ADVERTISEMENT

ಭರವಸೆಯ ಹಾದಿಯಲ್ಲಿ ವನಿತೆಯರ ಕ್ರಿಕೆಟ್‌

ಸತೀಶ ಬಿ.
Published 5 ನವೆಂಬರ್ 2017, 19:30 IST
Last Updated 5 ನವೆಂಬರ್ 2017, 19:30 IST
ಕಲಬುರ್ಗಿಯ ಎನ್‌.ವಿ.ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಟ್ವೆಂಟಿ–20 ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಆಟಗಾರ್ತಿಯರ ಸಂಭ್ರಮ
ಕಲಬುರ್ಗಿಯ ಎನ್‌.ವಿ.ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಟ್ವೆಂಟಿ–20 ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಆಟಗಾರ್ತಿಯರ ಸಂಭ್ರಮ   

ರಾಜ್ಯದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕವಾಡ ಮಹಿಳಾ ವಿಶ್ವಕಪ್ ಕ್ರಿಕೆಟ್‌ನಲ್ಲಿ ಆಡಿದ ಬಳಿಕ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಹಿಳಾ ಕ್ರಿಕೆಟ್ ಹೆಚ್ಚು ಜನಪ್ರಿಯವಾಗುತ್ತಿದೆ. ಯುವ ಆಟಗಾರ್ತಿಯರು ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ.

ಕಲಬುರ್ಗಿಯ ಎನ್.ವಿ.ಕ್ರೀಡಾಂಗಣದಲ್ಲಿ ನ.1ರಿಂದ 4ರವರೆಗೆ ನಡೆದ ಮಹಿಳೆಯರ ಟ್ವೆಂಟಿ–20 ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ್ದ ಆಟಗಾರ್ತಿಯರು ಈ ಭಾಗದ ಕ್ರಿಕೆಟ್‌ಗೆ ಚೈತನ್ಯ ಸೆಲೆಯಾಗುವ ಭರವಸೆ ಮೂಡಿಸಿದ್ದರು.ವಿದ್ಯಾಭ್ಯಾಸದೊಂದಿಗೆ ಕ್ರಿಕೆಟ್‌ನಲ್ಲಿಯೂ ಭವಿಷ್ಯ ರೂಪಿಸಿಕೊಳ್ಳುವ ಆತ್ಮವಿಶ್ವಾಸ ಅವರದ್ದು.

ಐದನೇ ತರಗತಿಯಿಂದಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಬಳ್ಳಾರಿಯ ಟಿ. ಬಿಂದಿಯಾ, ಸದ್ಯ ಡಿಪ್ಲೊಮಾ ವ್ಯಾಸಂಗದ ಜತೆಗೆ ಬಳ್ಳಾರಿಯ ಕ್ಯಾಪ್ಟನ್ಸ್ ಇಲೆವನ್ ತಂಡದ ಪರ ಆಡುತ್ತಿದ್ದಾರೆ. ಅವರ ಆಸಕ್ತಿಗೆ ಮನೆಯವರಿಂದಲೂ ಪ್ರೋತ್ಸಾಹ ಸಿಕ್ಕಿದೆ.

ADVERTISEMENT

‘ಕ್ರಿಕೆಟ್‌ನಲ್ಲಿ ತೊಡಗಿದರೆ ಓದು ಮರೆಯುತ್ತೇನೆ ಎಂಬ ಆತಂಕ ಮನೆಯಲ್ಲಿತ್ತು. ಓದಿನ ಜತೆಯಲ್ಲಿ ಕ್ರಿಕೆಟ್ ಆಡುತ್ತಿರುವುದರಿಂದ ಅವರಿಗೂ ಖುಷಿ ಇದೆ. ಕೋಚ್‌ ಅಬ್ದುಲ್‌ ಖಾದಿರ್ ಸಹ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ’ ಎಂದು ಬಿಂದಿಯಾ ತಮ್ಮ ಕನಸು ಹಂಚಿಕೊಂಡರು.

ಕಲಬುರ್ಗಿಯ ಮೇಘನಾ ಮೊದಲ ಆಹ್ವಾನಿತ ಕ್ರಿಕೆಟ್ ಟೂರ್ನಿ ಅಡಿದ ಖುಷಿಯಲ್ಲಿದ್ದರು. ಈ ಟೂರ್ನಿಯಲ್ಲಿ ಸಾಕಷ್ಟು ಕಲಿತಿದ್ದೇನೆ. ಕ್ರಿಕೆಟ್‌ನಲ್ಲಿಯೇ ಮುಂದುವರಿಯುವ ಕನಸಿದೆ ಎನ್ನುತ್ತಾರೆ ಮೇಘನಾ.

ಟೂರ್ನಿಗಳು ಹೆಚ್ಚಲಿ

‘ಈ ಭಾಗದಲ್ಲಿ ಸಾಕಷ್ಟು ಪ್ರತಿಭೆಗಳಿದ್ದರೂ ಅವರಿಗೆ ಪ್ರೋತ್ಸಾಹ, ಅವಕಾಶ ಸಿಗುತ್ತಿಲ್ಲ. ಹೀಗಾಗಿ  ಮಹಿಳಾ ಕ್ರಿಕೆಟ್‌ ಬೆಳೆಸುವುದು ಮತ್ತು ಒಂದು ಪ್ರಬಲ ತಂಡವನ್ನು ರೂಪಿಸುವುದು ನಮ್ಮ ಗುರಿ’ ಎಂದು ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್‌ನ ಗೌರವ ಅಧ್ಯಕ್ಷ ಅನಿಲ್‌ ಕಾಟಕೆ, ಕೋಚ್‌ ಸಚಿನ್ ಕುಮಾರ್‌ ಹೇಳುತ್ತಾರೆ. 

‘ಸ್ಥಳೀಯವಾಗಿ ಆಹ್ವಾನಿತ ಮಹಿಳಾ ಕ್ರಿಕೆಟ್‌ ಟೂರ್ನಿಗಳನ್ನು ಆಯೋಜಿಸಿದರೆ ಯುವ ಆಟಗಾರ್ತಿಯರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಅದು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ವೇದಿಕೆಯಾಗಿದೆ. ಪುರುಷರ ಕ್ರಿಕೆಟ್‌ನಷ್ಟು ಮಹಿಳಾ ಕ್ರಿಕೆಟ್‌ನಲ್ಲಿ ಸ್ಪರ್ಧೆ ಇರುವುದಿಲ್ಲ. ಇದನ್ನು ಯುವ  ಆಟಗಾರ್ತಿಯರು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಆಟಗಾರ್ತಿ ಲಕ್ಷ್ಮೀ ಹೇಳುತ್ತಾರೆ.

ವಿಜಯಪುರದಲ್ಲಿ ಎ.ಜಿ.ಪಟೇಲ್, ಬಸವರಾಜ ಇಜೇರಿ ಮತ್ತು ದಿಲೀಪ್ ಕಲಾಲ್ ಅವರು ತಮ್ಮ ಅಕಾಡೆಮಿಯಿಂದ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಅವರ ಬಳಿ 30ಕ್ಕೂ ಹೆಚ್ಚು ಆಟಗಾರ್ತಿಯರು ತರಬೇತಿ ಪಡೆಯುತ್ತಿದ್ದಾರೆ.

‘ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಬಾಲಕರ ಕ್ರಿಕೆಟ್‌ಗೆ ಅವಕಾಶ ಇದೆ. ಬಾಲಕಿಯರ ಕ್ರಿಕೆಟ್‌ಗೂ ಅವಕಾಶ ನೀಡಬೇಕು. ಈಚೆಗೆ ವಿಜಯಪುರದಲ್ಲಿ ನಡೆದ ಕ್ರಿಕೆಟ್ ತರಬೇತಿ ಶಿಬಿರದಲ್ಲಿ ರಾಯಚೂರಿನ ಮೂವರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.   ಕೆಎಸ್‌ಸಿಎ ವತಿಯಿಂದ ಶಾಲಾ ಮಟ್ಟದಲ್ಲಿ ಕ್ರಿಕೆಟ್ ಪಂದ್ಯ ಆಯೋಜಿಸಬೇಕು. ಅಲ್ಲದೆ, ವಿಭಾಗ ಮಟ್ಟದಲ್ಲಿ 16 ವರ್ಷದ ಒಳಗಿನ ಬಾಲಕರ ಜತೆಗೆ ಟೂರ್ನಿ ಏರ್ಪಡಿಸಬೇಕು’ ಎಂದು ದಿಲೀಪ್ ಕಲಾಲ್ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.