ADVERTISEMENT

ಇದು ಉಗುರಲ್ಲ, ರಿಮೋಟ್‌ ಕಂಟ್ರೋಲ್!

ಸುಭಾಸ ಯಾದವಾಡ
Published 28 ಏಪ್ರಿಲ್ 2015, 19:30 IST
Last Updated 28 ಏಪ್ರಿಲ್ 2015, 19:30 IST

ನೀವು ಮನೆಯಲ್ಲಿ ದೂರದರ್ಶನ ಕಾರ್ಯಕ್ರಮವನ್ನು ರಿಮೋಟ್‌ ಮೂಲಕ ನಿಯಂತ್ರಿಸುವಿರಲ್ಲವೇ?  ಹಾಗೆಯೇ ನಿಮ್ಮ ಮೊಬೈಲ್ ಹಾಗೂ ಕಂಪ್ಯೂಟರನ್ನೂ ದೂರದಿಂದಲೇ ನಿಯಂತ್ರಿಸಬಹುದಾಗಿದ್ದರೆ? ಅದೂ ನಿಮ್ಮ ಬೆರಳಿನ ಉಗುರಿನ ಮೇಲಿರುವ ನೇಲ್ ಕವ್ಹರ್ ಮೂಲಕ! 

ಉಗುರುಗಳಿಗೆ ಬಣ್ಣ ಹಚ್ಚುವುದು ತೀರಾ ಹಳೆಯ ಸಂಪ್ರದಾಯ.  ಈಗೇನಿದ್ದರೂ ವಿವಿಧ ವಿನ್ಯಾಸ-ಬಣ್ಣಗಳ ನೇಲ್ ಕವ್ಹರಗಳನ್ನು ಅಂಟಿಸಿಕೊಳ್ಳುವುದು. ಈಗ ಅಂತಹ ನೇಲ್ ಕವ್ಹರ್ ಬರೀ ಉಗುರಿನ ಅಂದ ಹೆಚ್ಚಿಸುವುದಿಲ್ಲ. ಅದು ರಿಮೋಟ್‌ ಕಂಟ್ರೋಲ್ ಉಪಕರಣವಾಗಿಯೂ ಕಾರ್ಯ ನಿರ್ವಹಿ ಸುತ್ತದೆ ಎಂದರೆ ನಂಬುತ್ತೀರಾ?

ನಂಬಲೇಬೇಕು.  ಅದು ಇತ್ತೀಚಿನ ವೈಜ್ಞಾನಿಕ ಆವಿಷ್ಕಾರ. ಇದು ಬ್ಲ್ಯೂಟೂತ್‌ ರೀತಿ ಕೆಲಸ ಮಾಡುತ್ತದೆ. ಮೆಸಾಚುಸೆಟ್ಸ್‌ನಲ್ಲಿರುವ ತಂತ್ರಜ್ಞಾನ ಸಂಸ್ಥೆಯ ತಂತ್ರಜ್ಞರು ಈ ಪುಟ್ಟ ನಿಸ್ತಂತು ದೂರ ನಿಯಂತ್ರಕವನ್ನು ಅಭಿವೃದ್ಧಿಪಡಿಸಿದ್ದಾರೆ.  ಅದಕ್ಕೆ ಅವರು ಕೊಟ್ಟ ಹೆಸರು ನೈಲೋ (NaಿilO). 

ಕೈಗಳ ಹೆಬ್ಬೆರಳಿನ ಉಗುರಿನ ಮೇಲೆ ಅಂಟಿಸಿ ಕೊಳ್ಳಬಹುದಾದ ಈ ನೇಲ್ ಸ್ಟಿಕ್ಕರ್ ವಾಸ್ತವ ವಾಗಿ ಒಂದು ರಿಮೋಟ್‌ ಕಂಟ್ರೋಲ್‌ ಎಂದು ಯಾರಿಗೂ ಗೊತ್ತಾಗುವುದೇ ಇಲ್ಲ.  ಇದನ್ನು ಬಳ ಸುವವರು ತಮ್ಮ ಅಗತ್ಯಕ್ಕೆ ತಕ್ಕಂತೆ ಸೆಟ್ಟಿಂಗ್‌ ಮಾಡಿಕೊಳ್ಳಬಹುದು. ಇದರ ಮೇಲಿನ ಚಿತ್ರ ವಿನ್ಯಾಸವನ್ನೂ ಬೇಕೆಂದಾಗ ಬೇಕಾದ ಹಾಗೆ ಬದಲಿಸಿಕೊಳ್ಳಬಹುದು.  ಮೊಬೈಲ್ ಹಾಗೂ ಕಂಪ್ಯೂಟರ್ ಡೆಸ್ಕ್‌ಟಾಪ್ ಮೇಲೆ ಬೇರೆ ಬೇರೆ ಚಿತ್ರಗಳನ್ನು ಹಾಕಿಕೊಳ್ಳವುದಿಲ್ಲವೇ ಹಾಗೆ. 

ಈ ಪುಟ್ಟ ತೆಳುವಾದ ನೇಲೋದಲ್ಲಿ ಪ್ರೊಸೆಸರ್, ಬ್ಯಾಟರಿ, ಸ್ಪಂದಿಸುವ ಚಿಪ್, ಬ್ಲ್ಯೂಟೂತ್‌ ರೇಡಿಯೊ, ಸರ್ಕಿಟ್ ಬೋರ್ಡ್‌... ಏನೆಲ್ಲ ಇವೆ.  ಆದರೆ ಅವು ಯಾವುವೂ ಕಾಣುವುದಿಲ್ಲ.  ಕಾಣುವುದು ಕೇವಲ ಅಂದವಾದ ನೇಲ್ ಕವ್ಹರ್ ಮಾತ್ರ. 

ಸಿಂಡ್ ಸಿನ್ ಲಿವ್ ಕಾವೋ ಎಂಬ ಎಂಐಟಿ ಪದವೀಧರ ಈ ಹೊಸ ಯಂತ್ರವನ್ನು ವಿನ್ಯಾಸಗೊಳಿಸಿದ್ದಾರೆ.  ಅದು ನಮ್ಮ ದೇಹದ ಒಂದು ಭಾಗವಾಗಿದ್ದು ಅದನ್ನು ಸಂದರ್ಭಕ್ಕೆ ತಕ್ಕಂತೆ ರಿಮೋಟ್‌ ರೀತಿ ಬಳಸಬಹುದಾಗಿದೆ.

ಸಭೆಯಲ್ಲಿದ್ದಾಗ ಯಾರಿಗೂ ಗೊತ್ತಾಗದಂತೆ, ಈ ಉಗುರಿನ ಕಲಾತ್ಮಕ ಆವರಣವನ್ನು ಸ್ಪರ್ಶಿಸುತ್ತಲೇ ಬೇರೆಯವರಿಗೆ ಸಂದೇಶವನ್ನು ಕಳಿಸಲೂ ಸಾಧ್ಯವಿದೆಯಂತೆ!

ಈ ಕಿರು ಸಾಧನವನ್ನು ದೊಡ್ಡ ಮಟ್ಟದಲ್ಲಿ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಚೀನಾದ ಉದ್ಯಮ ಕ್ಷೇತ್ರದ ಪ್ರಮುಖರ ಜತೆ ಮಾತುಕತೆ ಆರಂಭವಾಗಿದೆ.  ಕೆಲವೇ ದಿನಗಳಲ್ಲಿ ಜನರು ಈ ರಿಮೋಟ್‌ ಕಂಟ್ರೋಲ್‌ ಕಾರ್ಯವೈಖರಿಯ ಉಗುರ ಆಭರಣವನ್ನು ಧರಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.