ADVERTISEMENT

ಹೊಸ ಪೀಳಿಗೆಯವರಲ್ಲಿ ಬದ್ಧತೆ ಇಲ್ಲ

ಒಲಿಂಪಿಯನ್‌ ಅಥ್ಲೀಟ್‌ ಶ್ರೀರಾಮ್‌ ಸಿಂಗ್‌ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 19:30 IST
Last Updated 6 ಜುಲೈ 2017, 19:30 IST

ಭುವನೇಶ್ವರ (ಪಿಟಿಐ): ‘ದಾಖಲೆಗಳು ಇರುವುದೇ ಮುರಿಯುವುದಕ್ಕಾಗಿ. ಹೀಗಿರುವಾಗ ನಾಲ್ಕು ದಶಕಗಳ ಹಿಂದೆ ನಾನು ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಇದುವರೆಗೂ ಭಾರತದ ಯಾರೂ ಮೀರಿ ನಿಂತಿಲ್ಲ ಎಂಬುದು ಬೇಸರದ ಸಂಗತಿ. ಮಧ್ಯಮ ಮತ್ತು ದೂರ ಅಂತರದ ಓಟಗಳಲ್ಲಿ ನಾವು ಎಷ್ಟೊಂದು ಹಿಂದುಳಿದಿದ್ದೇವೆ ಎಂಬುದಕ್ಕೆ ಇದೊಂದು ನಿದರ್ಶನ’... ಹೀಗೆ ಬೇಸರ ವ್ಯಕ್ತಪಡಿಸಿದವರು ಒಲಿಂಪಿಯನ್‌ ಅಥ್ಲೀಟ್‌ ಶ್ರೀರಾಮ್‌ ಸಿಂಗ್‌.

1976ರ ಮಾಂಟ್ರಿಯಲ್‌ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಮಧ್ಯಪ್ರದೇಶದ ಶ್ರೀರಾಮ್‌ ಅವರು ಪುರುಷರ 800 ಮೀಟರ್ಸ್‌ ಓಟದ ಸ್ಪರ್ಧೆಯ ಫೈನಲ್‌ನಲ್ಲಿ 1 ನಿಮಿಷ 45.77 ಸೆಕೆಂಡುಗಳನ್ನು ಗುರಿ ಮುಟ್ಟಿ ಏಳನೇ ಸ್ಥಾನ ಪಡೆದಿದ್ದರು. ಇದರೊಂದಿಗೆ  ರಾಷ್ಟ್ರೀಯ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು.

‘ನಮ್ಮ ಕಾಲಘಟ್ಟಕ್ಕೆ ಹೋಲಿಸಿದರೆ ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಅಥ್ಲೀಟ್‌ಗಳಿಗೆ ಅತ್ಯಾಧುನಿಕ  ಸೌಕರ್ಯ ಗಳು ಸಿಗುತ್ತಿವೆ. ಆದರೆ ಯುವ ಪೀಳಿಗೆ ಯವರು ಇದರ ಲಾಭ ಎತ್ತಿಕೊಳ್ಳಲು ವಿಫಲರಾಗುತ್ತಿದ್ದಾರೆ. ಈಗಿನ ಯುವಕರಲ್ಲಿ ಬದ್ಧತೆ ಇಲ್ಲ. ಮಿಲ್ಖಾ ಸಿಂಗ್‌ ಮತ್ತು ಪಿ.ಟಿ. ಉಷಾ  ಅವರ ಹಾಗೆ ಕಠಿಣ ಪರಿಶ್ರಮ ವಹಿಸಿ ಕಲಿಯುವ ಉತ್ಸಾಹಿಗಳ ಕೊರತೆ ಎದ್ದು ಕಾಣುತ್ತಿದೆ’ ಎಂದಿದ್ದಾರೆ.

ADVERTISEMENT

‘ಅಥ್ಲೀಟ್‌ ಮತ್ತು ಕೋಚ್‌ಗಳ ನಡುವೆ ಉತ್ತಮ ಬಾಂಧವ್ಯ ಇರಬೇಕು. ಇಬ್ಬರೂ ಅರ್ಪಣಾ ಭಾವ ಮತ್ತು ಕಠಿಣ ಪರಿಶ್ರಮದಿಂದ ಹೊಸತನಕ್ಕೆ ತೆರೆದು ಕೊಳ್ಳಬೇಕು. ಆಗ ಮಾತ್ರ ಅಥ್ಲೀಟ್‌  ಆದವರು ಯಶಸ್ಸು ಪಡೆಯಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ಮಧ್ಯಮ ಮತ್ತು ದೂರ ಅಂತರದ ಓಟದ ಸ್ಪರ್ಧೆಗಳಿಗೆ ನಮ್ಮಲ್ಲಿ ಹೆಚ್ಚು ಮನ್ನಣೆ ಸಿಗುತ್ತಿಲ್ಲ. ಈ ಸ್ಪರ್ಧೆಗಳಲ್ಲಿ ಎತ್ತರದ ಸಾಧನೆ ಮಾಡುವಂತಹ ಅಥ್ಲೀಟ್‌ಗಳನ್ನು ರೂಪಿಸುವ ಕೆಲಸ ಆಗ ಬೇಕು’ ಎಂದಿದ್ದಾರೆ.

‘ನಮ್ಮವರಿಗೆ ವಿದೇಶಿ ಕೋಚ್‌ಗಳ ಮೇಲಿರುವ ವ್ಯಾಮೋಹ ಮೊದಲು ದೂರವಾಗಬೇಕು. ನಾವು ಅವರಿಗೆ ಕೇಳಿ ದಷ್ಟು ಹಣ ನೀಡಿದರೂ ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಅಥ್ಲೀಟ್‌ಗಳ ಸಾಮರ್ಥ್ಯದ ಬಗ್ಗೆ ಟೀಕೆಗಳು ಎದುರಾದಾಗ ಕುಂಟು ನೆಪ ಒಡ್ಡಿ ಹುದ್ದೆಗೆ ರಾಜೀನಾಮೆ ನೀಡಿ ಹೊರಟು ಹೋಗುತ್ತಾರೆ. ಹೀಗಾಗಿ ಭಾರತದವರನ್ನೇ ಕೋಚ್‌ಗಳನ್ನಾಗಿ ನೇಮಿಸುವುದು ಒಳಿತು. ಭಾರತ ಅಥ್ಲೆ ಟಿಕ್ಸ್‌ ಫೆಡರೇಷನ್‌,  ಕೋಚ್‌ ಹುದ್ದೆಗೆ   ಯಾರು ಸೂಕ್ತ ಎಂಬುದನ್ನು ನಿರ್ಧರಿಸಬೇಕು. ಬಳಿಕ ಅವರನ್ನು ವಿದೇಶಗಳಿಗೆ ಕಳುಹಿಸಿ ಅಲ್ಲಿ ಪರಿಣತರಿಂದ ತರಬೇತಿ ಕೊಡಿಸಬೇಕು. ಹೀಗೆ ಕಲಿತು ಬಂದವರು  ಅಥ್ಲೀಟ್‌ಗಳಿಗೆ ಹೊಸ ಕೌಶಲಗಳನ್ನು ಹೇಳಿಕೊಡುತ್ತಾರೆ. ಇದರಿಂದ ನಮ್ಮವರ  ಸಾಮರ್ಥ್ಯ ವೃದ್ಧಿಸುತ್ತದೆ’ ಎಂದರು.

‘ಮಧ್ಯಮ ಮತ್ತು ದೂರ ಅಂತರದ ಓಟಗಾರರಿಗೆ ಅನುವಾಗುವಂತಹ ಅತ್ಯಾ ಧುನಿಕ ತರಬೇತಿ ಕೇಂದ್ರಗಳನ್ನು ನಿರ್ಮಿಸಬೇಕು. ಕೇಂದ್ರ ಸರ್ಕಾರ ಮತ್ತು ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ (ಎಎಫ್‌ಐ) ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ಬೇಸಿಗೆ ಕಾಲದಲ್ಲಿ ಅಥ್ಲೀಟ್‌ಗಳಿಗೆ ಈ ಕೇಂದ್ರಗಳಲ್ಲಿ ಗುಣಮಟ್ಟದ ತರಬೇತಿ ನೀಡಬೇಕು. ಜೊತೆಗೆ ಅಲ್ಲೆ ಅನೇಕ ಸ್ಪರ್ಧೆಗಳನ್ನು ನಡೆಸಬೇಕು. ಆಗ ಮಾತ್ರ ನಮ್ಮವರು ಅಂತರರಾಷ್ಟ್ರೀಯ ಕೂಟ ಗಳಲ್ಲಿ ಪದಕ ಗೆಲ್ಲಲು ಸಾಧ್ಯ. ಕೆನ್ಯಾದಲ್ಲಿ ಅಲ್ಲಿನ ಸರ್ಕಾರ ಅಥ್ಲೆಟಿಕ್ಸ್‌ಗೆ ಹೆಚ್ಚು ಪ್ರಾತಿನಿಧ್ಯ ನೀಡುತ್ತಿದೆ. ಹೀಗಾಗಿಯೇ ಆ ದೇಶದ ಸ್ಪರ್ಧಿಗಳು ದೂರ ಅಂತರದ ಓಟದಲ್ಲಿ ಪ್ರಾಬಲ್ಯ ಮೆರೆಯುತ್ತಿದ್ದಾರೆ’ ಎಂದು 67 ವರ್ಷದ ಶ್ರೀರಾಮ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.