ADVERTISEMENT

ಸಂಗೀತ ಆಲಿಸುವ...ಶಿಕ್ಷಣ ಮಾರ್ಗದರ್ಶಿ ಆ್ಯಪ್‌ಗಳು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2016, 19:30 IST
Last Updated 13 ಡಿಸೆಂಬರ್ 2016, 19:30 IST
ಸಂಗೀತ ಆಲಿಸುವ...ಶಿಕ್ಷಣ ಮಾರ್ಗದರ್ಶಿ ಆ್ಯಪ್‌ಗಳು
ಸಂಗೀತ ಆಲಿಸುವ...ಶಿಕ್ಷಣ ಮಾರ್ಗದರ್ಶಿ ಆ್ಯಪ್‌ಗಳು   

ಸಂಗೀತ ಪ್ರಿಯರಿಗಾಗಿ ಸೋನಿ ಕಂಪೆನಿಯ ರಿಂಗ್‌ಮೈಟೂನ್  ಮತ್ತು ವಿದ್ಯಾರ್ಥಿಗಳಿಗಾಗಿ ಎಜುಟೆಕ್‌  ಈ ವಾರ ಬಿಡುಗಡೆಯಾಗಿರುವ ನೂತನ ಆ್ಯಪ್‌ಗಳು. ಇವುಗಳ ಸಂಕ್ಷಿಪ್ತ ಪರಿಚಯದ ಜತೆಗೆ ಸ್ಮಾರ್ಟ್‌ ಗ್ಯಾಜೆಟ್‌ಗಳ ಮಾರುಕಟ್ಟೆ ವಿಶ್ಲೇಷಣೆಯೂ ಇಲ್ಲಿದೆ.

ರಿಂಗ್‌ಮೈಟೂನ್  ಆ್ಯಪ್‌
ಸಂಗೀತ ಪ್ರಿಯರಿಗಾಗಿ ಸೋನಿ ಕಂಪೆನಿ ನೂತನ ರಿಂಗ್‌ಮೈಟೂನ್‌ ಆ್ಯಪ್‌ ಬಿಡುಗಡೆ ಮಾಡಿದೆ.  ಬಿಡುಗಡೆಯಾದ ಒಂದೇ ವಾರದಲ್ಲಿ ಹತ್ತು ಲಕ್ಷ ಮಂದಿ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿರುವುದು ಇದರ ವಿಶೇಷತೆಯಾಗಿದೆ.

ಪಾಶ್ಚಿಮಾತ್ಯ, ಬಾಲಿವುಡ್, ಹಾಲಿವುಡ್ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದ ಲಕ್ಷಾಂತರ ಸಂಗೀತ ಆಲ್ಬಂಗಳನ್ನು ಈ ಆ್ಯಪ್‌ನಲ್ಲಿ ಸಂಗ್ರಹಿಸಲಾಗಿದೆ ಎಂದು ಸೋನಿ ಕಂಪೆನಿಯ ಭಾರತೀಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ರೋಹಿತ್ ಕುಲಕರ್ಣಿ ತಿಳಿಸಿದ್ದಾರೆ.

ಭಾರತೀಯ ಪ್ರಾದೇಶಿಕ ಭಾಷೆಗಳ ಸಿನಿಮಾ ಹಾಡುಗಳು, ಪಾಪ್, ಹಿಪ್‌ಹಾಪ್‌, ರಾಕ್, ರೆಗ್ಗೆ, ಕಂಟ್ರಿ, ಜಾನಪದ ಸೇರಿದಂತೆ 20 ಲಕ್ಷ ಹಾಡುಗಳು ಈ ಆ್ಯಪ್‌ನಲ್ಲಿ ಲಭ್ಯವಿದ್ದು  ಕೇಳುಗರು ಉಚಿತವಾಗಿ  ಹಾಡುಗಳನ್ನು ಆಲಿಸಬಹುದಾಗಿದೆ. ಆಂಡ್ರಾಯ್ಡ್‌, ಐಒಎಸ್ ಮತ್ತು ವಿಂಡೋಸ್‌ ಮಾದರಿಗಳಲ್ಲೂ ರಿಂಗ್‌ಮೈಟೂನ್ ಆ್ಯಪ್‌ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಬೇಸ್ ಸೌಂಡ್, ಡಿಟಿಎಚ್‌ ಸೌಂಡ್, ಡಾಲ್ಬಿಯಂತಹ  ಗುಣಮಟ್ಟದ  ವೈಶಿಷ್ಟ್ಯಗಳನ್ನು ಈ ಆ್ಯಪ್‌ನಲ್ಲಿ ಪರಿಚಯಿಸಲಾಗಿದೆ. ಇಯರ್‌ ಫೋನ್‌ ಬಳಸಿ ಸಂಗೀತ ಆಲಿಸುವವರು ರಂಜನೆ ಪಡೆಯುತ್ತ ಗಾನ ಸುಧೆ ಸವಿಯಬಹುದು ಎಂದು ರೋಹಿತ್ ಕುಲಕರ್ಣಿ ಹೇಳುತ್ತಾರೆ.

ಗ್ರಾಹಕರು ತಮ್ಮ ಮೊಬೈಲ್‌ ಫೋನ್‌ಗಳಿಗೆ ಈ  ಆ್ಯಪ್‌ನಲ್ಲಿರುವ ಹಾಡುಗಳನ್ನು ರಿಂಗ್‌ ಟೂನ್‌ ಆಗಿ ಪರಿರ್ವತಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ.  ಸಂಗೀತ ಮತ್ತು ಹಿನ್ನೆಲೆ ಧ್ವನಿಯನ್ನು ಬೇರ್ಪಡಿಸುವ ಅಪ್ಲಿಕೇಶನ್‌ಗಳೂ ಈ ಆ್ಯಪ್‌ನಲ್ಲಿ ಇವೆ. ಸದ್ಯಕ್ಕೆ ಈ ಆ್ಯಪ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಮುಂದಿನ ದಿನಗಳಲ್ಲಿ  ಆ ಆ್ಯಪ್‌ ಬಳಸಲು ಹಣ ಪಾವತಿ ಮಾಡಬೇಕಾಗುತ್ತದೆ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.
RingMyTune App

***
ವಿದ್ಯಾರ್ಥಿಗಳಿಗೆ ಎಜುಟೆಕ್‌ ಆ್ಯಪ್‌...

ಶಿಕ್ಷಣವನ್ನು ತಂತ್ರಜ್ಞಾನದ ಮೂಲಕ ಕಲಿಯಬೇಕು ಎಂಬ ಉದ್ದೇಶದೊಂದಿಗೆ ಹಲವಾರು ಶಿಕ್ಷಣ ಸ್ನೇಹಿ ಆ್ಯಪ್‌ಗಳನ್ನು ರೂಪಿಸಿರುವ ನೋಟ್‌ಜೆನ್‌ ಸಂಸ್ಥೆ ಇದೀಗ ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗಾಗಿ ನೂತನ  ‘ಎಜುಟೆಕ್‌’ ಆ್ಯಪ್‌ ಅನ್ನು ಕಳೆದ ವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಪ್ರೌಢಶಾಲಾ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕುಳಿತುಕೊಳ್ಳುವವರನ್ನು ಗಮನದಲ್ಲಿಟ್ಟುಕೊಂಡು ಈ ಆ್ಯಪ್‌ ವಿನ್ಯಾಸ ಮಾಡಲಾಗಿದೆ ಎಂದು ನೋಟ್‌ಜೆನ್‌ ಕಂಪೆನಿ ಸಿಇಒ ಮನಕ್‌ ಗುಲಾಟಿ ತಿಳಿಸಿದ್ದಾರೆ.

ಐಒಎಸ್‌ ಮತ್ತು ಆಂಡ್ರಾಯ್ಡ್‌ ಪ್ಲಾಟ್‌ಫಾರಂನಲ್ಲಿ ಮಾತ್ರ ಈ  ಆ್ಯಪ್ ಲಭ್ಯವಿದ್ದು ವಿದ್ಯಾರ್ಥಿಗಳು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ನುರಿತ ಶಿಕ್ಷಣ ತಜ್ಞರು ಮತ್ತು ಅಧ್ಯಾಪಕರು ಕಾಲ ಕಾಲಕ್ಕೆ ಈ ಆ್ಯಪ್‌  ನವೀಕರಿಸುತ್ತಾರೆ.  ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗಿನ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಪಠ್ಯಗಳನ್ನು ಈ ಆ್ಯಪ್‌ನಲ್ಲಿ ಅಳವಡಿಸಲಾಗಿದೆ.
 EdTech App

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.