ADVERTISEMENT

ಸೆಮಿಫೈನಲ್‌ಗೆ ಸೈನಾ, ಶ್ರೀಕಾಂತ್‌

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ; ಪ್ರಣಯ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST
ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಸೈನಾ ನೆಹ್ವಾಲ್‌ ಷಟಲ್‌ ಹಿಂದಿರುಗಿಸಲು ಪ್ರಯತ್ನಿಸಿದ ರೀತಿ  ಪಿಟಿಐ ಚಿತ್ರ
ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಸೈನಾ ನೆಹ್ವಾಲ್‌ ಷಟಲ್‌ ಹಿಂದಿರುಗಿಸಲು ಪ್ರಯತ್ನಿಸಿದ ರೀತಿ ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಭಾರತದ ಸೈನಾ ನೆಹ್ವಾಲ್‌ ಇಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್‌ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಆದರೆ ಎಚ್‌.ಎಸ್‌ ಪ್ರಣಯ್‌ ಮತ್ತು ಆರ್‌.ಎಂ.ವಿ ಗುರುಸಾಯಿದತ್‌ ನಿರಾಸೆ ಅನುಭವಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ 21–15, 21–12ರಲ್ಲಿ ಇಂಡೊನೇಷ್ಯಾದ ಹನಾ ರೆಮದಿನಿ ಅವರನ್ನು ಮಣಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್‌ 21–16, 9–21, 18–21ರಲ್ಲಿ ವಿಶ್ವದ 6ನೇ ರ್‍ಯಾಂಕ್‌ನ ಆಟಗಾರ ವಿಕ್ಟರ್‌ ಅಕ್ಸೆಲ್‌ಸನ್‌ ಎದುರು ನಿರಾಸೆ ಕಂಡರು.
ಪ್ರಣಯ್‌ ಗುರುವಾರದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಡೆನ್ಮಾರ್ಕ್‌ನ ವಿಶ್ವದ ಎರಡನೇ ರ್‍ಯಾಂಕ್‌ನ ಆಟಗಾರ ಜನ್‌ ಜೋರ್ಗಸನ್‌ ಎದುರು ಗೆದ್ದು ಭರವಸೆ ಮೂಡಿಸಿದ್ದರು. ಆದರೆ ಕ್ವಾರ್ಟರ್‌ಫೈನಲ್‌ನಲ್ಲ್ಲಿ ವಿಕ್ಟರ್‌ ಎದುರು ಸುಲಭದಲ್ಲಿ ಶರಣಾದರು.

ಮೊದಲ ಸೆಟ್‌ನಲ್ಲಿ ಅತ್ಯುತ್ತಮ ಸ್ಮ್ಯಾಷ್‌ಗಳನ್ನು ಸಿಡಿಸಿದ ಪ್ರಣಯ್‌ ಸುಲಭವಾಗಿ ಗೆದ್ದರು. ಆದರೆ ಕೊನೆಯ ಎರಡು ಸೆಟ್‌ಗಳಲ್ಲಿ ನೀರಸವಾಗಿ ಆಡಿದರು. ತಮ್ಮದೇ ತಪ್ಪುಗಳಿಂದ ಪಾಯಿಂಟ್ಸ್‌ ಬಿಟ್ಟುಕೊಟ್ಟರು. ಇದನ್ನು ಸರಿಯಾಗಿ ಬಳಸಿಕೊಂಡ ವಿಕ್ಟರ್‌  ಗೆಲುವು ಒಲಿಸಿಕೊಂಡರು.

ಗುರುಸಾಯಿದತ್‌ 21–15, 18–21, 13–21ರಲ್ಲಿ ಚೀನಾದ ಕ್ಸು ಸಾಂಗ್‌ ಎದುರು ಸೋಲು ಕಂಡರು. ಮೊದಲ ಸೆಟ್‌ನ ಆರಂಭದಲ್ಲೇ 11–8ರಲ್ಲಿ ಮುನ್ನಡೆಹೊಂದಿದ್ದ ಗುರು ಪ್ರಬಲ ಸ್ಮಾಷ್‌ ಮತ್ತು ರಿಟನ್ಸ್‌ಗಳ ಮೂಲಕ ಚೀನಾದ ಆಟಗಾರನಿಗೆ ತಬ್ಬಿಬ್ಬುಗೊಳಿಸಿದರು. ಎರಡನೇ ಸೆಟ್‌ನಲ್ಲಿ ಒಂದು ಹಂತದಲ್ಲಿ 14–14, 17–17ರಲ್ಲಿ ಪ್ರಬಲ ಪೈಪೋಟಿ ನೀಡಿದ ಭಾರತದ ಆಟಗಾರ ನಂತರದಲ್ಲಿ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟರು. ಕೊನೆಯ ಎರಡೂ ಸುತ್ತಿನಲ್ಲಿ ನಿರಾಸೆ ಕಂಡರು.

‘ಆರಂಭದಲ್ಲಿ ಚೆನ್ನಾಗಿ ಆಡಿದೆ. ನಂತರದಲ್ಲಿ ಸಾಂಗ್‌ ಆಕ್ರಮಣಕಾರಿ ಆಟ ಆಡಿದರು. ನನಗೆ ತಿರುಗೇಟು ನೀಡಲು ಅವಕಾಶ ನೀಡಲೇ ಇಲ್ಲ. ಇದು ನನ್ನ ಅರಿವಿಗೆ ಬರುವಷ್ಟರಲ್ಲಿ ತಡವಾಗಿತ್ತು’ ಎಂದು ಗುರುಸಾಯಿದತ್‌ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಸೆಮಿಗೆ ಶ್ರೀಕಾಂತ್‌, ಲಿನ್‌ ಡಾನ್‌ಗೆ ಸೋಲು: ಕೆ. ಶ್ರೀಕಾಂತ್‌ 15–21, 25–23, 18–21ರಲ್ಲಿ ಜಪಾನ್‌ನ ತಕುಮ ಎದುರು ಗೆಲುವು ದಾಖಲಿಸಿದರು.
ಸೆಮಿಫೈನಲ್‌ನಲ್ಲಿ ಶ್ರೀಕಾಂತ್‌ ಚೀನಾದ ಕ್ಸು ಸಾಂಗ್ ಎದುರು ಪೈಪೋಟಿ ನಡೆಸಲಿದ್ದಾರೆ. ಐದು ಬಾರಿ ವಿಶ್ವ ಚಾಂಪಿಯನ್‌ ಚೀನಾದ ಲಿನ್‌ ಡಾನ್‌ 17–21, 21–15, 17–21ರಲ್ಲಿ ಇಂಡೊನೇಷ್ಯಾದ ಟಾಮಿ ಸುಗರ್ತೊ ಎದುರು ಆಘಾತ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.