರೆ.

ಎರಡು ದಿನಗಳ ಹಿಂದೆ ನಡೆದಿದ್ದ ಸೆಮಿಫೈನಲ್‌ನಲ್ಲಿ ಅವರು ರೊಬರ್ಟಾ ವಿನ್ಸಿ ಅವರನ್ನು ಸೋಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.