ADVERTISEMENT

ತಂತ್ರಜ್ಞಾನ ಬದಲಾದ ಆಯ್ಕೆಗಳು

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 19:30 IST
Last Updated 30 ಜೂನ್ 2015, 19:30 IST

ಇಂದು ಎಲ್ಲವೂ ಡಿಜಿಟಲ್‌ ಮಯವಾಗುತ್ತಿದೆ. ಮಾಹಿತಿಗಳ ಸಂಗ್ರಹಕ್ಕೂ ಡಿಜಿಟಲ್‌ ಲಾಕರ್‌ ಬಂದಿದೆ.  ಇಷ್ಟೇ ಏಕೆ, ಜಾತಿ, ಆದಾಯ ಪ್ರಮಾಣಪತ್ರಗಳೂ ಡಿಜಿಟಲ್‌ ರೂಪದಲ್ಲಿ ಸಿಗಲಾರಂಭಿಸಿವೆ...

ಸಿನಿಮಾ ಜಗತ್ತನ್ನೇ ಗಮನಿಸುವುದಾದರೆ, ಡಿಜಿಟಲ್‌ಗೂ ಮುಂಚೆ ವಿಡಿಯೊ ಎಂದರೆ ನೆನಪಾಗುವುದು ಕ್ಯಾಸೆಟ್‌ಗಳು. ರಜೆ ಕಳೆಯಬೇಕು ಎಂದರೆ ವಿಡಿಯೊ ಅಂಗಡಿಯಿಂದ ವಿಸಿಪಿ/ವಿಸಿಆರ್‌ ಬಾಡಿಗೆಗೆ ತಂದು ಸಿನಿಮಾ ನೋಡಬೇಕಿತ್ತು. ಡಿಜಿಟಲೀಕರಣಕ್ಕೆ ತೆರೆದು ಕೊಂಡಂತೆಲ್ಲಾ ಸಿನಿಮಾ ವೀಕ್ಷಣೆ ಸುಲಭವಾಗುತ್ತಾ ಹೋಯಿತು. ಕ್ಯಾಸೆಟ್‌ ಜಾಗದಲ್ಲಿ ಸಿಡಿ/ಡಿವಿಡಿ ಬಳಕೆ ಹೆಚ್ಚುತ್ತಾ ಹೋಯಿತು.

ಇದೀಗ ಹೆಚ್ಚು ಹೆಚ್ಚು ಅಂತರ್ಜಾಲ ಬಳಕೆ ಆಗುತ್ತಿರುವುದರಿಂದ ಸಿಡಿ/ಡಿವಿಡಿ ಬಳಕೆಯೂ ಕಡಿಮೆಯಾಗುತ್ತಿದೆ. ಜನರು ಮಳಿಗೆಗೆ ಹೋಗಿ ಡಿವಿಡಿ ಖರೀದಿಸಿ ಸಿನಿಮಾ ನೋಡುವುದು ವಿರಳವಾಗಿದೆ. ಮೊಬೈಲಿನಲ್ಲಿಯೇ ಯೂಟ್ಯೂಬ್‌ ನಲ್ಲಿ ಯಾವಾಗ, ಎಲ್ಲಿ ಬೇಕಿದ್ದರೂ ಸಿನಿಮಾ ನೋಡುವಂತಾಗಿರುವುದೇ ಇದಕ್ಕೆ ಮುಖ್ಯ ಕಾರಣ.

ನಕಲಿ ಡಿವಿಡಿ ಮಾರಾಟ: ಒಂದೆಡೆ ಸಿಡಿ/ಡಿವಿಡಿ ಬಳಕೆ ಕಡಿಮೆ ಯಾಗುತ್ತಿರುವುದು ಉದ್ಯಮವನ್ನು ಆತಂಕಕ್ಕೆ ದೂಡಿದ್ದರೆ, ಇನ್ನೊಂದೆಡೆ, ನಕಲಿ ಸಿಡಿ/ಡಿವಿಡಿಗಳ ಮಾರಾಟ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಭಾರತದಲ್ಲಿ ಡಿವಿಡಿ ಮಾರುಕಟ್ಟೆ ವ್ಯವಸ್ಥಿತವಾಗಿಲ್ಲ. ಹೀಗಾಗಿ  ಪೈರೇಟೆಡ್ ಡಿವಿಡಿ ಮತ್ತು ಸಿಡಿ ಮಾರಾಟ ಹೆಚ್ಚಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ರೆಕಾರ್ಡ್ ಮಾಡುವುದು,  ಮೂಲ ಕಾಪಿಯನ್ನು ನಕಲು ಮಾಡಿ ಮಾರಾಟ ನಿಯಂತ್ರಣ ಸಿಡಿ/ಡಿವಿಡಿ ಉದ್ಯಮ ಮತ್ತು ಸಿನಿಮಾ ರಂಗಕ್ಕೆ ದೊಡ್ಡ ತಲೆನೋವಾಗಿದೆ.

ಭಾರತೀಯ ನೀತಿ ಸಂಹಿತೆಯನ್ವಯ ಪೈರೇಟೆಡ್ ಡಿವಿಡಿ ಮತ್ತು ಸೀಡಿ ಮಾಡಿ ಮಾರಾಟ ಮಾಡುವುದು ಅಕ್ರಮ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಆದರೆ, ನಕಲಿ ಸಿಡಿ/ಡಿವಿಡಿ ಮಾರಾಟ ಒಂದು ಮಾಫಿಯಾ ಅಗಿ ಬೆಳೆದಿರುವುದರಿಂದ ಸಂಪೂರ್ಣ ನಾಶ ಪಡಿಸುವುದೂ ಕಷ್ಟವಾಗುತ್ತಿದೆ ಎನ್ನುತ್ತದೆ ಡಿಜಿಟಲ್ ಎಂಟರ್ ಟೈನ್ ಮೆಂಟ್ ಗ್ರೂಪ್ (ಡಿಇಜಿ) ಅಧ್ಯಯನ.

ಅಂತರ್ಜಾಲ ಬಳಕೆ ಜನಪ್ರಿಯತೆ ಪಡೆಯಲಾರಂಭಿಸುತ್ತಿದ್ದಂತೆಯೇ ಡಿವಿಡಿ ಉದ್ಯಮ ಮಂಕಾಗತೊಡಗಿತು. ಆನ್ ಲೈನ್ ಪೈರಸಿ, ಇಂಟರ್‌ನೆಟ್‌ ಸ್ಟ್ರೀಮಿಂಗ್ ಸರ್ವೀಸಸ್, ಹೈ ಸ್ಪೀಡ್ ಬ್ರಾಡ್ ಬ್ಯಾಂಡ್ ಕನೆಕ್ಷನ್ಸ್ ಡಿವಿಡಿ ಬಳಕೆ ತಗ್ಗುವಂತೆ ಮಾಡಿದೆ.

ಕಳೆದ ಕೆಲವು ವರ್ಷಗಳಿಂದ ಡಿವಿಡಿ ಉದ್ಯಮ ಶೇ 50ರಿಂದ ಶೇ 70ರಷ್ಟು ಕುಸಿಯುತ್ತಿದೆ. 2013ರಲ್ಲಿ ₨400 ಕೋಟಿ ಯಷ್ಟಿದ್ದಿದ್ದು, 2014ರಲ್ಲಿ ₨200 ಕೋಟಿಗೆ ಇಳಿದಿದೆ. ಭಾರತದಲ್ಲಷ್ಟೇ ಅಲ್ಲ ಜಾಗತಿಕ ಮಾರುಕಟ್ಟೆಯಲ್ಲಿಯೂ ಮನೆಗಳಲ್ಲಿ ವಿಡಿಯೊ ಬಳಕೆ ಕ್ರಮೇಣ ಕಳೆದೆರಡು ವರ್ಷಗಳಿಂದೀಚೆಗೆ ತಗ್ಗುತ್ತಿದೆ ಎಂದು ಡಿಇಜಿ ಮಾಹಿತಿ ನೀಡಿದೆ.

ಹಣಕಾಸಿನ ಕೊರತೆಯಿಂದ ಮೋಸರ್ ಬೇರ್, ಪೆನ್ ಇಂಡಿಯಾ ಈಗಾಗಲೇ ತಮ್ಮ ಹೋಮ್ ವಿಡಿಯೊ ಆಪರೇಷನ್ ನಿಲ್ಲಿಸಿವೆ. ಪ್ರಮುಖ ಕಂಪೆನಿ ಶೆಮರೂ ಡಿಜಿಟಲ್ ಕಡೆಗೆ ಹೊರಳಿದೆ. ಜಾಗತಿಕ ಮಟ್ಟದಲ್ಲಿ ಬ್ಲಾಕ್ ಬಸ್ಟರ್, ಅಮೆರಿಕ, ಇಂಗ್ಲೆಂಡ್‌ನಲ್ಲಿದ್ದ ತನ್ನ ಮಳಿಗೆಗಳನ್ನು ಮುಚ್ಚಿದೆ.

ಡಿಟಿಎಚ್ ಜತೆ ಒಪ್ಪಂದ ಮಾಡಿ ಕೊಂಡಿರುವುದರಿಂದ ಮೂವೀಸ್ ಆನ್ ಡಿಮಾಂಡ್ ಶೇ 100ರಷ್ಟು ಪ್ರಗತಿ ಸಾಧಿಸುತ್ತಿದೆ. ಇಷ್ಟೇ ಅಲ್ಲ, ಡಿವಿಡಿಗೆ ಪರ್ಯಾಯವಾಗಿ ಗ್ರಾಹಕರನ್ನು ಸೆಳೆಯುವಲ್ಲಿಯೂ ಸಾಕಷ್ಟು ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.