ADVERTISEMENT

ಸ್ಟಾರ್ಕ್‌ ಬದಲು ಕಮಿನ್ಸ್‌ಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 19:39 IST
Last Updated 11 ಮಾರ್ಚ್ 2017, 19:39 IST

ರಾಂಚಿ : ಗಾಯಗೊಂಡಿರುವ ಮಿಷೆಲ್  ಸ್ಟಾರ್ಕ್‌ ಬದಲಿಗೆ ವೇಗಿ ಪ್ಯಾಟ್ರಿಕ್‌ ಕಮಿನ್ಸ್‌ ಅವರು ಭಾರತ ವಿರುದ್ಧದ ಉಳಿದ ಎರಡು ಟೆಸ್ಟ್‌ ಪಂದ್ಯಗಳಿಗೆ ಆಸ್ಟ್ರೇಲಿಯಾ  ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಶನಿವಾರ ಈ ವಿಷಯವನ್ನು ತಿಳಿಸಿದೆ.

ಪುಣೆಯಲ್ಲಿ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಆಲ್‌ರೌಂಡ್್ ಆಟ ಆಡಿ ಕಾಂಗರೂಗಳ ನಾಡಿನ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಎಡಗೈ ವೇಗಿ ಸ್ಟಾರ್ಕ್‌, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಪಂದ್ಯದ ವೇಳೆ ಗಾಯಗೊಂಡಿದ್ದರು.

ADVERTISEMENT

‘ಮಿಷೆಲ್‌ ಅವರ ಕಾಲಿಗೆ ಆಗಿರುವ ಗಾಯ ಗಂಭೀರ ಸ್ವರೂಪದ್ದೇನೂ ಅಲ್ಲ. ಆದರೆ ವೈದ್ಯಕೀಯ ಸಿಬ್ಬಂದಿಗಳು ಅವ ರಿಗೆ  ವಿಶ್ರಾಂತಿ ಪಡೆಯಲು ಸೂಚಿಸಿ ದ್ದಾರೆ. ಹೀಗಾಗಿ ಮಿಷೆಲ್‌, ಭಾರತ ವಿರುದ್ಧದ ಮೂರು ಮತ್ತು ನಾಲ್ಕನೇ ಟೆಸ್ಟ್‌ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಕಮಿನ್ಸ್‌ಗೆ           ಆಡುವ ಬಳಗದಲ್ಲಿ ಸ್ಥಾನ ಕಲ್ಪಿಸಲಾಗಿದೆ’ ಎಂದು ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಟ್ರೆವೊರ್‌ ಹೊಹಾನ್ಸ್‌ ತಿಳಿಸಿದ್ದಾರೆ.

‘ಭಾರತ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯ ಮಾರ್ಚ್‌ 16ರಿಂದ ಆರಂಭವಾಗ ಲಿದ್ದು ಕಮಿನ್ಸ್‌, ಶನಿವಾರ ರಾತ್ರಿ ತಂಡ ಸೇರಿಕೊಳ್ಳಲಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ಕಮಿನ್ಸ್‌ ಅವರು 2011ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಮಾದರಿಗೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ  ಅವರು ಒಟ್ಟು 7 ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದರು. ಹೋದ ಋತುವಿನಲ್ಲಿ ಬಿಗ್‌ಬಾಷ್‌ ಲೀಗ್‌ ಮತ್ತು ಶೆಫಿಲ್ಡ್‌ ಶೀಲ್ಡ್‌ ಟೂರ್ನಿ ಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಅವರು  ಆರು ವರ್ಷಗಳ ಬಳಿಕ ಮತ್ತೆ ಟೆಸ್ಟ್‌್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಆದ್ದರಿಂದ ಅವರ ಮೇಲೆ ಸಾಕಷ್ಟು ನಿರೀಕ್ಷೆಯಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.