ADVERTISEMENT

ಕೆಪಿಎಲ್‌ನ ಎರಡೂ ಪಂದ್ಯಗಳು ರದ್ದು: ತಂಡಗಳ ಸಂಕಷ್ಟ ಹೆಚ್ಚಿಸಿದ ಮಳೆ

ಪ್ರಮೋದ ಜಿ.ಕೆ
Published 22 ಆಗಸ್ಟ್ 2018, 18:30 IST
Last Updated 22 ಆಗಸ್ಟ್ 2018, 18:30 IST
ಕೆಪಿಎಲ್‌ ಬಿಡುವಿನ ವೇಳೆಯಲ್ಲಿ ಶಿವಮೊಗ್ಗ ಲಯನ್ಸ್ ತಂಡದ ಆಟಗಾರರು ಬುಧವಾರ ದಾಂಡೇಲಿಯಲ್ಲಿ ಸಮಯ ಕಳೆದಿದ್ದು ಹೀಗೆ
ಕೆಪಿಎಲ್‌ ಬಿಡುವಿನ ವೇಳೆಯಲ್ಲಿ ಶಿವಮೊಗ್ಗ ಲಯನ್ಸ್ ತಂಡದ ಆಟಗಾರರು ಬುಧವಾರ ದಾಂಡೇಲಿಯಲ್ಲಿ ಸಮಯ ಕಳೆದಿದ್ದು ಹೀಗೆ   

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ನಡೆಯುತ್ತಿರುವ ಕೆಪಿಎಲ್‌ ಟೂರ್ನಿಗೆ ಮಳೆ ಅಡ್ಡಿಪಡಿಸುತ್ತಿರುವ ಕಾರಣ ತಂಡಗಳು ಈಗ ನಾಕೌಟ್ ಹಂತ ತಲುಪುವ ಹಾದಿ ಜಟಿಲಗೊಳ್ಳುತ್ತಿದೆ.

ಟೂರ್ನಿಯಲ್ಲಿ ಒಟ್ಟು ಏಳು ತಂಡಗಳು ಆಡುತ್ತಿವೆ. ನಾಕೌಟ್‌ ಹಂತದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಹುಬ್ಬಳ್ಳಿ ಆವೃತ್ತಿ ಪಂದ್ಯಗಳು ಎಲ್ಲ ತಂಡಗಳಿಗೂ ಮಹತ್ವದ್ದಾಗಿವೆ. ಆದರೆ, ಎರಡು ದಿನದಲ್ಲಿ ಮೂರು ಪಂದ್ಯಗಳು ರದ್ದಾಗಿದ್ದರಿಂದ ಮುಂದಿನ ಹಂತ ಪ್ರವೇಶಿಸಲು ಪೈಪೋಟಿ ಹೆಚ್ಚಿದೆ.

ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆಯಬೇಕಿದ್ದ ಹುಬ್ಬಳ್ಳಿ ಟೈಗರ್ಸ್‌–ಬಳ್ಳಾರಿ ಟಸ್ಕರ್ಸ್‌ ಮತ್ತು ಬೆಂಗಳೂರು ಬ್ಲಾಸ್ಟರ್ಸ್‌–ಬಿಜಾಪುರ ಬುಲ್ಸ್‌ ನಡುವಿನ ಪಂದ್ಯಗಳು ಕೂಡ ರದ್ದಾದವು.

ADVERTISEMENT

ಬೆಂಗಳೂರು ಬ್ಲಾಸ್ಟರ್ಸ್‌ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡ ತಲಾ ಒಂದು ಪಂದ್ಯಗಳಲ್ಲಿ ಗೆಲುವು ಪಡೆದಿದ್ದು ತಲಾ ನಾಲ್ಕು ಪಾಯಿಂಟ್ಸ್‌ ಹೊಂದಿವೆ. ಮೈಸೂರು ವಾರಿಯರ್ಸ್‌ ತಂಡ ಎರಡು ಪಾಯಿಂಟ್ಸ್‌ ಹೊಂದಿದೆ. ಬಿಜಾಪುರ ಬುಲ್ಸ್‌, ಬೆಳಗಾವಿ ಪ್ಯಾಂಥರ್ಸ್ ತಲಾ ಒಂದು ಪಾಯಿಂಟ್ಸ್‌ ಕಲೆ ಹಾಕಿವೆ. ಆದರೆ, ಬಳ್ಳಾರಿ ಮತ್ತು ಲಯನ್ಸ್ ತಂಡಗಳಿಗೆ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಿಲ್ಲ.

ಬೆಂಕಿ ಹಾಕಿ ಪ್ರಯತ್ನ: ಮಧ್ಯಾಹ್ನ ಮಳೆ ಸುರಿದ ಕಾರಣ ಔಟ್ ಫೀಲ್ಡ್‌ ಒದ್ದೆಯಾಗಿತ್ತು. ಅಲ್ಲಿನ ನೀರನ್ನು ಹೊರಹಾಕಿದ ಬಳಿಕವೂ ನೆಲ ಸಾಕಷ್ಟು ತಂಪಾಗಿತ್ತು. ಆದ್ದರಿಂದ ಕಟ್ಟಿಗೆಗೆ ಬೆಂಕಿಹಚ್ಚಿ ಅದನ್ನು ನೆಲದ ಮೇಲೆ ಇಟ್ಟು ನೆಲದ ತಂಪು ಕಡಿಮೆ ಮಾಡಲು ಕ್ರೀಡಾಂಗಣದ ಸಿಬ್ಬಂದಿ ಪ್ರಯತ್ನಿಸಿದರು. ಆದರೆ ಸಂಜೆ ಮತ್ತೆ ಜೋರಾಗಿ ಮಳೆ ಸುರಿದ ಕಾರಣ ಈ ಪ್ರಯೋಗ ಫಲಿಸಲಿಲ್ಲ.

ಪಂದ್ಯ ಸ್ಥಳಾಂತರ: ಆ. 24ರಂದು ಇಲ್ಲಿ ನಡೆಯಬೇಕಿದ್ದ ಕರ್ನಾಟಕದ ಆಟಗಾರ್ತಿಯರನ್ನು ಒಳಗೊಂಡ ಮಹಿಳಾ ಪ್ರದರ್ಶನ ಪಂದ್ಯವನ್ನು ಮಳೆಯ ಕಾರಣ ಮೈಸೂರಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.

ನೆನಪು: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್‌ ಜೋನ್ಸ್‌ ಮತ್ತು ಕರ್ನಾಟಕದ ಅಂಪೈರ್‌ ವಿಕ್ರಮ್‌ ರಾಜು ಅವರು ಇಲ್ಲಿ ಹಿಂದಿನ ದಿನಗಳನ್ನು ನೆನಪಿಸಿಕೊಂಡರು.

1986ರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಚೆನ್ನೈನಲ್ಲಿ ನಡೆದ ಟೆಸ್ಟ್‌ ಪಂದ್ಯ ಟೈ ಆಗಿತ್ತು. ಆಗ ಜೋನ್ಸ್‌ ಆ ಪಂದ್ಯದಲ್ಲಿ ಆಡಿದ್ದರು. ವಿಕ್ರಮ್‌ ರಾಜು ಅಂಪೈರ್‌ ಆಗಿ ಕೆಲಸ ಮಾಡಿದ್ದರು. ಆ ದಿನಗಳನ್ನೂ ಅವರು ಮೆಲುಕು ಹಾಕಿದರು.

ಜಾಲಿ ಟ್ರಿಪ್: ಶಿವಮೊಗ್ಗ ಲಯನ್ಸ್ ತಂಡದ ಆಟಗಾರರು ಬುಧವಾರ ದಾಂಡೇಲಿಗೆ ತೆರಳಿ ಬಿಡುವಿನ ವೇಳೆ ಕಳೆದರು. ಅವರು ಕಾಳಿನದಿಯಲ್ಲಿ ಬೋಟಿಂಗ್‌ ಕೂಡ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.