ADVERTISEMENT

ಗೋವಾ ಕ್ರಿಕೆಟ್‌ನಲ್ಲಿ ಕನ್ನಡತಿ ತೇಜಸ್ವಿನಿ

ಜಿ.ಎಚ್.ವೆಂಕಟೇಶ್
Published 9 ಜುಲೈ 2017, 19:30 IST
Last Updated 9 ಜುಲೈ 2017, 19:30 IST
ತೇಜಸ್ವಿನಿ ದುರ್ಗದ
ತೇಜಸ್ವಿನಿ ದುರ್ಗದ   

ಗೋವಾ ಕ್ರಿಕೆಟ್ ಸಂಸ್ಥೆಯ 16 ವರ್ಷದೊಳಗಿನ ಬಾಲಕಿಯರ ತಂಡದ ನಾಯಕಿ, ಕನ್ನಡತಿ ತೇಜಸ್ವಿನಿ ದುರ್ಗದ ಅವರು ಈಗ ಶಿಖಾ ಪಾಂಡೆ ನಾಯಕತ್ವದ ಅಲ್ಲಿನ ರಾಜ್ಯ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್‌ ಆಗಿರುವ ಆಕೆ ಬ್ಯಾಟಿಂಗ್ ಜೊತೆಗೆ ಲೆಗ್‌ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ.

ಮಡಗಾಂವ್‌ನ ಮಲ್ಟಿಪರ್ಪಸ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ಓದುತ್ತಿರುವ ತೇಜಸ್ವಿನಿ ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕು ಹಾನಾಪುರದ ನೀಲಪ್ಪ ದುರ್ಗದ ಹಾಗೂ ನೀಲವ್ವ ದಂಪತಿಯ ಮಗಳು. ಈಚೆಗೆ ಮೈಸೂರಿನಲ್ಲಿ ನಡೆದ ಮಹಿಳಾ ಪ್ರೊಲೀಗ್ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ವಿದರ್ಭ ತಂಡವನ್ನು ಪ್ರತಿನಿಧಿಸಿದ್ದರು. ಗೋವಾ ರಾಜ್ಯ ತಂಡಕ್ಕೆ ಆಯ್ಕೆಯಾದ ಸಂಭ್ರಮದಲ್ಲಿರುವ ತೇಜಸ್ವಿನಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

* ಕ್ರಿಕೆಟ್‌ ಬಗ್ಗೆ ನಿಮಗೆ ಆಸಕ್ತಿ ಹೇಗೆ ಮೂಡಿತು
ಮಡಗಾಂವ್‌ನ ಹೋಲಿ ಸ್ಪಿರಿಟ್ ಇನ್‌ಸ್ಟಿಟ್ಯೂಟ್ ಶಾಲೆಯಲ್ಲಿ ಓದುವಾಗ ದೈಹಿಕ ಶಿಕ್ಷಕ ಬ್ರೂನೊ ಮಥಾಯಿ ಬಾಲಕಿಯರ ಕ್ರಿಕೆಟ್ ತಂಡ ಕಟ್ಟಿದ್ದರು. ಆಟದಲ್ಲಿ ಚುರುಕಾಗಿದ್ದ ನನ್ನನ್ನು ತಂಡಕ್ಕೆ ಸೇರಿಸಿಕೊಂಡಿದ್ದರು. ಆಗ ಟಿವಿಯಲ್ಲಿ ಕ್ರಿಕೆಟ್‌ ನೋಡಿದ್ದ ನನಗೆ ಆಟದ ಬಗ್ಗೆ ಏನೂ ಗೊತ್ತಿರಲಿಲ್ಲ. ಬರೀ ಪುರುಷರಷ್ಟೇ ಕ್ರಿಕೆಟ್‌ ಆಡುತ್ತಾರೆ ಎಂದು ತಿಳಿದಿದ್ದೆನು. ಬ್ರೂನೊ ಸರ್‌ ನಮ್ಮನ್ನೆಲ್ಲಾ ಅಲ್ಲಿನ ಜವಾಹರಲಾಲ್‌ ನೆಹರೂ ಕ್ರೀಡಾಂಗಣಕ್ಕೆ ಆಟ ಆಡಿಸಲು ಕರೆದೊಯ್ಯುತ್ತಿದ್ದರು. ಆಗ ಅಲ್ಲಿಗೆ ಗೋವಾ ಕ್ರಿಕೆಟ್ ಅಸೋಸಿಯೇಶನ್‌ನ ಮಹಿಳಾ ತಂಡದ ಸಹಾಯಕ ಕೋಚ್ ಅನುರಾಧಾ ರೇಡ್ಕರ್ ಕೂಡ ತಂಡದೊಂದಿಗೆ ತರಬೇತಿಗೆ ಬರುತ್ತಿದ್ದರು.

ADVERTISEMENT

ಶಾಲಾ ತಂಡದಲ್ಲಿ ನನ್ನ ಆಟ ಗಮನಿಸುತ್ತಿದ್ದ ಅವರು. ಲೆದರ್‌ಬಾಲ್‌ನಲ್ಲಿ ವೇಗದ ಬೌಲಿಂಗ್‌ಗೂ ಹೆದರದೇ ಬ್ಯಾಟ್‌ ಬೀಸುತ್ತಿದ್ದುದನ್ನು ಕಂಡು ನನಗೂ ಮಾರ್ಗದರ್ಶನ ಮಾಡುತ್ತಿದ್ದರು. ಮುಂದೆ ಆರನೇ ತರಗತಿಯಲ್ಲಿದ್ದಾಗ 14 ವರ್ಷದೊಳಗಿನ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಿದ್ದೆ ಆದರೆ ಆ ವರ್ಷ ಅವಕಾಶ ಸಿಕ್ಕಿರಲಿಲ್ಲ. ಏಳನೇ ತರಗತಿಯಲ್ಲಿದ್ದಾಗ ಅವಕಾಶ ಸಿಕ್ಕಿತು. ಒಂದೆರಡು ಪಂದ್ಯ ಆಡಿದರೂ ಓದಿನ ಕಾರಣ ಮುಂದುವರೆಯಲಿಲ್ಲ.

* 16 ವರ್ಷದೊಳಗಿನ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ?
9ನೇ ತರಗತಿಗೆ ಓದುವಾಗ ಅನುರಾಧಾ ಅವರ ಒತ್ತಾಸೆ ಮೇರೆಗೆ ಪಣಜಿಯ ಗೋವಾ ಕ್ರಿಕೆಟ್ ಅಸೋಸಿಯೇಶನ್‌ ಗ್ರೌಂಡ್‌ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡೆನು.ಅವಕಾಶ ಸಿಕ್ಕಿತು. ಮುಂದೆ ಒಂದು ತಿಂಗಳು ಕಾಲ ಅಲ್ಲಿಯೇ ಕಠಿಣ ತರಬೇತಿ ನೀಡಲಾಯಿತು. ಅದೇ ವರ್ಷ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ವಲಯ ಟೂರ್ನಿಯಲ್ಲಿ ಕರ್ನಾಟಕ ತಂಡವೇ ಮೊದಲ ಎದುರಾಳಿಯಾಗಿತ್ತು. ಆದರೆ ಆಡುವ 11ರ ತಂಡದಲ್ಲಿ ನನಗೆ ಅವಕಾಶ ಸಿಕ್ಕಿರಲಿಲ್ಲ. ಆ ಪಂದ್ಯದಲ್ಲಿ ನಮ್ಮ ತಂಡ ಸೋಲು ಅನುಭವಿಸಿತ್ತು. ಮರು ವರ್ಷ ಹೈದರಾಬಾದ್‌ನಲ್ಲಿಯೇ ನಡೆದ ಟೂರ್ನಿಯಲ್ಲಿ ತಮಿಳುನಾಡು ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದೆವು. ಆ ಪಂದ್ಯದಲ್ಲಿ 49 ರನ್‌ ಗಳಿಸಿ ಬೌಲ್ಡ್ ಆಗಿದ್ದೆನು. ಕೇರಳ ತಂಡದ ವಿರುದ್ಧ 6 ಓವರ್‌ಗಳಲ್ಲಿ 31 ರನ್‌ ನೀಡಿ ನಾಲ್ಕು ವಿಕೆಟ್ ಪಡೆದಿದ್ದೆ. ಆದರೆ ಆ ಪಂದ್ಯಾವಳಿಯಲ್ಲಿ ನಾವು ಸೋಲು ಅನುಭವಿಸಿದ್ದೆವು. ಮುಂದೆ ನನ್ನ ಆಟ ಗಮನಿಸಿ ತಂಡದ ನಾಯಕತ್ವ ನೀಡಲಾಯಿತು.

* ನಿಮ್ಮ ಕೋಚ್ ಯಾರು. ತರಬೇತಿ ಹೇಗಿದೆ?
ಅನುರಾಧ ರೇಡ್ಕರ್ ನನಗೆ ಮೊದಲ ಕೋಚ್. ಆವರ ಮಾರ್ಗದರ್ಶನಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ. 16 ವರ್ಷದೊಳಗಿನ ತಂಡದಲ್ಲಿ ಇದ್ದಾಗ ಅಪರ್ಣಾ ಕಾಂಬ್ಳೆ ತರಬೇತಿ ನೀಡಿದ್ದಾರೆ. ಈಗ ರಾಜ್ಯ ತಂಡಕ್ಕೆ ಆಯ್ಕೆಯಾದ ಮೇಲೆ ಭಾರತೀಯ ತಂಡದ ಮಾಜಿ ಆಟಗಾರ್ತಿ ದೇವಿಕಾ ಪಾಲಸಿಕರ್ ತರಬೇತಿ ನೀಡುತ್ತಿದ್ದಾರೆ. ಈಗ ಆಟದ ಜೊತೆಗೆ ವೃತ್ತಿಪರತೆ ಬೆಳೆಯಲು ದೇವಿಕಾ ನೆರವಾಗಿದ್ದಾರೆ. ಬ್ಯಾಟಿಂಗ್‌ನಲ್ಲಿ ತಂತ್ರಗಾರಿಕೆ ಹೇಳಿಕೊಡುವ ಅವರು, ಫೀಲ್ಡಿಂಗ್ ಕೌಶಲ್ಯ ಹಾಗೂ ಫಿಟ್‌ನೆಸ್‌ ಕಡೆಯೂ ಹೆಚ್ಚು ಒತ್ತು ನೀಡಲು ನೆರವಾಗಿದ್ದಾರೆ. ಪ್ರತಿ ದಿನ ಮಧ್ಯಾಹ್ನ 3 ಗಂಟೆಗೆ ನೆಟ್‌ ಪ್ರಾಕ್ಟೀಸ್‌ಗೆ ಹಾಜರಾಗುತ್ತೇವೆ. ಸಂಜೆ 6.30ಕ್ಕೆ ತರಬೇತಿ ಮುಗಿಸಿ ರಾತ್ರಿ 8 ಗಂಟೆಯವರೆಗೆ ಜಿಮ್‌ನಲ್ಲಿ ಬೆವರು ಹರಿಸುತ್ತೇವೆ.

* ಕನ್ನಡದವರು ಎಂಬ ಕಾರಣಕ್ಕೆ ಬೇರೆ ರೀತಿ ನೋಡುತ್ತಾರೆಯೇ. ಗೋವಾದಲ್ಲಿ ಮಹಿಳಾ ಕ್ರಿಕೆಟ್‌ಗೆ ಉತ್ತೇಜನ ಹೇಗಿದೆ?
ಕನ್ನಡತಿ ಎಂಬ ಕಾರಣಕ್ಕೆ ನನಗೆ ಯಾವುದೇ ತಾರತಮ್ಯ ಆಗಿಲ್ಲ. ಕ್ರಿಕೆಟ್‌ಗೆ ಚೆನ್ನಾಗಿಯೇ ಪ್ರೋತ್ಸಾಹ ನೀಡುತ್ತಾರೆ. ಇಲ್ಲಿಯೇ ಹುಟ್ಟಿ ಬೆಳೆದ ಕಾರಣ ಕೊಂಕಣಿಯನ್ನು ಚೆನ್ನಾಗಿ ಕಲಿತಿದ್ದೇನೆ.

* ರಾಜ್ಯ ತಂಡದಲ್ಲಿ ಆಲ್‌ರೌಂಡರ್ ಆಗಿಯೇ ಮುಂದುವರೆಯುವಿರಾ?
ಈಗ ಬ್ಯಾಟಿಂಗ್‌ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದೇನೆ. ಭಾರತ ತಂಡದಲ್ಲಿ ವಿರಾಟ್‌ ಕೊಹ್ಲಿ ನನ್ನ ನೆಚ್ಚಿನ ಆಟಗಾರ. ಆವರ ಆಕ್ರಮಣಕಾರಿ ಬ್ಯಾಟಿಂಗ್ ಇಷ್ಟ. ಈಗ ಬ್ಯಾಟಿಂಗ್ ತಂತ್ರಗಾರಿಕೆ ಕಲಿಯುತ್ತಿದ್ದೇನೆ.

ವಲಸೆ ಕಾರ್ಮಿಕನ ಮಗಳು..
ತೇಜಸ್ವಿನಿ ತಂದೆ ನೀಲಪ್ಪ ದುರ್ಗದ ಗೋವಾದ ಮಡಗಾಂವ್‌ನ ಲೋಕೋಪಯೋಗಿ ಇಲಾಖೆಯಲ್ಲಿ ವಾಟರ್‌ಮನ್‌ ಆಗಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದಾರೆ. ಬಿಎ ಓದಿರುವ ಅವರು, 2000ನೇ ಇಸವಿಯಲ್ಲಿ ಹನಾಪುರದಿಂದ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ (ಗೌಂಡಿ) ಗೋವಾಗೆ ತೆರಳಿದ್ದರು. ‘ಆರಂಭದಲ್ಲಿ ಮಡಗಾಂವ್‌ನ ಕದಂಬ ಬಸ್‌ ನಿಲ್ದಾಣದ ಎದುರಿನ ಪಂಚತಾರಾ ಹೋಟೆಲ್‌ ದಿ ಸಫೈರ್‌ ನಿರ್ಮಾಣದ ವೇಳೆ ನಾನು ಕಾರ್ಮಿಕನಾಗಿ ದುಡಿದಿದ್ದೇನೆ. ಈಗ ಅದೇ ಹೋಟೆಲ್‌ನಲ್ಲಿ ಗೋವಾ ಮಹಿಳಾ ಕ್ರಿಕೆಟ್ ತಂಡದೊಂದಿಗೆ ಮಗಳು ವಾಸ್ತವ್ಯ ಹೂಡುತ್ತಾಳೆ. ಇದಕ್ಕಿಂತ ಸಂಭ್ರಮದ ವಿಚಾರ ಮತ್ತೊಂದಿಲ್ಲ. ಆಕೆ ಭಾರತ ತಂಡದಲ್ಲಿ ಆಡುವುದನ್ನು ನೋಡಬೇಕಿದೆ’ ಎಂದು ನೀಲಪ್ಪ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.