ADVERTISEMENT

ಸೋಲಿನ ಭೀತಿಯಲ್ಲಿ ವೆಸ್ಟ್‌ ಇಂಡೀಸ್‌

ಮಿಸ್ಬಾ 99 ರನ್, ಪಾಕಿಸ್ತಾನಕ್ಕೆ ಜಯದ ನಿರೀಕ್ಷೆ

ಏಜೆನ್ಸೀಸ್
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST
ನಾಲ್ಕು ವಿಕೆಟ್‌ ಪಡೆದ ಖುಷಿಯಲ್ಲಿ ಯಾಶಿರ್‌ ಷಾ (ಮಧ್ಯ) ಎಎಫ್‌ಪಿ ಚಿತ್ರ
ನಾಲ್ಕು ವಿಕೆಟ್‌ ಪಡೆದ ಖುಷಿಯಲ್ಲಿ ಯಾಶಿರ್‌ ಷಾ (ಮಧ್ಯ) ಎಎಫ್‌ಪಿ ಚಿತ್ರ   

ಕಿಂಗ್ಸ್‌ಟನ್‌, ಜಮೈಕಾ : ಎರಡನೇ ಇನಿಂಗ್ಸ್‌ನಲ್ಲಿ ಬೇಗನೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ವೆಸ್ಟ್‌ ಇಂಡೀಸ್ ತಂಡ ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಸೋಲಿನ ಭೀತಿಗೆ ಸಿಲುಕಿದೆ.

ವಿಂಡೀಸ್ ತಂಡ ಮೊದಲ ಇನಿಂಗ್ಸ್‌ನಲ್ಲಿ 286 ರನ್ ಗಳಿಸಿತ್ತು. ದ್ವಿತೀಯ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 93 ರನ್ ಕಲೆ ಹಾಕಿದೆ. ಪಾಕ್ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 407 ರನ್ ಗಳಿಸಿ 121 ರನ್‌ಗಳ ಮುನ್ನಡೆ ಹೊಂದಿದೆ.  ಒಂದು ದಿನದ ಆಟ ಬಾಕಿಯಿದ್ದು ಕೊನೆಯ ದಿನ ಚುರುಕಿನ ಬೌಲಿಂಗ್ ಮುಂದುವರಿಸಿದರೆ ಪಾಕ್ ತಂಡಕ್ಕೆ ಸರಣಿಯಲ್ಲಿ ಗೆಲುವಿನ ಮುನ್ನುಡಿ ಬರೆಯಲು ಸಾಧ್ಯವಾಗಲಿದೆ.

ಶತಕ ತಪ್ಪಿಸಿಕೊಂಡ ಮಿಸ್ಬಾ: ಮೂರನೇ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್‌ ಕಳೆದುಕೊಂಡು 201 ರನ್ ಗಳಿಸಿದ್ದ ಪಾಕಿಸ್ತಾನ ತಂಡ ನಂತರವೂ ವೇಗವಾಗಿ ರನ್ ಕಲೆ ಹಾಕಿತು. ಆದರೆ ನಾಯಕ ಮಿಸ್ಬಾ ಉಲ್‌ ಹಕ್‌ ಅವರು  ಒಂದು ರನ್ ಅಂತರದಿಂದ ಶತಕ ಗಳಿಸುವ ಅವಕಾಶ ತಪ್ಪಿಸಿಕೊಂಡರು.

ADVERTISEMENT

ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಮಿಸ್ಬಾ 223 ಎಸೆತಗಳನ್ನು ಎದುರಿಸಿ ಐದು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದಂತೆ ಔಟಾಗದೆ 99 ರನ್ ಗಳಿಸಿದರು. ಇವರ ಜೊತೆ ಸರ್ಫರಾಜ್‌ ಅಹ್ಮದ್‌ (54, 70ಎಸೆತ, 5 ಬೌಂಡರಿ, 1 ಸಿಕ್ಸರ್‌) ಉತ್ತಮ ಜೊತೆಯಾಟವಾಡಿದರು.

ಈ ಜೋಡಿ ಆರನೇ ವಿಕೆಟ್‌ಗೆ 88 ರನ್ ಕಲೆ ಹಾಕಿತು. 112ನೇ ಓವರ್‌ನಲ್ಲಿ ದೇವೇಂದ್ರ ಬಿಶೂ ಬೌಲಿಂಗ್‌ನಲ್ಲಿ ಅಹ್ಮದ್ ಔಟಾದಾಗ ಮಿಸ್ಬಾ 48 ರನ್ ಗಳಿಸಿದ್ದರು. ಕೊನೆಯಲ್ಲಿ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳ ನೆರವಿನಿಂದ ತಂಡದ ಮೊತ್ತವನ್ನು ಹೆಚ್ಚಿಸುತ್ತಾ ಸಾಗಿದ ಮಿಸ್ಬಾ ಶತಕದ ಹೊಸ್ತಿಲಲ್ಲಿ ಬಂದರು. ಹತ್ತನೇ ವಿಕೆಟ್‌ ರೂಪದಲ್ಲಿ ಮೊಹಮ್ಮದ್ ಅಬ್ಬಾಸ್‌ ವಿಕೆಟ್‌ ಒಪ್ಪಿಸಿದ ಕಾರಣ ಮಿಸ್ಬಾ ಟೆಸ್ಟ್‌ನಲ್ಲಿ 11ನೇ ಶತಕ ಗಳಿಸುವ ಆಸೆ ಈಡೇರಲಿಲ್ಲ.

ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್‌ 286 ಹಾಗೂ ದ್ವಿತೀಯ ಇನಿಂಗ್ಸ್‌ 28  ಓವರ್‌ ಗಳಲ್ಲಿ ನಾಲ್ಕು ವಿಕೆಟ್‌ಗೆ 93 (ಕ್ರೆಗ್‌ ಬ್ರಾಥ್‌ವೈಟ್‌ 14, ಕೀರನ್‌ ಪೊವೆಲ್‌ 49, ಶಿಮ್ರೊನ್ ಹೆಟ್ಮಯರ್ 20; ಯಾಸಿರ್ ಷಾ 33ಕ್ಕೆ4). ಪಾಕಿಸ್ತಾನ ಮೊದಲ ಇನಿಂಗ್ಸ್‌ 138.4  ಓವರ್‌ ಗಳಲ್ಲಿ 407 (ಮಿಸ್ಬಾ ಉಲ್‌ ಹಕ್‌ ಔಟಾ ಗದೆ 99, ಅಸದ್ ಶಫೀಕ್‌ 22, ಸರ್ಫ ರಾಜ್‌ ಅಹ್ಮದ್ 54; ಶನಾನ್‌ ಗ್ಯಾಬ್ರೆ ಯೆಲ್‌ 92ಕ್ಕೆ3,  ಜೋಸೆಫ್‌ 71ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.