ADVERTISEMENT

ಉನ್ನತ ಶಿಕ್ಷಣ ವ್ಯಾಸಂಗಕ್ಕೂ ಸಾಲ!

ಎ.ಎಂ.ಸುರೇಶ
Published 20 ಏಪ್ರಿಲ್ 2014, 19:30 IST
Last Updated 20 ಏಪ್ರಿಲ್ 2014, 19:30 IST

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತಶಿಕ್ಷಣ ವ್ಯಾಸಂಗಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ರಾಜೀವ್‌ಗಾಂಧಿ ಸಾಲ ಯೋಜನೆ ಜಾರಿಗೊಳಿಸಿದೆ.

ದುಬಾರಿ ವೆಚ್ಚವನ್ನು ಭರಿಸಲಾಗದೆ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು, ಶಿಕ್ಷಣವನ್ನು ಅರ್ಧಕ್ಕೆ ಮೊಟಕು ಗೊಳಿಸಬಾರದು. ಅವರ ಭವಿಷ್ಯ ಉಜ್ವಲವಾಗಬೇಕು ಎಂಬುದನ್ನು ಮನಗಂಡು ಸಾಲ ನೀಡಲಾಗುತ್ತಿದೆ. 2013 – 14ನೇ ಸಾಲಿನಿಂದಲೇ ಸಾಲ ಯೋಜನೆ ಜಾರಿಗೆ ಬಂದಿದ್ದು, ರಾಜ್ಯ ಸರ್ಕಾರ ನಡೆಸುತ್ತಿರುವ ವಿಶ್ವವಿದ್ಯಾಲಯ, ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಸಾಮಾನ್ಯ ಪದವಿ, ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಬಹುದು.

ಸದ್ಯಕ್ಕೆ ರಾಜ್ಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವವರ ಪ್ರಮಾಣ ಶೇ 25.5ರಷ್ಟು ಇದೆ. 13ನೇ ಪಂಚವಾರ್ಷಿಕ ಯೋಜನೆಯ ಅಂತ್ಯದ ವೇಳೆಗೆ ಇದನ್ನು ಶೇ 32ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಬಡತನ ಹಾಗೂ ಹಿಂದುಳಿದಿರುವಿಕೆಯಿಂದಾಗಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವ್ಯಾಸಂಗ ಮಾಡಲು ಮುಂದೆ ಬರುತ್ತಿಲ್ಲ. ಹಲವರು ಮಧ್ಯದಲ್ಲೇ ವ್ಯಾಸಂಗವನ್ನು ನಿಲ್ಲಿಸುತ್ತಾರೆ. ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವವರ ಪ್ರಮಾಣವನ್ನು ಹೆಚ್ಚಿಸಲು ಈ ಅಂಶಗಳು ಪ್ರಮುಖ ಅಡಚಣೆಯಾಗಿವೆ.

ಶಿಕ್ಷಣ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಪರಿಶಿಷ್ಟರು, ಹಿಂದುಳಿದ ವರ್ಗದವರು, ಆರ್ಥಿಕವಾಗಿ ಹಿಂದುಳಿದವರು ಉನ್ನತ ಶಿಕ್ಷಣ ಪಡೆಯಲು ಮುಂದೆ ಬರುತ್ತಿಲ್ಲ. ಅವರಿಗೆ ಸಾಲ ನೀಡುವ ಮೂಲಕ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಪ್ರೊತ್ಸಾಹ ನೀಡಬೇಕು ಎಂಬುದು ಸರ್ಕಾರದ ಆಶಯ.

ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ 50 ಸಾವಿರ ವಿದ್ಯಾರ್ಥಿಗಳಿಗೆ ಸಾಲ ನೀಡಬೇಕು. ಮುಂದಿನ ವರ್ಷಗಳಲ್ಲಿ ಈ ಸಂಖ್ಯೆಯನ್ನು ಜಾಸ್ತಿ ಮಾಡಬೇಕು. ಅವಕಾಶವಂಚಿತ ಜನರಿಗೆ  ಇದರ ಉಪಯೋಗ ಆಗಬೇಕು ಎಂಬ ಉದ್ದೇಶವನ್ನು ಉನ್ನತ ಶಿಕ್ಷಣ ಇಲಾಖೆ ಹೊಂದಿದೆ.
ಅರ್ಹತೆ: ಪಿಯುಸಿಯಲ್ಲಿ ಶೇ 50ರಷ್ಟು ಅಂಕ ಪಡೆದು ಪದವಿ, ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಸಾಲ ಪಡೆಯಲು ಮುಂದೆ ಬರುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ₨ 2.5 ಲಕ್ಷ ಮೀರಿರಬಾರದು. ಭಾರತೀಯನಾಗಿರಬೇಕು.

ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಸಿಎ ಮತ್ತಿತರ ಮೂರು ವರ್ಷದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ಗರಿಷ್ಠ ₨60 ಸಾವಿರ ಪ್ರಕಾರ ಮೂರು ವರ್ಷಕ್ಕೆ ₨1.80 ಲಕ್ಷ ಹಾಗೂ ಐದು ವರ್ಷದ ಇಂಟಿಗ್ರೇಟೆಡ್‌ ಕೋರ್ಸ್‌ಗೆ ₨ 3 ಲಕ್ಷ ಸಾಲ ನೀಡಲಾಗುತ್ತದೆ.

ಆರು ತಿಂಗಳ ಒಳಗಿನ ಕೋರ್ಸ್‌ಗೆ ₨20 ಸಾವಿರ, 6ರಿಂದ 1 ವರ್ಷದೊಳಗಿನ ಕೋರ್ಸ್‌ಗೆ ₨40 ಸಾವಿರ, 1 ವರ್ಷದ ಕೋರ್ಸ್‌ಗೆ ₨60 ಸಾವಿರ ಹಾಗೂ ಒಂದು ವರ್ಷ ಅವಧಿ ಮೀರಿದ ಕೋರ್ಸ್‌ಗೆ ₨ 1 ಲಕ್ಷ ಸಾಲ ನಿಗದಿಪಡಿಸಲಾಗಿದೆ. ₨ 4 ಲಕ್ಷದೊಳಗಿನ ಸಾಲಕ್ಕೆ ಶೇ 12ರಷ್ಟು ಬಡ್ಡಿಯನ್ನು ವಿಧಿಸುತ್ತಿದ್ದು, ವ್ಯಾಸಂಗ ಅವಧಿಯ ಬಡ್ಡಿಯನ್ನು  ಸರ್ಕಾರವೇ ಭರಿಸಲಿದೆ.

ವಿದ್ಯಾರ್ಥಿ ಅನುತ್ತೀರ್ಣನಾದರೆ, ಮಧ್ಯದಲ್ಲಿ ವ್ಯಾಸಂಗ ನಿಲ್ಲಿಸಿದರೆ, ಶಿಸ್ತುಕ್ರಮಕೈಗೊಂಡು ವಜಾಗೊಳಿಸಿದರೆ ಬಡ್ಡಿಯ ಸಬ್ಸಿಡಿಗೆ ಅರ್ಹರಾಗುವುದಿಲ್ಲ. ಆದರೆ, ವೈದ್ಯಕೀಯ ಕಾರಣಕ್ಕೆ ವ್ಯಾಸಂಗ ನಿಲ್ಲಿಸಿದ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಿದರೆ ಬಡ್ಡಿಯ ಸಹಾಯಧನ ಪಡೆಯಬಹುದು.

ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿಯ ನೋಡಲ್‌ ಬ್ಯಾಂಕ್‌ ಆಗಿರುವ ವಿಜಯಾ ಬ್ಯಾಂಕ್‌ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಮರು ಪಾವತಿ: ಉದ್ಯೋಗ ದೊರೆತ 6 ತಿಂಗಳ ನಂತರ ಅಥವಾ ವ್ಯಾಸಂಗ ಪೂರ್ಣಗೊಂಡ 1 ವರ್ಷದ ನಂತರ ಸಾಲ ಮರು ಪಾವತಿ ಶುರುವಾಗುತ್ತದೆ. ₨50 ಸಾವಿರವರೆಗಿನ ಸಾಲ ಮರು ಪಾವತಿಗೆ 2 ವರ್ಷ, ₨50ರಿಂದ 1 ಲಕ್ಷವರೆಗಿನ ಸಾಲ ಮರು ಪಾವತಿಗೆ 2ರಿಂದ 5 ವರ್ಷ ಹಾಗೂ 1 ಲಕ್ಷ ಮೀರಿದ ಸಾಲಕ್ಕೆ 3ರಿಂದ 7 ವರ್ಷ ಕಾಲಾವಕಾಶ ನೀಡಲಾಗಿದೆ.

ಸಾಲ ಪಡೆಯಲು ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ₨ 2.5 ಲಕ್ಷ ಮೀರದ ಬಗ್ಗೆ ತಹಸೀಲ್ದಾರ್‌ ನೀಡಿರುವ ಪ್ರಮಾಣ ಪತ್ರವನ್ನು ಪುರಾವೆಯಾಗಿ ನೀಡಬೇಕು.ಎಂಜಿನಿಯರಿಂಗ್‌, ವೈದ್ಯಕೀಯ ಮತ್ತಿತರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ದ್ಯಾರ್ಥಿಗಳಿಗೆ ಮಾತ್ರ ಇದುವರೆಗೆ ಸಾಲ ಸೌಲಭ್ಯ ದೊರೆಯುತ್ತಿತ್ತು. ಆದರೆ, ಈಗ ಸಾಮಾನ್ಯ ಪದವಿ ಶಿಕ್ಷಣಕ್ಕೂ ಸಾಲದ ವ್ಯವಸ್ಥೆ ಮಾಡಲಾಗಿದೆ.

ಇದರಿಂದಾಗಿ ಬಡವರು, ಮಧ್ಯಮ ವರ್ಗದವರಿಗೆ  ಅನುಕೂಲವಾಗಲಿದ್ದು, ಉನ್ನತ ಶಿಕ್ಷಣ ವ್ಯಾಸಂಗ ಮಾಡುವವರ ಪ್ರಮಾಣ ಕ್ರಮೇಣ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT