ADVERTISEMENT

ಮೊಬೈಲ್‌ ಗೇಮ್‌ ₨3,650 ಕೋಟಿ ಮಾರುಕಟ್ಟೆ!

ಬಸೀರ ಅಹ್ಮದ್ ನಗಾರಿ
Published 9 ಜೂನ್ 2015, 19:30 IST
Last Updated 9 ಜೂನ್ 2015, 19:30 IST

‘ನನ್ನ ಮಗ–ಮಗಳು ಮೊಬೈಲ್‌ ಹಿಡಿದರೆ ಸಾಕು, ಗೇಮ್ಸ್‌ನಲ್ಲಿ ಮುಳುಗಿ ಬಿಡ್ತಾರೆ. ಎಲ್ಲಿಯಾದ್ರೂ ಫೋನ್‌ ಬಂದ್ರೆ ಮತ್ತೆ ಕಿತ್ಕೊಂಡಾರು ಅಂಥ ಸೈಲಂಟ್‌ ಮೋಡ್‌ಗೆ ಹಾಕಿ ಗೇಮ್ಸ್‌ ಆಡ್ತಾರೆ. ಆಟಾಡೋಕೆ ಮೊಬೈಲ್‌ ಕೊಡಲ್ಲಾ ಅಂದ್ರೆ, ಹೋಂವರ್ಕ್ ಮಾಡೋಲ್ಲ ಅಂತ ಹೆದರ್ಸೋದ್ ಬೇರೆ. ಮೊಬೈಲ್‌ ಫೋನ್‌ ಕೊಟ್ರೆ ಮುಗೀತು.  ಬರಿ ಚಾರ್ಜಿಂಗ್‌ ಅಲ್ಲ, ಅದರ ಜೀವ ಹೋಗ್ತಿದೆ ಅಂತ ಹೇಳಿದ್ರೂ ಕೇಳಲ್ಲ’...

–ಹೀಗೆ ಎಷ್ಟೋ ಪೋಷಕರು (ಪ್ರತಿಷ್ಠೆಗೋ ನೈಜ ಪರಿಸ್ಥಿತಿ ತಿಳಿಸಲೋ!) ಅಳಲು ತೋಡಿಕೊಳ್ಳುವುದನ್ನು ಎಲ್ಲರೂ ಕೇಳಿಯೇ ಇರುತ್ತೀವಿ. ಕೇವಲ ಮಕ್ಕಳು ಮಾತ್ರವಲ್ಲ; ಅನೇಕ ಯುವಕ–ಯುವತಿಯರೂ ಮೊಬೈಲ್ ಗೇಮ್ಸ್‌ ಪ್ರಪಂಚದ ಮಾಯೆಗೆ ಮರುಳಾಗಿ ಪ್ರಪಂಚದಲ್ಲಿನ ಆಗು ಹೋಗುಗಳನ್ನೇ ಗಮನಿಸದಂತಾಗಿದ್ದಾರೆ.

ಪ್ರತಿದಿನ, ಪ್ರತಿಕ್ಷಣಕ್ಕೂ ಮೊದಲ ಯತ್ನದಲ್ಲೇ  ಚುಂಬಕ ಶಕ್ತಿಯಾಗಿ ಸೆಳೆಯುವ ಈ ‘ಗೇಮ್ಸ್‌ ಜಗತ್ತಿನ’ ಮಾರುಕಟ್ಟೆ ಹೆಮ್ಮರವಾಗಿ ಬೆಳೆದು ವೃದ್ಧಿಸುತ್ತಲೇ ಇದೆ. 2016ರ ವೇಳೆಗೆ ವಿಶ್ವದ ಮೊಬೈಲ್‌ ಗೇಮ್ಸ್‌ ಮಾರುಕಟ್ಟೆ ಗಾತ್ರವು 57.10 ಕೋಟಿ ಅಮೆರಿಕನ್ ಡಾಲರ್‌ಗೆ (ಸುಮಾರು ₨3650 ಕೋಟಿಗಳ ಗಾತ್ರಕ್ಕೆ)  ಹಿಗ್ಗಲಿದೆ ಎಂದು ನ್ಯೂಝೂ ಹಾಗೂ ಒನ್‌ಸ್ಕೈ ಎಂಬ ಸಂಸ್ಥೆಗಳು ಇತ್ತೀಚೆಗೆ ನಡೆಸಿದ ಅಧ್ಯಯನ ವರದಿಯು ಬೆಳಕು ಚೆಲ್ಲಿದೆ.

ಭಾರತೀಯ ಮೊಬೈಲ್‌ ಗೇಮ್‌ಗಳ ಮಾರುಕಟ್ಟೆಯು 2013ರಲ್ಲಿ ಮೊಬೈಲ್ ಗೇಮ್ಸ್ ಮಾರುಕಟ್ಟೆ ಗಾತ್ರ 4.43 ಕೋಟಿ ‌ ಡಾಲರ್‌ಗಳಷ್ಟು (₨284 ಕೋಟಿಗಳಷ್ಟು) ಪ್ರಮಾಣದ್ದಾಗಿತ್ತು. ಇದು 2013–16ರ ಅವಧಿಯಲ್ಲಿ ಸರಾಸರಿ  ಶೇ 134.50ರಷ್ಟು ವೃದ್ಧಿ ಕಾಣಲಿದೆ ಎಂದು ಅಂದಾಜು ಮಾಡಲಾಗಿತ್ತು. ಅದರಂತೆಯೇ ಮುಂದಿನ ವರ್ಷದ ವೇಳೆಗೆ 57.16 ಕೋಟಿ  ಅಮೆರಿಕನ್ ಡಾಲರ್‌ಗಳಿಗೆ (₨3658 ಕೋಟಿ) ಹೆಚ್ಚಲಿದೆ ಎಂದು ನ್ಯೂಝೂ– ಒನ್‌ಸ್ಕೈ ಅಧ್ಯಯನ ವರದಿ ಅಂದಾಜಿಸಿದೆ.

‘ಪ್ರತಿವರ್ಷ ಸರಾಸರಿ ಶೇ 132.20ರಷ್ಟು ಅಧಿಕ ಪ್ರಮಾಣದ ವೃದ್ಧಿಯೊಂದಿಗೆ  ಭಾರತದ ಮೊಬೈಲ್‌ ಗೇಮ್‌ಗಳ ಮಾರುಕಟ್ಟೆಯು ಇತರ ಬ್ರಿಕ್‌ ರಾಷ್ಟ್ರಗಳಿಗಿಂತಲೂ (ಬ್ರೆಜಿಲ್, ರಷ್ಯಾ, ಚೀನಾ) ತ್ವರಿತವಾಗಿ ಬೆಳವಣಿಗೆ ಕಾಣುತ್ತಿದೆ. ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾಗುತ್ತಿರುವ ಮೊಬೈಲ್‌ ಮಾರುಕಟ್ಟೆಯ ಪ್ರಗತಿ ಇಡೀ ವಿಶ್ವದಲ್ಲೇ ಅತ್ಯಧಿಕ. ಭವಿಷ್ಯದಲ್ಲೂ ಈ ಅಧಿಪತ್ಯ ಮುಂದುವರಿಯಲಿದೆ’ ಎಂದೂ ಅದು ತಿಳಿಸಿದೆ.

ಬಳಕೆ ಜೋರು-ವೆಚ್ಚ ಚೂರೇಚೂರು
ಭಾರತೀಯರು ನಿತ್ಯ ಸರಾಸರಿ 3 ಗಂಟೆ 18 ನಿಮಿಷಗಳ ಕಾಲ ಸ್ಮಾರ್ಟ್‌ಫೋನ್‌ಗಳಲ್ಲಿ ಬಿಜಿಯಾಗಿರುತ್ತಾರೆ.  ಅದರಲ್ಲಿ ಮೂರನೇ ಒಂದರಷ್ಟು ಸಮಯ  ಆ್ಯಪ್‌ಗಳ ಬಳಕೆಗೆ ಮೀಸಲು. ಗೇಮ್ಸ್‌ ಕೂಡ ಅದರಲ್ಲಿ ಸೇರಿವೆ.

ಮೊಬೈಲ್ ಗೇಮ್ಸ್‌ ಮಾರುಕಟ್ಟೆ ವ್ಯಾಪ್ತಿ ವಿಸ್ತರಣೆಯಲ್ಲಿ ‘ಗ್ಯಾಜೆಟ್‌ಗಳನ್ನೇ ಉಸಿರಾಡುವವರ’ ಪಾಲು ಸಾಕಷ್ಟಿದೆ! ಸ್ಮಾರ್ಟ್‌ಫೋನ್‌ ಹಾಗೂ ಟ್ಯಾಬ್ಲೆಟ್‌ ಸೇರಿದಂತೆ ದೇಶದಲ್ಲಿ ಪ್ರಸ್ತುತ 13.17 ಕೋಟಿಯಷ್ಟು ಗೇಮರ್‌ಗಳಿದ್ದಾರೆ. ದೇಶದಲ್ಲಿ ಇಷ್ಟೊಂದು ಮೊಬೈಲ್ ಗೇಮ್‌ ಪ್ರಿಯರಿದ್ದರೂ, ಮೊಬೈಲ್‌ ಗೇಮಿಂಗ್‌ ಕಂಪೆನಿಗಳಿಗೆ ನಿರೀಕ್ಷಿತ ಆದಾಯ ಮಾತ್ರ ಬರುತ್ತಿಲ್ಲ. ‌ಇತರೆ ಬ್ರಿಕ್‌ ರಾಷ್ಟ್ರಗಳಿಗೆ ಹೋಲಿಸಿದರೆ, ಗೇಮ್‌ಗಳಿಗಾಗಿ ಭಾರತೀಯರು ಮಾಡುವ ವೆಚ್ಚ ತೀರಾ ಕಡಿಮೆ!

ಭಾರತದಲ್ಲಿ ಕಳೆದ ವರ್ಷ ಇದ್ದ 13.17 ಕೋಟಿ ಬಳಕೆದಾರರ ಪೈಕಿ ಕೇವಲ 2.37 ಕೋಟಿ (ಶೇಕಡ 18ರಷ್ಟು) ಬಳಕೆದಾರರು ಮಾತ್ರವೇ ಗೇಮ್‌ಗಳಿಗೆ ಹಣ ವೆಚ್ಚ ಮಾಡಿದ್ದಾರೆ. ಬ್ರಿಕ್‌  ರಾಷ್ಟ್ರಗಳಾದ ರಷ್ಯಾ ಶೇ 27.10ರಷ್ಟು, ಬ್ರೆಜಿಲ್‌ ಶೇ 35.40ರಷ್ಟು ಹಾಗೂ ಚೀನಾದ ಶೇ 30.20ರಷ್ಟು ಹಣವನ್ನು  ಗೇಮ್‌ಗಳಿಗಾಗಿ ಖರ್ಚು ಮಾಡಿವೆ ಎಂದು ವರದಿ ಬೆಳಕು ಚೆಲ್ಲಿದೆ.

ಇನ್ನು, ದೇಶದಲ್ಲಿ ಪ್ರತಿ ಬಳಕೆದಾರನಿಂದ ದೊರೆತ ಸರಾಸರಿ ವರಮಾನ ಸುಮಾರು ₨50. ಜಾಗತಿಕ ಮಟ್ಟಕ್ಕೆ ತುಲನೆ ಮಾಡಿದರೆ ಇದು ಬಹಳವೇ ಕಡಿಮೆ. ಬ್ರಿಕ್ ರಾಷ್ಟ್ರಗಳ ಮಾರುಕಟ್ಟೆಗಳಿಗೆ ಹೋಲಿಸಿದರೂ ಅಷ್ಟೆ.

ಗೂಳಿ ಜಿಗಿತ ನಿರೀಕ್ಷೆ
ಅದಾಗ್ಯೂ, ಮುಂದಿನ ದಿನಗಳಲ್ಲಿ ಉತ್ತಮ ವರಮಾನದ ನಿರೀಕ್ಷೆಯಲ್ಲಿದೆ ಮೊಬೈಲ್‌ ಗೇಮ್ಸ್‌ ಮಾರುಕಟ್ಟೆ ಕ್ಷೇತ್ರ.
‘2016ರ ವೇಳೆಗೆ ಮೊಬೈಲ್‌ ಗೇಮರ್‌ಗಳ ಸಂಖ್ಯೆ ಭಾರತದಲ್ಲಿ 20.28 ಕೋಟಿಗೆ ಹೆಚ್ಚಲಿದೆ. ಗೇಮ್‌ಗಳನ್ನು ಖರೀದಿಸಿ ಡೌನ್‌ಲೋಡ್‌ ಮಾಡಿಕೊಳ್ಳುವವರ ಪ್ರಮಾಣವೂ ಏರಲಿದ್ದು, ಪ್ರತಿ ಬಳಕೆದಾರನಿಂದ ದೊರೆಯಲಿರುವ ಸರಾಸರಿ ವರಮಾನವು  ಸುಮಾರು ₨176ಕ್ಕೆ ಹೆಚ್ಚುವರ ನಿರೀಕ್ಷೆ ಇದೆ’ ಎಂದೂ ಅಧ್ಯಯನ ವರದಿ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.