ADVERTISEMENT

ಸೆರೆನಾ ಮುಡಿಗೆ ವಿಂಬಲ್ಡನ್‌ ಗರಿ

ಟೆನಿಸ್‌: 21ನೇ ಗ್ರ್ಯಾಂಡ್ ಸ್ಲಾಮ್‌ ಪ್ರಶಸ್ತಿಗೆ ಮುತ್ತಿಕ್ಕಿದ ಅಮೆರಿಕದ ಆಟಗಾರ್ತಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2015, 8:38 IST
Last Updated 12 ಜುಲೈ 2015, 8:38 IST

ಲಂಡನ್‌ (ಐಎಎನ್‌ಎಸ್‌/ ರಾಯಿಟರ್ಸ್‌/ಎಎಫ್‌ಪಿ): ವಿಶ್ವದ ಶ್ರೇಷ್ಠ ಆಟಗಾರ್ತಿಯರಲ್ಲಿ ಒಬ್ಬರಾದ ಸೆರೆನಾ ವಿಲಿಯಮ್ಸ್ ತಮ್ಮ ಸಾಮರ್ಥ್ಯ ಏನೆಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅಮೆರಿಕದ ಈ ಆಟಗಾರ್ತಿ ವಿಂಬಲ್ಡನ್‌ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಟ್ರೋಫಿಗೆ ಮುತ್ತಿಕ್ಕಿದ್ದಾರೆ.

ಅಗ್ರ ಶ್ರೇಯಾಂಕದ ಸೆರೆನಾ ಜಯಿಸಿದ 21ನೇ ಗ್ರ್ಯಾಂಡ್‌ ಸ್ಲಾಮ್‌ ಟ್ರೋಫಿ ಇದಾಗಿದೆ. ಶನಿವಾರ ನಡೆದ ಫೈನಲ್‌ನಲ್ಲಿ ಅವರು 6–4, 6–4ರ ನೇರ ಸೆಟ್‌ಗಳಿಂದ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಎದುರು ಜಯಭೇರಿ ಮೊಳಗಿಸಿದರು. ವಿಂಬಲ್ಡನ್‌ ಚಾಂಪಿಯನ್‌ಷಿಪ್‌ನಲ್ಲಿ ಅಮೆರಿಕದ ಆಟಗಾರ್ತಿ ಜಯಿಸಿದ ಆರನೇ ಟ್ರೋಫಿ ಇದು. ಇದರ ಜೊತೆಗೆ ಸೆರೆನಾ ವಿಂಬಲ್ಡನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಅತಿ ಹಿರಿಯ ಆಟಗಾರ್ತಿ ಎನ್ನುವ ಶ್ರೇಯಕ್ಕೂ ಪಾತ್ರರಾದರು. ಈ ದಾಖಲೆ ಮೊದಲು ಜಕಸ್ಲೋವಿಯಾದ ಮಾರ್ಟಿನಾ ನರ್ವಾಟಿಲೊವಾ ಹೆಸರಿನಲ್ಲಿತ್ತು.

ಆಲ್‌ ಇಂಗ್ಲೆಂಡ್ ಕ್ಲಬ್‌ನಲ್ಲಿ ನಡೆದ ಸೆಣಸಾಟದಲ್ಲಿ 33 ವರ್ಷದ ಸೆರೆನಾ ಅನನುಭವಿ ಆಟಗಾರ್ತಿ ಎದುರು ಗೆಲುವು ಪಡೆಯುವುದು ನಿರೀಕ್ಷಿತವೇ ಆಗಿತ್ತಾದರೂ, ಮುಗುರುಜಾ ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ.

ಇಲ್ಲಿ 20ನೇ ಶ್ರೇಯಾಂಕ ಹೊಂದಿರುವ ಮುಗುರುಜಾ ಮೊದಲ ಸೆಟ್‌ನಲ್ಲಿ ಸರ್ವ್‌ ಮಾಡುವಲ್ಲಿ ಪದೇ ಪದೇ ತಪ್ಪು ಮಾಡಿದ್ದರಿಂದ ಸೆರೆನಾಗೆ ಲಾಭವಾಯಿತು. ಆದರೆ, ಎರಡನೇ ಸೆಟ್‌ನಲ್ಲಿ ಮುಗುರುಜಾ  ಪ್ರಬಲ ಪೈಪೋಟಿ ಒಡ್ಡಿದರು. ಸೆರೆನಾ ಆರಂಭದಲ್ಲಿ ವೇಗವಾಗಿ ಪಾಯಿಂಟ್ಸ್‌ ಕಲೆ ಹಾಕಿ 5–1ರಲ್ಲಿ ಮುನ್ನಡೆ ಪಡೆದರು. ಈ ವೇಳೆ ಮುಗುರುಜಾ ಕೂಡಾ ಕೊಂಚ ಪ್ರತಿರೋಧ ಒಡ್ಡಿ 3–5ರಲ್ಲಿ ಅಂತರ ತಗ್ಗಿಸಿದರು. ಕೊನೆಯ ಗೇಮ್‌ ಪಾಯಿಂಟ್‌ ಗಳಿಸಲು ಸೆರೆನಾ ಕೊಂಚ ಬೆವರು ಹರಿಸಬೇಕಾಯಿತು.

ಸೋಲು ಕಾಣುತ್ತಿದ್ದಂತೆ ಮುಗುರುಜಾ ಕಣ್ಣುಗಳು ಹನಿಗೂಡಿದವು.  ರನ್ನರ್‌ ಅಪ್‌ ಪ್ರಶಸ್ತಿ ಸ್ವೀಕರಿಸುವಾಗ ಅವರು ಭಾವುಕರಾಗಿದ್ದರು. ಈ ಆಟಗಾರ್ತಿ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಸಾಮರ್ಥ್ಯ ನೀಡುತ್ತಿದ್ದಾರೆ. ಹೋದ ವರ್ಷ ಹೋಬರ್ಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು. ಮ್ಯಾಡ್ರಿಡ್‌ ಓಪನ್ ಮತ್ತು ದುಬೈ ಟೂರ್ನಿಯಲ್ಲಿ ರನ್ನರ್‌ ಅಪ್ ಆಗಿದ್ದರು.

‘ಆಲ್‌ ಇಂಗ್ಲೆಂಡ್‌ ಕೋರ್ಟ್‌ನಲ್ಲಿ ನನಗೆ ಸಾಕಷ್ಟು ಮಧುರ ನೆನಪುಗಳಿವೆ. ಈಗ ಮತ್ತೊಂದು ಪ್ರಶಸ್ತಿ ಜಯಿಸಿದ್ದರಿಂದ ಸಂತೋಷ ಇಮ್ಮಡಿಗೊಂಡಿದೆ. ಮುಗುರುಜಾ ಕಠಿಣ ಪೈಪೋಟಿ ಒಡ್ಡಿದಳು. ಇಲ್ಲಿ ಗೆದ್ದ ಪ್ರತಿ ಪ್ರಶಸ್ತಿ ಸದಾ ಸ್ಮರಣೀಯ’ ಎಂದು ಸೆರೆನಾ ಸಂತೋಷ ಹಂಚಿಕೊಂಡಿದ್ದಾರೆ.

‘ನನಗೆ ಏನು ಹೇಳಬೇಕೆಂಬುದೇ ಗೊತ್ತಾಗುತ್ತಿಲ್ಲ. ಫೈನಲ್ ಪಂದ್ಯದಲ್ಲಿ ತುಂಬಾ ಖುಷಿಯಿಂದ ಆಡಿದೆ. ಗ್ರ್ಯಾಂಡ್‌ ಸ್ಲಾಮ್‌ ಫೈನಲ್‌ ಆಡುವ ಬಹು ವರ್ಷಗಳ ಕನಸು ನನಸಾಗಿದೆ. ಸೆರೆನಾಗೆ ಅಭಿನಂದನೆಗಳು’ ಎಂದು ಮುಗುರುಜಾ ಪಂದ್ಯದ ಹೇಳಿದರು.

ದಾಖಲೆ ಸರಿಗಟ್ಟಲು ಒಂದೇ ಪ್ರಶಸ್ತಿ ಬಾಕಿ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಹೆಚ್ಚು ಗ್ರ್ಯಾಂಡ್ ಸ್ಲಾಮ್‌ ಪ್ರಶಸ್ತಿ ಗೆದ್ದ ದಾಖಲೆ ಹೊಂದಿರುವ ಜರ್ಮನಿಯ ಸ್ಟೆಫಿಗ್ರಾಫ್‌ ಅವರ ದಾಖಲೆಯನ್ನು ಸರಿಗಟ್ಟಬೇಕಾದರೆ ಸೆರೆನಾ ಇನ್ನೂಒಂದು ಪ್ರಶಸ್ತಿ ಗೆಲ್ಲಬೇಕಿದೆ.

ಸ್ಟೆಫಿಗ್ರಾಫ್‌  4 ಆಸ್ಟ್ರೇಲಿಯಾ ಓಪನ್, 6 ಫ್ರೆಂಚ್ ಓಪನ್‌, 7 ವಿಂಬಲ್ಡನ್‌ ಮತ್ತು 5 ಅಮೆರಿಕ ಓಪನ್‌ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದಾರೆ. ಸ್ಟೆಫಿಗ್ರಾಫ್‌  ಒಟ್ಟು 22 ಗ್ರ್ಯಾಂಡ್ ಸ್ಲಾಮ್‌ ಟ್ರೋಫಿ ಗೆದ್ದಿದ್ದಾರೆ. ಸೆರೆನಾ 21 ಬಾರಿ ಚಾಂಪಿಯನ್‌ ಆಗಿದ್ದಾರೆ. 17 ಬಾರಿ ಪ್ರಶಸ್ತಿ ಗೆದ್ದಿರುವ ರೋಜರ್‌ ಫೆಡರರ್‌ ಪುರುಷರ ವಿಭಾಗದಲ್ಲಿ ಹೆಚ್ಚು ಗ್ರ್ಯಾಂಡ್‌ ಸ್ಲಾಮ್‌ ಜಯಿಸಿದ ದಾಖಲೆ ಹೊಂದಿದ್ದಾರೆ.

ಮುಗುರುಜಾ ಶ್ರೇಷ್ಠ ಸಾಧನೆ
ಸ್ಪೇನ್‌  ಆಟಗಾರ್ತಿ ಇಲ್ಲಿ ರನ್ನರ್‌ ಅಪ್‌ ಆದರೂ ಇದು ಅವರ ಶ್ರೇಷ್ಠ ಸಾಧನೆ ಎನಿಸಿತು. ಏಕೆಂದರೆ, 21 ವರ್ಷದ  ಮುಗುರುಜಾ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ್ದು ಮೊದಲ ಬಾರಿ.

2014ರ ಫ್ರೆಂಚ್‌ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು ಅವರ ಹಿಂದಿನ ದೊಡ್ಡ ಸಾಧನೆಯಾಗಿತ್ತು. 2014 ಮತ್ತು 2015ರ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದರು. 2012 ಹಾಗೂ 2014ರ ಅಮೆರಿಕ ಓಪನ್‌ನಲ್ಲಿ ಮೊದಲ ಸುತ್ತಿನಿಂದಲೇ ಹೊರಬಿದ್ದಿದ್ದರು.

ಸೆರೆನಾ ಗ್ರ್ಯಾಂಡ್ ಸ್ಲಾಮ್‌ ಪ್ರಶಸ್ತಿ ಗೆದ್ದ ವಿವರ
* ಆಸ್ಟ್ರೇಲಿಯಾ ಓಪನ್: 2003, 2005, 2007, 2009, 2010 ಹಾಗೂ 2015
* ಫ್ರೆಂಚ್ ಓಪನ್: 2002, 2013 ಹಾಗೂ 2015
* ವಿಂಬಲ್ಡನ್‌: 2002, 2003, 2009, 2010, 2012 ಹಾಗೂ 2015
* ಅಮೆರಿಕ ಓಪನ್‌: 1999, 2002, 2008, 2012, 2013 ಹಾಗೂ 2014.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.