ADVERTISEMENT

ಆ್ಯಪ್‌ ಅಪ್‌ಡೇಟ್‌ ಅನುಕೂಲಗಳು

ತಂತ್ರೋಪನಿಷತ್ತು

ದಯಾನಂದ ಎಚ್‌.ಎಚ್‌.
Published 12 ಅಕ್ಟೋಬರ್ 2016, 19:30 IST
Last Updated 12 ಅಕ್ಟೋಬರ್ 2016, 19:30 IST
ಆ್ಯಪ್‌ ಅಪ್‌ಡೇಟ್‌ ಅನುಕೂಲಗಳು
ಆ್ಯಪ್‌ ಅಪ್‌ಡೇಟ್‌ ಅನುಕೂಲಗಳು   

ತಂತ್ರಜ್ಞಾನ ಲೋಕದಲ್ಲಿ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ನಿನ್ನೆಯ ಹೊಸತು ಇಂದಿಗೆ ಹಳತು, ಇಂದಿನ ಹೊಸತು ನಾಳೆಗೆ ಹಳತು ಎಂಬ ಮಾತನ್ನು ತಂತ್ರಜ್ಞಾನಕ್ಕೆ ಅನ್ವಯಿಸಬಹುದು. ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಹೊಸ ತಂತ್ರಜ್ಞಾನದ ಆಯ್ಕೆಗಳು ಹಲವಾರು. ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳಲು ಪ್ಲೇಸ್ಟೋರ್‌ ಇಲ್ಲಿ ತೆರೆದ ಬಾಗಿಲು.

ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡಿರುವ ಆ್ಯಪ್‌ಗಳನ್ನು ಅಪ್‌ಡೇಟ್‌ ಮಾಡಿಕೊಳ್ಳುವ ಮೂಲಕ ಅವುಗಳ ಹೊಸ ಗುಣಲಕ್ಷಣಗಳ ಪ್ರಯೋಜನ ಪಡೆಯಬಹುದು. ಆದರೆ, ಬಹಳಷ್ಟು ಮಂದಿ ಡೇಟಾಗೆ ಹಣ ವ್ಯಯಿಸಬೇಕಾದ ಕಾರಣದಿಂದ ಅಪ್‌ಡೇಟ್‌ ಆಯ್ಕೆಯನ್ನು ಮುಂದೂಡುತ್ತಲೇ ಇರುತ್ತಾರೆ.

ಆ್ಯಪ್‌ಗಳನ್ನು ಅಪ್‌ಡೇಟ್‌ ಮಾಡಿದರೆ ಅವುಗಳ ಹೊಸ ಸ್ವರೂಪ, ಹೊಸ ಅನುಕೂಲಗಳನ್ನು ಪಡೆಯಬಹುದು. ಅಪ್‌ಡೇಟ್‌ ಆದ ನಂತರ ಆ್ಯಪ್‌ಗಳು ಹೊಸ ಗುಣಲಕ್ಷಣಗಳೊಂದಿಗೆ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ ಟ್ವಿಟ್ಟರ್‌ ಆ್ಯಪ್‌ ಅನ್ನು ಅಪ್‌ಡೇಟ್‌ ಮಾಡಿದಾಗ ಹಳೆಯ ಆವೃತ್ತಿಗಿಂತ ಹೊಸ ರೀತಿಯ ಕಾರ್ಯಾಚರಣೆಯನ್ನು ಕಾಣಬಹುದು. ಹಳೆಯ ಆವೃತ್ತಿಯಲ್ಲಿ ಇಲ್ಲದ ಅನೇಕ ಆಯ್ಕೆಗಳು ಅಪ್‌ಡೇಟ್‌ ಆದ ಆವೃತ್ತಿಯಲ್ಲಿ ಲಭ್ಯವಿರುತ್ತವೆ.

ಯಾವ ಆ್ಯಪ್‌ಗಳು ಅಪ್‌ಗ್ರೇಡ್‌ ಆಗಿರುತ್ತವೆಯೋ ಆಯಾ ಆ್ಯಪ್‌ಗಳನ್ನು ಡಿವೈಸ್‌ನಲ್ಲಿ ಅಪ್‌ಡೇಟ್‌ ಮಾಡಿಕೊಳ್ಳಲು ನೋಟಿಫಿಕೇಶನ್‌ ಬರುವುದು ಸಹಜ. ಈ ವೇಳೆ ಪ್ಲೇಸ್ಟೋರ್‌ನಲ್ಲಿ ಅಪ್‌ಡೇಟ್‌ಗೆ ಕಾಯುತ್ತಿರುವ ಆ್ಯಪ್‌ಗಳೆಲ್ಲವನ್ನೂ ಒಟ್ಟಿಗೇ ಅಪ್‌ಡೇಟ್‌ ಮಾಡಬಹುದು. ಅಪ್‌ಡೇಟ್‌ ಅಗತ್ಯವಿಲ್ಲ ಎನಿಸುವ ಆ್ಯಪ್‌ಗಳನ್ನು ಅಪ್‌ಡೇಟ್‌ ಮಾಡದೇ ಇರಬಹುದು.

ಆ್ಯಪ್‌ ಅಪ್‌ಡೇಟ್‌ಗೂ ಮುನ್ನ ಪ್ಲೇಸ್ಟೋರ್‌ನಲ್ಲಿ ಕೇಳುವ ಅಕ್ಸೆಸ್‌ಗಳನ್ನು ಒಪ್ಪಿಕೊಂಡರೆ ಮಾತ್ರ ಆ್ಯಪ್‌ ಅಪ್‌ಡೇಟ್‌ ಆಗುತ್ತದೆ. ಸಾಮಾನ್ಯವಾಗಿ ಪ್ಲೇಸ್ಟೋರ್‌ನಲ್ಲಿ ಕೇಳುವ ಈ ಅಕ್ಸೆಸ್‌ ಪರ್ಮಿಷನ್‌ಗೆ ಹಿಂದೆ ಮುಂದೆ ನೋಡದೆ ACCEPT ಒತ್ತುವುದು ಹಲವರ ಅಭ್ಯಾಸ. ಆದರೆ, ಯಾವ ಆ್ಯಪ್‌ ಯಾವ್ಯಾವ ಅಕ್ಸೆಸ್‌ ಬಯಸುತ್ತಿದೆ ಎಂಬುದನ್ನು ನೋಡಿಕೊಂಡು ಅಪ್‌ಡೇಟ್‌ ಮಾಡುವುದು ಒಳ್ಳೆಯದು.

ಸಾಮಾನ್ಯವಾಗಿ ಆ್ಯಪ್‌ಗಳ ಅಪ್‌ಡೇಟ್ ವೇಳೆ ಲೊಕೇಷನ್‌, ಕ್ಯಾಮೆರಾ, ಮೈಕ್ರೊಫೋನ್‌, ಬ್ಲೂಟೂತ್‌ ಕನೆಕ್ಷನ್‌, ಐಡೆಂಟಿಟಿ, ಕಾಂಟ್ಯಾಕ್ಟ್ಸ್, ಆಟೊ ವೈಫೈ ಕನೆಕ್ಷನ್‌, ಡಿವೈಸ್‌ ಐಡಿ, ಕಾಲ್‌ ಇನ್ಫರ್ಮೇಷನ್‌ ಮುಂತಾದ ಮಾಹಿತಿಗಳ ಅಕ್ಸೆಸ್‌ಗಾಗಿ ಪರ್ಮಿಷನ್ ಕೇಳಲಾಗುತ್ತದೆ. ಈ ವೇಳೆ ಯಾವ ಆ್ಯಪ್‌ಗೆ ಈ ಮಾಹಿತಿ ಅಗತ್ಯ, ಯಾವ ಆ್ಯಪ್‌ ವಿಶ್ವಾಸಾರ್ಹ ಎಂಬುದನ್ನು ನೋಡಿ ಅಪ್‌ಡೇಟ್ ಮಾಡಬೇಕಾಗುತ್ತದೆ. ಇಲ್ಲವಾದರೆ ನಿಮ್ಮ ಡಿವೈಸ್‌ ಅಕ್ಸೆಸ್‌ ಮಾಹಿತಿಯ ದುರುಪಯೋಗವೂ ಆಗಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.