ADVERTISEMENT

ಕೊಡಗಿನಲ್ಲಿ ಹಾಕಿ ಹಬ್ಬ...

ಅದಿತ್ಯ ಕೆ.ಎ.
Published 6 ಮೇ 2018, 19:30 IST
Last Updated 6 ಮೇ 2018, 19:30 IST
ಇಂಡಿಯನ್‌ ಒಲಿಂಪಿಯನ್‌ ಹಾಗೂ ಕೂರ್ಗ್‌ ಇಂಟರ್‌ನ್ಯಾಷನಲ್‌ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯದ ದೃಶ್ಯ
ಇಂಡಿಯನ್‌ ಒಲಿಂಪಿಯನ್‌ ಹಾಗೂ ಕೂರ್ಗ್‌ ಇಂಟರ್‌ನ್ಯಾಷನಲ್‌ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯದ ದೃಶ್ಯ   

ನಿಸರ್ಗ ಸಂಪತ್ತಿನ ಜಿಲ್ಲೆ ಕೊಡಗು. ಇಲ್ಲಿನ ಪ್ರಕೃತಿಯೇ ಕ್ರೀಡೆಗೆ ಸ್ಫೂರ್ತಿ ಎಂಬ ಮಾತಿದೆ. ರಾಜ್ಯದ ಬೇರೆ ಭಾಗಗಳಲ್ಲಿನ ರಥೋತ್ಸವದಂತೆ ಏಪ್ರಿಲ್‌, ಮೇನಲ್ಲಿ ಕೊಡಗಿನಲ್ಲಿ ಕ್ರೀಡಾ ಉತ್ಸವಗಳು ನಡೆಯುತ್ತವೆ. ಅಪಾರ ಸಂಖ್ಯೆಯಲ್ಲಿ ಜನರು ಸೇರಿ ಇಲ್ಲಿ ಸಂಭ್ರಮಿಸುತ್ತಾರೆ. ಒಂದೆಡೆ ಕೊಡವ ಕುಟುಂಬಗಳ ಹಾಕಿ ಉತ್ಸವ ನಡೆದರೆ, ಮತ್ತೊಂದೆಡೆ ಬೇರೆ ಬೇರೆ ಸಮುದಾಯಗಳು ಕ್ರಿಕೆಟ್, ಫುಟ್‌ಬಾಲ್‌, ಕಬಡ್ಡಿ ಕ್ರೀಡಾಕೂಟಗಳನ್ನು ಆಯೋಜಿಸುತ್ತವೆ.

ಕೊಡವ ಕುಟುಂಬಗಳ ಹಾಕಿ ಉತ್ಸವಕ್ಕೆ ತನ್ನದೇ  ಆದ ವಿಶೇಷತೆ ಇದೆ. 1997ರಲ್ಲಿ ಕೊಡಗಿನ ಕರಡ ಗ್ರಾಮದಲ್ಲಿ ಮೊದಲ ಬಾರಿಗೆ ಕೌಟುಂಬಿಕ ಹಾಕಿ ಟೂರ್ನಿಗೆ ಚಾಲನೆ ದೊರೆಯಿತು. ಇಂದು ದೊಡ್ಡ ಕ್ರೀಡಾಕೂಟವಾಗಿ ಬೆಳೆದಿದೆ. ಕಾವೇರಿ ಸಂಕ್ರಮಣ (ತೀರ್ಥೋದ್ಭವ), ಹುತ್ತರಿ, ಕೈಲ್‌ ಪೊಳ್ದ್‌ ಬಿಟ್ಟರೆ ಹಾಕಿಯನ್ನು ಹಬ್ಬದಂತೆಯೇ  ಸಂಭ್ರಮಿಸಲಾಗುತ್ತಿದೆ.

ಈ ಉತ್ಸವದಲ್ಲಿ ಕ್ರೀಡಾಸಕ್ತರು ಮಾತ್ರ ಆಡಿ ಸಂಭ್ರಮಿಸುವುದಿಲ್ಲ. ಆಯಾ ಕುಟುಂಬದ ಹಿರಿಯರು, ಪುಟ್ಟ ಮಕ್ಕಳೂ ಸಹ ಹಾಕಿ ಸ್ಟಿಕ್‌ ಹಿಡಿದು ಮೈದಾನಕ್ಕೆ ಇಳಿಯುತ್ತಾರೆ. ರಾಜ್ಯ, ರಾಷ್ಟ್ರೀಯ ತಂಡದಲ್ಲಿ ಮಿಂಚಿದ ಕೊಡಗಿನ ಆಟಗಾರರೂ ತಂಡದ ಸದಸ್ಯರಾಗಿ ಪಾಲ್ಗೊಂಡು ಯುವ ಆಟಗಾರರಿಗೆ ಸ್ಫೂರ್ತಿ ತುಂಬುತ್ತಾರೆ. ಹಿರಿಯರು ಗೋಲು ಹೊಡೆದು ಪುಳಕಿತರಾಗುತ್ತಾರೆ.

ADVERTISEMENT

‘ಕೊಡಗಿನವರು ಎಲ್ಲಿಯೇ ನೆಲೆಸಿದ್ದರೂ ವರ್ಷಕ್ಕೊಮ್ಮೆ ನಡೆಯುವ ಹಾಕಿ ಉತ್ಸವಕ್ಕೆ ಬರುತ್ತಾರೆ. ಸಂಭ್ರಮದೊಂದಿಗೆ ಒಗ್ಗಟ್ಟು ಪ್ರದರ್ಶನಕ್ಕೆ ಉತ್ಸವ ಸಾಕ್ಷಿಯಾಗಿದೆ’ ಎಂದು ಸಂಘಟಕರು ಹೆಮ್ಮೆಯಿಂದ ನುಡಿಯುತ್ತಾರೆ.

ಕೊಡಗಿಗೆ ಬ್ರಿಟಿಷರು ಹಾಕಿ ಆಟ ಪರಿಚಯಿಸಿದರು. ಜಿಲ್ಲೆಯ ಮೂಲ ನಿವಾಸಿಗಳು ಅವರಿಂದ ಹಾಕಿ ಆಡುವುದನ್ನು ಕಲಿತರು ಎಂದು ಇಲ್ಲಿಯ ಹಿರಿಯರು ಹೇಳುತ್ತಾರೆ. ಬಿಡುವಿನ ವೇಳೆಯಲ್ಲಿ ಭತ್ತದ ಗದ್ದೆ, ಶಾಲೆಯ ಮೈದಾನಗಳಲ್ಲಿ ಹಾಕಿ ಆಡುತ್ತಿದ್ದ ಕೊಡಗಿನ ಜನರಲ್ಲಿ ನಿಧಾನವಾಗಿ ಅದರತ್ತ ಆಸಕ್ತಿ ಬೆಳೆಯಿತು. ಆಗ ಹಾಕಿ ಸಂಭ್ರಮ ಮರೆಯಾಗಬಾರದೆಂದು ಪಾಂಡಂಡ ಕುಟ್ಟಪ್ಪ ಹಾಗೂ ಅವರ ಸಹೋದರ ಕಾಶಿ ಅವರು ‘ಪಾಂಡಂಡ ಹಾಕಿ ಉತ್ಸವ’ ಹೆಸರಿನಲ್ಲಿ ಟೂರ್ನಿ ಆಯೋಜಿಸಿದರು. ಮೊದಲ ಟೂರ್ನಿಯಲ್ಲಿ 60 ಕೌಟುಂಬಿಕ ತಂಡಗಳು ಪಾಲ್ಗೊಂಡಿದ್ದವು.

ನಂತರದ ವರ್ಷಗಳಲ್ಲಿ 280ಕ್ಕೂ ಹೆಚ್ಚು ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು. ಇದುವರೆಗೂ 21 ಉತ್ಸವಗಳು ನಡೆದಿದ್ದು, ಉತ್ಸವದಲ್ಲಿ ಆಡಿದ ಹಲವು ಯುವ ಆಟಗಾರರು ರಾಜ್ಯ, ರಾಷ್ಟ್ರೀಯ ತಂಡಗಳಲ್ಲಿ ಮಿಂಚಿದ್ದಾರೆ. ಉತ್ಸವ ‘ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌’ಗೂ ಸೇರ್ಪಡೆಗೊಂಡಿದೆ.

ಪ್ರತಿವರ್ಷ ಒಂದೊಂದು ಕುಟುಂಬಗಳ ಆತಿಥ್ಯದಲ್ಲಿ ಉತ್ಸವವನ್ನು ಆಯೋಜಿಸಲಾಗುತ್ತದೆ. ರಾಜ್ಯ ಸರ್ಕಾರವೂ ಕೊಡವ ಹಾಕಿ ಉತ್ಸವಕ್ಕೆ ಅನುದಾನ ನೀಡುತ್ತಿದೆ. 2016ರಲ್ಲಿ ಶಾಂತೆಯಂಡ, 2017ರಲ್ಲಿ ಬಿದ್ದಾಟಂಡ ಕುಟುಂಬವು ಸಾರಥ್ಯ ವಹಿಸಿತ್ತು. ಪ್ರಸಕ್ತ ವರ್ಷ ಪುಟ್ಟ ಕುಟುಂಬವಾದ ಕುಲ್ಲೇಟಿರಕ್ಕೆ ಅವಕಾಶ ಸಿಕ್ಕಿದೆ. ಈ ಬಾರಿ 333 ತಂಡಗಳು ಪಾಲ್ಗೊಂಡಿದ್ದು ಮೇ 20ಕ್ಕೆ ಉತ್ಸವ ಕೊನೆಗೊಳ್ಳಲಿದೆ. ಪ್ರತಿನಿತ್ಯ ನೂರಾರು ಸಂಖ್ಯೆಯ ಕ್ರೀಡಾಪ್ರೇಮಿಗಳು ಕಾವೇರಿ ನದಿ ತಟದ ಮೂರು ಮೈದಾನದಲ್ಲಿ ಹಾಕಿ ಆಟದ ಗಮ್ಮತ್ತು ಅನುಭವಿಸುತ್ತಿದ್ದಾರೆ.

**

ಒಂದು ಜನಾಂಗದ ಉತ್ಸವವಾಗಿ ಉಳಿದಿಲ್ಲ. ಎಲ್ಲ ಸಮುದಾಯಗಳ ನಡುವೆಯೂ ಬಾಂಧವ್ಯ ಬೆಸೆಯಲು ಕಾರಣವಾಗಿದೆ. ಗೆಲುವು– ಸೋಲಿಗೆ ಮಹತ್ವವಿಲ್ಲ. ಪ್ರತಿವರ್ಷ ಈ ಉತ್ಸವದಲ್ಲಿ ಪ್ರತಿಭಾನ್ವಿತರ ಆಯ್ಕೆ ನಡೆಯುತ್ತದೆ.
  – ಅಜಿತ್‌ ನಾಣಯ್ಯ, ಸದಸ್ಯ, ‘ಕುಲ್ಲೇಟಿರ ಹಾಕಿ ಉತ್ಸವ’ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.