ADVERTISEMENT

ಗೂಗಲ್‌ನ ನೂತನ ಆಲೊ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST
ಗೂಗಲ್‌ನ ನೂತನ ಆಲೊ ಆ್ಯಪ್‌
ಗೂಗಲ್‌ನ ನೂತನ ಆಲೊ ಆ್ಯಪ್‌   

ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳು ಪ್ರಭಾವಶಾಲಿ ಮಾಧ್ಯಮಗಳಾಗಿ ಬೆಳೆಯುತ್ತಿದ್ದು  ಉತ್ತಮ ಲಾಭಾಂಶವನ್ನು ತಂದುಕೊಡುತ್ತಿವೆ. ಬಳಕೆದಾರರು ಹೆಚ್ಚಿದಂತೆ ದುಪ್ಪಟ್ಟು ಲಾಭ ಪಡೆಯಬಹುದು ಎಂಬ ಅಂಶವನ್ನು ಸಾಮಾಜಿಕ ಜಾಲತಾಣಗಳನ್ನು ವಿನ್ಯಾಸ ಮಾಡುತ್ತಿರುವ ಕಂಪೆನಿಗಳು ಮನಗಂಡಿವೆ.

ಫೇಸ್‌ಬುಕ್, ಸ್ಕೈಪ್, ಟ್ವಿಟರ್ ಈ ಹಾದಿಯಲ್ಲಿ ಹಲವಾರು ಹೊಸ ಪ್ರಯೋಗಗಳಿಗೆ ಮುಂದಾಗಿ ಬಳಕೆದಾರರನ್ನು ಸೆಳೆಯಲು ವಿವಿಧ ಕಸರತ್ತು ಮಾಡುತ್ತಿವೆ. ಇದೀಗ ವಿಶ್ವದ ದೈತ್ಯ ಅಂತರ್ಜಾಲ ಸಂಸ್ಥೆ ಗೂಗಲ್ ಕೂಡ ಸದ್ದಿಲ್ಲದೆ ಸಾಮಾಜಿಕ ಜಾಲತಾಣಗಳತ್ತ ಮುಖ ಮಾಡಿದ್ದು ಕಳೆದ ಮೂರು ತಿಂಗಳಲ್ಲಿ ವಿಡಿಯೊ ಕಾಲಿಂಗ್ ಮತ್ತು ಮೆಸೇಜಿಂಗ್ ಆ್ಯಪ್‌ಗಳನ್ನು  ಬಿಡುಗಡೆ ಮಾಡಿದೆ.

ಅದ್ಯಾಕೊ ಗೂಗಲ್ ಸಂಸ್ಥೆಗೂ ಮತ್ತು ಸಾಮಾಜಿಕ ಜಾಲತಾಣಗಳಿಗೂ ಸರಿ ಹೊಂದಿಕೆಯಾಗುತ್ತಿಲ್ಲ. ಏಕೆಂದರೆ ಕಳೆದೊಂದು ದಶಕದಲ್ಲಿ ಗೂಗಲ್ ಪರಿಚಯಿಸಿದ್ದ ಸಾಮಾಜಿಕ ತಾಣ ’ಆರ್ಕುಟ್’ ನೆಲೆ ನಿಲ್ಲಲಿಲ್ಲ.  ಫೇಸ್‌ಬುಕ್ ಮತ್ತು ಟ್ವಿಟರ್‌ ಪೈಪೋಟಿಯಿಂದಾಗಿ ಗ್ರಾಹಕರನ್ನು ಸೆಳೆಯಲು ವಿಫಲವಾಗಿ  ಅದನ್ನು ಮುಚ್ಚಿಯೇ ಬಿಟ್ಟಿತು. ನಂತರದ ದಿನಗಳಲ್ಲಿ ಗೂಗಲ್‌ ಪ್ಲಸ್ ಎಂಬ ಜಾಲತಾಣವನ್ನು ಆರಂಭಿಸಿದೆಯಾದರೂ ಅದಕ್ಕೂ ಕೂಡ ಜಾಗತಿಕವಾಗಿ ಹೆಚ್ಚಿನ ಬಳಕೆದಾರರಿಲ್ಲ! ಗೂಗಲ್ ಇತಿಹಾಸ ಏನೇ ಇದ್ದರೂ ಇದೀಗ ‘ಅಲೊ’ ಮೆಸೇಜಿಂಗ್ ಆ್ಯಪ್ ಅನ್ನು  ಪರಿಚಯಿಸುವ ಮೂಲಕ ಹೊಸ ವಿಕ್ರಮಕ್ಕೆ ನಾಂದಿ ಹಾಡಿದೆ.

ಮೆಸೇಂಜರ್ ಮತ್ತು ವಾಟ್ಸ್‌ಆ್ಯಪ್ ಮಾದರಿಯಲ್ಲಿ ಗೂಗಲ್  ರೂಪಿಸಿರುವ ಅಲೊ ಕೆಲಸ ಮಾಡುತ್ತದೆ. ಇದನ್ನು  ಭಾರತ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಗಳಲ್ಲಿ  ಬಿಡುಗಡೆ ಮಾಡುತ್ತಿರುವುದಾಗಿ ಗೂಗಲ್ ಸಂಸ್ಥೆಯ ವ್ಯವಸ್ಥಾಪಕ (ಉತ್ಪಾದನಾ ವಿಭಾಗ)ರಾದ ಅಮಿತ್ ಪೌಳಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೂಗಲ್‌, ಕಳೆದ ಮೇ ತಿಂಗಳಲ್ಲಿ ಡ್ಯುಯೊ ಎಂಬ ವಿಡಿಯೊ ಕಾಲಿಂಗ್ ಆ್ಯಪ್ ಬಿಡುಗಡೆ ಮಾಡಿದ ಬೆನ್ನಲೆ ಅಲೊ ಮೆಸೇಜಿಂಗ್‌ ಆ್ಯಪ್‌ ಬಿಡುಗಡೆ ಮಾಡುತ್ತಿರುವುದು ಸಾಮಾಜಿಕ ಜಾಲತಾಣ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಈ ಅಲೊ ಆ್ಯಪ್ ಕೂಡ ವಾಟ್ಸ್‌ಅಪ್ ಮತ್ತು ಮೆಸೇಂಜರ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ವೇಗದಲ್ಲಿ ಈ ಎರಡು ಆ್ಯಪ್‌ಗಳಿಗಿಂತಲೂ ಭಿನ್ನ ಎನ್ನುತ್ತಾರೆ ಅಮಿತ್. ಇದರಲ್ಲಿ ವಿಡಿಯೊ ಕಾಲಿಂಗ್ ಸೌಲಭ್ಯವನ್ನು  ಕಲ್ಪಿಸಿರುವುದು ವಿಶೇಷ.

ಭಾರತೀಯ ಬಳಕೆದಾರರಿಗಾಗಿ ಇದರಲ್ಲಿ ಹಲವಾರು ವಿಶೇಷತೆಗಳನ್ನು ರೂಪಿಸಿಲಾಗಿದೆ. 200ಕ್ಕೂ ಹೆಚ್ಚು ಸ್ಟಿಕ್ಕರ್‌ಗಳು, ಇಮೋಜಿಗಳನ್ನು  ಅಲೊ  ಒಳಗೊಂಡಿದೆ. ತ್ವರಿತ ಮೆಸೇಜಿಂಗ್ ಸೌಕರ್ಯವಿದ್ದು ಸುಲಭವಾಗಿ ವಿಡಿಯೊ ಮತ್ತು ಚಿತ್ರಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎನ್ನುತ್ತಾರೆ ಅಮಿತ್.

ಗೂಗಲ್‌ನ ಅಲೊ ಆ್ಯಪ್ ವಾಟ್ಸ್‌ಅಪ್ ಅಥವಾ ಮೆಸೆಂಜರ್‌ಗಿಂತಲೂ ಭಿನ್ನ ಅನುಭವ ಕೊಡುತ್ತದೆ. ಏಕಕಾಲದಲೇ ಮೂವರ ಜತೆ ಚಾಟ್ ಮಾಡುವ ಅವಕಾಶವಿದ್ದು ಬಳಕೆಯ ವೇಗವನ್ನು ಹೆಚ್ಚಿಸಲಾಗಿದೆ.

ಕುಟುಂಬ ಮತ್ತು ಗೆಳೆಯರ ಸಂಪರ್ಕಕ್ಕಾಗಿ ಕೆಲವು ಆಫ್‌ಲೈನ್  ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ಸದ್ಯಕ್ಕೆ ಅವುಗಳನ್ನು ಹೈಡ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆಫ್‌ಲೈನ್ ವಿಶೇಷತೆಗಳನ್ನು ಬಳಕೆದಾರರಿಗೆ ನೀಡಲಾಗುವುದು.

ಅಲೊ ಆ್ಯಪ್ ಆಂಡ್ರಾಯ್ಡ್‌ ಮತ್ತು ಐಒಸ್ ಪ್ಲಾಟ್‌ಫಾರಂನಲ್ಲಿ ಲಭ್ಯವಿದ್ದು, ಗೂಗಲ್ ಪ್ಲೆಸ್ಟೋರ್‌ನಲ್ಲಿ ಇದನ್ನು ಡೌನ್‌ಲೋಡ್ ಮಾಡಿಕೊಂಡು ಗ್ರಾಹಕರು ಸುಲಭವಾಗಿ ಬಳಸಬಹುದು ಎನ್ನುತ್ತಾರೆ ಅಮಿತ್.

ಒಟ್ಟಿನಲ್ಲಿ ಗೂಗಲ್ ಸಂಸ್ಥೆ ಸಾಮಾಜಿಕ ಜಾಲತಾಣಗಳನ್ನು ಪರಿಚಯಿಸುವುದು ಮತ್ತು ಅವುಗಳನ್ನು ಬಲವರ್ಧನೆಗೊಳಿಸಿ, ಗ್ರಾಹಕರನ್ನು ಸೆಳೆಯಲು ಹಲವಾರು ಕಸರತ್ತುಗಳನ್ನು ಮಾಡುತ್ತಿದೆ. ಗೂಗಲ್‌ನ ಈ ನಡೆ ಎದುರಾಳಿ ಸಂಸ್ಥೆಗಳಲ್ಲಿ ಹೊಸ ಸಂಚಲನ ಮೂಡಿಸಿರುವುದು ಸುಳ್ಳಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.