ADVERTISEMENT

ಡ್ರೈವ್‌ ನಿರ್ವಹಣೆಗೂ ಇರಲಿ ಗಮನ

ದಯಾನಂದ ಎಚ್‌.ಎಚ್‌.
Published 16 ಮಾರ್ಚ್ 2017, 6:29 IST
Last Updated 16 ಮಾರ್ಚ್ 2017, 6:29 IST

ಕ್ಲೌಡ್‌ ಕಂಪ್ಯೂಟಿಂಗ್‌ ಹೆಚ್ಚಾದಂತೆಲ್ಲಾ ಡೇಟಾ ಎಂಬುದು ಡಿವೈಸ್‌ಗಳಿಂದ ಕ್ಲೌಡ್‌ಗೆ ವರ್ಗಾವಣೆಗೊಳ್ಳುವುದು ಹೆಚ್ಚಾಗುತ್ತಿದೆ. ಕ್ಲೌಡ್‌ ಕಂಪ್ಯೂಟಿಂಗ್‌ ಎಂದರೆ ಏನೆಂದು ಗೊತ್ತಿಲ್ಲದವರೂ ಕೂಡ ಅದನ್ನು ಬಳಸುತ್ತಿರುತ್ತಾರೆ! ನೀವು ಯಾವುದೇ ಇಮೇಲ್‌ ಐಡಿ ಹೊಂದಿದ್ದೀರಿ ಎಂದಾದರೆ ನೀವು ಕ್ಲೌಡ್‌ ಕಂಪ್ಯೂಟಿಂಗ್‌ ಬಳಕೆದಾರರು ಎಂದೇ ಅರ್ಥ.

ನಿಮ್ಮ ಮೊಬೈಲ್‌, ಟ್ಯಾಬ್‌ನಲ್ಲಿ ಆಟೊ ಸಿಂಕ್‌ ಸೆಟ್ಟಿಂಗ್‌ ಮಾಡಿದ್ದರೆ ಅಲ್ಲಿನ ಡೇಟಾ ಕ್ಲೌಡ್‌ನಲ್ಲಿ ಸೇವ್‌ ಆಗುತ್ತಿರುತ್ತದೆ. ನಿಮ್ಮ ಡಿವೈಸ್‌ನಲ್ಲಿರುವ ಫೋಟೊಗಳು ನೀವು ಬಳಸುವ ಇಮೇಲ್‌ಗೆ ಹೊಂದಿಕೊಂಡಿರುವ ಡ್ರೈವ್‌ನಲ್ಲಿ ಸೇವ್‌ ಆಗುತ್ತಿರುತ್ತವೆ.

ನೀವು ಕಳಿಸುವ ಹಾಗೂ ನಿಮ್ಮ ಇನ್‌ಬಾಕ್ಸ್‌ಗೆ ಬರುವ ಇಮೇಲ್‌ಗಳು ಕೂಡ ಕ್ಲೌಡ್‌ನಲ್ಲಿರುತ್ತವೆ. ಎಲ್ಲಿಯವರೆಗೂ ನೀವು ಈ ಡೇಟಾ ಡಿಲೀಟ್‌ ಮಾಡುವುದಿಲ್ಲವೋ ಅಲ್ಲಿಯವರೆಗೂ ಅವು ಆಯಾ ಸೇವಾದಾರರ ಸರ್ವರ್‌ನಲ್ಲಿ ಸುರಕ್ಷಿತವಾಗಿರುತ್ತವೆ.

ಜಿಮೇಲ್‌, ಗೂಗಲ್‌ ಡ್ರೈವ್‌, ಗೂಗಲ್‌ ಫೋಟೊಸ್‌ ಸೇರಿದಂತೆ ಗೂಗಲ್‌ ಸದ್ಯ 15 ಜಿಬಿ ಉಚಿತ ಸ್ಟೋರೇಜ್ ನೀಡುತ್ತಿದೆ. ಗೂಗಲ್‌ ಅಕೌಂಟ್‌ ಹೊಂದಿರುವ ಎಲ್ಲರೂ ಗೂಗಲ್‌ ಡ್ರೈವ್‌ ಬಳಕೆ ಮಾಡಬಹುದು. ಯಾಹೂ ಗೂಗಲ್‌ಗಿಂತ ಸ್ವಲ್ಪ ಹೆಚ್ಚೇ ಉದಾರವಾಗಿ 1 ಟಿಬಿ (1000 ಜಿಬಿ) ಸ್ಟೋರೇಜ್‌ ಉಚಿತವಾಗಿ ನೀಡುತ್ತಿದೆ. ಈ ಕ್ಲೌಡ್‌ ಸ್ಟೋರೇಜ್‌ನಲ್ಲಿ ನೀವು ನಿಮ್ಮ ಅತಿಮುಖ್ಯ ಡೇಟಾ ಸೇವ್‌ ಮಾಡಿಕೊಳ್ಳಬಹುದು. ಆದರೆ ನಿಜವಾದ ಸಮಸ್ಯೆ ಇರುವುದು ಈ ಡ್ರೈವ್‌ ಸ್ಟೋರೇಜ್‌ ನಿರ್ವಹಣೆ ಮಾಡುವುದರಲ್ಲಿ.

ಪ್ರತಿದಿನ ಇನ್‌ಬಾಕ್ಸ್‌ಗೆ ಬಂದು ಬೀಳುವ ನೂರಾರು ಇಮೇಲ್‌ಗಳು, ನಿಮ್ಮ ಡಿವೈಸ್‌ನಿಂದ ಆಟೊ ಸಿಂಕ್‌ ಆಗುತ್ತಿರುವ ಫೋಟೊಗಳು, ನೀವು ಡ್ರೈವ್‌ಗೆ ಅಪ್‌ಲೋಡ್‌ ಮಾಡಿದ ಡೇಟಾ ಇವೆಲ್ಲಾ ದಿನ ಕಳೆದಂತೆ ಸ್ಟೋರೇಜ್‌ನಲ್ಲಿ ರಾಶಿಯಾಗುತ್ತಾ ಹೋಗುತ್ತಿರುತ್ತವೆ. ಈ ರಾಶಿಯನ್ನು ಸರಿಯಾಗಿ ನಿರ್ವಹಣೆ ಮಾಡದೇ ಇದ್ದರೆ ಮುಂದೊಂದು ದಿನ ಈ ಸ್ಟೋರೇಜ್‌ನಲ್ಲಿ ಇರುವ ಡೇಟಾ ಹುಡುಕುವುದೇ ದೊಡ್ಡ ತಲೆನೋವಾಗಿ ಕಾಡಬಹುದು.

ಸ್ಟೋರೇಜ್‌ ನಿರ್ವಹಣೆಗಾಗಿ ಮೊದಲು ನಿಮ್ಮ ಇಮೇಲ್‌ ಅಕೌಂಟ್‌ ನಿರ್ವಹಣೆ ಸರಿಯಾಗಿ ಮಾಡಿ. ಪ್ರತಿನಿತ್ಯ ಬರುವ ಮೇಲ್‌ಗಳಲ್ಲಿ ಅತಿ ಮುಖ್ಯವಾದುವನ್ನು ಉಳಿಸಿಕೊಂಡು ಉಳಿದೆಲ್ಲಾ ಮೇಲ್‌ಗಳನ್ನು ಡಿಲೀಟ್‌ ಮಾಡಿ. ಪ್ರೊಮೋಷನ್‌, ಅಪ್‌ಡೇಟ್ಸ್‌ ಮೇಲ್‌ಗಳನ್ನು ಅಂದಂದೇ ನೋಡಿ ಖಾಲಿ ಮಾಡಿ.

ಡ್ರೈವ್‌ನಲ್ಲಿ ವರ್ಷ ಮತ್ತು ಅದರೊಳಗೆ ತಿಂಗಳಿನ ಫೋಲ್ಡರ್‌ಗಳನ್ನು ಕ್ರಿಯೇಟ್‌ ಮಾಡಿ. ಅಲ್ಲಿ ಆಯಾ ಡೇಟಾ ಸೇವ್‌ ಮಾಡುತ್ತಾ ಬನ್ನಿ. ಡ್ರೈವ್‌ನಲ್ಲಿ ಆಟೊ ಸಿಂಕ್‌ ಆಗಿ ಸೇವ್‌ ಆಗಿರುವ ಫೋಟೊಗಳಲ್ಲಿ ನಿಮಗೆ ಯಾವ್ಯಾವ ಫೋಟೊಗಳು ಬೇಡವೋ ಅವನ್ನೆಲ್ಲಾ ಡಿಲೀಟ್‌ ಮಾಡಿ.

ಡ್ರೈವ್‌ನಲ್ಲಿರುವ ಅನಗತ್ಯ ಡಾಕ್ಯುಮೆಂಟ್‌ ಫೈಲ್‌ಗಳು, ಬೇಕಿಲ್ಲದ ಆಡಿಯೊ, ವಿಡಿಯೊ ಫೈಲ್‌ಗಳನ್ನೆಲ್ಲಾ ಡಿಲೀಟ್‌ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಡ್ರೈವ್‌ ಸ್ಟೋರೇಜ್‌ ನಿರ್ವಹಣೆ ಸುಲಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT