ADVERTISEMENT

ನೋವು ಶಮನಕ್ಕೆ ಹೊಸ ಸಾಧನ

ಗವಿ ಬ್ಯಾಳಿ
Published 21 ಜುಲೈ 2015, 19:51 IST
Last Updated 21 ಜುಲೈ 2015, 19:51 IST

ಚಿಕ್ಕವರಿದ್ದಾಗ ಬಿದ್ದು ಕೈ,ಕಾಲುಗಳಿಗೆ ಪೆಟ್ಟು ಮಾಡಿಕೊಂಡಾಗ ಅಜ್ಜಿ ಮನೆಯಲ್ಲಿದ್ದ ಹಳೆಯ ಬಟ್ಟೆಯ ತುಂಡನ್ನು ಒತ್ತಾಗಿ ಹಿಡಿದು ಹೆಂಚಿನಲ್ಲಿ ಕಾಯಿಸಿ ಮೆತ್ತಗೆ ನೋವಾದ ಜಾಗಕ್ಕೆ ಒತ್ತಿ ಶಾಖ ನೀಡಿದ್ದನ್ನು ಯಾರು ತಾನೆ ಮರೆಯಲು ಸಾಧ್ಯ? ಗೆಳೆಯರೊಂದಿಗಿನ ಕಿತ್ತಾಟದಲ್ಲಿ ನೆಲಕ್ಕೆ ಬಿದ್ದು ಮಾಡಿಕೊಂಡ ಮೊಣಕೈ ಗಾಯಕ್ಕೆ ಅಮ್ಮ ಕೊಟ್ಟಿದ್ದ ಉಪ್ಪಿನ ಕಾವಿನ ಶಮನ ನೆನಪಿನಿಂದಲೂ ಮಾಸಲು ಸಾಧ್ಯವಿಲ್ಲ.

ಹಿಂದಿನ ದಿನಮಾನಗಳಲ್ಲಿ ಚಿಕ್ಕಪುಟ್ಟ ಗಾಯ, ನೋವುಗಳಿಗೆ ಆಸ್ಪತ್ರೆಗಳಿಗೆ ಎಡತಾಕುವ ಪ್ರಮೇಯವೇ ಇರಲಿಲ್ಲ. ಮನೆಯಲ್ಲಿಯೇ ಮದ್ದು ಸಿದ್ಧವಾಗಿರುತಿತ್ತು. ಕಾಲ ಬೆರಳಿಗೆ ಆದ ಗಾಯಕ್ಕೆ ಉಚ್ಚೆಗಿಂತ ಬೇರೆ ಮದ್ದು ಇರಲಿಲ್ಲ. ಕಾಲಿನ ಗಾಯದ ಮೇಲೆ ಉಚ್ಚೆ ಹೋಯ್ದುಕೊಳ್ಳುವಂತೆ ಅಜ್ಜಂದಿರು ಹೇಳುತ್ತಿದ್ದರು. ಹಾಗೆ ಮಾಡಿದ ಎರಡೇ ದಿನಕ್ಕೆ ಗಾಯ ಮಾಯ. ಯಾವ ಮಲಾಮು, ಔಷಧ, ಮಾತ್ರೆ ಬೇಕಾಗಿರಲಿಲ್ಲ. ಬೆಳಿಗ್ಗೆ ಬಿಸಿ ಚಹಾ ತುಂಬಿದ ಲೋಟವನ್ನು ನೋವಿರುವ ಜಾಗಕ್ಕೆ ನಿಧಾನವಾಗಿ ತಾಕಿಸಿಕೊಂಡರೆ ಸಿಗುವ ಹಾಯ್‌ ಎನಿಸುತಿತ್ತು.

ಕಾಡುವ ರಬ್ಬರ್‌ ಚೀಲದ ನೆನಪು
ಬಹುತೇಕ ಶ್ರೀಮಂತರ ಮನೆಯ ಹಾಸಿಗೆಯ ದಿಂಬಿನಡಿ ತಿಳಿಗೆಂಪು ಅಥವಾ ಕೇಸರಿ ಬಣ್ಣದ ರಬ್ಬರ್‌ ಚೀಲ ಕಾಣುತಿತ್ತು. ಅದರೊಳಗೆ ಬಿಸಿನೀರು ತುಂಬಿ ಚೀಲದ ಬಾಯಿಗೆ ಬಿರುಡೆ ಸಿಕ್ಕಿಸಿ ಕತ್ತು, ಕಾಲು, ಮಂಡೆ ಗಾಯಕ್ಕೆ ಶಾಖ ಕೊಟ್ಟರೆ ನಿರಾಳ ಎನಿಸುತಿತ್ತು. ಕಫ, ದಮ್ಮು, ಕೆಮ್ಮು ರೋಗಿಗಳು ರಬ್ಬರ್‌ ಚೀಲವನ್ನು ಎದೆಯ ಮೇಲೆ  ಇಟ್ಟುಕೊಂಡರೆ ಕಫ ಕರಗುತಿತ್ತು.

ಕಾಲಕ್ರಮೇಣ ಕಾವು ಕೊಡುವ ಖರ್ಚಿಲ್ಲದ ಚಿಕಿತ್ಸೆ ಎಲ್ಲರಿಂದ ತಾತ್ಸಾರಕ್ಕೆ ಒಳಗಾಯಿತು. ಮಗು ಬಿದ್ದು ಕಾಲಿಗೆ ಪುಟ್ಟ ಗಾಯ ಮಾಡಿಕೊಂಡರೂ ಪೋಷಕರು ಆತಂಕದಿಂದ ಹೈಟೆಕ್‌ ಆಸ್ಪತ್ರೆಗೆ ಧಾವಿಸುವ ಕಾಲ ಇದು. ಅಲ್ಲಿ ವೈದ್ಯರು ಎಕ್ಸ್‌ರೇ ಅದು, ಇದೂ ನೂರೆಂಟು ಪರೀಕ್ಷೆ ಮಾಡಿ ಮಗುವಿನ ಕೈಗೊಂದು ಕಾವಿ ಬಣ್ಣದ ಪಟ್ಟಿ ಸುತ್ತಿ ಕಳಿಸುತ್ತಾರೆ. ಮಾರುದ್ಧದ ಔಷಧ ಚೀಟಿ ಬರೆದು ಕೈಯಲ್ಲಿಡುತ್ತಾರೆ. ಎಲ್ಲ ಮುಗಿಯುವ ಹೊತ್ತಿಗೆ ಜೇಬಿನಿಂದ ಏನಿಲ್ಲವೆಂದರೂ ಸಾವಿರ ರೂಪಾಯಿ ಖಾಲಿ.

ಮತ್ತೆ ಕುದುರಿದ ಬೇಡಿಕೆ
ಪುರಾತನ ಶಾಖ ಕೊಡುವ ಚಿಕಿತ್ಸೆಗೆ ಮರಳಿ ಬೇಡಿಕೆ ಕುದುರಿದೆ. ಏಟು ಬಿದ್ದ ದೇಹದ ಅಂಗಾಂಗಗಳಿಗೆ ಕಾವು ಕೊಟ್ಟು ಉಪಶಮನ ಮಾಡುವ ವಿಧಾನವನ್ನೇ ಆಧಾರವಾಗಿಟ್ಟುಕೊಂಡು ಕೊರಿಯಾ ಮತ್ತು ಅಮೆರಿಕ ವಿಜ್ಞಾನಿಗಳು ಹೊಸ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಬ್ಯಾಟರಿಯ ನೆರವಿನಿಂದ ಬಿಸಿಯಾಗುವ ತೆಳುವಾದ ಲೋಹದ ಹಾಳೆಯಂಥ ಸಾಧನವನ್ನು ಪೆಟ್ಟಾದ ದೇಹದ ಭಾಗದ  ಸುತ್ತ ಸುತ್ತಿಕೊಳ್ಳಬೇಕು. (ರಕ್ತದೊತ್ತಡ ಅಳೆಯುವಾಗ ತೋಳುಗಳಿಗೆ ಸುತ್ತಿಕೊಳ್ಳುವ ಸುರುಳಿಯಂತೆ )ನಂತರ ಬ್ಯಾಟರಿಯ ಗುಂಡಿಯನ್ನು ಅಮಕಿದರೆ ಸಾಕು. ಪಟ್ಟಿ ನಿಧಾನವಾಗಿ ಬಿಸಿಯಾಗ ತೊಡಗುತ್ತದೆ. ಬೇಕಾದಷ್ಟು ಶಾಖ ಹೊರ ಹೊಮ್ಮಿ ಉಪಶಮನ ನೀಡುತ್ತದೆ.

ಗುಂಡಿ ಅಮಕಿದರೆ ಸಾಕು
ವಿದ್ಯುತ್‌ ಇಸ್ತ್ರೀ ಪೆಟ್ಟಿಗೆಯಲ್ಲಿಯರುವ ಕ್ವಾಯಲ್‌ನಂತೆ ಎರಡು ಪ್ಲಾಸ್ಟಿಕ್‌ ಹಾಳೆಗಳ ಮಧ್ಯೆ ಬೆಳ್ಳಿಯ ತೆಳುವಾದ ತಂತಿಗಳ ಜಾಳಿಗೆ ಹರಡಿಕೊಂಡಿರುತ್ತದೆ. ಅದರ ಮೇಲೆ ಚರ್ಮಕ್ಕೆ ನೇರವಾಗಿ ಬಿಸಿ ಅಥವಾ ಶಾಖ ಅತಿಯಾಗಿ ತಟ್ಟದಂತೆ ಸುರಕ್ಷತಾ ಕವಚ ಹಾಕಿ ಹೊರಮೈ ವಿನ್ಯಾಸ ಮಾಡಲಾಗಿದೆ.

ಬಿಸಿಯಾದಾಗ ಹಿಗ್ಗುವ ಮತ್ತು ನಿಧಾನವಾಗಿ ಕುಗ್ಗುವ ಸಾಮರ್ಥ್ಯ ಹೊಂದಿರುವ ಸಾಧನವನ್ನು ಮೊಣಕಾಲು, ಕೀಲು, ಮೊಣಕೈ, ಮುಂಗೈ ಹೀಗೆ ಪೆಟ್ಟಾದ ಸ್ಥಳದ ಸುತ್ತ ಸುತ್ತಿಕೊಂಡು ಗುಂಡಿ ಅಮುಕಿದರೆ ಸಾಕು. ಅದನ್ನು ಸುತ್ತಿಕೊಂಡು ಕುಳಿತಲ್ಲಿಯೇ ಕುಳಿತುಕೊಳ್ಳಬೇಕೆಂದೇನೂ ಇಲ್ಲ. ದೈನಂದಿನ ಕೆಲಸದಲ್ಲಿ ತೊಡಗಿದರೂ ಸಾಧನ ನಮಗೆ ಬೇಕಾದ ಅಗತ್ಯ ಶಾಖ ನೀಡುತ್ತಿರುತ್ತದೆ.

ಈ ಹಿಂದೆಯೂ ಇಂಥ ಸಾಧನ, ಸಲಕರಣೆ ಮಾರುಕಟ್ಟೆಯಲ್ಲಿ ಲಭ್ಯವಿದ್ದವು. ಆದರೆ, ಅವು ತುಂಬಾ ದುಬಾರಿ ಹಾಗೂ ಕಡಿಮೆ ಪರಿಣಾಮಕಾರಿಯಾಗಿದ್ದವು. ಆದರೆ, ಇದೀಗ ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ಮತ್ತು ಬಳಕೆದಾರ ಸ್ನೇಹಿಯಾದ ಕಿರು ಯಂತ್ರವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ನೆಮ್ಮದಿ ನೀಡುವ ಶಾಖ ಮೈ ಸುಡದು
ಅತಿಯಾದ ಶಾಖದಿಂದ ಚರ್ಮ ಸುಡದಂತೆ ಎಚ್ಚರಿಕೆವಹಿಸಲಾಗಿದೆ. ಮಕ್ಕಳಿಂದ ವೃದ್ಧವರವರೆಗೆ ಎಲ್ಲ ವಯೋಮಾನದವರೂ ಸುಲಭವಾಗಿ ಬಳಸುವಂತೆ ಈ ಯಂತ್ರವನ್ನು ರೂಪಿಸಲಾಗಿದೆ. ಪ್ರವಾಸ ಹೊರಟರೆ ಜತೆಗೆ ಕೊಂಡೊಯ್ಯಬಹುದು. ಬ್ಯಾಗ್‌ ಅಥವಾ ಸೂಟ್‌ಕೇಸ್‌ನಲ್ಲಿ ಬಹಳ ಜಾಗ ಬೇಡದು.

ಈ ಸಾಧನದ ಸಾಧಕ–ಬಾಧಕಗಳನ್ನು ಅಧ್ಯಯನ ಮಾಡಿರುವ ತಜ್ಞರ ತಂಡ ಕಾರು ಸೀಟು, ಆಗಸದಲ್ಲಿ ಹಾರುವಾಗ ತೊಡುವ ಜಾಕೆಟ್‌ಗಳಲ್ಲೂ ಈ ಪುಟ್ಟ ಯಂತ್ರವನ್ನು ಅಳವಡಿಸುವ ಸಾಧ್ಯತೆಗಳ ಪ್ರಯತ್ನದಲ್ಲಿ ತೊಡಗಿದೆ. ಎತ್ತರದಲ್ಲಿ ಹಾರುವಾಗ ತಾಪಮಾನ ಕಡಿಮೆಯಾಗಿ ಶೀತ ಹೆಚ್ಚಾದಾಗ ಜಾಕೆಟ್‌ನಲ್ಲಿ ಅಳವಡಿಸಿದ ಸಾಧನವನ್ನು ಉಪಯೋಗಿಸಿ ದೇಹದ ತಾಪಮಾನ ಕಾಪಾಡಿಕೊಳ್ಳಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೊರಿಯಾದ ರಾಜಧಾನಿ ಸೋಲ್‌ನಲ್ಲಿರುವ ಕೊರಿಯಾ ಮೂಲ ವಿಜ್ಞಾನ ಸಂಶೋಧನಾ ಕೇಂದ್ರ ಮತ್ತು ಅಮೆರಿಕದ ಹಾರ್ವರ್ಡ್‌ ಮತ್ತು ಪುಸಾನ್‌ ರಾಷ್ಟ್ರೀಯ ವಿಶ್ವವಿದ್ಯಾಲಯದ ವಿಜ್ಞಾನಿಗಳ ಹಲವಾರು ವರ್ಷಗಳ ನಿರಂತರ ಪರಿಶ್ರಮದ ಪರಿಣಾಮವಾಗಿ ಈ ಸಾಧನ ಆವಿಷ್ಕಾರಗೊಂಡಿದ್ದು, ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.

ಇದಕ್ಕಾಗಿ ಹಲವು ದಿನ ಕಾಯುವುದು ಅನಿ ವಾರ್ಯ. ಬೆಲೆ ಜನಸಾಮಾನ್ಯರ ಕೈಗೆಟಕು ತ್ತದೆಯೋ ಇಲ್ಲವೋ ಗೊತ್ತಿಲ್ಲ. ಅಲ್ಲಿಯವರೆಗೆ ಮನೆಯಲ್ಲಿಯ ಹೆಂಚಿಗೆ ಬಟ್ಟೆ ಕಾಯಿಸಿ ಕಾವು ಕೊಟ್ಟುಕೊಳ್ಳುವುದಂತೂ ಅನಿವಾರ್ಯ. ಬಳಸಲು ಅತ್ಯಂತ ಸುಲಭ ಹಾಗೂ ಸರಳ ಸಾಧನ ಬಿಸಿಯನ್ನೇನೋ ನೀಡಬಹುದು. ಆದರೆ, ಅಜ್ಜಿ, ಅಮ್ಮನ ಪ್ರೀತಿ, ಮಾಂತ್ರಿಕ ಸ್ಪರ್ಷ ಹಾಗೂ ಸಮಾಧಾನದ ಮಾತುಗಳನ್ನು ಹೇಗೆ ನೀಡಿತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.