ADVERTISEMENT

ಏಷ್ಯನ್‌ ಕ್ರೀಡಾಕೂಟ ಬ್ಯಾಡ್ಮಿಂಟನ್‌: ಪಿ.ವಿ.ಸಿಂಧುಗೆ ಪ್ರಯಾಸದ ಗೆಲುವು

ಎರಡನೆ ಸುತ್ತಿಗೆ ಸೈನಾ: ಅಶ್ವಿನಿ–ಸಿಕ್ಕಿ ಮೋಡಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 12:19 IST
Last Updated 23 ಆಗಸ್ಟ್ 2018, 12:19 IST
ಭಾರತದ ಪಿ.ವಿ.ಸಿಂಧು ಷಟಲ್‌ ಹಿಂತಿರುಗಿಸಲು ಮುಂದಾದರು –ಎಎಫ್‌ಪಿ ಚಿತ್ರ
ಭಾರತದ ಪಿ.ವಿ.ಸಿಂಧು ಷಟಲ್‌ ಹಿಂತಿರುಗಿಸಲು ಮುಂದಾದರು –ಎಎಫ್‌ಪಿ ಚಿತ್ರ   

ಜಕಾರ್ತ: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಏಷ್ಯನ್‌ ಕೂಟದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನಲ್ಲಿ ಪ್ರಯಾಸದ ಗೆಲುವು ದಾಖಲಿಸಿದ್ದಾರೆ. ಸೈನಾ ನೆಹ್ವಾಲ್‌ ಕೂಡಾ ಎರಡನೆ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಜಿಬಿಕೆ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಸಿಂಧು 21–10, 12–21, 23–21 ರಲ್ಲಿ ವಿಯೆಟ್ನಾಂನ ವು ಥಿ ಟ್ರಾಂಗ್‌ ಅವರನ್ನು ಪರಾಭವಗೊಳಿಸಿದರು.

ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪದಕಗಳನ್ನು ಗೆದ್ದ ಸಾಧನೆ ಮಾಡಿರುವ ಸಿಂಧು ಮೊದಲ ಗೇಮ್‌ನಲ್ಲಿ ಸುಲಭವಾಗಿ ಎದುರಾಳಿಯನ್ನು ಮಣಿಸಿದರು.

ADVERTISEMENT

ಆರಂಭಿಕ ನಿರಾಸೆಯಿಂದ ಟ್ರಾಂಗ್‌ ಎದೆಗುಂದಲಿಲ್ಲ. ವಿಶ್ವ ರ‍್ಯಾಂಕಿಂಗ್‌ನಲ್ಲಿ 52ನೆ ಸ್ಥಾನದಲ್ಲಿರುವ ಅವರು ಎರಡನೆ ಗೇಮ್‌ನಲ್ಲಿ ತಿರುಗೇಟು ನೀಡಿ 1–1ರಲ್ಲಿ ಸಮಬಲ ಮಾಡಿಕೊಂಡರು.

ಮೂರನೆ ಗೇಮ್‌ನಲ್ಲಿ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿತು. ಹೀಗಾಗಿ 11–11ರ ಸಮಬಲ ಕಂಡುಬಂತು. ಈ ಹಂತದಲ್ಲಿ ಮೂರನೆ ಶ್ರೇಯಾಂಕಿತ ಆಟಗಾರ್ತಿ ಸಿಂಧು ಮೋಡಿ ಮಾಡಿದರು. ಚುರುಕಾಗಿ ಪಾಯಿಂಟ್ಸ್‌ ಗಳಿಸಿ 18–15ರಿಂದ ಮುನ್ನಡೆ ಕಂಡರು. ನಂತರ ಎಡವಟ್ಟು ಮಾಡಿದ ಭಾರತದ ಆಟಗಾರ್ತಿ ಎದುರಾಳಿಗೆ ಸತತ ಎರಡು ಪಾಯಿಂಟ್ಸ್‌ ಬಿಟ್ಟುಕೊಟ್ಟರು. ಇದರಿಂದ ವಿಚಲಿತರಾಗದ ಸಿಂಧು ಪರಿಣಾಮಕಾರಿ ಆಟ ಆಡಿ 21–20ರ ಮುನ್ನಡೆ ಗಳಿಸಿದರು. ಈ ಹಂತದಲ್ಲಿ ಟ್ರಾಂಗ್‌ ಒಂದು ಪಾಯಿಂಟ್‌ ಕಲೆಹಾಕಿ 21–21ರಲ್ಲಿ ಸಮಬಲ ಸಾಧಿಸಿದರು. ಹೀಗಾಗಿ ಆಟದ ರೋಚಕತೆ ಹೆಚ್ಚಿತ್ತು.

ಒತ್ತಡದ ಪರಿಸ್ಥಿತಿಯಲ್ಲಿ ಛಲದಿಂದ ಹೋರಾಡಿದ ಸಿಂಧು ಎರಡು ಪಾಯಿಂಟ್‌ ಗಳಿಸಿ ನಿಟ್ಟುಸಿರುಬಿಟ್ಟರು.

ಮುಂದಿನ ಸುತ್ತಿನಲ್ಲಿ ಸಿಂಧುಗೆ ಇಂಡೊನೇಷ್ಯಾದ ತುಂಜುಂಗ್‌ ಗ್ರೆಗೋರಿಯಾ ಮರಿಸ್ಕಾ ಸವಾಲು ಎದುರಾಗಲಿದೆ.

ಈ ವಿಭಾಗದ ಮತ್ತೊಂದು ಪಂದ್ಯದಲ್ಲಿ ಸೈನಾ 21–7, 21–9ರಲ್ಲಿ ಇರಾನ್‌ನ ಸೊರಾಯಾ ಅಘಯೆಹಾಜಿಯಾಗ ಅವರನ್ನು ಸೋಲಿಸಿದರು.

26 ನಿಮಿಷ ನಡೆದ ಹೋರಾಟದ ಎರಡು ಗೇಮ್‌ಗಳಲ್ಲೂ ಸೈನಾ ಪ್ರಾಬಲ್ಯ ಮೆರೆದರು. ಎರಡನೆ ಸುತ್ತಿನ ಪೈಪೋಟಿಯಲ್ಲಿ ಸೈನಾ, ಇಂಡೊನೇಷ್ಯಾದ ಫಿತ್ರಿಯಾನಿ ವಿರುದ್ಧ ಸೆಣಸಲಿದ್ದಾರೆ.

ಮಹಿಳೆಯರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ 21–16, 21–15ರಲ್ಲಿ ಹಾಂಕಾಂಗ್ ಚೀನಾದ ವಿಂಗ್‌ ಯಂಗ್‌ ಮತ್ತು ಯಂಗ್‌ ನಾ ಟಿಂಗ್‌ ಅವರನ್ನು ಮಣಿಸಿದರು.

ಇನ್ನೊಂದು ಹೋರಾಟದಲ್ಲಿ ಆರತಿ ಸಾರಾ ಸುನಿಲ್‌ ಮತ್ತು ರಿತುಪರ್ಣ ಪಾಂಡಾ 11–21, 6–21ರಲ್ಲಿ ಥಾಯ್ಲೆಂಡ್‌ನ ಚಾಯಾನಿತ್‌ ಚಲದಾಚಲಮ್‌ ಮತ್ತು ಫಾತಮಸ್‌ ಮುಯೆನ್‌ವೊಂಗ್‌ ಎದುರು ಪರಾಭವಗೊಂಡರು.

ಪುರುಷರ ಡಬಲ್ಸ್‌ ವಿಭಾಗದ 32ರ ಹಂತದ ಹಣಾಹಣಿಯಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ 21–12, 21–14ರಲ್ಲಿ ಹಾಂಕಾಂಗ್‌ ಚೀನಾದ ಚುಂಗ್‌ ಯೆನ್ನಿ ಮತ್ತು ಟಾಮ್‌ ಚುನ್‌ ಹೀ ಅವರನ್ನು ಮಣಿಸಿದರು.

ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ 21–10, 21–8ರಲ್ಲಿ ಮಾಲ್ಡೀವ್ಸ್‌ನ ತಾಯಿಫ್‌ ಮೊಹಮ್ಮದ್‌ ಮತ್ತು ಮೊಹಮ್ಮದ್‌ ರಶೀದ್‌ ವಿರುದ್ಧ ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.