ADVERTISEMENT

₹ 5 ಕೋಟಿ ನೀಡಲು ಪ್ರಸ್ತಾವ

ಕ್ರಿಕೆಟಿಗರ ಸಂಭಾವನೆ ಹೆಚ್ಚಳಕ್ಕೆ ಕುಂಬ್ಳೆ, ಕೊಹ್ಲಿ ಬೇಡಿಕೆ

ಪಿಟಿಐ
Published 21 ಮೇ 2017, 19:30 IST
Last Updated 21 ಮೇ 2017, 19:30 IST
₹ 5 ಕೋಟಿ ನೀಡಲು ಪ್ರಸ್ತಾವ
₹ 5 ಕೋಟಿ ನೀಡಲು ಪ್ರಸ್ತಾವ   

ನವದೆಹಲಿ:  ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಯ (ಬಿಸಿಸಿಐ) ‘ಎ’ ದರ್ಜೆಯ ಗುತ್ತಿಗೆಯಲ್ಲಿರುವ ಆಟಗಾರರ ಸಂಭಾವನೆಯನ್ನು ಶೇ 150ರಷ್ಟು ಹೆಚ್ಚಳ ಮಾಡಬೇಕು ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ಆಗ್ರಹಿಸಿದ್ದಾರೆ.

ಹೈದರಾಬಾದ್‌ನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಬಿಸಿಸಿಐ ಆಡಳಿತಾ ಧಿಕಾರಿ ಸಮಿತಿ (ಸಿಒಎ) ಮುಂದೆ ಪ್ರಸ್ತಾವ ಸಲ್ಲಿಸಿದ  ಕುಂಬ್ಳೆ ಅವರು ಸಂಪೂರ್ಣ ವಿವರ ನೀಡಿದರು. ಈ ಸಂದರ್ಭದಲ್ಲಿ  ಬಿಸಿಸಿಐ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ  ರಾಹುಲ್ ಜೊಹ್ರಿ, ಜಂಟಿ ಕಾರ್ಯದರ್ಶಿ ಅಮಿತಾಬ್ ಚೌಧರಿ ಮತ್ತು ಖಜಾಂಚಿ ಅನಿರುದ್ಧ ಚೌಧರಿ ಹಾಜರಿದ್ದರು.

ವಿರಾಟ್ ಕೊಹ್ಲಿ ಅವರು ಸಭೆಯ ನಂತರ ಸ್ಕೈಪ್ (ವಿಡಿಯೊ ಸಂವಾದ) ಮೂಲಕ ಪದಾಧಿಕಾರಿಗಳೊಂದಿಗೆ ಮಾತನಾಡಿದರು. ಸದ್ಯ ‘ಎ’ ದರ್ಜೆ ಆಟಗಾರರಿಗೆ ₹ 2 ಕೋಟಿ, ‘ಬಿ’ ದರ್ಜೆಗೆ ₹ 1 ಕೋಟಿ ಮತ್ತು ‘ಸಿ’ ದರ್ಜೆ ಗೆ ₹ 50 ಲಕ್ಷ ನೀಡಲಾಗುತ್ತಿದೆ.   ‘ಎ’ ದರ್ಜೆಯಲ್ಲಿರುವ ಆಟಗಾರರು ಕ್ರಿಕೆಟ್‌ನ ಎಲ್ಲ ಮಾದರಿ ಗಳಲ್ಲಿಯೂ ಆಡುತ್ತಿದ್ದಾರೆ. ಆದ್ದರಿಂದ ಅವರಿಗೆ ಒಂದು ಋತುವಿಗೆ ₹ 5 ಕೋಟಿ ಸಂಭಾ ವನೆ ನೀಡಬೇಕು ಎಂದು ಕುಂಬ್ಳೆ ಮತ್ತು ಕೊಹ್ಲಿ ಒತ್ತಾಯಿಸಿದ್ದಾರೆಂದು ಬಿಸಿಸಿಐ ಮೂಲಗಳು ತಿಳಿಸಿವೆ.

ADVERTISEMENT

ಕುಂಬ್ಳೆ ನೀಡಿರುವ ಪ್ರಸ್ತಾವವನ್ನು ಅವಲೋಕಿಸಬೇಕು ಎಂದು ಸಿಒಎ ಮುಖ್ಯಸ್ಥ ವಿನೋದ್ ರಾಯ್ ಮತ್ತು ಸದಸ್ಯ ವಿಕ್ರಮ ಲಿಮಯೆ ಅವರು ಬಿಸಿಸಿಐಗೆ ಸೂಚಿಸಿದ್ದಾರೆ. ಈ ವಿಷಯದ ಕುರಿತು ಜೊಹ್ರಿ ಮತ್ತು ಚೌಧರಿ ಅವರು ವರದಿ ನೀಡಿದ ಮೇಲೆ ಸಿಒಎ ಮರಳಿ ಚರ್ಚೆ ನಡೆಸಲಿದೆ.

‘ಅನಿಲ್ ಮತ್ತು ವಿರಾಟ್ ಇಬ್ಬರೂ ಪ್ರತ್ಯೇಕವಾಗಿ ಮಾತನಾಡಿದ್ದಾರೆ. ಆದರೆ ಇಬ್ಬರದ್ದೂ ಒಂದೇ ಬೇಡಿಕೆ ಇದೆ. ಟೆಸ್ಟ್‌ ನಲ್ಲಿ ಉತ್ತಮವಾಗಿ ಆಡುವ ಅಟಗಾ ರರಿಗೆ ಹೆಚ್ಚಿನ ಮನ್ನಣೆ ಸಿಗಬೇಕು. ಆದರೆ ಐಪಿಎಲ್‌ ಆಡುವ ಅಟಗಾರರು  ಹೆಚ್ಚು ಹಣ ಪಡೆಯುವಂತಾಗಿದೆ. ರಣಜಿ ಪಂದ್ಯವನ್ನೂ ಆಡದ ಪವನ್ ನೇಗಿ ಕೇವಲ 45 ದಿನಗಳಿಗೆ ₹ 8.5 ಕೋಟಿ ಪಡೆದಿದ್ದಾರೆ. ಆದರೆ, ಚೇತೇಶ್ವರ್ ಪೂಜಾರ ಅವರಂತಹ ಟೆಸ್ಟ್ ಆಟಗಾರನಿ ಗೆ ನೇಗಿಗಿಂತ ಕಡಿಮೆ ಹಣ ಸಿಗುತ್ತಿದೆ. ಈ ಅಸಮತೋಲನ ಸರಿದೂಗಿಸುವ ಕಾರ್ಯವಾಗಬೇಕೆಂದು ಆಗ್ರಹಿಸಿದ್ದಾರೆ’ ಎಂದು ಬಿಸಿಸಿಐ ಉನ್ನತ ಮೂಲಗಳು ತಿಳಿಸಿವೆ.

ತಂಡದ ನೆರವು ಸಿಬ್ಬಂದಿಯ ಸಂಭಾವನೆಯನ್ನೂ ಹೆಚ್ಚಳ ಮಾಡ ಬೇಕು ಎಂದು ಈ ಸಂದರ್ಭದಲ್ಲಿ ಆಗ್ರ ಹಿಸಲಾಗಿದೆ. ಕುಂಬ್ಳೆ ತಮ್ಮನ್ನೂ ಸೇರಿ ದಂತೆ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್, ಫೀಲ್ಡಿಂಗ್ ಕೋಚ್ ಆರ್, ಶ್ರೀಧರ್, ಫಿಸಿಯೊ, ಟ್ರೇನರ್, ವಿಡಿಯೋ ವಿಶ್ಲೇಷಕ, ಥ್ರೋಡೌನ್ ಪರಿ ಣತ ರಾಘವೇಂದ್ರ ಅವರ ಸಂಭಾವನೆ ಯನ್ನು ಹೆಚ್ಚಿಸಲು ಪ್ರಸ್ತಾವ ಸಲ್ಲಿಸಿದ್ದಾರೆ.

‘ತಮ್ಮ ಸಂಭಾವನೆಯನ್ನೂ ಹೆಚ್ಚಿಸಬೇಕು ಎಂದು ಕುಂಬ್ಳೆ ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ತಮ್ಮ ಸಿಬ್ಬಂದಿಗೂ ಹೆಚ್ಚು ಹಣ ನೀಡಲು ಕೂಡ ಅವರು ಪ್ರಸ್ತಾವ ಸಲ್ಲಿಸಿದ್ದಾರೆ. ಮೊತ್ತವನ್ನು ಇಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.