ADVERTISEMENT

ಅಕ್ಕ ತೋರಿದ ಸ್ಫೂರ್ತಿಯ ಹಾದಿ..

ಪ್ರಮೋದ ಜಿ.ಕೆ
Published 21 ಆಗಸ್ಟ್ 2016, 19:30 IST
Last Updated 21 ಆಗಸ್ಟ್ 2016, 19:30 IST
ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಭಾರತದ ಸಾಕ್ಷಿ ಮಲಿಕ್‌ ಪೈಪೋಟಿಯ ಕ್ಷಣ   ಪ್ರಜಾವಾಣಿ ಚಿತ್ರ/ ಕೆ.ಎನ್‌. ಶಾಂತಕುಮಾರ್‌
ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಭಾರತದ ಸಾಕ್ಷಿ ಮಲಿಕ್‌ ಪೈಪೋಟಿಯ ಕ್ಷಣ ಪ್ರಜಾವಾಣಿ ಚಿತ್ರ/ ಕೆ.ಎನ್‌. ಶಾಂತಕುಮಾರ್‌   

ರಿಯೊ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಅಕ್ಕ ಪದಕ ಜಯಿಸುತ್ತಿದ್ದಂತೆ ನಾನೇ ಪದಕ ಗೆದ್ದಷ್ಟು ಖುಷಿ ಪಟ್ಟೆ. ಸೌಲಭ್ಯಗಳು ಇದ್ದಾಗ ಎಲ್ಲರೂ ಎತ್ತರದ ಸಾಧನೆ ಮಾಡುತ್ತಾರೆ. ಕಾಡುವ ಬಡತನ ಮತ್ತು ಸುಲಭವಾಗಿ ಸೌಲಭ್ಯಗಳು ಸಿಗದೇ ಇದ್ದರೂ ದೊಡ್ಡ ಸಾಧನೆ ಮಾಡುವ ಕನಸು ಕಾಣುವುದು ಇದೆಯಲ್ಲಾ ಅದು ಅಪರೂಪ.

ತೀರಾ ಬಡಕುಟುಂಬದಿಂದ ಬಂದ ಸಾಕ್ಷಿ ಅಕ್ಕ ಪದಕ ಜಯಿಸಿ ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅವರ ಅನೇಕ ಪಂದ್ಯಗಳನ್ನು ಹಿಂದೆಯೂ ನೋಡಿದ್ದೇನೆ. ಅವರು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಹುದು ಎನ್ನುವ ನಿರೀಕ್ಷೆ ಇತ್ತು.  ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅಕ್ಕ ಉಪಯೋಗಿಸಿದ ತಾಂತ್ರಿಕ ಅಂಶಗಳು ಉತ್ತಮವಾಗಿದ್ದವು.

ಕಿರ್ಗಿಸ್ತಾನದ ಟೈನಿಬೆಕೊವಾ ಐಸಲು ಆರಂಭದಲ್ಲಿ ಮುನ್ನಡೆ ಪಡೆದುಕೊಂಡು ಕೊನೆಯ ಒಂದೂವರೆ ನಿಮಿಷದಲ್ಲಿ ತುಂಬಾ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದರು. ಇದೇ ಅವಕಾಶ ಬಳಸಿಕೊಂಡ ಮಲಿಕ್ ಅವರು ಆಕ್ರಮಣಕಾರಿಯಾಗಿ ಆಡಿದ್ದರಿಂದ ಪಾಯಿಂಟ್‌ಗಳು ಲಭಿಸಿದವು.

ಒಂದು ನಿಮಿಷದ ಆಟವಷ್ಟೇ ಬಾಕಿಯಿದ್ದ ಕಾರಣ ಆ ಸಂದರ್ಭದಲ್ಲಿ ಆಕ್ರಮಣಕಾರಿಯಾಗಿ ಆಡುವುದನ್ನು ಬಿಟ್ಟು ಮಲಿಕ್ ಅವರ ಮುಂದೆ ಬೇರೆ ಹಾದಿಯೇ ಇರಲಿಲ್ಲ. ಮೊದಲು ಇಬ್ಬರೂ ಆಟಗಾರ್ತಿಯರು ಲೆಗ್‌ ಅಟ್ಯಾಕ್‌ಗೆ ಪ್ರಯತ್ನಿಸಿ ಪಾಯಿಂಟ್ಸ್ ಗಳಿಸಲು ಮುಂದಾದರು. ಇದರಲ್ಲಿ ಐಸಲು ಆರಂಭದಲ್ಲಿ ಯಶಸ್ಸು ಕಂಡರಾದರೂ ಕೊನೆಯಲ್ಲಿ ರಕ್ಷಣಾತ್ಮಕವಾಗಿ ಆಡಲು ಹೋಗಿ ಸೋತರು. ಕೆಂಪು ವಲಯದ (ರೆಡ್ ಝೋನ್‌) ಬಳಿ ಬಂದು ಪಾಯಿಂಟ್‌ಗಳನ್ನು ಕಲೆ ಹಾಕಲು ಯತ್ನಿಸಿದರು.

ಇದೇ ಅವಕಾಶ ಬಳಸಿಕೊಂಡ ಸಾಕ್ಷಿ ಮಲಿಕ್ ಅವರು ಲೆಗ್‌ ಥ್ರೋ ಮಾಡಲು ಮುಂದಾದರು. ಎದುರಾಳಿ ಸ್ಪರ್ಧಿಯ ಎರಡೂ ಮಂಡಿಯನ್ನು ನೆಲಕ್ಕೆ ಹಚ್ಚಿ ಪಾಯಿಂಟ್ಸ್‌ ಪಡೆದುಕೊಂಡರು.

ಕೊನೆಯ ಒಂಬತ್ತು ಸೆಕೆಂಡುಗಳಷ್ಟೇ ಪಂದ್ಯ ಬಾಕಿಯಿದ್ದಾಗ ಇಬ್ಬರೂ ತಲಾ 5 ಪಾಯಿಂಟ್ಸ್‌ ಹೊಂದಿದ್ದ ಕಾರಣ ಇಬ್ಬರಿಗೂ ಆಕ್ರಮಣಕಾರಿಯಾಗಿ ಆಡುವುದು ಅನಿವಾರ್ಯವಾಗಿತ್ತು. ಈ ವೇಳೆ ಮಲಿಕ್ ಡಬಲ್‌ ಲೆಗ್‌ ಪಟ್ಟು ಹಾಕಿ ಗಳಿಸಿದ ಎರಡು ಪಾಯಿಂಟ್‌ಗಳೇ ಪದಕ ಗೆಲ್ಲಲು ಕಾರಣವಾದವು.

ಕೆಲವೇ ಸೆಕೆಂಡುಗಳ ಸ್ಪರ್ಧೆ ಬಾಕಿಯಿದ್ದಾಗ ಕುಸ್ತಿ ಪಟು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಮುಖ್ಯವಾಗಿರುತ್ತದೆ. ಆದ್ದರಿಂದ ಆದಷ್ಟು ಆಕ್ರಮಣಕಾರಿಯಾಗಿ ಆಡುವುದೇ ಉತ್ತಮ. ಒಂದು ವೇಳೆ ಸಾಕ್ಷಿ ಮಲಿಕ್ ಅವರು ಕೊನೆಯಲ್ಲಿ ಆಕ್ರಮಣಕಾರಿಯಾಗಿ ಆಡದೇ ಹೋಗಿದ್ದರೆ ಡಬಲ್‌ ಲೆಗ್‌ ಪಟ್ಟು ಹಾಕಲು ಆಗುತ್ತಿರಲಿಲ್ಲ.

ಪಾಯಿಂಟ್‌ ಗಳಿಸುವ ವಿಷಯದಲ್ಲಿ ತಾಂತ್ರಿಕವಾಗಿ ತರಬೇತಿ ಹೊಂದಿರುವುದು ಅಗತ್ಯ. ಏಕೆಂದರೆ ಇಬ್ಬರೂ ಸ್ಪರ್ಧಿಗಳ ಪಾಯಿಂಟ್ಸ್‌ ಸಮವಾಗಿದ್ದಾಗ ಯಾವ ತಂತ್ರಗಳನ್ನು ಬಳಸಿ ಪಾಯಿಂಟ್‌ ಕಲೆ ಹಾಕಿದ್ದಾರೆ ಎನ್ನುವುದರ ಆಧಾರದ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ.

ಮಹಿಳೆಯರು ಅಂತರರಾಷ್ಟ್ರೀಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಗೆದ್ದುಬಂದರೆ ಹೆಚ್ಚಾಗಿ ಯಾರೂ ನಮ್ಮನ್ನು ಗುರುತಿಸುವುದಿಲ್ಲ. ಆದರೆ ಸಾಕ್ಷಿ ಮಲಿಕ್‌ ಅವರು ಮಧ್ಯರಾತ್ರಿ ಪದಕ ಗೆದ್ದಾಗ ದೇಶವೇ ಸಂಭ್ರಮಿಸಿತು. ಅತ್ಯಂತ ಹೆಮ್ಮೆಯಿಂದ ಕಂಡಿತು. ಇದೇ ರೀತಿಯ ಪ್ರೋತ್ಸಾಹ ಎಲ್ಲಾ ಕುಸ್ತಿಪಟುಗಳಿಗೆ ಸಿಕ್ಕರೆ ಪ್ರತಿ ಒಲಿಂಪಿಕ್ಸ್‌ನಲ್ಲಿಯೂ ಭಾರತದ ಮಹಿಳೆಯರು ಪದಕ ಗೆಲ್ಲುವುದು ಕಷ್ಟವಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT