ADVERTISEMENT

ಅಂತರ್ಜಾಲ: ಮಾಹಿತಿ ಗೌಪ್ಯತೆಗೆ ಹೊಸ ನಿಯಮ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 19:30 IST
Last Updated 18 ಏಪ್ರಿಲ್ 2017, 19:30 IST
ಅಂತರ್ಜಾಲ: ಮಾಹಿತಿ ಗೌಪ್ಯತೆಗೆ ಹೊಸ ನಿಯಮ
ಅಂತರ್ಜಾಲ: ಮಾಹಿತಿ ಗೌಪ್ಯತೆಗೆ ಹೊಸ ನಿಯಮ   

ಅಮೆರಿಕದಲ್ಲಿ ಬರಾಕ್‌ ಒಬಾಮಾ ಅವರ ಆಡಳಿತಾವಧಿಯಲ್ಲಿ ರೂಪಿಸಲಾಗಿದ್ದ ಆನ್‌ಲೈನ್‌ ಬಳಕೆದಾರರ ಖಾಸಗಿ ಮಾಹಿತಿ ಗೌಪ್ಯತೆಯ ನಿಬಂಧನೆಗಳನ್ನು ರದ್ದುಪಡಿಸಿ ಇತ್ತೀಚೆಗೆ ಹೊಸ ನಿಯಮಾವಳಿಗಳಿಗೆ ಅಮೆರಿಕ ಸಂಸತ್‌ ಆಂಗೀಕಾರ ನೀಡಿದೆ.

ಈ ವರ್ಷದಲ್ಲಿ ಹೊಸ ನಿಯಮಾವಳಿಗಳು ಜಾರಿಗೆ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇನ್ನು ಮುಂದೆ ಇಂಟರ್‌ನೆಟ್‌ ಪೂರೈಕೆ ಮಾಡುವ ಸಂಸ್ಥೆಗಳು ಬಳಕೆದಾರರ ಅನುಮತಿ ಇಲ್ಲದೆ ಅವರ ವೈಯಕ್ತಿಕ ಹಾಗೂ ಬ್ರೌಸಿಂಗ್ ಚಟುವಟಿಕೆಯ ಮಾಹಿತಿಯನ್ನು ಸಂಗ್ರಹಿಸುವಂತಿಲ್ಲ ಮತ್ತು ಜಾಹೀರಾತು ಕಂಪೆನಿಗಳಿಗೆ ಮಾರಾಟ ಮಾಡುವಂತಿಲ್ಲ ಎಂದು ಹೊಸ ನಿಯಮಾವಳಿಯಲ್ಲಿ ಹೇಳಲಾಗಿದೆ. ಇದರ ಪರಿಣಾಮವಾಗಿ ಬಳಕೆದಾರರ ಖಾಸಗಿ ಮಾಹಿತಿ ಅಥವಾ ಬಹಿರಂಗಗೊಳ್ಳುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಕ್ಟೋಬರ್‌ ತಿಂಗಳಲ್ಲಿ ಅಮೆರಿಕದ ಸಮೂಹ ಮಾಧ್ಯಮ ಆಯೋಗ (Federal Communications Commission) ಸಭೆ ಸೇರಿ ನೂತನ ನಿಬಂಧನೆಗಳನ್ನು ರೂಪಿಸಿತ್ತು. ಎಫ್‌ಸಿಸಿಯ ಈ ನಿಯಮಾಳಿಗಳನ್ನು ಅಮೆರಿಕ ಸಂಸತ್‌ ಅಂಗೀಕರಿಸಿದೆ.

ಇಂಟರ್‌ನೆಟ್‌ ಅಥವಾ ಆನ್‌ಲೈನ್‌ ಪೂರೈಕೆ ಸೇವಾದಾತ ಕಂಪೆನಿಗಳು ಬಳಕೆದಾರ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವ ಮೊದಲು ಗ್ರಾಹಕರ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಹಾಗೆಯೇ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಜಾಹೀರಾತುದಾರರಿಗೆ ಮಾರಾಟ ಮಾಡುವ ಮೊದಲು ಗ್ರಾಹಕರ ಅನುಮತಿಯನ್ನು ಪಡೆದಿರಬೇಕು.

ಈ ಹೊಸ ನಿಯಮ ಬಳಕೆದಾರರನ ಖಾಸಗಿ ಮಾಹಿತಿ ಸೋರಿಕೆಯಾಗದಂತೆ ತಡೆಯುತ್ತದೆ ಎನ್ನಲಾಗಿದೆ. ವಾಸ್ತವವಾಗಿ ಐಪಿ ವಿಳಾಸದ ಮೂಲಕ ಇಂಟರ್‌ನೆಟ್‌ ಪೂರೈಕೆದಾರರು ಬಳಕೆದಾರನ ಮಾಹಿತಿಯನ್ನು ಸುಲಭವಾಗಿ ಸಂಗ್ರಹಿಸಬಹುದು ಎಂದು ತಂತ್ರಜ್ಞರು ಅಭಿಪ್ರಾಯಪಡುತ್ತಾರೆ.

ಇದು ಕೇವಲ ನಿಯಮವಷ್ಟೇ. ಬಳಕೆದಾರರ ಮಾಹಿತಿಯನ್ನು ಸಂಪೂರ್ಣವಾಗಿ ಸೋರಿಕೆಯಾಗದಂತೆ ತಡೆಯಲು ಸಾಧ್ಯವಿಲ್ಲ ಎಂದು ದತ್ತಾಂಶ ಸಂಗ್ರಹಣಾ ವಿಶ್ಲೇಷಕರು ಹೇಳುತ್ತಾರೆ.

ಅಮೆರಿಕದಲ್ಲಿ ಕೆಲವು ವಿಪಿಎನ್‌ ಸೇವಾದಾತ ಕಂಪೆನಿಗಳು ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿ ಇಡುವ ಪ್ರಯತ್ನ ಮಾಡುತ್ತಿವೆ. ಇವುಗಳಲ್ಲಿ  ಫ್ರೀಡಂ ಬೈ ಫ್ರೀಸೆಕ್ಯೂರ್‌, ವೈರ್ ಕಟ್ಟರ್‌, ಟ್ಯೂನೆಲ್‌ ಬೀಯರ್‌ ಕಂಪೆನಿಗಳು ಮುಖ್ಯವಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್‌ ಪತ್ರಿಕೆಯ ಮಾಹಿತಿ ವಿಭಾಗದ ಮುಖ್ಯಸ್ಥರಾದ  ಸ್ಯಾಂಡ್‌ವೀಕ್ ಹೇಳುತ್ತಾರೆ.

ಉದಾಹರಣೆಗೆ ಹೇಳುವುದಾದರೆ  ಗ್ರಾಹಕರ ಅಥವಾ ಬಳಕೆದಾರನ ಅನುಮತಿ ಇಲ್ಲದೆ ಅವರ ಸಾಮಾಜಿಕ ಜಾಲತಾಣ ಖಾತೆ ಅಥವಾ ಇ–ಮೇಲ್ ಖಾತೆಗಳಲ್ಲಿ ಜಾಹೀರಾತುಗಳು ಹೇಗೆ ಕಾಣಿಸಿಕೊಳ್ಳುತ್ತವೆ? ಗ್ರಾಹಕರು ಯಾರೂ ಸಹ ತಮ್ಮ ಖಾತೆಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಸಿ ಎಂದು ಇಂಟರ್‌ನೆಟ್‌ ಸೇವಾ  ಕಂಪೆನಿಗಳನ್ನು ಕೇಳಿಕೊಳ್ಳುವುದಿಲ್ಲ! 

ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸುವ ಕಂಪೆನಿಗಳು ಬಳಕೆದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಜಾಹೀರಾತು ಕಂಪೆನಿಗಳಿಗೆ ಮಾರಾಟ ಮಾಡಿಕೊಳ್ಳುತ್ತಾರೆ.  ಇದನ್ನು ತಪ್ಪಿಸುವ ಸಲುವಾಗಿ ಅಮೆರಿಕ ಸಂಸತ್‌ ಹೊಸ ನಿಯಮಾವಳಿಗಳನ್ನು ರೂಪಿಸಿದೆ.

ಇದರಿಂದ ಗ್ರಾಹಕರಿಗೆ ತಕ್ಕಮಟ್ಟಿಗೆ ಜಾಹೀರಾತುಗಳ ಹಾವಳಿ ತಪ್ಪಿದಂತಾಗುತ್ತದೆ. ‘ಎಫ್‌ಸಿಸಿ’ಯ ಹೊಸ ನಿಯಮಾವಳಿಗಳು ಗ್ರಾಹಕರಿಗೆ ಯಾವುದೇ ತೊಡಕುಗಳಿಲ್ಲದೆ ಬಲಿಷ್ಠ ಗೌಪ್ಯತಾ ರಕ್ಷಣೆಯನ್ನು ಒದಗಿಸಲಿದೆ ಎಂದು ಅಮೆರಿಕ ಸರ್ಕಾರ ತಿಳಿಸಿದೆ.  
–ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT