ADVERTISEMENT

ಸಿಂಧು ಹೋರಾಟಕ್ಕೆ ಒಲಿಯದ ಚಿನ್ನ

ಪಿಟಿಐ
Published 27 ಆಗಸ್ಟ್ 2017, 19:30 IST
Last Updated 27 ಆಗಸ್ಟ್ 2017, 19:30 IST
ಭಾರತದ ಆಟಗಾರ್ತಿ ಪಿ.ವಿ. ಸಿಂಧು ಅವರು ನಜೋಮಿ ಒಕುಹರಾ ವಿರುದ್ಧದ ಹೋರಾಟದಲ್ಲಿ ಷಟಲ್‌ ಅನ್ನು ಹಿಂದಿರುಗಿಸಿದ ಕ್ಷಣ
ಭಾರತದ ಆಟಗಾರ್ತಿ ಪಿ.ವಿ. ಸಿಂಧು ಅವರು ನಜೋಮಿ ಒಕುಹರಾ ವಿರುದ್ಧದ ಹೋರಾಟದಲ್ಲಿ ಷಟಲ್‌ ಅನ್ನು ಹಿಂದಿರುಗಿಸಿದ ಕ್ಷಣ   

ಗ್ಲಾಸ್ಗೊ: ಭಾನುವಾರ ಸಂಜೆ ರೋಚಕತೆಯ ತುತ್ತತುದಿ ತಲುಪಿದ್ದ ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಅವರ ವಿರೋಚಿತ ಹೋರಾಟಕ್ಕೆ ಚಿನ್ನದ ಪದಕ ಒಲಿಯಲಿಲ್ಲ. ಆದರೆ ಜಪಾನ್ ಹುಡುಗಿ ನೊಜೊಮಿ ಒಕುಹರಾ ಅವರು ಭಾರತದ ಆಟಗಾರ್ತಿಯನ್ನು ಸೋಲಿಸಿ ಇತಿಹಾಸ ನಿರ್ಮಿಸಿದರು.

ವಿಶ್ವದ ಬ್ಯಾಡ್ಮಿಂಟನ್ ಪ್ರಿಯರ ಎದೆಬಡಿತ ಏರುಪೇರಾಗುವಷ್ಟು ಕುತೂಹಲ ಕೆರಳಿಸಿದ್ದ ಫೈನಲ್‌ ಪಂದ್ಯದಲ್ಲಿ ಸಿಂಧು ಅವರು 19-21 22-20 20-22 ಗೇಮ್‌ಗಳಿಂದ ಜಪಾನ್ ದೇಶದ ನಕುಹರಾ ವಿರುದ್ಧ ಸೋತರು. ಅದರೊಂದಿಗೆ ಬೆಳ್ಳಿಪದಕಕ್ಕೆ ಕೊರಳೊಡ್ಡಿದರು. ಶನಿವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ  ಭಾರತದ ಸೈನಾ ನೆಹ್ವಾಲ್ ಅವರನ್ನು ಸೋಲಿಸಿದ್ದ ನಕುಹರಾ ಚಿನ್ನದ ಪದಕ ಕೊರಳಿಗೇರಿಸಿಕೊಂಡು ಸಂಭ್ರಮಿಸಿದರು. ಅವರು ಇದೇ ಮೊದಲ ಬಾರಿಗೆ  ಈ ಸಾಧನೆ ಮಾಡಿದರು. ಆದರೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಮೊದಲ ಭಾರತದ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಗಳಿಸುವ ಅವಕಾಶವನ್ನು ಸಿಂಧು ಕೂದಲೆಳೆಯ ಅಂತರದಲ್ಲಿ ಕಳೆದುಕೊಂಡರು.

ಒಂದು ತಾಸು 49 ನಿಮಿಷಗಳವರೆಗೆ ನಡೆದ ಪಂದ್ಯವು ಒಕುಹರಾ ಮತ್ತು ಸಿಂಧು ಅವರ ದೈಹಿಕ ಸಾಮರ್ಥ್ಯದ ಅಗ್ನಿಪರೀಕ್ಷೆಯೂ ಆಗಿತ್ತು. ಮೊದಲ ಗೇಮ್‌ನ ಆರಂಭದಿಂದಲೂ ಇಬ್ಬರೂ ದಿಟ್ಟ ಹೋರಾಟ ಮಾಡಿದರು. ಆದರೆ 18 ಪಾಯಿಂಟ್‌ಗಳನ್ನು ದಾಟಿದ ನಂತರ ಒಕುಹರಾ ವೇಗದ ಆಟಕ್ಕೆ ಒತ್ತು ನೀಡಿ ಮುನ್ನಡೆ ಸಾಧಿಸಿದರು. ಜೊತೆಗೆ 21–19ರಿಂದ ಗೇಮ್ ತಮ್ಮದಾಗಿಸಿಕೊಂಡರು.

ADVERTISEMENT

ನಜೋಮಿ ಒಕುಹರಾ

ಆದರೆ ಎರಡನೇ ಗೇಮ್‌ನಲ್ಲಿ ಸಿಂಧು ತಿರುಗೇಟು ನೀಡಲು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡಿದರು. ಆದರೆ, ಒಕುಹರಾ ಕೂಡ ಸುಲಭವಾಗಿ ಮಣಿಯಲಿಲ್ಲ. ಉಭಯ ಆಟಗಾರ್ತಿಯರು ಪ್ರತಿಯೊಂದು ಹಂತದಲ್ಲಿಯೂ ಸಮಬಲ ಸಾಧಿಸಿದರು. 20–20 ಪಾಯಿಂಟ್‌ಗಳವರೆಗೂ ಈ ಹೋರಾಟ ರಂಗೇರಿತ್ತು. ಈ ಹಂತದಲ್ಲಿ ಸಿಂಧು ಮತ್ತೊಂದು ಪಾಯಿಂಟ್ ಗಳಿಸುವಲ್ಲಿ ಸಫಲರಾದರು. ಆದರೆ, ಗೇಮ್‌ ಪಾಯಿಂಟ್ ಪಡೆಯುವುದು ಮಾತ್ರ ಅವರಿಗೆ ಸುಲಭವಾಗಿರಲಿಲ್ಲ.  ಒಕುಹರಾ ಅವರು ತಮಗಿಂತ ಎತ್ತರಕಾಯದ ಸಿಂಧು ಅವರಿಗೆ ಹೆಚ್ಚು ಡ್ರಾಪ್‌ಗಳನ್ನು ಹಾಕಿದರು. ಇದರಿಂದಾಗಿ ನೆಟ್‌ ಬಳಿಯಲ್ಲಿ ಡ್ರಾಪ್ ಆಗುತ್ತಿದ್ದ ಶಟಲ್ ಅನ್ನು ಸಿಂಧು ಬೇಸ್‌ಲೈನ್‌ನತ್ತ ಹೊಡೆಯುತ್ತಿದ್ದರು. ಒಕುಹರಾ ಚುರುಕಿನಿಂದ ಪ್ರತಿಕ್ರಿಯಿಸುತ್ತಿದ್ದರು. ಒಟ್ಟು 73 ಶಾಟ್‌ಗಳ ಸುದೀರ್ಘ ರ‍್ಯಾಲಿಯ ನಂತರ ಸಿಂಧು ಮೇಲುಗೈ ಸಾಧಿಸಿದರು. ಇಬ್ಬರೂ ಸಾಕಷ್ಟು ಬಳಲಿದ್ದರು.

ಆದರೂ ನಿರ್ಣಾಯಕವಾಗಿದ್ದ ಮೂರನೇ ಗೇಮ್‌ನಲ್ಲಿ ಇಬ್ಬರ ಪೈಪೋಟಿ ಮುಗಿಲುಮುಟ್ಟಿತು. ಪ್ರತಿಯೊಂದು ಪಾಯಿಂಟ್‌ನಲ್ಲಿಯೂ ಸಮಬಲ ಸಾಧಿಸಿದರು. 17–17ರವರೆಗೂ ಜಿದ್ದಾಜಿದ್ದಿ ಇತ್ತು. ಈ ಹಂತದಲ್ಲಿ ಸಿಂಧು ಹೊಡೆತಕ್ಕೆ ರಿಟರ್ನ್ ಮಾಡುವ ಯತ್ನದಲ್ಲಿ ಒಕುಹರಾ ವಿಫಲರಾದರು. ಇದರಿಂದಾಗಿ ಸಿಂಧು ಎರಡು ಪಾಯಿಂಟ್‌ಗಳನ್ನು ಹೆಕ್ಕಿದರು. ವಇದರಿಂದಾಗಿ 19–17ರ ಮುನ್ನಡೆ ಸಾಧಿಸಿದರು. ಭಾರತದ ಆಭಿಮಾನಿಗಳಲ್ಲಿ ಸಂಭ್ರಮ ಗರಿಗೆದರಿತ್ತು. ಆದರೆ ಜಪಾನ್ ಎದೆಗುಂದಲಿಲ್ಲ. ಎರಡು ಪಾಯಿಂಟ್ ಕಲೆಹಾಕಿ 20–20ರ ಸಮಬಲ ಸಾಧಿಸಿದರು. ಸಂಪೂರ್ಣ ಬಳಲಿದ್ದ ಸಿಂಧು ಅವರ ಪಾದಚಲನೆಯು ಸ್ವಲ್ಪ ಲಯ ತಪ್ಪಿದ್ದನ್ನು ಅರಿತ ಒಕುಹರಾ ಮತ್ತೆರಡು ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡು ಗೆದ್ದರು. ಸಿಂಧು ಕಣ್ಣಂಚಲ್ಲಿ ನಿರಾಸೆಯ ಹನಿಗಳು ಜಿನುಗಿದವು.

ಮುಖ್ಯಾಂಶಗಳು

* ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಕಂಚು ಗೆದ್ದಿದ್ದ ಸಿಂಧು

* ಈ ವರ್ಷದ ಟೂರ್ನಿಯಲ್ಲಿ ಎರಡು ಪದಕ ಗೆದ್ದ ಭಾರತದ ಆಟಗಾರ್ತಿಯರು

* ವಿಶ್ವ ಟೂರ್ನಿಯಲ್ಲಿ ಬೆಳ್ಳಿಪದಕ ಜಯಿಸಿದ ಭಾರತದ ಎರಡನೇ ಆಟಗಾರ್ತಿ ಸಿಂಧು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.