ADVERTISEMENT

ಬಹೂಪಯೋಗಿ ಕೃಷಿ ಯಂತ್ರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2016, 19:30 IST
Last Updated 19 ಜುಲೈ 2016, 19:30 IST
ವಿದ್ಯಾರ್ಥಿಗಳು ತಯಾರಿಸಿದ ಬ್ಯಾಟರಿ ಚಾಲಿತ ಬಹೂಪಯೋಗಿ ಕೃಷಿ ಯಂತ್ರ
ವಿದ್ಯಾರ್ಥಿಗಳು ತಯಾರಿಸಿದ ಬ್ಯಾಟರಿ ಚಾಲಿತ ಬಹೂಪಯೋಗಿ ಕೃಷಿ ಯಂತ್ರ   

ಬಿತ್ತುವುದು, ಕಳೆ ಕೀಳುವುದು, ಗೊಬ್ಬರ ಹಾಕುವುದು, ನೀರುಣಿಸುವುದು... ಹೀಗೆ ವಿದ್ಯಾರ್ಥಿಗಳು ನಿರ್ಮಿಸಿರುವ ಬಹೂಪಯೋಗಿ ಗುಣಗಳನ್ನು ಹೊಂದಿರುವ ಬ್ಯಾಟರಿ ಚಾಲಿತ ಇಂತಹ ಕೃಷಿಯಂತ್ರದ ಮಾದರಿಗಳಿಗೆ ಇನ್ನಷ್ಟು ವೃತ್ತಿಪರ ಸ್ಪರ್ಶ ಲಭಿಸಿ  ಮಾರುಕಟ್ಟೆಗೆ ಬಿಡುಗಡೆಯಾಗುವ ಭಾಗ್ಯ ಲಭಿಸಬೇಕಿದೆ. 100 ಕೆ.ಜಿ. ತೂಕ ಸಾಗಿಸುವ ಸಾಮರ್ಥ್ಯವನ್ನು ಈ ಯಂತ್ರ ಹೊಂದಿದೆ.

ಪ್ರಾಯೋಗಿಕ ಕಲಿಕೆಯ ಭಾಗವಾಗಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸುವ ಕೆಲವು ಯಂತ್ರಗಳು, ಬಳಕೆದಾರ ಸ್ನೇಹಿಯೂ, ಅಗ್ಗವೂ ಆಗಿರುತ್ತವೆ. ಆಯಾ ಪ್ರದೇಶ ಮತ್ತು ನವೀನ ತಂತ್ರಜ್ಞಾನಕ್ಕೆ ತಕ್ಕಂತೆ ಇವು ಅಭಿವೃದ್ಧಿಗೊಂಡಿರುತ್ತವೆ.

ಆದರೆ, ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಈ ಆವಿಷ್ಕಾರಗಳು, ಕೇವಲ ತರಗತಿ ಕೋಣೆಗೆ ಮಾತ್ರ ಸೀಮಿತಗೊಂಡು, ಕ್ಯಾಂಪಸ್‌ ಆವರಣದಿಂದ ಹೊರಗಡೆ ಬರುವುದೇ ಇಲ್ಲ. ವಿದ್ಯಾರ್ಥಿ ನಿರ್ಮಿತ ಇಂತಹ ಮಾದರಿಗಳಿಗೆ ಇನ್ನಷ್ಟು ವೃತ್ತಿಪರ ಸ್ಪರ್ಶ ಲಭಿಸಿ  ಮಾರುಕಟ್ಟೆಗೆ ಬಿಡುಗಡೆಯಾಗುವ ಭಾಗ್ಯ ಲಭಿಸಬೇಕಿದೆ.

ಗದುಗಿನ ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜಿನ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ, 8ನೇ ಸೆಮಿಷ್ಟರ್‌ ವಿದ್ಯಾರ್ಥಿಗಳು ತಯಾರಿಸಿರುವ ಬ್ಯಾಟರಿ ಚಾಲಿತ ಕೃಷಿಯಂತ್ರವೂ ಸಹ ಇಂತಹ ಬಹುಪಯೋಗಿ ಗುಣಗಳಿಂದ ಗಮನ ಸೆಳೆಯುತ್ತದೆ.  ಬಿತ್ತುವುದು, ಕಳೆ ಕೀಳುವುದು, ಗೊಬ್ಬರ ಹಾಕುವುದು, ನೀರುಣಿಸುವುದು, ಕೃಷಿ ಪರಿಕರಗಳನ್ನು ಸಾಗಿಸುವುದು ಸೇರಿದಂತೆ ಹಲವು ಕೆಲಸಗಳನ್ನೂ ಇದರಲ್ಲೇ ಮಾಡಬಹುದು.

ಕೂಲಿಯಾಳುಗಳ ನೆರವೂ ಬೇಕಿಲ್ಲ. ಅಷ್ಟೇ ಅಲ್ಲ, ಕಾಲು ದಾರಿಯಷ್ಟು ಜಾಗವಿದ್ದರೂ ಈ ಯಂತ್ರವನ್ನು ಸುಲಭವಾಗಿ  ಓಡಿಸಿಕೊಂಡು ಹೋಗಬಹುದು. ಇಷ್ಟೆಲ್ಲಾ ಮಾಡುವ ಈ ಯಂತ್ರ ಆವಿಷ್ಕಾರಗೊಂಡಿದ್ದು, ಕೆಟ್ಟು ಹೋಗಿದ್ದ ಒಂದು ಹಳೆಯ ಸ್ಕೂಟಿಯ ಬಿಡಿಭಾಗದಿಂದ.

ಬಹೂಪಯೋಗಿ ಯಂತ್ರ
8ನೇ ಸೆಮಿಷ್ಟರ್‌ ವಿದ್ಯಾರ್ಥಿಗಳಾದ ಶಿವಾನಂದ ಕಡಕೋಳ, ಚಂದ್ರ ಚಿಕ್ಕಕೊಪ್ಪ, ಮಂಜುನಾಥ ಬಳೂಟಗಿ ಈ ರೈತ ಸ್ನೇಹಿ ಯಂತ್ರ ಅಭಿವೃದ್ಧಿಪಡಿಸಿದ್ದಾರೆ. ಹಳೆ ಸ್ಕೂಟಿಗೆ 250 ವಾಟ್ ಸಾಮರ್ಥ್ಯದ ಬ್ರಷ್‌ಲೀಸ್‌ ಡಿಸಿ ಎಲೆಕ್ಟ್ರಿಕ್‌ ಮೋಟರ್ ಮತ್ತು 48 ವೋಲ್ಟ್‌, 20 ಆ್ಯಂಪಿಯರ್ ಸಾಮರ್ಥ್ಯದ ನಾಲ್ಕು ಬ್ಯಾಟರಿ ಅಳವಡಿಸಿದ್ದಾರೆ.

ಇದು 100 ಕೆ.ಜಿ. ತೂಕ ಸಾಗಿಸುವ ಸಾಮರ್ಥ್ಯ ಹೊಂದಿದೆ. ನೋಡಲು ದ್ವಿಚಕ್ರ ವಾಹನದಂತೆ ಇರುವ ಇದರ ಬ್ರೇಕ್‌ ಪೆಡಲ್‌ ಬಳಿ, ಬೀಜ ಬಿತ್ತಲು ಅನುಕೂಲವಾಗುವಂತೆ ಸೀಡ್‌ ಡ್ರಿಲ್‌ ಅಳವಡಿಸಿದ್ದಾರೆ. ಚಕ್ರ ತಿರುಗಿದಂತೆ ಈ ರಂದ್ರಗಳ ಮೂಲಕ ಬೀಜ ಬಿತ್ತನೆ ಮಾಡಬಹುದು.

ಒಟ್ಟು ನಾಲ್ಕು ರಂದ್ರಗಳು ಇವೆ. 2 ಸೆ.ಮೀ. ಅಂತರದಲ್ಲಿ ಬಿತ್ತನೆ ಮಾಡಬೇಕಾದರೆ ನಾಲ್ಕು ರಂದ್ರಗಳನ್ನು ತೆರೆದಿಡಬೇಕು,. 4 ಸೆ.ಮೀ.ನಲ್ಲಿ ಅಂತರ ಬೇಕಿದ್ದರೆ 2 ಮತ್ತು 8 ಸೆಮೀ ಅಂತರದಲ್ಲಿ ಒಂದು ರಂದ್ರ ತೆರೆದು ವಿವಿಧ ಪ್ರಕಾರದ ಬೀಜಗಳನ್ನು ಬಿತ್ತನೆ ಮಾಡಬಹುದು.

ಸೀಡ್‌ ಡ್ರಿಲ್‌ನ ಪಕ್ಕದಲ್ಲೇ ಬೆಳೆಗಳ ನಡುವೆ ಬೆಳೆದಿರುವ ಕಳೆ ತೆಗೆಯಲು ಅನುಕೂಲವಾಗುಂತೆ  ಕಬ್ಬಿಣದ ಪಟ್ಟಿಗಳನ್ನು ಅಳವಡಿಸಲಾಗಿದೆ. ಬಿತ್ತನೆ ಮುಗಿದ ನಂತರ, ಸೀಡ್‌ ಡ್ರಿಲ್‌ ಮೂಲಕ ಗೊಬ್ಬರವನ್ನೂ ಹಾಕಬಹುದು. ವಾಹನದ ಹಿಂಬದಿ ಪುಟ್ಟ ಟ್ಯಾಂಕ್‌ ಅಳವಡಿಸಿಕೊಂಡರೆ ಕ್ರಿಮಿನಾಶಕವನ್ನೂ ಸಿಂಪಡಿಸಬಹುದು. ಈ ಯಂತ್ರದ ಬ್ಯಾಟರಿಯನ್ನು 7 ಗಂಟೆ ಚಾರ್ಜ್‌ ಮಾಡಿದರೆ ಅರ್ಧ ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಬಹುದು.

ಅಥವಾ  ಸರಾಸರಿ 50 ಕಿ.ಮೀ ವೇಗದಲ್ಲಿ 35 ಕಿ.ಮೀ ದೂರ ಕ್ರಮಿಸಬಹುದು. ಹಿಂಬದಿ ಸೌರಫಲಕ ಅಳವಡಿಸಿದರೆ ವಿದ್ಯುತ್‌ ಬಳಕೆ ಖರ್ಚನ್ನೂ ಉಳಿಸಬಹುದು ಈ ಯಂತ್ರ ಅಭಿವೃದ್ಧಿಪಡಿಸಲು ₹ 10 ಸಾವಿರ ಖರ್ಚಾಗಿದೆ. ಇದನ್ನೇ ಇನ್ನಷ್ಟು ಅಭಿವೃದ್ಧಿಪಡಿಸಿ, ಗರಿಷ್ಠ ₹ 30 ಸಾವಿರ ಬೆಲೆಯಲ್ಲಿ ರೈತರಿಗೆ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವಂತೆ ಮಾಡಬಹುದು ಎನ್ನುತ್ತಾರೆ ಯುವ ಸಂಶೋಧಕರು.

‘ಒಬ್ಬ ರೈತ ಏಕಕಾಲದಲ್ಲಿ ಹಲವು ಕೆಲಸಗಳನ್ನು ನಿಭಾಯಿಸುತ್ತಾನೆ. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ನಮಗೆ ಇದೆಲ್ಲಾ ತಿಳಿದಿದೆ. ಹೀಗಾಗಿ ಸಂಪೂರ್ಣ ರೈತ ಸ್ನೇಹಿ ಯಂತ್ರವನ್ನು ಅಭಿವೃದ್ಧಿಪಡಿಸಬೇಕೆಂದು ಯೋಜನೆ ರೂಪಿಸಿ ಈ ಮಟ್ಟಿಗೆ ಯಶಸ್ವಿಯಾಗಿದ್ದೇವೆ.

ಕೃಷಿ ಉಪಕರಣಗಳನ್ನು ತಯಾರಿಸುವ ಕಂಪೆನಿಯೊಂದು ಮುಂದೆ ಬಂದರೆ ಈ ತಂತ್ರಜ್ಞಾನ ನೀಡಲು ಸಿದ್ಧರಿದ್ದೇವೆ. ಅಗ್ಗದ ದರದಲ್ಲಿ ರೈತರಿಗೆ ಈ ಯಂತ್ರ ಲಭಿಸಬೇಕು ಎನ್ನುವುದಷ್ಟೇ ನಮ್ಮ ಅಭಿಲಾಷೆ ಎನ್ನುತ್ತಾರೆ ವಿದ್ಯಾರ್ಥಿಗಳು.

‘ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಈ ಯಂತ್ರವನ್ನು ಜಿಲ್ಲೆಯ ರೈತರು  ಬಂದು ನೋಡಿಕೊಂಡು ಹೋಗಿದ್ದು, ಅವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿದ್ಯಾರ್ಥಿ ನಿರ್ಮಿತ ಇಂತಹ ಮಾದರಿಗಳಿಗೆ ಮನ್ನಣೆ ಲಭಿಸಬೇಕಾದರೆ ಸರ್ಕಾರ, ಸಂಘ, ಸಂಸ್ಥೆಗಳ ಸಹಕಾರ ಅಗತ್ಯ.

ಸ್ಟಾರ್ಟ್‌ಅಪ್‌ ಕಂಪೆನಿಗಳಿಗೆ ಸಾಕಷ್ಟು ಉತ್ತೇಜನ ನೀಡುವ ಸರ್ಕಾರ ಈ ನಿಟ್ಟಿನಲ್ಲೂ ಚಿಂತಿಸಬೇಕಿದೆ ಎನ್ನುತ್ತಾರೆ ಈ ಪ್ರಾಯೋಗಿಕ ಯಂತ್ರ ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಉಪನ್ಯಾಸಕರಾದ ಪ್ರೊ. ಎಂ. ಆರ್. ಅಳವಂಡಿ, ದಯಾನಂದ ಗೌಡರ ಮತ್ತು ಎಂಎಸ್.ಪಾಟೀಲ.

‘ಕೃಷಿ ಇಲಾಖೆ ಇದರತ್ತ ಗಮನ ಹರಿಸಬೇಕು. ರೈತರ ಜಮೀನಿನಲ್ಲಿ ಈಗಾಗಲೇ ಈ ಯಂತ್ರದ ಪ್ರಾತ್ಯಕ್ಷಿಕೆ  ನೀಡಲಾಗಿದೆ. ಕೂಲಿಯಾಳುಗಳ ಕೊರತೆಯನ್ನು ಈ ಯಂತ್ರ ನಿವಾರಿಸಲಿದೆ ಎನ್ನುತ್ತಾರೆ ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಎಂ.ಎಂ.ಅವಟಿ.
ಚಿತ್ರ, ಲೇಖನ–ಹುಚ್ಚೇಶ್ವರ ಅಣ್ಣಿಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.