ADVERTISEMENT

12 ವರ್ಷಗಳ ನಿರಾಸೆ ನೀಗಿದ ಆಕಾಶದೀಪ್‌

17ನೇ ಏಷ್ಯನ್ ಕ್ರೀಡಾಕೂಟ; ಫೈನಲ್‌ಗೆ ಭಾರತ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 12:26 IST
Last Updated 30 ಸೆಪ್ಟೆಂಬರ್ 2014, 12:26 IST

ಇಂಚೆನ್‌ (ಪಿಟಿಐ): ಆಕಾಶದೀಪ್‌ ಸಿಂಗ್ ತಂದಿಟ್ಟ ಅಮೋಘ ಗೋಲಿನ ನೆರವಿನಿಂದ ಭಾರತವು ಇಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಫೈನಲ್‌ ಸುತ್ತು ಪ್ರವೇಶಿಸಿದೆ.

ಈ ಮೂಲಕ ಕನಿಷ್ಠ ಬೆಳ್ಳಿ ಪದಕ ಖಚಿತ ಗೊಂಡಿದೆ. ಅಲ್ಲದೇ, 12 ವರ್ಷಗಳ ನಿರಾಸೆಗೆ ತೆರೆ ಬಿದ್ದಿದ್ದು, ಎಲ್ಲರ ಚಿತ್ತ ಗುರುವಾರ ನಡೆಯಲಿರುವ ಫೈನಲ್‌ನತ್ತ ನೆಟ್ಟಿದೆ.

2002ರಲ್ಲಿ ಬುಸಾನ್‌ನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದ ಬಳಿಕ ಫೈನಲ್‌ ಪ್ರವೇಶಿಸುವ ಭಾರತದ ಆಸೆ ಕೈಗೂಡಿರಲಿಲ್ಲ.

ADVERTISEMENT

ಮಂಗಳವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ 1–0 ಗೋಲುಗಳಿಂದ ಆತಿಥೇಯ ದಕ್ಷಿಣ ಕೊರಿಯ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು. 44ನೇ ನಿಮಿಷದಲ್ಲಿ ಆಕಾಶದೀಪ್‌ ಸಿಂಗ್‌ ಬಾರಿಸಿದ ಫೀಲ್ಡ್ ಗೋಲು ಭಾರತದ ಫೈನಲ್‌ ದಾರಿ ಸುಗಮಗೊಳಿಸಿತು.

ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಮಲೇಷ್ಯಾ ಹಾಗೂ ಪಾಕಿಸ್ತಾನ  ಸೆಣಿಸಲಿದ್ದು, ಅವರಲ್ಲಿ ವಿಜೇತಗೊಳ್ಳುವ ತಂಡದೊಂದಿಗೆ  ಭಾರತವು ಬಂಗಾರಕ್ಕಾಗಿ ಪೈಪೋಟಿ ನಡೆಸಲಿದೆ.

ಎದುರಾಳಿ ತಂಡಕ್ಕೆ ಗೋಲು ದಾಖಲಿಸುವ ಹಲವು ಅವಕಾಶಗಳಿದ್ದವು. ಆದರೆ ಅವರ ಮೇಲೆ ಒತ್ತಡ ಹಾಕುವಲ್ಲಿ ಭಾರತ ಯಶಸ್ವಿಯಾಯಿತು.

ಮೊದಲ ಅವಧಿಯಲ್ಲಿ ಐದನೇ ನಿಮಿಷದಲ್ಲಿಯೇ ಭಾರತಕ್ಕೆ ಗೋಲಿನ ಅವಕಾಶವಿತ್ತು. ಆದರೆ ಎಸ್‌.ವಿ.ಸುನಿಲ್ ಅವರು ನೀಡಿದ ಪಾಸ್‌ಗಿಂತಲೂ ಧರ್ಮವೀರ್ ಸಿಂಗ್ ಅವರು ಮುಂದಿದ್ದರು. ಪರಿಣಾಮ ಕೊರಿಯಾ ಗೋಲ್ಕಿಚೆಂಡನ್ನು ತಡೆದು ಕಳುಹಿಸಿದರು.

ಮೊದಲ ಅವಧಿ ಮುಕ್ತಾಯಕ್ಕೆ ಮೂರು ನಿಮಿಷಗಳಿರುವಾಗ ಭಾರತಕ್ಕೆ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳು ಲಭಿಸಿದವು. ಆದರೆ ವಿ.ಆರ್‌.ರಘುನಾಥ್ ಗುರಿಯಿಟ್ಟು ಕಳುಹಿಸಿದ ಚೆಂಡನ್ನು ಕೊರಿಯದ ಗೋಲ್ಕಿ ಮೈಯುಂಘೋ ಲೀ ಸಮರ್ಥವಾಗಿ ತಡೆದು ಮಿಂಚುವಲ್ಲಿ ಯಶಸ್ವಿಯಾದರು.

ಗೋಲು ರಹಿತ ಮೊದಲ ಅವಧಿಯ ಬಳಿಕ ಕೊರಿಯ ತಂಡದ ಮೇಲೆ ಒತ್ತಡ ಹೇರುವಲ್ಲಿ ಭಾರತ ಯಶಸ್ವಿಯಾಯಿತು. ರಕ್ಷಣಾ ವಿಭಾಗದ ದುರ್ಬಲತೆಯನ್ನು ಮೀರಿನಿಂತ ಭಾರತ, ಒಟ್ಟಾರೆಯಾಗಿ ಉತ್ತಮ ಪ್ರದರ್ಶನ ತೋರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.