ADVERTISEMENT

ದಿನಪತ್ರಿಕೆಗಳ ‘ಪೇಪರ್‌ ಬಾಯ್’ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 19:30 IST
Last Updated 5 ಸೆಪ್ಟೆಂಬರ್ 2017, 19:30 IST
ದಿನಪತ್ರಿಕೆಗಳ ‘ಪೇಪರ್‌ ಬಾಯ್’ ಆ್ಯಪ್‌
ದಿನಪತ್ರಿಕೆಗಳ ‘ಪೇಪರ್‌ ಬಾಯ್’ ಆ್ಯಪ್‌   

ದೇಶದ ಬಹುತೇಕ ಎಲ್ಲಾ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಬೆರಳ ತುದಿಯಲ್ಲೇ ಓದುವಂತಹ ಮೊಬೈಲ್ ಕಿರುತಂತ್ರಾಂಶ (ಆ್ಯಪ್) ಈಗ ಸಿದ್ಧಗೊಂಡು ಬಳಕೆಗೆ ಬಂದಿದೆ.

‘ಪೇಪರ್‌ ಬಾಯ್‍’ನ (Paperboy) ಸಂಸ್ಥಾಪಕರಾಗಿರುವ ಬೆಂಗಳೂರಿನ  ಜೊನ್ನಾ ವೆಂಕಟ ಕಾರ್ತೀಕ್‍ ರಾಜ್‌ ಅವರ ಕನಸು ಈಗ ನನಸಾಗಿದೆ. ಅವರು 15 ತಿಂಗಳ ಕಾಲ ಪಟ್ಟ ಪರಿಶ್ರಮಕ್ಕೆ ಈಗ ಫಲ ದೊರೆತಿದೆ.

‘ಪೇಪರ್‌ ಬಾಯ್‍’ ಮೊಬೈಲ್ ಆ್ಯಪ್‌ನಲ್ಲಿ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಕಾಲಕಾಲಕ್ಕೆ ಅಪ್‍ಲೋಡ್ ಮಾಡುವ ಮೂಲಕ ಓದುಗರಿಗೆ ಕೈಬೆರಳಲ್ಲೇ ಓದುವಂತಹ ಅವಕಾಶ ಕಲ್ಪಿಸುವ ವಿಶಿಷ್ಟ ವೇದಿಕೆ ಇದಾಗಿದೆ. ‘ಪೇಪರ್‌ ಬಾಯ್‍’ ಒಂದು ಬಹುಭಾಷೀಯ ವೇದಿಕೆಯಾಗಿದೆ. ಇಲ್ಲಿ ವೈಶಿಷ್ಟ್ಯಪೂರ್ಣವಾದ ನಿಯತಕಾಲಿಕೆಗಳು ಅಪ್‍ಲೋಡ್ ಆಗುವುದರಿಂದ ಇದೊಂದು ಸುದ್ದಿಗಳ ಕಣಜವೂ ಆಗಿದೆ. ಜಾಗತಿಕ ಮಟ್ಟದಲ್ಲಿ ಓದುಗರನ್ನು ಆಕರ್ಷಿಸುವ ಉದ್ದೇಶವನ್ನೂ ಈ ಆ್ಯಪ್‌ ಹೊಂದಿದೆ.

ADVERTISEMENT

ಅನೇಕರಿಗೆ ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ಹೊರಡುವ ಮುನ್ನ ಆಯಾ ದಿನದ ಸುದ್ದಿಗಳನ್ನು ಸಮಗ್ರವಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಅಂದಿನ ದಿನಪತ್ರಿಕೆಗಳನ್ನೆಲ್ಲ ಸಂಕ್ಪಿಪ್ತವಾಗಿ ನೋಡಲು, ಓದಲೂ ಆಗುವುದಿಲ್ಲ.  ದೇಶದಲ್ಲಿ ಪ್ರಕಟವಾಗುವ ದಿನಪತ್ರಿಕೆಗಳನ್ನೆಲ್ಲ ಒಂದೇ ಒಂದೇ ಕಿರುತಂತ್ರಾಂಶದಲ್ಲಿ ಓದಲು, ವೀಕ್ಷಿಸಲು ಸಾಧ್ಯವಾಗಿಸುವ ಸೌಲಭ್ಯ ಕಲ್ಪಿಸುವಲ್ಲಿ  ಕಾರ್ತಿಕ್‌ರಾಜ್‌ ಯಶಸ್ವಿಯಾಗಿದ್ದಾರೆ. ಇದಕ್ಕೆ ಅವರ ಪೋಷಕರೂ ಕೈಜೋಡಿಸಿದ್ದಾರೆ.

ಕೇವಲ ಇಬ್ಬರು ಸದಸ್ಯರೊಂದಿಗೆ ಆರಂಭವಾದ ಪೇಪರ್‍ಬಾಯ್, ಇಂದು 50 ಮಂದಿ ಯುವ ಸದಸ್ಯರನ್ನೊಳಗೊಂಡ ತಂಡವಾಗಿ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದೆ.

ದೇಶದ ಒಟ್ಟು ಜನಸಂಖ್ಯೆಯ ಶೇ 31.16 ರಷ್ಟು ಜನರು ನೆಲೆಸಿರುವ 2 ಮತ್ತು 3ನೇ ಹಂತದ ನಗರಗಳ ಮೇಲೆ ಹೆಚ್ಚು ಗಮನಹರಿಸಿರುವ ಪೇಪರ್‌ ಬಾಯ್‍, ಇಂತಹ ನಗರಗಳ ಪತ್ರಿಕೆಗಳೂ ಸೇರಿದಂತೆ ವೈವಿಧ್ಯಮಯ ಪ್ರಾದೇಶಿಕ ಪತ್ರಿಕೆಗಳನ್ನು ತನ್ನ ವೇದಿಕೆಯಡಿ ಈಗಾಗಲೇ ತಂದಿದೆ.

`ವೃತ್ತಪತ್ರಿಕೆಗಳ ಓದುವಿಕೆ ಮತ್ತು ಡಿಜಿಟಲ್ ಸಾಧನಗಳ ನಡುವೆ ಒಂದು ವಿಶಿಷ್ಟವಾದ ಸಂಬಂಧ ಇರುವುದನ್ನು ನಾನು ಗಮನಿಸಿದ್ದೆ. ಇದರ ಪರಿಣಾಮವಾಗಿಯೇ ನಾನು ಪೇಪರ್‌ ಬಾಯ್‍ ಪರಿಕಲ್ಪನೆ ಕಂಡುಕೊಂಡೆ. ನಾನು ಪ್ರವಾಸ ಮಾಡುವಾಗ ದೈನಂದಿನ ವೃತ್ತಪತ್ರಿಕೆಗಳನ್ನು ಓದಲು ಸಾಧ್ಯವಾಗುತ್ತಿರಲಿಲ್ಲ. ವೃತ್ತ ಪತ್ರಿಕೆಗಳನ್ನು ಓದುವುದನ್ನು ತಪ್ಪಿಸಿಕೊಳ್ಳಬಾರದು ಎಂಬ ಚಿಂತನೆ ಕಾರ್ಯರೂಪಕ್ಕೆ ತರಲು ಡಿಜಿಟಲ್ ಮಾಧ್ಯಮವೇ ಸೂಕ್ತ ಪರಿಹಾರ ಎಂದು ಭಾವಿಸಿ ಅದನ್ನು ಕಾರ್ಯರೂಪಕ್ಕೆ ತರಲಾಗಿದೆ’ ಎಂದು ಪೇಪರ್‍ಬಾಯ್‍ನ ಸಂಸ್ಥಾಪಕ ಜೊನ್ನಾ ವೆಂಕಟ ಕಾರ್ತೀಕ್ ರಾಜ್‌ ಹೇಳುತ್ತಾರೆ.

ಈ ಮೊಬೈಲ್ ಆ್ಯಪ್‍ನ ವಿಶೇಷವೆಂದರೆ ಇದರಲ್ಲಿ ಯಾವುದೇ ರೀತಿಯ ಪಾಪ್‍ಅಪ್ ಜಾಹೀರಾತುಗಳಿಗೆ ಅವಕಾಶ ಇಲ್ಲ. ಓದುಗ ಒಮ್ಮೆ ಡೌನ್‍ಲೋಡ್ ಮಾಡಿಕೊಂಡ ವೃತ್ತಪತ್ರಿಕೆಯನ್ನು ನಿರಾತಂಕವಾಗಿ ಓದಿ ಮುಗಿಸಬಹುದು. ಇದನ್ನು ಆನ್‍ಲೈನ್ ಮತ್ತು ಆಫ್‍ಲೈನ್ ಮೋಡ್‍ನಲ್ಲಿ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.