ADVERTISEMENT

ಹೋಟೆಲ್ ಮಾಣಿ ಕುಲವಂತ ಕ್ರಿಕೆಟಿಗನಾದ ಕಥೆ

ಗಿರೀಶದೊಡ್ಡಮನಿ
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST
ಅಂಕಿತ್ ಚೌಧರಿ ಮತ್ತು ಪಾರ್ಥಿವ್ ಪಟೇಲ್ ಅವರೊಂದಿಗೆ ಅಭ್ಯಾಸ ನಡೆಸುತ್ತಿರುವ ಕುಲವಂತ ಖೆಜ್ರೋಲಿಯಾ (ಮಧ್ಯ)  ಪ್ರಜಾವಾಣಿ ಚಿತ್ರ
ಅಂಕಿತ್ ಚೌಧರಿ ಮತ್ತು ಪಾರ್ಥಿವ್ ಪಟೇಲ್ ಅವರೊಂದಿಗೆ ಅಭ್ಯಾಸ ನಡೆಸುತ್ತಿರುವ ಕುಲವಂತ ಖೆಜ್ರೋಲಿಯಾ (ಮಧ್ಯ) ಪ್ರಜಾವಾಣಿ ಚಿತ್ರ   

‘ನಾನು ಗೋವಾದಲ್ಲಿರುವ ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದೆ. ಆಗ ಸುಮ್ಮನೆ ಗಲ್ಲಿ ಕ್ರಿಕೆಟ್ ಆಡುತ್ತಿದ್ದೆ. ರಾಷ್ಟ್ರ ತಂಡಕ್ಕೆ ಆಡಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು.  ಅದೊಂದು ದಿನ ಕೆಲಸ ಬಿಟ್ಟೆ. ಕ್ರಿಕೆಟ್‌ ಆಡಲು ಹೋಗಬೇಕು ಎಂದು ನಿರ್ಧರಿಸಿದೆ. ಒಂದೊಮ್ಮೆ ಕ್ರಿಕೆಟ್‌ ಒಲಿಯದಿದ್ದರೆ ಮತ್ತೆ ವೇಟರ್‌ ಕೆಲಸಕ್ಕೆ ಮರಳಿದರಾಯಿತು ಎಂದುಕೊಂಡೆ. ಅಹಮದಾಬಾದಿನಲ್ಲಿ ರಸ್ತೆ ನಿಗಮದಲ್ಲಿ ಕೆಲಸ ಸಿಕ್ಕಿದೆ ಹೋಗುತ್ತೇನೆ ಎಂದು ಮನೆಯಲ್ಲಿ ಸುಳ್ಳು ಹೇಳಿ ಹೊರಟೆ. ನನ್ನ ಅಣ್ಣನಿಗೆ ನಿಜ ಸಂಗತಿ ಗೊತ್ತಿತ್ತು’

ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿರುವ ಹೊಸ ಪ್ರತಿಭೆ ಕುಲವಂತ್ ಖೆಜ್ರೊಲಿಯಾ ತಮ್ಮ ಕ್ರಿಕೆಟ್‌ ಯಾನದ ಕಥೆ ಆರಂಭಿಸಿದ್ದು ಹೀಗೆ. ರಾಜಸ್ಥಾನ ಪುಟ್ಟ ಗ್ರಾಮ ಜುಂಜುನುವಿನ ಕೆಳಮಧ್ಯಮ ಕುಟುಂಬವೊಂದರಲ್ಲಿ ಕುಲವಂತ್ ಜನಿಸಿದ್ದು. ಓದಿಗಿಂತ ಹೆಚ್ಚು ಕ್ರಿಕೆಟ್‌ನತ್ತಲೇ ಆಕರ್ಷಣೆ ಇತ್ತು.ಆದರೆ ಉಪಜೀವನಕ್ಕಾಗಿ ಕಿರಾಣಿ ಅಂಗಡಿಯಲ್ಲಿ, ಹೋಟೆಲ್‌ಗಳನ್ನು ಕೆಲಸ ಮಾಡುತ್ತ ಬೆಳೆದರು. ಟೇಬಲ್ ಸ್ವಚ್ಛಗೊಳಿಸುವ, ಮನೆಗಳಿಗೆ ಆಹಾರ ಪದಾರ್ಥ ತಲುಪಿಸುವ ಕಾರ್ಯಗಳನ್ನು ಮಾಡಿದರು. ಅದರ ನಡುವೆಯೇ ಸಮಯ ಸಿಕ್ಕಾಗಲೆಲ್ಲ ಕ್ರಿಕೆಟ್ ಆಡಿದರು.

ನಂತರ ಎಲ್ಲ ಕೆಲಸಗಳನ್ನು ಬದಿಗೊತ್ತಿ ಅಹಮದಾಬಾದ್‌ಗೆ ಹೋದ ಅವರ ಜೀವನ ತಿರುವು ಪಡೆಯಿತು. ಅಲ್ಲಿಯ ಅಶೋಕ ವಿಹಾರದಲ್ಲಿ ಸ್ನೇಹಿತನೊಂದಿಗೆ ಕೋಣೆಯೊಂದರಲ್ಲಿ ಉಳಿದುಕೊಂಡರು. ಅಲ್ಲಿಯ ಜಪಾನಿಸ್ ಪಾರ್ಕ್ ತಂಡಕ್ಕೆ ಆಡಿದರು. ಅವರ ಬೌಲಿಂಗ್‌ ದಿನದಿಂದ ದಿನಕ್ಕೆ ಮೊನಚು ಪಡೆಯುತ್ತಿತ್ತು. ತಂಡದ ಕಾಯಂ ಸದಸ್ಯರಾದರು. ಅವರಿಗೆ ಪಂದ್ಯವೊಂದಕ್ಕೆ 500 ರೂಪಾಯಿ ಸಂಭಾವನೆ ಲಭಿಸತೊಡಗಿತು. ಅದೊಂದು ದಿನ ಅವರನ್ನು ಕೋಚ್ ಸಂಜಯ್ ಭಾರದ್ವಾಜ್ ಗಮನಿಸಿದರು. ದೆಹಲಿಯ ಕ್ರಿಕೆಟ್‌ ವಲಯದಲ್ಲಿ ಸಂಜಯ್ ಪ್ರಭಾವಿ ವ್ಯಕ್ತಿ. ಅವರು ಹಲವು ಪ್ರತಿಭೆಗಳನ್ನು ಶೋಧ ಮಾಡಿ ತಂಡಗಳಿಗೆ ನೀಡಿದವರು. ಕುಲವಂತ ಬೌಲಿಂಗ್ ಅವರ ಮನ ಸೆಳೆಯಿತು. 2017ರ ರಣಜಿ ಟೂರ್ನಿಯಲ್ಲಿ ದೆಹಲಿ ತಂಡದ ಪರ ಆಡುವ ಅವಕಾಶ ಸಿಕ್ಕಿತು. ಗೌತಮ್ ಗಂಭೀರ್, ಇಶಾಂತ್ ಶರ್ಮಾ ಅವರೊಂದಿಗೆ ಆಡಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟ್ವೆಂಟಿ 20 ಮಾದರಿಯಲ್ಲಿ 14 ಮತ್ತು ಲೀಸ್ಟ್‌ ಎ ಮಾದರಿಯಲ್ಲಿ 30 ವಿಕೆಟ್‌ಗಳನ್ನು ಗಳಿಸಿದ್ದಾರೆ.

ADVERTISEMENT

ಅಲ್ಲಿಯ ಸಾಧನೆಯು ಅವರಿಗೆ ಐಪಿಎಲ್‌ ದಾರಿಯನ್ನೂ ತೋರಿಸಿತು. ಈ ಬಾರಿಯ ಬಿಡ್‌ನಲ್ಲಿ ಅವರನ್ನು ₹ 85 ಲಕ್ಷಕ್ಕೆ ಆರ್‌ಸಿಬಿ ಖರೀದಿಸಿತ್ತು. ಎಡಗೈ ಮಧ್ಯಮವೇಗದ ಬೌಲರ್ ಕುಲವಂತ ಈ ಬಾರಿಯ ಟೂರ್ನಿಯ ಮೊದಲ ಪಂದ್ಯದಲ್ಲಿ ಆಡಿದರು. ಅವರಿಗೆ ವಿಕೆಟ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಅವರು ತಂಡದ ಬೌಲಿಂಗ್ ಕೋಚ್  ಆಶಿಶ್ ನೆಹ್ರಾ (ಎಡಗೈ ವೇಗಿ) ಅವರ ಮನ ಗೆದ್ದಿದ್ದಾರೆ. ಶಿಸ್ತುಬದ್ಧ ಶೈಲಿ, ಟ್ವೆಂಟಿ–20 ಪರಿಣತ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡುವ ರೀತಿಯನ್ನು ಅವರು ಕಲಿಯುತ್ತಿದ್ದಾರೆ. ಲೈನ್ ಮತ್ತು ಲೆಂಗ್ತ್  ನಿರ್ವಹಣೆಯನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ.

‘ಆರ್‌ಸಿಬಿಯಲ್ಲಿ ಆಡಲು ಸಿಕ್ಕಿರುವ ಅವಕಾಶ ಅಮೂಲ್ಯವಾದದ್ದು.  ಇಲ್ಲಿ ಆಶಿಶ್ ನೆಹ್ರಾ ಅವರ ಮಾರ್ಗದರ್ಶನ ಸಿಗುತ್ತಿದೆ. ಡೇನಿಯಲ್ ವೆಟೊರಿ ಅವರ ಕೋಚಿಂಗ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಸಾಕಷ್ಟು ಕಲಿಯಲು ಸಿಗುತ್ತಿದೆ’ ಎಂದು 25 ವರ್ಷದ ಕುಲವಂತ ಸಂತಸ ವ್ಯಕ್ತಪಡಿಸುತ್ತಾರೆ. ಎಡಗೈ ಮಧ್ಯಮವೇಗಿಗಳ ಶೋಧದಲ್ಲಿರುವ ಭಾರತ ತಂಡದ ಆಯ್ಕೆದಾರರ ಗಮನ ಸೆಳೆಯುವತ್ತಲೂ ಅವರು ಗುರಿ ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.