ADVERTISEMENT

ಜೆ.ಎನ್‌.ಟಾಟಾ ವಿದ್ಯಾರ್ಥಿ ವೇತನ...

ಪ್ರಜಾವಾಣಿ ವಿಶೇಷ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST
ಜೆ.ಎನ್‌.ಟಾಟಾ ವಿದ್ಯಾರ್ಥಿ ವೇತನ...
ಜೆ.ಎನ್‌.ಟಾಟಾ ವಿದ್ಯಾರ್ಥಿ ವೇತನ...   

ಸ್ವತಂತ್ರ ಪೂರ್ವ ಭಾರತದ ಕೈಗಾರಿಕಾ ಕ್ರಾಂತಿಯ ಹರಿಕಾರ ಎಂದೇ ಜೆ.ಎನ್‌ ಟಾಟಾ ಪ್ರಸಿದ್ಧರು. ಅವರು ಉದ್ಯಮ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ನೀಡಿದ್ದ ಮಹತ್ವವನ್ನು ಶಿಕ್ಷಣಕ್ಕೂ ನೀಡಿದ್ದರು.

ಸಮಾಜ, ಸಮುದಾಯ, ಶಿಕ್ಷಣದ ಅಭಿವೃದ್ಧಿಗೆ ಟಾಟಾ ದತ್ತಿ ನಿಧಿ ಟ್ರಸ್ಟ್‌ ನಿರಂತರವಾಗಿ ಹಣಕಾಸು ನೆರವು ನೀಡುತ್ತ ಬಂದಿದೆ. 1932ರಲ್ಲಿ ಆರಂಭವಾದ ಈ ಟಾಟಾ ಟ್ರಸ್ಟ್‌ ಅಂದು 100 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡಿತ್ತು. ಇದರ ಮೂಲಕ ಇಂದು ಸಾವಿರಾರು ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ ಸೌಲಭ್ಯ ಪಡೆಯುತ್ತಿದ್ದಾರೆ.

ಟಾಟಾ ಟ್ರಸ್ಟ್‌ ಹತ್ತಾರು ದತ್ತಿ ನಿಧಿಗಳ ಮೂಲಕ ಹಲವಾರು ಸ್ಕಾಲರ್‌ಶಿಪ್‌ ಮತ್ತು ಫೆಲೊಶಿಪ್‌ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಪ್ರಾದೇಶಿಕವಾಗಿ ಹಿಂದುಳಿದ ಪ್ರದೇಶಗಳ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಉನ್ನತ ಅಧ್ಯಯನಕ್ಕೆ ಸಾಲ ರೂಪದ ‘ಜೆ.ಎನ್‌ ಟಾಟಾ ದತ್ತಿ ಉನ್ನತ ವ್ಯಾಸಂಗ ವಿದ್ಯಾರ್ಥಿ ವೇತನ’ ಯೋಜನೆಯನ್ನು ಹಲವು ವರ್ಷಗಳಿಂದ ನೀಡುತ್ತಿದೆ. ಈ ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಸುಮಾರು 60 ಸಾವಿರ ರೂಪಾಯಿಗಳಿಂದ ನಾಲ್ಕು ಲಕ್ಷ ರೂಪಾಯಿವರೆಗೂ ಹಣಕಾಸು ನೆರವು ಲಭಿಸುತ್ತದೆ.
ಅರ್ಹತೆಗಳು...

ಭಾರತೀಯ ನಾಗರಿಕರು ಮಾತ್ರವೇ ಅರ್ಜಿ ಸಲ್ಲಿಸಲು ಅರ್ಹರು. ಅನಿವಾಸಿ ಭಾರತೀಯರಿಗೆ ಈ ಅವಕಾಶವಿಲ್ಲ. ಅತ್ಯುತ್ತಮ ಶ್ರೇಣಿಯೊಂದಿಗೆ ಯಾವುದೇ ವಿಷಯದಲ್ಲಿ ಪದವಿಯನ್ನು ಕಡ್ಡಾಯವಾಗಿ ಪಡೆದಿರಬೇಕು. ಇದರ ಸೌಲಭ್ಯ ಪಡೆಯಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ಸಂಬಂಧಿತ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗದಲ್ಲಿ ತೊಡಗಿರಬೇಕು. ಪದವಿ ಮುಗಿದ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ/ಸ್ನಾತಕೋತ್ತರ ಡಿಪ್ಲೊಮಾ/ಸಂಶೋಧನಾ ಪದವಿ ಮತ್ತು ತರಬೇತಿ ಪದವಿ ಕೊರ್ಸ್‌ಗಳಿಗೆ (2014–15) ಸೇರಿರಬೇಕು.

ಸ್ನಾತಕೋತ್ತರ ಪದವಿ ಪಡೆದವರು ಎಂಫಿಲ್‌/ಪಿಎಚ್‌ಡಿ/ ಇತರ ಸಂಶೋಧನಾ ಕಾರ್ಯ ನಡೆಸುತ್ತಿರುವವರೂ ಸಹ ಅರ್ಜಿ ಸಲ್ಲಿಸಬಹುದು. ಉದ್ಯೋಗದಲ್ಲಿದ್ದು ಸಂಶೋಧನೆ/ ಕ್ಷೇತ್ರಕಾರ್ಯ ಮಾಡುತ್ತಿರುವವರೂ ಈ ಸ್ಕಾಲರ್‌ಶಿಪ್‌ ಪಡೆಯಲು ಅರ್ಹರು.
ಅಂತಿಮ ವರ್ಷದ ಪದವಿಯಲ್ಲಿ ಓದುತ್ತಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 45 ವರ್ಷಗಳಿಗೆ ನಿಗದಿಪಡಿಸಲಾಗಿದೆ. ವಯೋಮಿತಿ ಸಡಿಲಿಕೆಯಲ್ಲಿ ಮೀಸಲಾತಿಯನ್ನು ಪರಿಗಣಿಸುವುದಿಲ್ಲ.

ಅವಧಿ/ವೇತನ...
ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅವರ ಕೋರ್ಸ್‌ ಪೂರ್ಣಗೊಳ್ಳುವವರೆಗೂ ಹಣಕಾಸು ನೆರವನ್ನು ವಿವಿಧ ಹಂತಗಳಲ್ಲಿ ನೀಡಲಾಗುತ್ತದೆ. ಕೋರ್ಸ್‌ಗೆ ಅನುಗುಣವಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಸುಮಾರು 60,000 ರೂಪಾಯಿಗಳಿಂದ ಹಿಡಿದು 4 ಲಕ್ಷದವರೆಗೆ ಸ್ಕಾಲರ್‌ಶಿಪ್‌ ಲಭಿಸುವುದು. ಇದು ಸಾಲ ರೂಪದ ವಿದ್ಯಾರ್ಥಿ ವೇತನ ಆಗಿರುವುದರಿಂದ ಷರತ್ತುಗಳನ್ವಯ ಪಡೆದ ಹಣ ಹಿಂದಿರುಗಿಸಬೇಕು.

ಆಯ್ಕೆ ವಿಧಾನ...
ಶೈಕ್ಷಣಿಕ ಅರ್ಹತೆಯ ಮಾನದಂಡದ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ. ಅದಾಗ್ಯೂ ಹಿಂದುಳಿದ ಮತ್ತು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅಂತಿಮವಾಗಿ ಸಂದರ್ಶನದ ಮೂಲಕವೇ ಆಯ್ಕೆ ಮಾಡಲಾಗುವುದು.

ಜಾತಿ, ಪ್ರಭಾವ, ಸಮುದಾಯ, ಸಮಾಜ ಹಾಗೂ ಯಾವುದೇ ಲಿಂಗ ಭೇದವಿಲ್ಲದೆ ಅಭ್ಯರ್ಥಿಗಳ ಆಯ್ಕೆ ನಡೆಯುವುದು. ಸಂಶೋಧನೆಯಲ್ಲಿ ನಿರತರಾಗಿರುವ ಅಭ್ಯರ್ಥಿಗಳಿಗೆ ಅವರ ಕ್ಷೇತ್ರಕಾರ್ಯ/ಅಧ್ಯಯನದ ಸ್ವರೂಪ ಮತ್ತು ಅದರ ಪ್ರಗತಿ ಹಾಗೂ ಸ್ನಾತಕೋತ್ತರ ಪದವಿಯ ಅಂಕಗಳ ಮಾನದಂಡದ ಮೂಲಕ ಆಯ್ಕೆಪಟ್ಟಿ ಸಿದ್ಧಪಡಿಸಿ ಸಂದರ್ಶನಕ್ಕೆ ಕರೆಯಲಾಗುವುದು.
ಸಂಬಂಧಿತ ವಿಷಯಗಳ ತಜ್ಞರು ಮತ್ತು ಪರಿಣಿತರು ಸಂದರ್ಶನ ಮಾಡುತ್ತಾರೆ. ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುವುದು. ಮುಂಬೈನಲ್ಲಿ ಸಂದರ್ಶನ ನಡೆಸಲಾಗುವುದು. ಪ್ರತಿ ವರ್ಷ ಇಂತಿಷ್ಟೆ ಸ್ಕಾಲರ್‌ಶಿಪ್‌ಗಳನ್ನು ನೀಡಬೇಕು ಎಂಬ ನಿಯಮ ಇಲ್ಲ. ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಒಟ್ಟು ಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ವಿದ್ಯಾರ್ಥಿ ವೇತನ ನಿಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ...
ವಿದ್ಯಾರ್ಥಿಗಳು ಅರ್ಜಿಯನ್ನು ನಿಗದಿತ ನಮೂನೆ ಮೂಲಕವೇ ಸಲ್ಲಿಸಬೇಕು. ಅರ್ಜಿಯನ್ನು ಮುಂಬೈನಲ್ಲಿರುವ ಟಾಟಾ ದತ್ತಿ ಟ್ರಸ್ಟ್‌ ಕಚೇರಿಯಿಂದ ಪಡೆಯಬಹುದು. ಹಾಗೂ 100 ರೂಪಾಯಿ ಶುಲ್ಕ ಪಾವತಿಸಿ ಅಂಚೆ ಮುಖಾಂತರವೂ ಅರ್ಜಿ ತರಿಸಿಕೊಳ್ಳಬಹದು.
ಪ್ರಸಕ್ತ ಸಾಲಿನ ಈ ಸ್ಕಾಲರ್‌ಶಿಪ್‌ ನೀಡುವ ಅಧಿಸೂಚನೆಯನ್ನು ಬರುವ ಡಿಸೆಂಬರ್‌ ತಿಂಗಳಲ್ಲಿ ಪ್ರಕಟಿಸಲಾಗುವುದು. ಫೆಬ್ರುವರಿ ತಿಂಗಳ ಕೊನೆಯ ವಾರದೊಳಗೆ ಅರ್ಜಿ ಸಲ್ಲಿಸಬೇಕು.

ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆ ಪ್ರಮಾಣ ಪತ್ರಗಳೊಂದಿಗೆ ಲಗತ್ತಿಸಿ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು. ಜನನ ಪ್ರಮಾಣ ಪತ್ರ, ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳು, ಸಂಶೋಧನೆ ಅಥವಾ ಅಧ್ಯಯನದ ಪ್ರಗತಿ ಪ್ರಮಾಣ ಪತ್ರಗಳನ್ನು ಲಗತ್ತಿಸುವುದು ಕಡ್ಡಾಯ.

ಈ ಸ್ಕಾಲರ್‌ಶಿಪ್‌ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ‘ಜೆ.ಎನ್‌ ಟಾಟಾ ದತ್ತಿ, ಆಡಳಿತ ಕಚೇರಿ, ಮುಲ್ಲಾ ಹೌಸ್‌, 4ನೇ ಮಹಡಿ, 51, ಎಂ.ಜಿ ರಸ್ತೆ, ಮುಂಬೈ–400001’ಈ ವಿಳಾಸದಿಂದ ಪಡೆಯಬಹುದು.
ದೂರವಾಣಿ ಸಂಖ್ಯೆಗಳು: (022) 66658282, 66657681, 66657198, 66657774
ವೆಬ್‌ಸೈಟ್‌ ವಿಳಾಸ:http://www.dorabjitatatrust.org


 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.