ADVERTISEMENT

ಕರೆನ್ಸಿ ವಿನಿಮಯ ವಾಣಿಜ್ಯ ಮಾಹಿತಿ ಆ್ಯಪ್‌ಗಳು...

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2016, 19:30 IST
Last Updated 29 ನವೆಂಬರ್ 2016, 19:30 IST
ಕರೆನ್ಸಿ ವಿನಿಮಯ ವಾಣಿಜ್ಯ ಮಾಹಿತಿ ಆ್ಯಪ್‌ಗಳು...
ಕರೆನ್ಸಿ ವಿನಿಮಯ ವಾಣಿಜ್ಯ ಮಾಹಿತಿ ಆ್ಯಪ್‌ಗಳು...   

ಇಂದಿನ ತಂತ್ರಜ್ಞಾನ ಯುಗದ ಮೊಬೈಲ್ ಆ್ಯಪ್‌ಗಳು ನಮ್ಮ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿಬಿಟ್ಟಿವೆ. ಸ್ಮಾರ್ಟ್ ಫೋನ್ ಬಳಕೆದಾರರು ಆ್ಯಪ್‌ಗಳು ಇಲ್ಲದೇ ಜೀವನವೇ ಇಲ್ಲ ಎನ್ನುವ ಮನಸ್ಥಿತಿಗೆ ತಲುಪಿರುವುದು ಸುಳ್ಳಲ್ಲ! ಪ್ರತಿ ದಿನ ನೂರಾರು ಆ್ಯಪ್‌ಗಳು ಮಾರುಕಟ್ಟೆಗೆ ಲಗ್ಗೆ ಹಾಕುವುದೇ ಇದಕ್ಕೆ ಕಾರಣ. ಈ ವಾರದ ಜಾಗತಿಕ ಮಾರುಕಟ್ಟೆಯಲ್ಲಿ ಇಎಕ್ಸ್ ಟ್ರಾವೆಲ್ ಮನಿ ಆ್ಯಪ್ ಮತ್ತು ವಾಣಿಜ್ಯ ಮಾಹಿತಿ ನೀಡುವ ಇನ್್ಸರ್ಟ್ ಆ್ಯಪ್ ಬಿಡುಗಡೆಯಾಗಿವೆ. ಅವುಗಳ ಕಾರ್ಯವೈಖರಿಯ ಸಂಕ್ಷಿಪ್ತ ಪರಿಚಯ ಇಲ್ಲಿದೆ

***
ಎಕ್ಸ್ ಟ್ರಾವೆಲ್ ಮನಿ ಆ್ಯಪ್…  
ವಿದೇಶಗಳಲ್ಲಿ ನೆಲೆಸಿರುವ  ಭಾರತೀಯರು ತಮ್ಮ ಸಂಬಂಧಿಕರಿಗೆ  ಹಣವನ್ನು   ಕಳುಹಿಸಲು ಬ್ಯಾಂಕ್ ಅಥವಾ ಹಣ ವಿನಿಮಯ ಮಾಡಿಕೊಡುವ  ಖಾಸಗಿ ಕೇಂದ್ರಗಳಿಗೆ ಎಡತಾಕುವುದು ಅನಿವಾರ್ಯ. ಈ ಅಲೆದಾಟವನ್ನು ತಪ್ಪಿಸುವ ಸಲುವಾಗಿ ಕೊಚ್ಚಿ ಮೂಲದ ಸಾಫ್ಟ್‌ವೇರ್‌ ಸಂಸ್ಥೆಯೊಂದು  ವಿದೇಶಿ ಕರೆನ್ಸಿಯನ್ನು ತಮ್ಮ ಮೊಬೈಲ್ ಫೋನ್ ಮೂಲಕವೇ ಬದಲಾಯಿಸಿಕೊಳ್ಳುವಂತಹ  ಎಕ್ಸ್ ಟ್ರಾವೆಲ್ ಮನಿ ಆ್ಯಪ್ ಅಭಿವೃದ್ಧಿಪಡಿಸಿದೆ.

ಈ ಆ್ಯಪ್ ಮೂಲಕ ವಿದೇಶಿ ಕರೆನ್ಸಿಯನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳಬಹುದು. ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳು, ಪ್ರವಾಸಿಗರು, ವ್ಯಾಪಾರಸ್ಥರು, ವಾಣಿಜ್ಯೋದ್ಯಮಿಗಳಿಗೆ  ಎಕ್ಸ್ ಟ್ರಾವೆಲ್ ಮನಿ ಆ್ಯಪ್ ತುಂಬಾ ಅನುಕೂಲವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಆಂಡ್ರಾಯ್ಡ್‌ ಫೋನ್‌ಗಳಲ್ಲಿ  ಈ ಆ್ಯಪ್ ಲಭ್ಯವಿದ್ದು ಮುಂದಿನ ದಿನಗಳಲ್ಲಿ ಐಒಎಸ್ ಮಾದರಿಯಲ್ಲೂ ಬಿಡುಗಡೆ ಮಾಡುವುದಾಗಿ ಇಎಕ್ಸ್ ಟ್ರಾವೆಲ್ ಮನಿ ಆ್ಯಪ್ ಕಂಪೆನಿ ತಿಳಿಸಿದೆ.

ಬಳಕೆದಾರರು ತಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಇಎಕ್ಸ್ ಟ್ರಾವೆಲ್ ಮನಿ ಆ್ಯಪ್ ಮುಖಾಂತರ ಹಣವನ್ನು ವಿನಿಮಯ ಮಾಡಿಕೊಳ್ಳಬಹುದು. ಬಳಕೆದಾರರು ಮೊದಲು ಈ ಆ್ಯಪ್  ಡೌನ್‌ಲೋಡ್‌ ಮಾಡಿಕೊಂಡ ನಂತರ ತಮ್ಮ ಇಮೇಲ್ ಅಥವಾ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಸಂಪರ್ಕ ಕಲ್ಪಿಸಿ ಹಣ ವಿನಿಮಯ ಮಾಡಿಕೊಳ್ಳಬಹುದು.

ಉದಾಹರಣೆಗೆ ಅಮೆರಿಕಕ್ಕೆ ತೆರಳಿದ ವ್ಯಕ್ತಿಯೊಬ್ಬರು ತಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಭಾರತದ ರೂಪಾಯಿಯನ್ನು ಮೊಬೈಲ್‌ನಲ್ಲಿಯೇ ಡಾಲರ್‌ಗೆ ಪರಿವರ್ತಿಸಿಕೊಂಡು  ಅಲ್ಲಿ ಬಳಸಬಹುದು ಎಂದು ಕಂಪೆನಿ ಹೇಳಿದೆ. 2017ರ ವೇಳೆಗೆ ಹತ್ತು ಲಕ್ಷ ಗ್ರಾಹಕರನ್ನು ಸೆಳೆಯುವ ಗುರಿ ಹಾಕಿಕೊಳ್ಳಲಾಗಿದೆ ಎಂದು   ಕಂಪೆನಿ ತಿಳಿಸಿದೆ. ಗೂಗಲ್ ಪ್ಲೇ ಸ್ಟೋರ್ : Extravelmoney App

***
ವಾಣಿಜ್ಯ ಮಾಹಿತಿಯ ಆ್ಯಪ್…

ವ್ಯಾಪಾರಸ್ಥರು ಮತ್ತು ಉದ್ಯಮಿಗಳಿಗೆ, ವಾಣಿಜ್ಯ ಚಟುವಟಿಕೆಗಳ ಮಾಹಿತಿಯನ್ನು ತ್ವರಿತವಾಗಿ ವಿನಿಮಯ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುವ ಸಲುವಾಗಿ ಇಸ್ರೇಲ್‌ನ ಸಾಫ್ಟ್‌ವೇರ್‌ ಸಂಸ್ಥೆಯೊಂದು ಇನ್್ಸರ್ಟ್ ಎಂಬ ಆ್ಯಪ್  ವಿನ್ಯಾಸ ಮಾಡಿದೆ. ಈ ಆ್ಯಪ್ ಅನ್ನು ಮುಂದಿನ ವರ್ಷದ ಫೆಬ್ರುವರಿ ತಿಂಗಳಲ್ಲಿ ಗೋವಾದಲ್ಲಿ ನಡೆಯಲಿರುವ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಇನ್್ಸರ್ಟ್ ಆ್ಯಪ್  ಕಂಪೆನಿ  ತಿಳಿಸಿದೆ.

ವಿಂಡೋಸ್,  ಆಂಡ್ರಾಯ್ಡ್‌  ಮತ್ತು ಐಒಎಸ್ ಮಾದರಿಯಲ್ಲಿ ಈ ಆ್ಯಪ್ ಲಭ್ಯವಿದೆ. ಬಳಕೆದಾರರು ವಾಣಿಜ್ಯ ಚಟುವಟಿಕೆಗೆ ಸಂಬಂಧಿಸಿದ ವಿಡಿಯೊ, ಚಿತ್ರಗಳು, ಬರಹ, ಗ್ರಾಫ್ ಸೇರಿದಂತೆ ಇತರೆ ಮಾಹಿತಿಯನ್ನು ತ್ವರಿತವಾಗಿ ವಿನಿಮಯ ಮಾಡಿಕೊಳ್ಳಬಹುದು. ಆಫ್‌ಲೈನ್‌ನಲ್ಲಿ ಇದ್ದಾಗಲೂ ಕಡತಗಳನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳುವ ಸೌಕರ್ಯವನ್ನು ಕಲ್ಪಿಸಲಾಗಿದೆ. ಹಾಗೆಯೇ ದೊಡ್ಡ ಗಾತ್ರದ ಕೋಡಿಂಗ್ ಸಂಕೇತಗಳನ್ನು  ಕಳುಹಿಸಬಹುದು ಎನ್ನುತ್ತಾರೆ ಆ್ಯಪ್ ವಿನ್ಯಾಸಕರು.

ಇನ್್ಸರ್ಟ್ ಆ್ಯಪ್ ಬಳಕೆದಾರರು ತಂಡಗಳನ್ನು ರಚನೆ ಮಾಡಿಕೊಂಡು ಸಂವಹನ ಮಾಡಬಹುದು. ವೈಯಕ್ತಿಕ ಖಾತೆಗಳನ್ನು ತೆರೆದು ಫೇಸ್‌ಬುಕ್‌ ಮತ್ತು ಟ್ವಿಟರ್ ಮಾದರಿಯಂತೆ ಬಳಕೆ ಮಾಡಬಹುದಾಗಿದೆ.  ಇದರಲ್ಲಿ ರೂಪಾಯಿ ವಿನಿಮಯ, ಷೇರುಪೇಟೆ ಸಮಾಚಾರ, ಪೇಟೆ ಮಾಹಿತಿ, ಚಿನ್ನ ಬೆಳ್ಳಿ ದರ ಸೇರಿದಂತೆ ವಾಣಿಜ್ಯ ಸುದ್ದಿಗಳನ್ನು ಉಚಿತವಾಗಿಯೇ ಪಡೆಯಬಹುದು.

ಒಟ್ಟಿನಲ್ಲಿ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಈ ಆ್ಯಪ್‌ನಲ್ಲಿ ಸಾಕಷ್ಟು ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಬರುವ ಫೆಬ್ರುವರಿಯಲ್ಲಿ ಈ ಆ್ಯಪ್ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಗೂಗಲ್ ಪ್ಲೇ ಸ್ಟೋರ್ : Insert App

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT