ADVERTISEMENT

ಜೆಎನ್‌ಸಿಯ ಮಿಥಾಲಿ ನೆನಪುಗಳು...

ಸಾಜನ್‌ ಜಾರ್ಜ್‌
Published 26 ಮಾರ್ಚ್ 2017, 19:30 IST
Last Updated 26 ಮಾರ್ಚ್ 2017, 19:30 IST
ಮಿಥಾಲಿ ರಾಜ್‌
ಮಿಥಾಲಿ ರಾಜ್‌   

ಮಹಿಳಾ ಕ್ರಿಕೆಟ್‌ನ ಏಕದಿನ ಪಂದ್ಯಗಳ ವಿಶ್ವ ಕ್ರಮಾಂಕ ಪಟ್ಟಿಯ ಬ್ಯಾಟ್ಸ್‌ವುಮನ್‌ಗಳ ಯಾದಿಯಲ್ಲಿ ಭಾರತದ ಮಿಥಾಲಿ ರಾಜ್‌ ಎರಡನೇ ಸ್ಥಾನಕ್ಕೇರಿರುವ ಸುದ್ದಿ ಮೊನ್ನೆ ಗೊತ್ತಾದಾಗ ಬೆಂಗಳೂರಿನ ಜ್ಯೋತಿನಿವಾಸ್‌ ಕಾಲೇಜಿನ ವಿದ್ಯಾರ್ಥಿನಿಯರೆಲ್ಲಾ ಸಂಭ್ರಮ ಪಟ್ಟರು. ಏಕೆಂದರೆ 14 ವರ್ಷಗಳ ಹಿಂದೆ ಇದೇ ಕಾಲೇಜಿನ ಕ್ರಿಕೆಟ್‌ ಅಕಾಡೆಮಿಯ ತಂಡ ಶ್ರೀಲಂಕಾ ಪ್ರವಾಸ ಮಾಡಿದಾಗ ಅದರಲ್ಲಿ ಮಿಥಾಲಿ ಇದ್ದರು.

ಶ್ರೀಲಂಕಾದ ಕೊಲಂಬೊ, ಕ್ಯಾಂಡಿ ಮತ್ತು  ಕುರ್ನಾಕುಲಗಳಲ್ಲಿ ನಡೆದ ಒಟ್ಟು ಐದು ಪಂದ್ಯಗಳಲ್ಲಿಯೂ ಜೆಎನ್‌ಸಿ ತಂಡ ಗೆದ್ದಿತ್ತು. ಆ ಗೆಲುವಿನಲ್ಲಿ ಮಿಥಾಲಿ ಪ್ರಮುಖ ಪಾತ್ರ ವಹಿಸಿದ್ದರು. ಆಗ ಜೆಎನ್‌ಸಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕನಾಗಿದ್ದ ನಾನು ಜೆಎನ್‌ಸಿ ಅಕಾಡೆಮಿಯ ಚಟುವಟಿಕೆಯನ್ನು ಆರಂಭಿಸಿದ್ದೆ.

ಆಗ ನಮ್ಮ ಜೂನಿಯರ್‌ ಕಾಲೇಜಿನ ಪ್ರಾಂಶುಪಾಲರಾಗಿದ್ದ ಸಿಸ್ಟರ್‌ ಎಲಿಜಬೆತ್‌ ಅವರೂ ತಂಡದ ಜತೆಗೆ ಶ್ರೀಲಂಕಾಗೆ ಬಂದಿದ್ದರು. ಈಗ  ಅವರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಮಿಥಾಲಿ ರಾಜ್‌ ಆಗಿನ್ನೂ ಪ್ರಖ್ಯಾತರಾಗಿರಲಿಲ್ಲ. ಅವರಿಗೆ ಅದೇ ಮೊದಲ ವಿದೇಶ ಪ್ರಯಾಣವಾಗಿತ್ತು.

ಬೆಂಗಳೂರಿನಲ್ಲಿ ಮಹಿಳಾ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಕಾಲೇಜೊಂದು ಇಂತಹದ್ದೊಂದು ದಾಪುಗಾಲು ಇಟ್ಟಿದ್ದು ಕರ್ನಾಟಕದ ಮಟ್ಟಿಗೆ ಒಂದು ಮೈಲುಗಲ್ಲು. ಅದಾಗಲೇ ಮಹಿಳಾ ಕ್ರಿಕೆಟ್‌ನ ದಂತಕಥೆಯೇ ಆಗಿದ್ದ ಶಾಂತಾ ರಂಗಸ್ವಾಮಿಯವರಿಂದ ತರಬೇತು ಪಡೆದ ಕೆಲವರೂ ನಮ್ಮ ಅಕಾಡೆಮಿಯಲ್ಲಿದ್ದರು. 

ಮಿಥಾಲಿ ಅವರು ನಮ್ಮ ಜ್ಯೋತಿ ನಿವಾಸ್‌ ಕಾಲೇಜಿನ ವಿದ್ಯಾರ್ಥಿಯಾಗಿರಲಿಲ್ಲ. ಆದರೆ ನಮ್ಮ ಕಾಲೇಜು ಅಕಾಡೆಮಿಗೆ ದೆಹಲಿಯಿಂದ ಬಂದು ಆಡುತ್ತಿದ್ದರು. 2002ರಲ್ಲಿ ಶ್ರೀಲಂಕಾಗೆ ಹೋಗಿ ಬಂದ ತಂಡದಲ್ಲಿದ್ದ ಜೆಎನ್‌ಸಿ ವಿದ್ಯಾರ್ಥಿನಿಯರಾದ ಕರುಣಾ ಜೈನ್‌ ಮತ್ತು ನೌಷೀನ್‌ ನಂತರ ಭಾರತ ತಂಡವನ್ನು ಪ್ರತಿನಿಧಿಸಿದರೆ, ದೀಪಿಕಾ ಭಾರತ ಜೂನಿಯರ್‌ ತಂಡದಲ್ಲಿ ಆಡಿದ್ದರು. ರೂಪಾ ಸೇರಿದಂತೆ ಕೆಲವರು ಕರ್ನಾಟಕ ರಾಜ್ಯ ತಂಡದ ಪರ ಆಡಿದರು.

ಮೃದು ಮಾತಿನ ಮಿಥಾಲಿ ಅಂದು ತಂಡದ ಪ್ರತಿಯೊಬ್ಬರ ಅಚ್ಚುಮೆಚ್ಚಿನ ಗೆಳತಿಯಾಗಿದ್ದರು. ಆ ದಿನಗಳಲ್ಲಿ ಅವರಿಗೆ ಸದಾ ಕ್ರಿಕೆಟ್‌ನದೇ ಧ್ಯಾನ. ಆಗ ನಾನೇ ಪಾಸ್‌ಪಾರ್ಟ್‌ ಕಚೇರಿಗೆ ಹತ್ತಾರು ಸಲ ಅಲೆದು ಮಿಥಾಲಿಯವರಿಗೆ ಪಾಸ್‌ಪೋರ್ಟ್‌ ಮಾಡಿಸಿಕೊಟ್ಟಿದ್ದೆ.

ಆ ದಿನಗಳಲ್ಲಿ ನಮ್ಮ ಜೆಎನ್‌ಸಿ ತಂಡ ಆರು ಸಲ ಸತತವಾಗಿ ಅಂತರ ಕಾಲೇಜು ಮಹಿಳಾ ಕ್ರಿಕೆಟ್‌ನಲ್ಲಿ ಪ್ರಶಸ್ತಿ ಗೆದ್ದಿತ್ತು. ಈ ವರ್ಷವೂ ಗೆದ್ದ ಸಂಭ್ರಮಾಚರಣೆಯ ವೇಳೆ ಎಲ್ಲರೂ ಮಿಥಾಲಿ, ಕರುಣಾ, ನೌಷೀನ್‌ ಮುಂತಾದವರನ್ನು ನೆನಪಿಸಿಕೊಂಡರು.

ಪ್ರಸ್ತುತ ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮತ್ತು  ವಿಶ್ವದ ಅಗ್ರಮಾನ್ಯ ಬ್ಯಾಟ್ಸ್‌ವುಮನ್‌ಗಳಲ್ಲಿ ಒಬ್ಬರಾದ ಮಿಥಾಲಿಯವರ ಬೆಂಗಳೂರಿನ ಹೆಜ್ಜೆಗುರುತುಗಳು ಯಾವತ್ತೂ ನೆನಪಲ್ಲಿ ಉಳಿಯುವಂತಹದ್ದು.
(ಲೇಖಕರು ದೈಹಿಕ ಶಿಕ್ಷಣ ನಿರ್ದೇಶಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT