ADVERTISEMENT

ಎಂ. ಮಂದಣ್ಣ

ಬುದ್ಧಿಮಾಂದ್ಯತೆಗೆ ಸೆಡ್ಡು

ಎಸ್.ರವಿ.
Published 11 ಡಿಸೆಂಬರ್ 2016, 19:30 IST
Last Updated 11 ಡಿಸೆಂಬರ್ 2016, 19:30 IST
ಎಂ. ಮಂದಣ್ಣ
ಎಂ. ಮಂದಣ್ಣ   

ಅಂಗವಿಕಲರು ಎಂದ ಕೂಡಲೇ ಸಮಾಜವು ಅವರನ್ನು ನೋಡುವ ದೃಷ್ಟಿಯೇ ಬೇರೆ. ಇದೊಂದು ದೊಡ್ಡ ಶಾಪ ಎಂಬಂತೆ ಬದುಕಿಗೆ ದಕ್ಕಿದ್ದೇ ಇಷ್ಟು ಎಂದು ಕಾಲ ದೂಡುವವರೂ ಇದ್ದಾರೆ.

ಆದರೆ ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಕೆದಕಲ್‌ ಗ್ರಾಮದ  ಹಾಲೇರಿಯ ಪೂವಯ್ಯ ಹಾಗೂ ಚೆಂಬವ್ವ ದಂಪತಿಯ ಎರಡನೇ ಮಗ 30ರ ಹರೆಯದ ಎಂ. ಮಂದಣ್ಣ ಸಾಧನೆ ಗಮನಾರ್ಹ.

2001 ರಲ್ಲಿ ಮಡಿಕೇರಿ ಜನರಲ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಓಟದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದರು. ನಂತರ ಇವರಲ್ಲಿ ಕ್ರೀಡೆಯ ಕುರಿತು ಅತೀವ ಆಸಕ್ತಿ ಬೆಳೆಯಿತು. 2005 ರಲ್ಲಿ ಮಂಗಳೂರಿನಲ್ಲಿ ವಿಶೇಷ ಒಲಿಂಪಿಕ್ಸ್‌ ಸಂಸ್ಥೆಯು ನಡೆಸಿದ  ರಾಜ್ಯಮಟ್ಟದ ಫುಟ್‌ಬಾಲ್‌ ಟೂರ್ನಿಯಲ್ಲಿ ಇವರು ಆಡಿದ ತಂಡ ಪ್ರಥಮ ಸ್ಥಾನ ಗಳಿಸಿತ್ತು.

2012ರಲ್ಲಿ ಮೈಸೂರಿನಲ್ಲಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಕಾಡೆಮಿ ಮತ್ತು ರೋಟರಿ ಮಿಡ್‌ಟೌನ್, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯಮಟ್ಟದ ಕ್ರಿಕೆಟ್‌  ಟೂರ್ನಿಯಲ್ಲೂ  ಸ್ವಸ್ತ ತಂಡ ದೊಂದಿಗೆ ಭಾಗವಹಿಸಿ ಪ್ರಶಸ್ತಿ ಗೆದ್ದರು. 2013ರಲ್ಲಿ ಮಂಗಳೂರಿನಲ್ಲಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಕಾ ಡೆಮಿಯವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾ ಕೂಟದ ಲಾಂಗ್‌ಜಂಪ್ ಸ್ವರ್ಧೆಯಲ್ಲಿ ಪ್ರಶಸ್ತಿ ಗಳಿಸಿದರು. ಅದೇ ವರ್ಷ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್‌ನ  ಅಥ್ಲೆಟಿಕ್ಸ್‌ನ 200 ಮೀ. ಓಟದ ಸ್ಪರ್ಧೆಯಲ್ಲಿ ರಜತ ಪದಕ ಗಳಿಸಿದರು.

ಸುಂಟಿಕೊಪ್ಪದ ಸ್ವಸ್ತ ವಿಶೇಷ ಶಾಲೆಯಿಂದ ಆಯ್ಕೆಗೊಂಡ ಮಂದಣ್ಣ ಅವರು ಬಳಿಕ 2013 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ವಿಶೇಷ ಪ್ಯಾರಾಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ನೂರು ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಅಲ್ಲದೆ 200 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಕಂಚು ಹಾಗೂ 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ.

2007 ರಲ್ಲಿ ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್‌ ಕೋಚಿಂಗ್‌ ಶಿಬಿರದಲ್ಲಿ ಭಾಗವಹಿಸಿದ್ದ ಇವರು 2008 ರಲ್ಲಿ ಆಂಧ್ರಪ್ರದೇಶದ ಅನಂತಪುರದಲ್ಲಿ ವಿಶೇಷ ಒಲಿಂಪಿಕ್ಸ್‌ ನವರು ನಡೆಸಿದ ಕ್ರಿಕೆಟ್‌ ತರಬೇತಿ ಶಿಬಿರದಲ್ಲಿಯೂ ಪಾಲ್ಗೊಂಡಿದ್ದರು.

ಅಂಗವಿಕಲರನ್ನು ಇಂದಿನ ಸಮಾಜವು ಕಾಣುವ ರೀತಿಯನ್ನು ಕುರಿತು ಮಂದಣ್ಣ  ‘ನಮಗೆ ನಿಮ್ಮ ಅನುಕಂಪ ಅಥವಾ ಸಾಂತ್ವನ ಬೇಕಾಗಿಲ್ಲ. ಬದಲಿಗೆ ಸಮಾನ ಅವಕಾಶಗಳು ಬೇಕು’ ಎಂದು ಕೇಳುತ್ತಾರೆ.

ಕ್ರೀಡೆಯಲ್ಲಿ ಇನ್ನಷ್ಟು ಸಾಧಿಸಬೇಕೆಂಬ ಛಲ ಹೊಂದಿರುವ ಮಂದಣ್ಣ ಅವರು ‘ನನಗೆ ಸರ್ಕಾರ ಅಥವಾ ಸಂಬಂಧಿಸಿದ ಇಲಾಖೆಯಿಂದ ಹೆಚ್ಚಿನ ಪ್ರೋತ್ಸಾಹ ಬೇಕಾಗಿದೆ.  ಸ್ವಸ್ಥ ಸಂಸ್ಥೆಯ ತರಬೇತಿ ಹೊರ ತುಪಡಿಸಿ ಇನ್ನಾವುದೇ ಸೌಲಭ್ಯ ನನಗೆ ಸಿಕ್ಕಿಲ್ಲ ’ ಎಂದು ಹೇಳುತ್ತಾರೆ. ಪ್ರಸಕ್ತ ಇವರು ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಬುದ್ಧಿಮಾಂದ್ಯ ಮತ್ತು ಅಂಗವಿಕ ಲರ ಅಭಿವೃದ್ಧಿಗಾಗಿ ಸಾರ್ವಜನಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದಾರೆ.  ಅದಕ್ಕಾಗಿ ಸರ್ಕಾರ  ₹2 ಸಾವಿರ ಗೌರವ ಧನ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT