ADVERTISEMENT

ಅನಾಮಧೇಯ ಹರಟೆಗೆ ಫೇಸ್‌ಬುಕ್‌ ರೂಮ್

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2014, 19:30 IST
Last Updated 4 ನವೆಂಬರ್ 2014, 19:30 IST
ಅನಾಮಧೇಯ ಹರಟೆಗೆ ಫೇಸ್‌ಬುಕ್‌ ರೂಮ್
ಅನಾಮಧೇಯ ಹರಟೆಗೆ ಫೇಸ್‌ಬುಕ್‌ ರೂಮ್   

ವಿಶ್ವದಲ್ಲೇ ಅತಿ ಹೆಚ್ಚು ಸಾಮಾಜಿಕ ಜಾಲತಾಣ ಬಳಕೆದಾರರನ್ನು ಹೊಂದಿರುವ ‘ಫೇಸ್‌ಬುಕ್’, ತನ್ನ ಬಳಕೆದಾರರು ಹೆಸರು ಮತ್ತು ಮೂಲ ಗುರುತನ್ನು ಬಹಿರಂಗಪಡಿಸದೆ ಮನಸೋ ಇಚ್ಛೆ ಹರಟೆ ಹೊಡೆಯಬಹುದಾದ ‘ರೂಮ್ಸ್‌’  ಎಂಬ ಹೊಸ ಚಾಟಿಂಗ್ ಅಪ್ಲಿಕೇಷನ್‌ ಮಾರುಕಟ್ಟೆಗೆ ಪರಿಚಯಿಸಿದೆ.

ಸದ್ಯ ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಪರಿಚಯಿಸ ಲಾಗಿರುವ ಈ ‘ರೂಮ್ಸ್‌’ಗೆ ಬಳಕೆದಾರರ ಗುರುತು ಕಡ್ಡಾಯವಲ್ಲ. ಐ–ಪೋನ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಂಡು ತೆರೆಯುವ ರೂಮ್‌ಗಳಲ್ಲಿ ನಿಮಗಿಷ್ಟ ಬಂದ ಹೆಸರಿಟ್ಟುಕೊಂಡು ಅಥವಾ ಅನಾಮಧೇಯ ವಾಗಿಯೇ ಉಳಿದು ನಿಮ್ಮ ಅಭಿರುಚಿ– ಆಸಕ್ತಿಗ ಳೊಂದಿಗೆ ಹೋಲಿಕೆ ಇರುವವರ ಜತೆ ಹರಟಬಹುದು. ಇಷ್ಟ ಬಂದ ಚಿತ್ರ, ಸಂದೇಶ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಬಹುದಲ್ಲದೆ, ಬೇರೆ ಬೇರೆ ತಾಣಗಳಿಗೆ ಲಿಂಕ್ ಮಾಡಿ ಸ್ನೇಹಿತರನ್ನು ಕೂಡ ಆಹ್ವಾನಿಸುವ ಅವಕಾಶ ಇದರಲ್ಲಿದೆ.

ಅಂತರ್ಜಾಲ ಆರಂಭಗೊಂಡ ದಿನಗಳಲ್ಲಿ ಅನಾಮಧೇಯ ಹೆಸರಿನಲ್ಲಿ ಇಷ್ಟಬಂದವರ ಜತೆ ಚಾಟ್ ಮಾಡುತ್ತಿದ್ದ ಬಗೆಯ ಸುಧಾರಿತ ಅಪ್ಲಿಕೇಷನ್ ಈ ‘ರೂಮ್ಸ್‌’ ಎನ್ನಬಹುದು. ಫೇಸ್‌ಬುಕ್‌ನ ಈ   ‘ರೂಮ್ಸ್‌’ ಚಾಟಿಂಗ್ ಅಪ್ಲಿಕೇಷನ್ ಪರಿಚಯಕ್ಕೆ ಒಂದು ಕಾರಣ ಕೂಡ ಇದೆ.

ಅದೇನೆಂದರೆ, ದಿನದಿನಕ್ಕೆ  ಫೇಸ್‌ಬುಕ್ ಜನಪ್ರಿಯಗೊಳ್ಳುತ್ತಿರುವ ಬೆನ್ನಲ್ಲೆ, ತನ್ನ ತಾಣದಲ್ಲಿ ಪ್ರೋಪೈಲ್ ಸೃಷ್ಟಿ ಮಾಡುವವರು ತಮ್ಮ ನಿಜ ಗುರುತು ನೀಡುವುದು ಕಡ್ಡಾಯ ಎಂದು ಫೇಸ್‌ಬುಕ್‌ ಅಕ್ಟೋಬರ್ ಆರಂಭದಲ್ಲಿ ಹೇಳಿತ್ತು. ಈ ಹೇಳಿಕೆ ವಿರುದ್ಧ ವಿಶ್ವದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಕೆಲವರು ಫೇಸ್‌ಬುಕ್‌ ಖಾತೆಗೆ ವಿದಾಯ ಹೇಳಿದರೆ, ಮುಂದುವರಿದ ದೇಶಗಳ ಸಲಿಂಗಿಕಾಮಿಗಳು ಫೇಸ್‌ಬುಕ್ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದರು. ಅಂತಿಮವಾಗಿ ತನ್ನ ಹೇಳಿಕೆಯ ಕುರಿತು ಫೇಸ್‌ಬುಕ್ ಬಳಕೆದಾರರಲ್ಲಿ ಕ್ಷಮೆ ಯಾಚಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಒಟ್ಟಾರೆ ರೂಪವೇ ‘ರೂಮ್ಸ್‌’ ಅನ್ನು ಅಭಿವೃದ್ಧಿಪಡಿಸಲು ಫೇಸ್‌ಬುಕ್‌ ಪ್ರೇರೆಪಿಸಿತು.

‘ವೆಬ್‌ ಸಮುದಾಯಗಳ ಆರಂಭದ ದಿನದ ಪಾಲಿಸಿಗಳು ಹಾಗೂ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳ ಸಾಮರ್ಥ್ಯವೇ ‘ರೂಮ್ಸ್‌’ ಚಾಟ್ಸ್‌ ಅಪ್ಲಿಕೇಷನ್‌ಗೆ ಸ್ಫೂರ್ತಿ. ವಿಶ್ವದಲ್ಲಿ ಎಲ್ಲೇ ಇದ್ದರೂ, ಯಾವುದೇ ಹಿನ್ನೆಲೆ ಹೊಂದಿದ್ದರೂ, ಅದ್ಯಾವುದರ ಗೊಡವೆ ಇಲ್ಲದೆ, ಅಭಿರುಚಿ ಸಾಮ್ಯತೆ ಆಧಾರದ ಮೇಲೆ, ಅಂತರ್ಜಾಲದ ಮೂಲಕ ಪರಸ್ಪರರನ್ನು ಹತ್ತಿರ ತರುವುದನ್ನು ನಮ್ಮ ತಂಡ ಇಷ್ಟಪಡುತ್ತದೆ’ ಎಂದು ‘ರೂಮ್ಸ್‌’ ಅಭಿವೃದ್ಧಿ ಪಡಿಸಿರುವ ಲಂಡನ್‌ನ ‘ಫೇಸ್‌ಬುಕ್‌ ಕ್ರಿಯೇಟಿವ್ ಲ್ಯಾಬ್ಸ್‌’ ತನ್ನ ಬ್ಲಾಗ್‌ನಲ್ಲಿ ಹೇಳಿಕೊಂಡಿದೆ.

‘ಸಾಮಾಜಿಕ ಜಾಲತಾಣ ಬಳಕೆದಾರರು ಫೋರಮ್ಸ್, ಮೆಸೇಜ್‌ ಬೋರ್ಡ್ಸ್ ಹಾಗೂ ಚಾಟ್‌ ರೂಮ್‌ಗಳಲ್ಲಿ ತಮ್ಮ ಭೌಗೋಳಿಕ ನೆಲೆ ಮತ್ತು ಸಾಮಾಜಿಕ ಸ್ಥಾನಮಾನವನ್ನು ಬಹಿರಂಗಪಡಿಸದೆ ಸಂಧಿಸುವ ತಾಣಗಳಾಗಿವೆ. ‘ರೂಮ್ಸ್‌’ ಬಳಕೆದಾರರು ತಮಗಿಷ್ಟ ಬಂದ ವಿಷಯ, ಸಂದೇಶ ಹಾಗೂ ವಿಡಿಯೊ ದೃಶ್ಯಾವಳಿಗಳನ್ನು ಅನಾಮಧೇಯ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಹುದಲ್ಲದೆ, ಗಂಟೆಗಟ್ಟಲೆ ಹರಟೆ ಹೊಡೆಯಬಹುದು. ಜತೆಗೆ ತಮ್ಮ ‘ರೂಮ್ಸ್‌’ ಅನ್ನು ಪಬ್ಲಿಕ್‌ ಲಿಂಕ್‌ಗಳಿಗೆ ಜಾಯಿನ್ ಮಾಡಬಹುದು. ಸದ್ಯ ಐಫೋನ್‌ಗಳಲ್ಲಿ ಮಾತ್ರ ಬಳಸಬಹುದಾದ ‘ರೂಮ್ಸ್‌’ ಸೇವೆಯನ್ನು 2015ರ ಹೊತ್ತಿಗೆ ಆ್ಯಂಡ್ರಾಯ್ಡ್‌ ಫೋನ್‌ಗಳಿಗೂ ವಿಸ್ತರಿಸುವ ಆಲೋಚನೆ ಇದೆ’ ಎಂದು ಫೇಸ್‌ಬುಕ್‌ ಹೇಳಿದೆ.

ಡೌನ್‌ಲೋಡ್ ಹಾಗೂ ನಿರ್ವಹಣೆ
ಐಫೋನ್‌ಗಳಲ್ಲಿ iTunes ಓಪನ್ ಮಾಡಿದ ನಂತರ ಕಾಣಿಸಿಕೊಳ್ಳುವ download  ಮೇಲೆ ಕ್ಲಿಕ್ ಮಾಡಿದರೆ, ‘ರೂಮ್ಸ್’ ಅಪ್ಲಿಕೇಷನ್ ಡೌನ್‌ಲೋಡ್ ಆಗುತ್ತದೆ.

* ಡೌನ್‌ಲೋಡ್‌ ಆದ ನಂತರ, ನಮಗೆ ಇಷ್ಟ ಬಂದ ವಿಷಯ, ಆಸಕ್ತಿ– ಅಭಿರುಚಿಗಳ ರೂಮ್‌ಗಳನ್ನು ಸೃಷ್ಟಿಸಿಕೊಳ್ಳಬೇಕು.

* ಯಾವುದಾದರೂ ಚಿತ್ರವನ್ನು ಹಾಕಿಕೊಂಡು ನಿಮ್ಮ ರೂಮ್ ಅಂದಗೊಳಿಸಿಕೊಳ್ಳಬೇಕು.

*ಪ್ರತಿ ರೂಮ್‌ಗೆ ನಿಮ್ಮ ಅಡ್ಡಹೆಸರು ಅಥವಾ ನಿಮಗೆ ತೋಚುವ ಯಾವುದೇ ಹೆಸರನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬೇಕು.

*ನಿಮ್ಮ ಅಭಿರುಚಿ– ಆಸಕ್ತಿಗಳ ಜತೆ ಸಾಮ್ಯತೆ  ಇರುವವರ ಜತೆ ಮಾತನಾಡಿ.

*ವಿಷಯಗಳನ್ನು ಷೆೇರ್‌ ಮಾಡಿ, ಇತರರನ್ನು ನಿಮ್ಮ ‘ರೂಮ್‌’ಗೆ ಆಹ್ವಾನಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.