ADVERTISEMENT

ಗೋಡೆ ಕಟ್ಟುವ ಯಂತ್ರಮಾನವ!

ಸುಭಾಸ ಯಾದವಾಡ
Published 7 ಜುಲೈ 2015, 19:51 IST
Last Updated 7 ಜುಲೈ 2015, 19:51 IST

ಇದು ಅಂತಿಂತಹ ಯಂತ್ರವಲ್ಲ, ಇಟ್ಟಿಗೆಗಳನ್ನು ಜೋಡಿಸಿ ಮನೆ ಕಟ್ಟುವ ಯಂತ್ರ. ಹೆಸರು ಹ್ಯಾಡ್ರಿಯನ್!

ಹ್ಯಾಡ್ರಿಯನ್‌ ಒಂದು ಗಂಟೆಗೆ ಸಾವಿರ ಇಟ್ಟಿಗೆಗಳನ್ನು ಜೋಡಿಸಬಲ್ಲದು.  ಇಟ್ಟಿಗೆಗಳ ಮಧ್ಯ ಸಿಮೆಂಟ್‌ ಗಾರೆ ಹಾಕಿ ಅಚ್ಚುಕಟ್ಟಾಗಿ ಗೋಡೆಯನ್ನು ಕಟ್ಟಬಲ್ಲದು.  ದಿನದ 24 ಗಂಟೆ, ವಾರದ ಏಳೂ ದಿನ ಬಿಡುವಿಲ್ಲದೇ ಅದು ದುಡಿಯಬಲ್ಲದು!

ಒಂದು ಯಂತ್ರ, ಮನುಷ್ಯರಿಂದ ಯಾವುದೇ ಸಹಾಯವನ್ನೂ ಪಡೆಯದೇ, ಎರಡು ದಿನಕ್ಕೆಲ್ಲಾ ಒಂದು ಮನೆಯನ್ನು ಕಟ್ಟಿ ನಿಲ್ಲಿಸಬಲ್ಲದು!

ಇಟ್ಟಿಗೆಯಿಂದ ಗೋಡೆ ಕಟ್ಟುವುದು ಮಾತ್ರ ಈ ಯಂತ್ರದ ಕೆಲಸ.  ಆಮೇಲಿನ ಗಿಲಾವು, ಸುಣ್ಣ-ಬಣ್ಣ ಬಳಿಯುವುದು ಮೊದಲಾದ ಕೆಲಸಗಳನ್ನೆಲ್ಲಾ ಮನುಷ್ಯರೇ ಮಾಡಿಕೊಳ್ಳಬೇಕಾಗುತ್ತದೆ.ಇಟ್ಟಿಗೆಯಿಂದ ಮನೆ ಕಟ್ಟುವ ಪ್ರಕ್ರಿಯೆ ಕಳೆದ ಆರು ಸಾವಿರ ವರ್ಷಗಳಿಂದ ಜಾರಿಯಲ್ಲಿದೆ ಎಂಬ ಮಾಹಿತಿ ಇದೆ.

ಅಂದಿನಿಂದ ಇಂದಿನವರೆಗೆ ಗೋಡೆ ಕಟ್ಟುವ ವಿಧಾನದಲ್ಲಿ ಯಾವ ಪ್ರಮುಖ ಬದಲಾವಣೆಯೂ ಆಗಿಲ್ಲ.  ಇಟ್ಟಿಗೆಯನ್ನು ಒಂದರ ಮೇಲೆ ಒಂದನ್ನು ಇಟ್ಟು ಜೋಡಿಸುವ ನಿಧಾನಗತಿ ವಿಧಾನ ಈಗಲೂ ಮುಂದುವರೆದಿದೆ.ಆಮೆ ವೇಗದ ಕಟ್ಟುವಿಕೆಯನ್ನು ರಾಕೆಟ್ ವೇಗಕ್ಕೆ ಹೆಚ್ಚಿಸುವ ದೃಷ್ಟಿಯಿಂದ ಈ ಮಾನವ ಯಂತ್ರವನ್ನು ತಂತ್ರಜ್ಞರು ಅಭಿವೃದ್ಧಿಪಡಿಸಿದ್ದಾರಂತೆ!

ಗೋಡೆ ಕಟ್ಟುವ ಕಾರ್ಮಿಕರ ಉದ್ಯೋಗವನ್ನು ಕಸಿಯಲು ಈ ಯಂತ್ರವನ್ನೆನೂ ನಿರ್ಮಿಸಲಾಗಿಲ್ಲ.  ಮನೆ ಕಟ್ಟುವ ಕಾರ್ಯವನ್ನು ಚುರುಕುಗೊಳಿಸಲು ಹಾಗೂ ಕ್ರಮಬದ್ಧಗೊಳಿಸಲು ಈ ರೋಬೊವನ್ನು ಸಿದ್ಧಪಡಿಸಲಾಗಿದೆ ಎನ್ನುತ್ತಾರೆ ಇದರ ನಿರ್ಮಾತೃ ಪೈವ್ಯಾಕ್.ಈ ರೋಬೋಟ್‌ಗೆ 92 ಅಡಿ(28 ಮೀಟರ್) ಉದ್ದದ ಒಂದು ಕೈ ಇದೆ.  ಅದನ್ನು ಪ್ರಧಾನ ಯಂತ್ರಕ್ಕೆ ಜೋಡಿಸಲಾಗಿದೆ.  ಈ ಉದ್ದದ ಕೈಗೆ ಅನನ್ಯವಾದ ಕುಶಲತೆಯೂ ಇದೆ.

ಈ ಯಾಂತ್ರಿಕ ಅಜಾನುಬಾಹು ಪಕ್ಕದಲ್ಲಿರುವ ಇಟ್ಟಿಗೆಗಳನ್ನು ಸ್ವತಃ ಎತ್ತಿಕೊಂಡು, ಈ ಮೊದಲೇ ವಿನ್ಯಾಸಗೊಳಿಸಿದ ಸೂಚಿತ ಮಾದರಿಯಲ್ಲಿಯೇ ಇಟ್ಟಿಗೆಗಳನ್ನು ಜೋಡಿಸಿ ಅಚ್ಚುಕಟ್ಟಾದ ಗೋಡೆಯನ್ನು ನಿರ್ಮಿಸುತ್ತದೆ.ಈ ಯಂತ್ರ ಕೆಲಸ ಶುರು ಮಾಡುವ ಮೊದಲು, ಮೂರು ಆಯಾಮದ(3ಡಿ) ಕಂಪ್ಯೂಟರ್‌ ನಕ್ಷೆಯನ್ನು ಈ ರೋಬೊನ ಪ್ರಧಾನ ಯಂತ್ರಕ್ಕೆ ಪೂರೈಸಲಾಗುತ್ತದೆ.  ಆನಂತರ ಎಲ್ಲವನ್ನು ನಕ್ಷೆಯಂತೆ ಯಂತ್ರವೇ ನಿರ್ವಹಿಸಿಬಿಡುತ್ತದೆ. 

ಪ್ರತಿಯೊಂದು ಇಟ್ಟಿಗೆಯೂ, ಕೊಂಚ ಏರುಪೇರಿಲ್ಲದಂತೆ, ಪೂರ್ವ ನಿರ್ಧಾರಿತ ಸ್ಥಾನದಲ್ಲಿ ಜೋಡಣೆ ಆಗುತ್ತದೆ. ಹಾಗೆ ದೃಢವಾದ, ನೇರವಾದ ಗೋಡೆಗಳು ನಿರ್ಮಾಣವಾಗುತ್ತವೆ.ಗೋಡೆಗಳ ಮಧ್ಯೆ ವಿದ್ಯುತ್ ತಂತಿ ಕೊಳವೆ ಹಾಗೂ ನೀರಿನ ಕೊಳವೆಗಳನ್ನು ಅಳವಡಿಸಲು, ಗೋಡೆಗಳನ್ನು ಕೊರೆಯುವ ಕಾರ್ಯವನ್ನೂ ಈ ರೋಬೋಟ್ ಯಶಸ್ವಿಯಾಗಿ ನಿರ್ವಹಿಸುತ್ತದೆ. ಒಂದು ಯಂತ್ರ ಒಂದು ವರ್ಷದಲ್ಲಿ 150 ರಿಂದ 180 ಮನೆಗಳನ್ನು ನಿರ್ಮಿಸಬಲ್ಲದು ಎನ್ನುತ್ತಾರೆ ತಂತ್ರಜ್ಞರು!

ಇಂಥದೊಂದು ಯಂತ್ರವನ್ನು ನಿರ್ಮಿಸಲು ಹಾಕಿಕೊಂಡಿದ್ದಂತಹ 10 ವರ್ಷಗಳ ಯೋಜನೆ ಈಗ ಸಫಲವಾಗಿದೆ. 70 ಲಕ್ಷ ಡಾಲರ್ (ಸುಮಾರು ₹44.45 ಕೋಟಿ) ಇದಕ್ಕಾಗಿ ಖರ್ಚಾಗಿದೆ. ಆಸ್ಟ್ರೇಲಿಯಾದಲ್ಲಿ ನಿರ್ಮಾಣಗೊಂಡ ಈ ಗೋಡೆ ಕಟ್ಟುವ ಕಾರ್ಮಿಕ ಯಂತ್ರ ಮೊಟ್ಟಮೊದಲು ಆ ದೇಶದ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.  ನಂತರ ಬೇರೆ ದೇಶದ  ಮಾರುಕಟ್ಟೆಗಳಿಗೂ ಬರಲಿದೆ ಎಂದು ಅದರ ಸಂಶೋಧಕ ಪೈವ್ಯಾಕ್ ಹೇಳುತ್ತಾರೆ. ಸ್ವಂತ ಮನೆಯನ್ನು ಬಹಳ ಬೇಗ ಹೊಂದಬೇಕು ಎನ್ನುವವರ ಕನಸನ್ನು ಈ ಹೊಸ ರೋಬೊ ಅಷ್ಟೇ ವೇಗವಾಗಿ ನನಸು ಮಾಡುತ್ತದೆಯೇನೋ? ಕಾಯ್ದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.