ADVERTISEMENT

ಬ್ಯಾಕ್ಟೀರಿಯಾ ಬಳಸಿ ಪೇಪರ್‌ ಬ್ಯಾಟರಿ!

ಬಸೀರ ಅಹ್ಮದ್ ನಗಾರಿ
Published 16 ಜೂನ್ 2015, 19:30 IST
Last Updated 16 ಜೂನ್ 2015, 19:30 IST

ಜಪಾನಿನ ಪ್ರಸಿದ್ಧ ಕಲೆ ಓರಿಗಾಮಿ ಬಳಸಿಕೊಂಡು ಸುಂದರ ಪಕ್ಷಿಗಳು, ಕಪ್ಪೆಗಳು, ನವಿಲು... ಹೀಗೆ ಆಕರ್ಷಕ ಪುಟ್ಟ ಕಲಾಕೃತಿಗಳನ್ನು ನಿರ್ಮಿಸುವುದು ನಿಮಗೆ ಗೊತ್ತಿರಬಹುದು. ಆದರೆ, ಸಂಶೋಧಕರ ಪಾಲಿಗೆ ಓರಿಗಾಮಿ ಕೇವಲ ಕಲೆಯಲ್ಲ; ಸಂಶೋಧನೆಗೆ ಹೇತು.

ಕಳೆದ ವರ್ಷ ಎಂಐಟಿ ಹಾಗೂ ಹಾವರ್ಡ್‌ ವಿಶ್ವವಿದ್ಯಾಲಯದ ಎಂಜಿನಿಯರ್‌ಗಳ ತಂಡವೊಂದು ಓರಿಗಾಮಿ ಕಲೆ ಬಳಸಿಕೊಂಡು ಚಪ್ಪಟೆ ಆಕಾರದ ರೋಬೊ ಒಂದನ್ನು (ಯಂತ್ರಮಾನವನನ್ನು) ರೂಪಿಸಿತ್ತು. ಅದು ಸ್ವಯಂಚಾಲಿತವಾಗಿ ಮಡಚಿಕೊಳ್ಳುತ್ತಿತ್ತು ಹಾಗೂ ಮಾನವರ ನೆರವಿಲ್ಲದೇ ಮುಂದಡಿ ಇಡುತ್ತಿತ್ತು ಕೂಡ.  ಆದರೆ, ಈ ಬಾರಿ ಓರಿಗಾಮಿ ಕಲೆ ಉಪಯೋಗಿಸಿಕೊಂಡು ಸಂಶೋಧಕರು  ಕಾಗದದ  ಬ್ಯಾಟರಿಯನ್ನು ಅಭಿವೃದ್ಧಿ ಪಡಿಸಿದ್ದಾರೆ.

ಈ ಕಾಗದದ  ಬ್ಯಾಟರಿ ಬ್ಯಾಕ್ಟೇರಿಯಾ ಆಧಾರಿತವಾಗಿದ್ದು, ಅಮೆರಿಕದ ಬಿಂಗ್‌ಹ್ಯಾಮ್ಟನ್‌ ವಿಶ್ವವಿದ್ಯಾಲಯದ ಸಂಶೋಧಕ ಸೆಯೊಖೆವುನ್‌ ಸೀನ್‌ ಚೊಯ್ ಇದರ ನಿರ್ಮಾತೃ.

ಬ್ಯಾಕ್ಟೀರಿಯಾ ಬಳಕೆ
ಸೂಕ್ಷ್ಮಜೀವಿ  ಬ್ಯಾಕ್ಟೀರಿಯಾ ಆಧಾರಿತವಾಗಿರುವುದು ಈ ಬ್ಯಾಟರಿಯ ಮತ್ತೊಂದು ವಿಶೇಷ. ಸೂಕ್ಷ್ಮ ಜೀವಿಗಳ ಉಸಿರಾಟದ ಮೂಲಕ ಶಕ್ತಿ ಉತ್ಪಾದಿಸುವ ತಂತ್ರಜ್ಞಾನ ಇದರಲ್ಲಿದೆ.  ಬ್ಯಾಕ್ಟೀರಿಯಾ ಹೊಂದಿರುವ ಕೇವಲ ಒಂದೇ ಒಂದು ಹನಿ ದ್ರವದಿಂದ, ಒಂದು ಬಯೋ ಸೆನ್ಸಾರ್‌ಗೆ ಸಾಲುವಷ್ಟು ಶಕ್ತಿ ಉತ್ಪಾದಿಸಬಹುದು ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ.

‘ಕೊಳಕು ನೀರಿನಲ್ಲಿ ಸಾಕಷ್ಟು ಜೈವಿಕ ಅಂಶಗಳಿವೆ. ಯಾವುದೇ ಬಗೆಯ ಜೈವಿಕ  ಪದಾರ್ಥದ ಬ್ಯಾಕ್ಟೀರಿಯಾ ಮೂಲವಾಗಿರಬಹುದು’ ಎನ್ನುತ್ತಾರೆ  ಚೊಯ್‌.

ಅಲ್ಲದೇ, ಕನಿಷ್ಠ ಸಂಪನ್ಮೂಲಗಳೊಂದಿಗೆ ದೂರದ ಪ್ರದೇಶಗಳಲ್ಲಿ  ಕಾರ್ಯ ನಿರ್ವಹಿಸುವವರಿಗೆ ಈ ವಿಧಾನ ಪ್ರಯೋಜನಕಾರಿ.  ಏಕೆಂದರೆ, ‘ಕಾಗದವು  ಅಗ್ಗವಾಗಿ ಸಿಗುತ್ತದೆ. ಜತೆಗೆ ಅದು ಜೈವಿಕ ವಿಘಟನಕಾರಿ ಕೂಡ’ ಎನ್ನುತ್ತಾರೆ ಅವರು.

ಹೀಗಿದೆ ರಚನೆ
ಗಾತ್ರದಲ್ಲಿ ಪುಟ್ಟ ಬೆಂಕಿ ಪೊಟ್ಟಣವನ್ನು ಹೋಲುವ, ನೋಡಲು ಚೌಕಾಕಾರವಾಗಿರುವ ಈ ಬ್ಯಾಟರಿಯನ್ನು ಸುಲಭವಾಗಿ ಮಡಚಿಟ್ಟು ಕೊಳ್ಳಬಹುದಾಗಿದೆ.  ಕಚೇರಿಯಲ್ಲಿ ಬಳಕೆಯಾಗುವ ಸಾಮಾನ್ಯ ಕಾಗದದ ಒಂದು ಬದಿಗೆ ನಿಕಲ್‌ ರಾಸಾಯನಿಕ  ಸಿಂಪಡಿಸುವ ಮೂಲಕ, ‌ಅದರ ಮೇಲೆ ಏರ್‌ಬ್ರೀತಿಂಗ್  ಕ್ಯಾಥೋಡ್‌ ನಿರ್ಮಿಸಲಾಗಿದೆ. ಅನೋಡ್  ಅನ್ನು ಕಪ್ಪು ಬಣ್ಣಗಳಿಂದ ಸ್ಕ್ರೀನ್ ಮುದ್ರಣದಿಂದ ರೂಪಿಸಲಾಗಿದೆ. ಮೇಣ ಬಳಸಿಕೊಂಡು ಜಲಾಕರ್ಷಣೆ ವಲಯವನ್ನು ನಿರ್ಮಿಸಲಾಗಿದೆ.

ಬಹಳ ಅಗ್ಗ!
ಅಂದಹಾಗೆ ಈ ವಿಸ್ಮಯಕಾರಿ ಸಾಧನದ ಬೆಲೆ ಎಷ್ಟಿರಬಹುದು? ಕೇವಲ ಐದು ಅಮೆರಿಕನ್ ಸೆಂಟ್ಸ್‌. ಅಂದರೆ ಭಾರತದ ಕರೆನ್ಸಿ ಲೆಕ್ಕದಲ್ಲಿ ಕೇವಲ ಮೂರು ರೂಪಾಯಿ ಇಪ್ಪತ್ತು ಪೈಸೆ!

ಇನ್ನು,  ಈ ತಂತ್ರಜ್ಞಾನವು  ಕಾಗದ ಆಧಾರಿತ ಬಯೋ ಸೆನ್ಸರ್‌ನಲ್ಲಿ ಆಶಾದಾಯಕ ಫಲಿತಾಂಶ ನೀಡಿದೆ. ಇದನ್ನು ಕೈಬಳಕೆಯ ಇತರ ಸಾಧನಗಳೊಂದಿಗೆ ಸಂಯೋಜಿಸಿ ವಿಶ್ಲೇಷಣೆಗೆ ಒಳಪಡಿಸಬೇಕಿದೆ ಎಂದು ಭವಿಷ್ಯದ ಬಳಕೆಯ ಬಗ್ಗೆ ಸಂಶೋಧಕರು ಹೇಳಿಕೊಂಡಿದ್ದಾರೆ. ಈ ಕಾಗದದ ಬ್ಯಾಟರಿ ಆವಿಷ್ಕಾರ ಕುರಿತು ‘ನ್ಯಾನೋ ಎನರ್ಜಿ ಜರ್ನಲ್‌ನಲ್ಲಿ ವರದಿಯೂ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.