ADVERTISEMENT

‘ಪುಣೆಯ ಸಭೆ ಕಾನೂನು ಬಾಹಿರ’

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಬೆಂಗಳೂರು: ‘ಪುಣೆಯಲ್ಲಿ ರೂಪಮ್‌ ಶರ್ಮ  ಶನಿವಾರ ಹಮ್ಮಿಕೊಂಡಿರುವ ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ನ ವಾರ್ಷಿಕ ಮಹಾಸಭೆ ಕಾನೂನು ಬಾಹಿರ. ಅದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ’ ಎಂದು ಬಿಎಫ್‌ಐ ನಿರ್ಗಮಿತ ಅಧ್ಯಕ್ಷ ಆರ್‌.ಎಸ್. ಗಿಲ್‌ ಸ್ಪಷ್ಟಪಡಿಸಿದ್ದಾರೆ.

ದೆಹಲಿ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆಯ ಕಾರ್ಯದರ್ಶಿ ರೂಪಮ್‌ ಶರ್ಮ  ಪುಣೆಯಲ್ಲಿ ವಾರ್ಷಿಕ ಮಹಾಸಭೆ ನಡೆಸುವುದಾಗಿ ಹೇಳಿದ್ದಾರೆ.  ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಗಿಲ್‌ ಮೇಲಿನ ಉತ್ತರ ನೀಡಿದರು. ರೂಪಮ್‌ ಶರ್ಮ 2012ರಲ್ಲಿ ಬಿಎಫ್‌ಐ ಸಿಇಒ ಆಗಿ ನೇಮಕವಾಗಿದ್ದರು. ಒಟ್ಟು 44 ಘಟಕಗಳ ಪದಾಧಿಕಾರಿಗಳಲ್ಲಿ 28 ಘಟಕದವರು ಇಲ್ಲಿ ಶುಕ್ರವಾರ ನಡೆದ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.

‘ಫಿಬಾ ಮತ್ತು ಸರ್ಕಾರದ ನಿಯಮಗಳಿಗೆ ಅನುಸಾರವಾಗಿ ಚುನಾವಣೆ ನಡೆಸಲಾಗಿದೆ. ಪುಣೆಯಲ್ಲಿ ನಡೆಯುವ  ಮಹಾಸಭೆ ಕಾನೂನು ಬಾಹಿರ.  ಶುಕ್ರವಾರ ನಡೆದ ವಾರ್ಷಿಕ ಮಹಾಸಭೆಯೇ ಅಧಿಕೃತ. ನಮ್ಮ ಫೆಡರೇಷನ್‌ನಲ್ಲಿ ಸಿಇಒ ಮತ್ತು ಉಪ ಸಿಇಒ ಎರಡೂ ಹುದ್ದೆಗಳನ್ನು ರದ್ದು ಮಾಡಲಾಗಿದೆ’ ಎಂದೂ ಅವರು ಪ್ರಕಟಿಸಿದರು.

‘ವಾರ್ಷಿಕ ಮಹಾಸಭೆ ಕರೆಯುವ ಅಧಿಕಾರ ಅಧ್ಯಕ್ಷರಿಗೆ ಮಾತ್ರ ಇರುತ್ತದೆ. ಈ ಅಧಿಕಾರ ಸಿಇಒಗೆ ಇಲ್ಲ. ತಪ್ಪು ಮಾಹಿತಿಯಿಂದಾಗಿ ಕೆಲ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರೆಲ್ಲರೂ ಮರಳಿ ನಮ್ಮ ಬಳಿಗೆ ಬರುತ್ತಾರೆ. ಭಾರತದಲ್ಲಿ ಬ್ಯಾಸ್ಕೆಟ್‌ಬಾಲ್‌ ಅಭಿವೃದ್ಧಿಗೆ ನೆರವಾಗುತ್ತಾರೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.