ADVERTISEMENT

ನಿಸ್ತಂತು ವಿದ್ಯುತ್‌ ಪೂರೈಕೆಗೆ ಟೆಸ್ಲಾ ಕಾಯಿಲ್‌

ವಿಶ್ವನಾಥ ಎಸ್.
Published 22 ಜುಲೈ 2014, 19:30 IST
Last Updated 22 ಜುಲೈ 2014, 19:30 IST

ನೀರು ಬಿಟ್ಟು ನೆಲದ ಮೇಲೆ ದೋಣಿ ಸಾಗದು, ನೆಲವ ಬಿಟ್ಟು ನೀರ ಮೇಲೆ ಬಂಡಿ ಓಡದು... ಹೊಂಬಿಸಿಲು ಚಿತ್ರದ ಈ ಸಾಲುಗಳು  ಸಾಧ್ಯಾ–ಸಾಧ್ಯತೆ ಕುರಿತಾಗಿ ಹೇಳುತ್ತವೆ. ಆದರೆ ಇಂದಿನ ಜಾಯಮಾನಕ್ಕೆ ಎಲ್ಲವೂ ಬದಲಾಗಿದೆ. ತಂತ್ರಜ್ಞಾನದ ಹೊಸ ಆವಿಷ್ಕಾರಗಳಿಂದ ಅಸಾಧ್ಯ ಎನಿಸಿದ ಅದೆಷ್ಟೋ ಸಂಗತಿಗಳು ಸಾಧ್ಯವಾಗಿವೆ. ಅಣು ಸಂವಹನ, ವಿದ್ಯುತ್‌ ಶೇಖರಣೆ, ನೀರಿನ ಮೇಲೆ ಬಂಡಿ ಓಡುವುದನ್ನೂ ಕಾಣುತ್ತಿದ್ದೇವೆ.

ಹೀಗಿರುವಾಗ ವೈರ್‌ (ನಿಸ್ತಂತು) ಇಲ್ಲದೆ  ವಿದ್ಯುತ್‌ ಸರಬರಾಜು ಏಕೆ ಸಾಧ್ಯವಿಲ್ಲ? ಸಾಧ್ಯವಾದರೆ ವಿದ್ಯುತ್‌ ಕಂಬ ಮುರಿದು ಬಿದ್ದು ಅಥವಾ ವಿದ್ಯುತ್‌ ತಂತಿ ತುಂಡಾಗಿ ವಿದ್ಯುತ್‌ ಸಂಪರ್ಕ ಇಲ್ಲದಂತಾಗುವ ಪರಿಸ್ಥಿತಿ ಉದ್ಭವಿಸುವುದಿಲ್ಲವಲ್ಲ ಎಂಬ ಯೋಜನೆ ಸುಳಿಯುತ್ತದೆ ಅಲ್ವಾ?

ಅಮೆರಿಕದ ತಂತ್ರಜ್ಞ ನಿಕೋಲಾ ಟೆಸ್ಲಾ ಅವರು ಕೂಡಾ ನಿಸ್ತಂತು ವಿದ್ಯುತ್‌ ಸರಬರಾಜು ಮಾಡುವ ಕನಸು ಕಂಡಿದ್ದರು. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ 1891ರಲ್ಲಿ ಕಾಯಿಲ್‌ (ವಿದ್ಯುತ್‌ ಹರಿಯುವ ಸುರುಳಿ ತಂತಿ) ತಯಾರಿಸಿ, ‘ಟೆಸ್ಲಾ ಕಾಯಿಲ್‌’ ಎಂಬ ಹೆಸರಿನಲ್ಲಿ ‘ಪೇಟೆಂಟ್‌’ (ಬೌದ್ಧಿಕ ಹಕ್ಕುಸ್ವಾಮ್ಯ) ಸಹ ಪಡೆದುಕೊಂಡಿದ್ದರು. ಹಲವು ರೀತಿಯ ಪ್ರಯೋಗ ನಡೆಸಿದ್ದರಾದರೂ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಸಾಧಿಸಲಾಗಿರಲಿಲ್ಲವಷ್ಟೆ.

ಆ ಟೆಸ್ಲಾ ಕಾಯಿಲನ್ನು ಆಧಾರವಾಗಿಟ್ಟುಕೊಂಡು ಷಿಕ್ಯಾಗೋದ ಇಲಿನಾಯ್ಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸ್ಟೀವ್‌ ವಾರ್ಡ್‌ ಮತ್ತು ಹಿರಿಯ ತಂತ್ರಜ್ಞ ಜೆಫ್‌ ಲಾರ್ಸನ್‌ ಅವರುಗಳು ‘ಅವಳಿ ಟೆಸ್ಲಾ ಕಾಯಿಲ್‌ ’ ರೂಪಿಸಿದ್ದಾರೆ. ಈ ಕಾಯಿಲ್‌ಗಳು 12 ಅಡಿ ದೂರದವರೆಗೂ ಯಾವುದೇ ತಂತಿ ಮಾರ್ಗದ ಸಂಪರ್ಕವಿಲ್ಲದೇ ವಿದ್ಯುಚ್ಛಕ್ತಿಯನ್ನು ಪ್ರವಹಿಸುವ ಸಾಮರ್ಥ್ಯ  ಹೊಂದಿವೆ.

ಇವರಿಬ್ಬರು ಟೆಸ್ಲಾ ಕಾಯಿಲ್‌ ಬಳಸಿಕೊಂಡಿದ್ದು ಸಂಗೀತದ ಉದ್ದೇಶಕ್ಕಾಗಿ. ಲ್ಯಾಪ್‌ಟಾಪ್‌ನಿಂದ ಸಂಕೇತ ಕಳುಹಿಸಿ ಕಾಯಿಲ್‌ನಿಂದ ವಿದ್ಯುತ್‌ ಕಿಡಿ ಹೊರಹೊಮ್ಮುವ ವ್ಯವಸ್ಥೆ ಮಾಡಲಾಯಿತು. ವಿದ್ಯುತ್‌ ಕಿಡಿಯ ಫ್ರೀಕ್ವೆನ್ಸಿ (ಆವರ್ತನ) ಏರಿಳಿತ ನಿಯಂತ್ರಿಸಿ  ಸಂಗೀತ ಸೃಷ್ಟಿಸುವ ಪ್ರಯೋಗ ನಡೆಸಿದರು.

ಟೆಸ್ಲಾ ಕಾಯಿಲ್‌
ನಿಕೋಲಾ ಟೆಸ್ಲ್‌ ಅವರ ‘ಟೆಸ್ಲಾ ಕಾಯಿಲ್‌’ ಪ್ರೈಮರಿ ಮತ್ತು ಸೆಕೆಂಡರಿ ಎಂದು ಎರಡು ಭಾಗಗಳನ್ನು ಹೊಂದಿವೆ.  ಪ್ರತಿ ಕಾಯಿಲ್‌ ಸಹ ಒಂದು ಕೆಪಾಸಿಟರನ್ನು (ವಿದ್ಯುತ್‌ ಸಂಚಯಕ) ಒಳಗೊಂಡಿರುತ್ತದೆ. ಈ ಕೆಪಾಸಿಟರ್‌ ಬ್ಯಾಟರಿಯಂತೆ ವಿದ್ಯುತ್‌ ಅನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತದೆ.

ಎರಡು ಕಾಯಿಲ್‌ಗಳನ್ನು ಮತ್ತು ಕೆಪಾಸಿಟರನ್ನು ಒಂದು ನಿರ್ದಿಷ್ಟ ಅಂತರದಲ್ಲಿ ಜೋಡಿಸಿಡಬೇಕು. ನಂತರ ಪ್ರೈಮರಿ ಕಾಯಿಲ್‌ಗೆ ಇಂಧನ ಮೂಲವನ್ನು ಸಂಪರ್ಕಗೊಳಿಸಬೇಕು.

ಈ ಕಾಯಿಲ್‌ನಲ್ಲಿ ವಿದ್ಯುತ್‌ ಸಂಗ್ರಹವಾಗಿ ಅದು ತನ್ನ ಸುತ್ತ ಕಾಂತೀಯ ಪ್ರದೇಶವನ್ನು ಸೃಷ್ಟಿಸುತ್ತದೆ. ಹೆಚ್ಚಿನ ಪ್ರಮಾಣ ವಿದ್ಯುತ್‌ ಸಂಗ್ರಹವಾಗುತ್ತಿದ್ದಂತೆಯೇ ಕಾಂತೀಯ ಕ್ಷೇತ್ರ ಪತನವಾಗಿ ಸೆಕೆಂಡರಿ ಕಾಯಿಲ್‌ನಲ್ಲಿ ವಿದ್ಯುತ್‌ ಉತ್ಪಾದನೆಯಾಗಿ ಕಿಡಿಗಳ ರೂಪದಲ್ಲಿ ಹೊರಹೊಮ್ಮುತ್ತದೆ.

ಅಂದರೆ ಪ್ರೈಮರಿ ಕಾಯಿಲ್‌ ವಿದ್ಯುಚ್ಛಕ್ತಿಯನ್ನು ಎಷ್ಟು ರಭಸವಾಗಿ ಬಿಟ್ಟುಕೊಡುತ್ತದೆಯೋ ಅಥವಾ ತಳ್ಳುತ್ತದೆಯೋ ಅಷ್ಟೂ ವೇಗದಲ್ಲಿ ಎರಡನೇ ಕಾಯಿಲ್‌ನಲ್ಲಿ ವಿದ್ಯುತ್‌ ಉತ್ಪಾದನೆ ಆಗುತ್ತದೆ. ಇದಕ್ಕೆ ಅತೀ ಹೆಚ್ಚು ಇಂಧನ ಮೂಲ ಬೇಕಾಗುತ್ತದೆ.

ಈ ಪ್ರಯತ್ನದ ಮುಂದಿನ ಭಾಗವೆಂಬಂತೆ ನ್ಯೂಯಾರ್ಕ್‌ನಲ್ಲಿ 1901ರಲ್ಲಿ  ವೈರ್‌ಲೆಸ್‌ ಪವರ್‌ ಟ್ರಾನ್ಸ್‌ಮಿಷನ್‌ ಟವರ್‌ ‘ವಾರ್ಡನ್‌ ಕ್ಲಿಫ್‌ ಟವರ್‌’ (ಟೆಸ್ಲಾ ಟವರ್‌ ಎಂದೂ ಕರೆಯಲಾಗುತ್ತದೆ) ನಿರ್ಮಿಸಿದ ಕೀರ್ತಿ ನಿಕೋಲಾ ಟೆಸ್ಲಾ ಅವರಿಗೆ ಸಲ್ಲುತ್ತದೆ. ಕಾರಣಾಂತರದಿಂದ ಪೂರ್ಣ ಪ್ರಮಾಣದಲ್ಲಿ ಇದು ಕಾರ್ಯಚರಣೆ ನಡೆಸಲಿಲ್ಲ. 1917ರಲ್ಲಿ ಈ ಟವರನ್ನು ನೆಲಸಮ ಮಾಡಲಾಯಿತು!

ಏನೇ ಇರಲಿ,  ಇಂಡಕ್ಷನ್‌ ಮೋಟಾರ್‌  ಮತ್ತು ಏರ್‌ ಕಂಡಿಷನರ್‌ (ಎಸಿ) ಆವಿಷ್ಕಾರಕ್ಕೆ ಕಾರಣವಾಗಿದ್ದು ಈ ಟೆಸ್ಲಾ ಕಾಯಿಲ್‌ ಎನ್ನುವುದನ್ನು  ಮರೆಯುವಂತಿಲ್ಲ.  ಒಂದು ಕಾಲಕ್ಕೆ ಪ್ರಮುಖ ಮಾಧ್ಯವಾಗಿದ್ದ ರೇಡಿಯೊದಲ್ಲಿ  ಟೆಸ್ಲಾ ಕಾಯಿಲ್‌ ಪಾತ್ರ ಮಹತ್ವವಾದದ್ದು.
ಟೆಸ್ಲಾ ಕಾಯಿಲ್‌ ಬಳಸಿಕೊಂಡೇ ಈ ರೇಡಿಯೊಗಳು ತರಂಗಗಳನ್ನು ಸೆಳೆದುಕೊಂಡು ಮಾಹಿತಿ ಬಿತ್ತರಿಸುತ್ತವೆ.      ಕಾಯಿಲ್‌ಗೆ ಹಾನಿಯಾದರೆ ಬಿತ್ತರವಾಗುವ ಕಾರ್ಯಕ್ರಮ ಸ್ವಷ್ಟವಾಗಿ ಕೇಳಿಸದು.

ನಿಕೋಲಾ ಟೆಸ್ಲಾ ಅವರ ನಿಸ್ತಂತು ವಿದ್ಯುತ್‌ ಸರಬರಾಜು ಪರಿಕಲ್ಪನೆ  ಪ್ರಾಯೋಗಿಕವಾಗಿ ಅನ್ವಯಿಸುವುದಿಲ್ಲ ಎಂಬ ವಾದವೂ ಇದೆ. ಹೀಗಿದ್ದರೂ  ಅವರ ಆವಿಷ್ಕಾರಗಳು ಇಂದಿಗೂ ಪ್ರಸ್ತತತೆ ಕಾಯ್ದುಕೊಂಡಿರುವುದು  ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಅವರಿಗಿದ್ದ ದೂರದೃಷ್ಟಿಯ ಸೂಚಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.