ADVERTISEMENT

ಬೆಂಗಳೂರಿನಲ್ಲಿ ‘ಫ್ಲೈಯಿಂಗ್ ಡಿಸ್ಕ್‌’

ಮಾನಸ ಬಿ.ಆರ್‌
Published 23 ಜುಲೈ 2017, 19:30 IST
Last Updated 23 ಜುಲೈ 2017, 19:30 IST
ಪ್ರಶಸ್ತಿ ಗೆದ್ದ ಚೆನ್ನೈನ ಫ್ಲೈವೈಲ್ಡ್‌ ತಂಡ
ಪ್ರಶಸ್ತಿ ಗೆದ್ದ ಚೆನ್ನೈನ ಫ್ಲೈವೈಲ್ಡ್‌ ತಂಡ   

ಬೆಂಗಳೂರಿನಲ್ಲಿ ಈಚೆಗೆ ನಡೆದ ‘ಬೆಂಗಳೂರು ಅಲ್ಟಿಮೇಟ್ ಓಪನ್ ಫ್ರಿಸ್ಬಿ ಟೂರ್ನಿ’ ನೂರಾರು ಕ್ರೀಡಾ ಪ್ರಿಯರ ಆಕರ್ಷಣೆ ಎನಿಸಿತ್ತು. ಇತ್ತೀಚೆಗಷ್ಟೇ ಭಾರತದಲ್ಲಿ ಹೆಸರು ಮಾಡುತ್ತಿರುವ ಈ ಆಟ ನೋಡುಗರಿಗೆ ಮನರಂಜನೆ ಜತೆ ಕುತೂಹಲವನ್ನೂ ಸೃಷ್ಟಿಸಿತ್ತು.

ಅಂಗಳದಲ್ಲಿ ಹಾರುವ ಡಿಸ್ಕನ್ನು ಹಿಡಿಯಲು ಎರಡು ತಂಡಗಳು ಪೈಪೋಟಿ ನಡೆಸುವ ಈ ಆಟ ಮೋಜಿನಿಂದ ಕೂಡಿದೆ. ಹಾರುವ ಡಿಸ್ಕ್‌ ಎಂದೇ ಕರೆಯಲ್ಪಡುವ ಈ ಕ್ರೀಡೆ ಫುಟ್‌ಬಾಲ್‌, ಹಾಕಿ, ಕ್ರಿಕೆಟ್‌ಗಿಂತ ಹೆಚ್ಚು ದೈಹಿಕ ಶ್ರಮವನ್ನು ಬೇಡುತ್ತದೆ.

ಜುಲೈ 7ರಿಂದ 9ರವರೆಗೆ ಬೆಂಗಳೂರಿನಲ್ಲಿ ಈ ಕ್ರೀಡೆ ಆಯೋಜನೆಗೊಂಡಿತ್ತು. ಚೆನ್ನೈನ ಫ್ಲೈವೈಲ್ಡ್‌ ತಂಡ ಪ್ರಶಸ್ತಿ ಎತ್ತಿಹಿಡಿಯಿತು. ಈ ತಂಡ ಫೈನಲ್‌ನಲ್ಲಿ ಬೆಂಗಳೂರಿನ ಡಿಸ್ಕ್‌ ಒ ದಿವಾನೆ ವಿರುದ್ಧ ಗೆಲುವು ದಾಖಲಿಸಿತು. ಸೂರತ್‌ನ ಜಂಬಿಷ್‌ ತಂಡ ಮೂರನೇ ಸ್ಥಾನ ಪಡೆದರೆ, ಪಾಂಡಿಚೇರಿಯ ಸ್ಪೈನರ್ಜಿ ಉತ್ತಮ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ADVERTISEMENT

ಭಾರತದ 10 ನಗರಗಳ 37 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದವು. 9ವರ್ಷದ ಬಾಲಕ, ಬಾಲಕಿಯರಿಂದ ಹಿಡಿದು 50 ವರ್ಷದವರೂ ಕೂಡ ಇಲ್ಲಿ ಆಡಿದ್ದು ವಿಶೇಷ.

ಭಾರತ, ಕೆನಡಾ, ಸಿಂಗಪುರ ದೇಶಗಳ ಅಗ್ರಗಣ್ಯ ಆಟಗಾರರು ಆಡಿದ್ದರು. ಫ್ರಾನ್ಸ್‌ನಲ್ಲಿ ಇತ್ತೀಚೆಗೆ ನಡೆದಿದ್ದ ‘ಅಲ್ಟಿಮೇಟ್‌ ಬೀಚ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ’ ಭಾಗವಹಿಸಿದ್ದ ಭಾರತ ತಂಡ ಐದನೇ ಸ್ಥಾನ ಪಡೆದಿತ್ತು. ಇಲ್ಲಿ ಭಾರತದ ನಾಲ್ಕು ತಂಡಗಳು ಹಾಗೂ ವಿಶ್ವದ ಒಟ್ಟು 32 ತಂಡಗಳು ಆಡಿದ್ದವು.

ಈ ಕ್ರೀಡೆಯಲ್ಲಿ ಮಹಿಳೆಯರು, ಪುರುಷರು ಹಾಗೂ ಮಿಶ್ರ ತಂಡಗಳು ಕೂಡ ಆಡುತ್ತವೆ.‘ಲಿಂಗ ಸಮಾನತೆ’ ಬೆಂಗಳೂರಿನಲ್ಲಿ ನಡೆದ ಟೂರ್ನಿಯ ಉದ್ದೇಶಗಳಲ್ಲಿ ಒಂದಾಗಿತ್ತು. ಆದ್ದರಿಂದ ಇಲ್ಲಿ ಮಿಶ್ರ ತಂಡ ವಿಭಾಗಗಳನ್ನು ಆಡಿಸಲಾಗಿತ್ತು.

‘ಉಷಾ’ ಸಂಸ್ಥೆ ಕಳೆದ ಐದು ವರ್ಷಗಳಿಂದ ಅಲ್ಟಿಮೇಟ್ ಟೂರ್ನಿಗೆ ಬೆಂಬಲ ನೀಡುತ್ತಿದೆ. ಬೆಂಗಳೂರಿಗಿಂತ ಮೊದಲು ಮುಂಬೈ ಹಾಗೂ ಅಹಮದಾಬಾದ್‌ನಲ್ಲಿ ಕೂಡ ಈ ಟೂರ್ನಿ ಯಶಸ್ವಿಯಾಗಿ ಆಯೋಜನೆಗೊಂಡಿತ್ತು.‘ಯುವ’ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಈ ಟೂರ್ನಿಗೆ ಉತ್ತೇಜನ ನೀಡಿದೆ.

**

ಏನಿದು ಫ್ಲೈಯಿಂಗ್ ಡಿಸ್ಕ್‌...

* ಫ್ಲೈಯಿಂಗ್‌ ಡಿಸ್ಕ್‌ ಅನ್ನು 1948ರಲ್ಲಿ ವಾಲ್ಟರ್ ಮೊರಿಸನ್ ಕಂಡು ಹಿಡಿದರು.

* 1957ರಲ್ಲಿ ವಾಮ್‌ ಒ ಇದಕ್ಕೆ ಹೊಸ ರೂಪ ನೀಡಿ ಬಳಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಇದಕ್ಕೆ ವಾಮ್‌ ಅವರು ‘ಫ್ರಿಸ್ಬಿ’ ಎಂದು ಹೆಸರು ಇಟ್ಟರು.

* 1900ರಲ್ಲಿಯೇ ಅಮೆರಿಕದಲ್ಲಿ ಈ ಕ್ರೀಡೆಯನ್ನು ಆಡುತ್ತಿದ್ದರು. 1960ರ ಬಳಿಕ ಇದು ಜನಪ್ರಿಯತೆ ಪಡೆದುಕೊಂಡಿತು.
ಫ್ರಿಸ್ಬಿಯನ್ನು ಬಳಸಿ ಡಿಸ್ಕ್‌ ಫ್ರೀಸ್ಟೈಲ್, ಡಬಲ್‌ ಡಿಸ್ಕ್‌, ಅಲ್ಟಿಮೇಟ್‌, ಡಿಸ್ಕ್‌ ಗಾಲ್ಫ್‌ ಕ್ರೀಡೆಗಳನ್ನು ಆಡಲಾಗುತ್ತದೆ. ಬೆಂಗಳೂರಿನಲ್ಲಿ ನಡೆದ ಕ್ರೀಡೆ ಅಲ್ಟಿಮೇಟ್ ಫ್ರಿಸ್ಬಿ.

* ತಂಡದ ಆಟಗಾರರು ತಮ್ಮ ನಡುವೆ ಡಿಸ್ಕನ್ನು ಬದಲಿಸಿಕೊಳ್ಳುತ್ತಾರೆ. ಇದನ್ನು ಕಸಿಯಲು ಎದುರಾಳಿ ತಂಡದ ಆಟಗಾರರು ಪ್ರಯತ್ನಿಸುತ್ತಾರೆ. ಅಂತಿಮವಾಗಿ ‘ಎಂಡ್‌ ಜೋನ್‌’ ನಲ್ಲಿ ಡಿಸ್ಕನ್ನು ಹಾಕಿದ ತಂಡಕ್ಕೆ ಪಾಯಿಂಟ್ಸ್ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.