ADVERTISEMENT

ಪರಿಸರ ಸ್ನೇಹಿ ವಾಹನ ಟೊಯೊಟಾ ಐ– ರೋಡ್‌

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 10:16 IST
Last Updated 28 ಮಾರ್ಚ್ 2017, 10:16 IST
ಪರಿಸರ ಸ್ನೇಹಿ ವಾಹನ ಟೊಯೊಟಾ ಐ– ರೋಡ್‌
ಪರಿಸರ ಸ್ನೇಹಿ ವಾಹನ ಟೊಯೊಟಾ ಐ– ರೋಡ್‌   

ಈ ವಾಹನ ಎದುರಿನಿಂದ ನೋಡಿದರೆ ಆಟೊದಂತೆ ಕಾಣುತ್ತದೆ. ಹಿಂದಿನಿಂದ ನೋಡಿದರೆ ಬೈಕ್‌ನಂತೆ ಕಾಣುತ್ತದೆ. ಮುಂದೆ ಎರಡು  ಚಕ್ರ, ಹಿಂದೆ ಒಂದೇ ಚಕ್ರದ  ಇದರ ಹೆಸರು ‘ಟೊಯೊಟಾ ಐ–ರೋಡ್‌’ ಹೆಸರೇ ಸೂಚಿಸುವಂತೆ ಜಪಾನ್‌ನ ಟೊಯೊಟಾ ಕಂಪೆನಿ ಇದನ್ನು ತಯಾರಿಸಿದೆ.

ಹ್ಯಾನೋವರ್‌ನಲ್ಲಿ ಇತ್ತೀಚೆಗೆ ನಡೆದ ಸಿಇಬಿಟ್‌ ವಾಹನ ಮೇಳದಲ್ಲಿ ಇದು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಪ್ರಪಂಚದಲ್ಲಿ ಇಂದ ಸ್ವಚ್ಛ ಇಂಧನ ಮತ್ತು ಪರಿಸರಸ್ನೇಹಿ ವಾಹನಗಳ ಬಗ್ಗೆ ಜನರ ಆಸಕ್ತಿ ಹೆಚ್ಚುತ್ತಿದೆ. ನವೀಕರಿಸ ಬಹುದಾದ ಇಂಧನ ಮೂಲಗಳಿಂದ ನಡೆಯುವ ವಾಹನಗಳ ಕುರಿತ ಸಂಶೋಧನೆ ಸಾಗುತ್ತಿರುತ್ತದೆ.

ಹೊಸ ಯುಗದಲ್ಲಿ ಎಲೆಕ್ಟ್ರಿಕ್‌ ಕಾರ್‌ಗಳನ್ನು ಕೊಳ್ಳುವವರೂ ಕಡಿಮೆ ಏನಿಲ್ಲ. ಇದೀಗ ಟೊಯೊಟಾ ಕಂಪೆನಿ ಮಾರುಕಟ್ಟೆಗೆ ತಂದಿರುವ ಮೂರು ಚಕ್ರದ ಐ– ರೋಡ್‌ ಸಹ ಹಲವು ವೈಶಿಷ್ಟಗಳನ್ನು ಒಳಗೊಂಡಿದೆ.

ಐ– ರೋಡ್‌ ವಾಹವನ್ನು ಮೊದಲ ಬಾರಿ ಎರಡು ವರ್ಷಗಳ ಹಿಂದೆ ಜಿನಿವಾದಲ್ಲಿ ಪ್ರದರ್ಶನ ಮಾಡಲಾಗಿತ್ತು. ಆನಂತರ ಈ ಸಣ್ಣ ಕಾರು ಹಲವಾರು ವಿನ್ಯಾಸ ಹಾಗೂ ತಾಂತ್ರಿಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತಲೇ ಬಂದಿದೆ.

ನಗರಗಳಿಗೆ ಭವಿಷ್ಯದ ವಾಹನ ಎಂದೇ ವಿಶ್ಲೇಷಕರು ಇದನ್ನು ಕರೆಯುತ್ತಿದ್ದಾರೆ. ಐ–ರೋಡ್‌ ಏಳು ಅಡಿ ಉದ್ದ ಮತ್ತು ಮೂರು ಅಡಿ ಅಗಲವಿದೆ. ಇದರಿಂದ ಸಣ್ಣ ಸಣ್ಣ ಪಾರ್ಕಿಂಗ್‌ ಪ್ರದೇಶದಲ್ಲಿ ಇದನ್ನು ನಿಲ್ಲಿಸಬಹುದಾಗಿದೆ.

ಸುರಕ್ಷತೆಗೆ ಆದ್ಯತೆ: ಟೊಯೊಟಾದ  ಈ ಕಾರಿನಲ್ಲಿ ಸುರಕ್ಷತೆಗೆ ಆದ್ಯತೆ ನೀಡಿದೆ. ಅದಕ್ಕೆಂದೇ ವಿಶಿಷ್ಟ ತಂತ್ರಾಂಶವೂ ಇದೆ. ಇದಕ್ಕೆ ಮೂರು ಚಕ್ರವಿರುವ ಕಾರಣ ತಿರುವುಗಳಲ್ಲಿ ಉರುಳಿಬೀಳುವ ಸಾಧ್ಯತೆ ಇಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಇದನ್ನು ಮೀರುವ ತಂತ್ರಜ್ಞಾನ ಇದರಲ್ಲಿದೆ. ಇದರ ಮುಂದಿನ ಚಕ್ರಗಳು ತಗ್ಗು ದಿಣ್ಣೆಗಳಲ್ಲಿ ಮೇಲೆ ಕೆಳಗೆ ಸರಿದಾಡುವಾಗ ಆಯತಪ್ಪಿ ಬೀಳದಂತೆ ವೇಗ ನಿಯಂತ್ರಿಸುವ ತಂತ್ರಾಂಶ ಅಳವಡಿಸಲಾಗಿದೆ.

ಒಂದು ವೇಲೆ ಚಾಲಕ ವೇಗವಾಗಿ ಚಾಲನೆ ಮಾಡಿ ವಾಹನ ಒಂದು ಬದಿಗೆ ತಿರುಗಿಸಿದರೆ ಸ್ಟಿಯರಿಂಗ್‌ ವ್ಹೀಲ್‌ ವೈಬ್ರೇಟ್‌ ಆಗಿ ವೇಗ ತಗ್ಗಿಸುವಂತೆ ಸೂಚನೆ ನೀಡುತ್ತದೆ.

ಜಪಾನ್‌ನಲ್ಲೇ ಟ್ರಯಲ್‌:  ಐ–ರೋಡ್‌ ಅನ್ನು ಜಪಾನ್‌ ರಾಜಧಾನಿ ಟೋಕಿಯೊದ ಶಿಬುಯಾ ಮತ್ತು ಸೆಟಗಯಾ ವಾರ್ಡ್‌ನಲ್ಲಿ ಹಲವು ರೀತಿಯಲ್ಲಿ ಟ್ರಯಲ್‌ ನೋಡಲಾಗಿದೆ. ವಿದ್ಯಾರ್ಥಿಗಳಿಗೆ ಈ ವಾಹನ ಹೇಗೆ ಹೆಚ್ಚು ಪ್ರಯೋಜನವಾಗಿದೆ ಎಂಬುದನ್ನು ಎರಡು ವಾರ ಪರೀಕ್ಷೆ ಮಾಡಲಾಯಿತು.

ವಿಶೇಷಗಳು
*ಎಲೆಕ್ಟ್ರಿಕ್‌ ಮೋಟಾರ್‌ ಲಿಥಿಯಂ ಬ್ಯಾಟರಿ
*ಮುಂಬದಿಯ ಚಕ್ರಗಳು ಮೇಲೆ  ಕೆಳಗೆ ಸಸ್ಪೆನ್ಸನ್‌ ಹೊಂದಿವೆ. ಏರು– ತಗ್ಗಿನಲ್ಲಿ ಇವು  ನೆರವಾಗುತ್ತವೆ
*ಸಂಪೂರ್ಣ ಪರಿಸರ ಸ್ನೇಹಿ ವಾಹನ
*ನಗರಗಳಲ್ಲಿನ ವಾಹನ ದಟ್ಟಣೆಗಳಲ್ಲಿ ಇದು ಪ್ರಯೋಜನಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT