ADVERTISEMENT

ದೃಷ್ಟಿ ಭಾಗ್ಯ ನೀಡುವ ‘ಜೈವಿಕ ಕಣ್ಣು’

ಸಚ್ಚಿದಾನಂದ ಕುರಗುಂದ
Published 28 ಜುಲೈ 2015, 19:30 IST
Last Updated 28 ಜುಲೈ 2015, 19:30 IST

ಅಂಧರಿಗೆ ಜೈವಿಕ ತಂತ್ರಜ್ಞಾನದ ಕಣ್ಣು ಅಳವಡಿಸುವ ಮೂಲಕ ದೃಷ್ಟಿ ನೀಡುವ ಹೊಸ ಪ್ರಯೋಗವೊಂದು ಜಗತ್ತಿನಲ್ಲಿ ಪ್ರಥಮ ಬಾರಿ ಯಶಸ್ವಿಯಾಗಿದೆ. ದೃಷ್ಟಿ ಕಳೆದುಕೊಂಡವರಿಗೆ ಈ ಪ್ರಯೋಗ ದಾರಿದೀಪವಾಗಲಿದೆ ಎಂದೇ ನಿರೀಕ್ಷಿಸಲಾಗಿದೆ. 80 ವರ್ಷದ ವೃದ್ಧರೊಬ್ಬರಿಗೆ ಇದೀಗ ಜೈವಿಕ ತಂತ್ರಜ್ಞಾನದ ಕಣ್ಣು ಅಳವಡಿಸುವಲ್ಲಿ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ.

ದೃಷ್ಟಿಹೀನತೆ ಕೆಲವರಿಗೆ ವಯೋಸಹಜ ಸಮಸ್ಯೆಯಾದರೆ, ಕೆಲವರಿಗೆ ವಂಶವಾಹಿ ಆಗಿರಬಹುದು. ಜೀವನಶೈಲಿ ಪರಿಣಾಮವೂ ಇರಬಹುದು. ಬದುಕಿನುದ್ದಕ್ಕೂ ಜಗತ್ತಿನ ಆಗುಹೋಗುಗಳನ್ನು ಕಂಡವರಿಗೆ ದೃಷ್ಟಿಹೀನತೆಯಿಂದ ಮಾನಸಿಕವಾಗಿಯೂ ಕುಗ್ಗುವ ಸಾಧ್ಯತೆಗಳಿವೆ.

ಈ ಸಮಸ್ಯೆಯಿಂದ ನರಳುತ್ತಿರುವವರಿಗೆ ಈ ಪ್ರಯೋಗ ಹೊಸ ಆಶಾಕಿರಣ ಮೂಡಿಸಿದೆ ಎನ್ನುತ್ತಾರೆ ತಜ್ಞರು. ಜೈವಿಕ ಕಣ್ಣು ದೃಷ್ಟಿ ನೀಡುವ ಕೆಲಸ ಮಾಡುತ್ತದೆ. ಈ ಹೊಸ ತಂತ್ರಜ್ಞಾನದಲ್ಲಿ ದೃಷ್ಟಿಹೀನರಿಗೆ ಒಂದು ಉಪಕರಣ ಅಳವಡಿಸಲಾಗುತ್ತಿದೆ. ಈ ಉಪಕರಣವೇ ದೃಷ್ಟಿ ಸಮಸ್ಯೆಯನ್ನು ನಿವಾರಿಸುತ್ತದೆ.

ಬೆಳಕಿನ ಕಿರಣ ಗುರುತಿಸುವ, ‘ಮ್ಯಾಕ್ಯುಲರ್ ಡಿಜನರೇಷನ್ ಅಥವಾ ರೆಟಿನಿಟಿಸ್ ಪಿಗ್ಮೆಂಟೋಸ್‌’ ಮುಂತಾದ ದೃಷ್ಟಿ ಸಮಸ್ಯೆ ಹೊಂದಿದವರಿಗೆ ಈ ಉಪಕರಣ ನೆರವಾಗುತ್ತದೆ. ದೃಷ್ಟಿಹೀನರು ಹಾಕಿಕೊಳ್ಳುವ ಕನ್ನಡಕದಲ್ಲಿ ಅತಿ ಸಣ್ಣದಾದ ಕ್ಯಾಮೆರಾ ಅಳವಡಿಸಲಾಗುತ್ತದೆ.

ಈ ಕ್ಯಾಮೆರಾ ಸೆರೆ ಹಿಡಿಯುವ ದೃಶ್ಯಗಳನ್ನು ಈ ಉಪಕರಣದಲ್ಲಿನ ಎಲೆಕ್ಟ್ರೋಡ್‌ಗಳ ಮೂಲಕ ರೆಟಿನಾಗೆ ರವಾನಿಸಲಾಗುತ್ತದೆ. ರೆಟಿನಾ ಪರದೆಯ ಹಿಂಭಾಗದ ಕೋಶಗಳು ಬೆಳಕಿನ ಕಿರಣಗಳನ್ನು ಗುರುತಿಸಿ ಮಿದುಳಿಗೆ ಸಂದೇಶ ರವಾನಿಸುವ ಕಾರ್ಯವನ್ನು ಈ ತಂತ್ರಜ್ಞಾನದಲ್ಲಿ ಅಳವಡಿಸಲಾಗಿದೆ. ಕಣ್ಣಿನ ಒಳಪದರದಲ್ಲಿ ರೆಟಿನಾ ಇರುತ್ತದೆ. ಇದರ ಹಿಂದಿರುವ ಭಾಗ ಕಾರ್ಡಿಯಲ್. ಆ ಜಾಗದಲ್ಲಿ ಜೈವಿಕ ತಂತ್ರಜ್ಞಾನದ ಕಣ್ಣು ಜೋಡಿಸಲಾಗುತ್ತದೆ.

ಈ ಉಪಕರಣದಲ್ಲಿನ ವಿದ್ಯುತ್ ಶಕ್ತಿ ರೆಟಿನಾವನ್ನು ಉತ್ತೇಜಿಸುವುದರಿಂದ ವಸ್ತುಗಳನ್ನು ನೋಡಲು ಸಾಧ್ಯವಾಗುತ್ತದೆ. ಈ ಸಾಧನದ ಮೂಲಕ ಸಾಗುವ ವಿದ್ಯುತ್ ತರಂಗಗಳು  ರೆಟಿನಾವನ್ನು ಪ್ರಚೋದಿಸುತ್ತವೆ. ನಂತರ ಇವುಗಳು ಮೆದುಳಿಗೆ ಸಂಪರ್ಕಿಸಿ ತಾನು ಗ್ರಹಿಸಿದ ಚಿತ್ರವನ್ನು ಮೂಡಿಸುತ್ತವೆ. ಇದರಿಂದ ವಸ್ತುಗಳನ್ನು ಗುರುತಿಸಲು ಸಹಾಯವಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಮ್ಯಾಂಚೆಸ್ಟರ್‌ ಕಣ್ಣಿನ ಆಸ್ಪತ್ರೆಯಲ್ಲಿ ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಪೌಲೊ ಸ್ಟಂಗಾ ನೇತೃತ್ವದಲ್ಲಿ ನಾಲ್ಕು ಗಂಟೆಗಳ ಕಾಲ ರೇ ಫ್ಲೈನ್‌ ಎನ್ನುವವರಿಗೆ ಶಸ್ತ್ರಚಿಕಿತ್ಸೆ ಮಾಡಿ ಜೈವಿಕ ತಂತ್ರಜ್ಞಾನದ ಕಣ್ಣು ಅಳವಡಿಸಿದ್ದಾರೆ. ಇದರಿಂದ ಬಹುತೇಕ ಅಂಧತ್ವ ಆವರಿಸಿದ್ದ ಫ್ಲೈನ್‌ ಅವರಿಗೆ ಈಗ ದೃಷ್ಟಿ ಬಂದಿದ್ದು, ಅವರ ಬದುಕಲ್ಲಿಯೇ ಹೊಸ ಉತ್ಸಾಹ ಮೂಡಿದೆ. ಅವರೀಗ ಎಲ್ಲರಂತೆ ದೃಷ್ಟಿಭಾಗ್ಯ ಪಡೆದಿದ್ದಾರೆ.

‘ಈ ಜೈವಿಕ ಕಣ್ಣು ಅಳವಡಿಸಿದ ನಂತರ ಫ್ಲೈನ್‌ ಅವರ ದೃಷ್ಟಿ ಸಾಕಷ್ಟು ಸುಧಾರಿಸಿದೆ. ಅವರ ದೃಷ್ಟಿದೋಷ ಬಹುತೇಕ ನಿವಾರಣೆಯಾಗಿದೆ. ಈಗ ಅವರು ಎಲ್ಲ ವಸ್ತುಗಳನ್ನು ನೋಡುತ್ತಿದ್ದಾರೆ. ಈ ಪ್ರಯೋಗ ನಮಗೆ ಹುರುಪು ತುಂಬಿದೆ’ ಎಂದು ಪ್ರೊಫೆಸರ್‌ ಸ್ಟಂಗಾ ಹೇಳುತ್ತಾರೆ.

‘ವಯಸ್ಸಾದವರಿಗೆ ದೃಷ್ಟಿದೋಷ ಸಾಮಾನ್ಯ. ಆದರೆ ಚಿಕಿತ್ಸೆಯೂ ಕೆಲವು ಬಾರಿ ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಜೈವಿಕ ಕಣ್ಣು ಅಂಧರ ಬದುಕಿಗೆ ಬೆಳಕು ನೀಡುತ್ತದೆ. ಈ ತಂತ್ರಜ್ಞಾನ ಕಾಂತ್ರಿಕಾರಿ ಹೆಜ್ಜೆಯಾಗಿದೆ. ಅಂಧರ ಬದುಕನ್ನು ಬದಲಾಯಿಸುತ್ತದೆ. ಪ್ರಥಮ ಪ್ರಯೋಗ ಅತ್ಯಂತ ಯಶಸ್ವಿಯಾಗಿದೆ’ ಎಂದು ಸ್ಟಾಂಗಾ ಹೇಳುತ್ತಾರೆ.

ಜೈವಿಕ ತಂತ್ರಜ್ಞಾನ ಕ್ಷೇತ್ರ ಕಳೆದ ಎರಡು ದಶಕಗಳಿಂದ ಬಹುವೇಗವಾಗಿ ಬೆಳೆಯುತ್ತಿದೆ. ಇದೀಗ ಜೈವಿಕ ತಂತ್ರಜ್ಞಾನದ ಕಣ್ಣು ಅಥವಾ ಬಯಾನಿಕ್ ಐ ಕೂಡಾ ಆ ಪಟ್ಟಿಗೆ ಸೇರ್ಪಡೆಗೊಂಡಿದೆ. ಜೈವಿಕ ತಂತ್ರಜ್ಞಾನದ ಕಣ್ಣು ಕಸಿ ಮಾಡುವ ಮೂಲಕ ಹಲವು ಅಂಧರಿಗೆ ದೃಷ್ಟಿಭಾಗ್ಯ ನೀಡುವುದು ಸಾಧ್ಯವಿದೆ.

ಇತ್ತೀಚಿನ ಕೆಲವು ವರ್ಷಗಳಿಂದ ಜೈವಿಕ ತಂತ್ರಜ್ಞಾನದ ಕಣ್ಣು ಕಸಿ ಮಾಡುವ ಪ್ರಯೋಗ ಹಲವು ದೇಶಗಳನ್ನು ನಡೆಯುತ್ತಾ ಬಂದಿದೆ. ಆದರೆ, ಇದೇ ಪ್ರಥಮ ಬಾರಿ ಪರಿಣಾಮಕಾರಿಯಾಗಿ ಮತ್ತು ಯಶಸ್ವಿಯಾಗಿ ನಡೆದಿದೆ ಎಂದು ಮ್ಯಾಂಚೆಸ್ಟರ್‌ನ ವೈದ್ಯ ತಜ್ಞರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.