ADVERTISEMENT

ಸೈಬರ್‌ ಸುರಕ್ಷತೆಯ ಅರಿವಿನ ಕೊರತೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 19:30 IST
Last Updated 1 ಡಿಸೆಂಬರ್ 2015, 19:30 IST
ಸೈಬರ್‌ ಸುರಕ್ಷತೆಯ ಅರಿವಿನ ಕೊರತೆ
ಸೈಬರ್‌ ಸುರಕ್ಷತೆಯ ಅರಿವಿನ ಕೊರತೆ   

ಗರಿಷ್ಠ ಗರಿಷ್ಠ ವೇಗದ ಅಂತರ್ಜಾಲ ವ್ಯವಸ್ಥೆ   ಕಲ್ಪಿಸುವ ಮೂಲಕ ಗ್ರಾಮೀಣ ಭಾಗದ ಚಿತ್ರಣ ಬದಲಿಸುವ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರದ್ದು. ಈ ಮೂಲಕ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ, ಆರೋಗ್ಯ, ಮನರಂಜನೆ ಒದಗಿಸಲು ಹಾಗೂ ವ್ಯಾಪಾರ ವೃದ್ಧಿ ಮೂಲಕ ದೇಶದ ಆರ್ಥಿಕ ಅಭಿವೃದ್ಧಿ ವೇಗ ಹೆಚ್ಚಿಸಲು ಅಂತರ್ಜಾಲ ಬಳಕೆ ಅಗತ್ಯ ಎನ್ನುವುದು ಮೋದಿ ಪ್ರತಿಪಾದನೆ.  ಆದರೆ ಇದಕ್ಕೆ ಪೂರಕವಾಗಿ ಸೈಬರ್‌ ಸುರಕ್ಷತೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಕೆಲಸದಲ್ಲಿ ಮಾತ್ರ ಸರ್ಕಾರ ಬಹಳಷ್ಟು ಹಿಂದೆ ಉಳಿದಿದೆ ಎನ್ನುತ್ತದೆ ಅಧ್ಯಯನ ವರದಿ.

‘ಡಿಜಿಟಲ್‌ ಇಂಡಿಯಾ ಸಾಕಾರವಾಗಬೇಕಾದರೆ, ಮೊದಲು ಅಂತರ್ಜಾಲದ ಸುರಕ್ಷಿತ ಬಳಕೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ ಎನ್ನುವುದು ನಾರ್ಟನ್‌ ಸಂಸ್ಥೆ ಅಭಿಪ್ರಾಯವಾಗಿದೆ. ಕಳೆದ ವರ್ಷ ಭಾರತದಲ್ಲಿ ಅಂದಾಜು  11 ಕೋಟಿಗಳಷ್ಟು  ಅಂತರ್ಜಾಲ ಬಳಕೆದಾರರು ಸೈಬರ್‌ ದಾಳಿಗೆ ತುತ್ತಾಗಿದ್ದಾರೆ. ಇಂತಹ ದಾಳಿಯಿಂದ ಪಾರಾಗಲು ಬಳಕೆದಾರನೊಬ್ಬ ಸರಾಸರಿ ₹ 16 ಸಾವಿರದಷ್ಟು ನಷ್ಟ ಮಾಡಿಕೊಂಡಿದ್ದಾನೆ.  ಜತೆಗೆ ಕನಿಷ್ಠ 30 ಗಂಟೆ ಅತ್ಯಮೂಲ್ಯ ಸಮಯವನ್ನೂ ಕಳೆದುಕೊಂಡಿದ್ದಾನೆ ಎಂದು ನಾರ್ಟನ್‌ ಇಂಡಿಯಾದ ವ್ಯವಸ್ಥಾಪಕ ರಿತೇಶ್‌ ಛೋಪ್ರಾ ಮಾಹಿತಿ ನೀಡಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಸ್ಮಾರ್ಟ್‌ಫೋನ್‌ ಮೂಲಕ ಆನ್‌ಲೈನ್‌ ಪ್ರವೇಶಿಸುವವರಿಗೆ ಆನ್‌ಲೈನ್‌ ಸುರಕ್ಷತೆಯ ಬಗ್ಗೆ ಕನಿಷ್ಠ ಮಟ್ಟದ ಅರಿವಿರಬೇಕು. ಆದರೆ ಕೆಲವರಿಗೆ ‘ಸ್ಮಾರ್ಟ್‌’ ಸಾಧನಗಳು ಮತ್ತು ಜಾಲತಾಣ ಹೇಗೆ ಕಾರ್ಯನಿರ್ವಹಿಸುತ್ತವೆ ಎನ್ನುವುದರ ಬಗ್ಗೆ ತಿಳಿವಳಿಕೆಯೇ ಇರುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ದೇಶದಲ್ಲಿರುವ ಬಹುಪಾಲು ಅಂತರ್ಜಾಲ ಬಳಕೆದಾರರು ತಮ್ಮ ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಹಣ ಉಳಿಸುವ ಉದ್ದೇಶದಿಂದ ಸುರಕ್ಷಿತವಲ್ಲದ ಮೂಲಗಳಿಂದ (ಅಂದರೆ, ಗೂಗಲ್‌ ಪ್ಲೆ ಸ್ಟೋರ್‌, ಆ್ಯಪಲ್‌ ಸ್ಟೋರ್‌ ಇತ್ಯಾದಿ) ಆ್ಯಪ್‌, ಮ್ಯೂಸಿಕ್‌ ಮತ್ತು ಮೂವಿ ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಅವರು ಸೈಬರ್ ದಾಳಿಗೆ ಗುರಿಯಾಗಿ ವೈಯಕ್ತಿಕ ಮಾಹಿತಿ ಸೋರಿಕೆಯಾಗಿ ಆರ್ಥಿಕ  ಹಾನಿ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿ ವಿಶ್ಲೇಷಿಸಿದೆ.

***
ಸಂಸ್ಥೆಯ ವಾದ
1. ಯುವ ಪೀಳಿಗೆಗೆ ಹೆಚ್ಚಿನ ಶಿಕ್ಷಣ
ಇಂದಿನ ಯುವ ಪೀಳಿಗೆ ಅಂತರ್ಜಾಲ ದೊಟ್ಟಿಗೇ ಬೆಳೆಯುವುದರಿಂದ 24 ವರ್ಷದ ಒಳಗಿನ ಯುವ ಸಮೂಹಕ್ಕೆ ಸೈಬರ್‌ ಸುರಕ್ಷತೆಯ ಬಗ್ಗೆ ಹೆಚ್ಚಿನ ಶಿಕ್ಷಣ ನೀಡುವ ಅಗತ್ಯವಿದೆ ಎನ್ನುತ್ತದೆ ವರದಿ.

10 ರಲ್ಲಿ 4 ಮಂದಿ ತಾವು ಸೈಬರ್‌ ಅಪರಾಧಕ್ಕೆ ಗುರಿಯಾಗುವುದಿಲ್ಲ ಎನ್ನುವ  ಭಾವನೆ ತಳೆದಿದ್ದಾರೆ. 10ರಲ್ಲಿ 7 ಮಂದಿಗೆ  ಸೈಬರ್‌ ಅಪರಾಧದ ಅನುಭವವಾಗಿರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಪ್ರತಿ ದಿನ ಸಾವಿರಾರು ಸ್ಮಾರ್ಟ್‌ಫೋನ್‌ಗಳು ಮಾರಾಟವಾಗುತ್ತಿವೆ. ಇಂತಹ ಫೋನ್ ಖರೀದಿಸುವ ಬಹುಪಾಲು ಬಳಕೆದಾರರು ಅಂತರ್ಜಾಲವನ್ನೂ ಪ್ರವೇಶಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಂತರ್ಜಾಲ ಬಳಕೆ ಮುನ್ನ ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.

2. ವ್ಯವಸ್ಥಿತ ದಾಳಿ
ಹೊಸ ಹೊಸ ತಂತ್ರಜ್ಞಾನ ಆವಿಷ್ಕಾರವಾಗುತ್ತಿರುವಂತೆಯೇ, ಸೈಬರ್ ಅಪರಾಧವೂ ಹೊಸ ರೂಪ ಪಡೆದುಕೊಳ್ಳುತ್ತಿದೆ.  ಹೊಸ ಸಾಧನಗಳನ್ನು ಬಳಸಿಕೊಂಡು ವ್ಯವಸ್ಥಿತ ರೀತಿಯಲ್ಲಿ ದಾಳಿ ನಡೆಸುತ್ತಿದ್ದಾರೆ. ಸ್ಮಾರ್ಟ್‌ಫೋನ್‌, ವೈ–ಫೈ ಗಳನ್ನು ತಮ್ಮ ನಿಯಂತ್ರಣಕ್ಕೆ ಪಡೆದು ಬಳಕೆ ದಾರರಿಗೆ ಹಾನಿ ಉಂಟುಮಾಡುತ್ತಿದ್ದಾರೆ. ಇಂತಹ ದಾಳಿಗಳು ನಡೆಯುತ್ತಿವೆ ಎಂದು ಅರಿತುಕೊಳ್ಳ ಲಾದರೂ ಅಂತರ್ಜಾಲ ಸುರಕ್ಷತೆ ಬಗ್ಗೆ ಸಾಮನ್ಯ ಮಟ್ಟದ ಅರಿವಿರಬೇಕಾಗುತ್ತದೆ ಎನ್ನುವುದು ನಾರ್ಟನ್‌ ವಾದ. ಅಂತರ್ಜಾಲ ಭದ್ರತೆಗೆ ಪ್ರಮುಖ ಕಂಪೆನಿಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದೇ ಬಗೆಯಲ್ಲಿ ಸೈಬರ್‌ ಅಪರಾಧಿಗಳ ಗುಂಪು  ಕೂಡಾ ದಾಳಿಗೆ ಹೊಸ,ಹೊಸ ಮಾರ್ಗಗಳನ್ನು ಹುಡುಕಿ ಕೊಳ್ಳುತ್ತಿದ್ದಾರೆ ಎನ್ನುವುದನ್ನೂ ಮರೆಯಬಾರದು ಎಂದು ಎಚ್ಚರಿಸಿದೆ.

3.ಫ್ರೀವೇರ್‌
ಉಚಿತ ಆ್ಯಪ್‌ಗಳಿಗಾಗಿ ಬಹಳಷ್ಟು ಮಂದಿ ಅನಧಿಕೃತವಾದಂತಹ ಜಾಲತಾಣಗಳ ಮೊರೆ ಹೋಗುತ್ತಾರೆ. ಅಲ್ಲಿಂದ ಕಾಪಿರೈಟ್‌ ನಿಯಮ ಉಲ್ಲಂಘಿಸಿರುವ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳತ್ತಿದ್ದಾರೆ. ಇವುಗಳು ಮಾಲ್‌ವೇರ್‌ ಅಥವಾ ಆ್ಯಡ್‌ ವೇರ್‌ಗಳಿಂದ ಕೂಡಿದ್ದು, ಸಾಧನಕ್ಕೆ ನಷ್ಟ ಮಾಡುವ ಇಲ್ಲವೇ ವೈಯಕ್ತಿಕ ಮಾಹಿತಿ ಕದಿಯುವ ಸಾಧ್ಯತೆ ಹೆಚ್ಚಿರುತ್ತದೆ.

ಹಾಗೆಂದ ಮಾತ್ರಕ್ಕೆ ಉಚಿತವಾಗಿ ಸಿಗುವುದೆಲ್ಲವನ್ನೂ ಅನುಮಾನದಿಂದ ನೋಡಲಾಗುವುದಿಲ್ಲ. ಬಳಸುವ ಮುನ್ನ ಆ ಕಂಪೆನಿಯ ಮೂಲ ಉದ್ದೇಶ, ಇನ್‌ಸ್ಟಾಲ್‌ ಮಾಡಿಕೊಳ್ಳುವಾಗ ಏನೆಲ್ಲಾ ಬಳಸಿಕೊಳ್ಳಲು ಅನುಮತಿ ಕೇಳುತ್ತದೆ ಎನ್ನುವುದನ್ನೂ ಗಮನಿಸಬೇಕಾಗುತ್ತದೆ ಎಂದು ವರದಿ ಸಲಹೆ ನೀಡಿದೆ.

4. ಸರಳ ಪಾಸ್‌ವರ್ಡ್‌ ಬಳಕೆ
ನೆನಪಿಟ್ಟುಕೊಳ್ಳಲು ಸುಲಭ ಆಗಲೆಂದು ಬಹಳಷ್ಟು ಬಳಕೆದಾರರು ಕಂಪ್ಯೂಟರ್‌ ಅಥವಾ ಮೊಬೈಲ್‌ ಲಾಗ್‌ಇನ್‌ ಆಗುವುದು, ಇ–ಮೇಲ್‌, ಫೇಸ್‌ಬುಕ್‌, ಆನ್‌ಲೈನ್‌ ಬ್ಯಾಂಕಿಂಗ್‌ ಹೀಗೆ ಪ್ರತಿಯೊಂದಕ್ಕೂ ಒಂದೇ ಪಾಸ್‌ವರ್ಡ್‌ ಬಳಸುತ್ತಿದ್ದಾರೆ. ‘12345’ ಅತಿ ಹೆಚ್ಚು ಬಳಕೆಯಲ್ಲಿರುವ ಪಾಸ್‌ವರ್ಡ್‌ ಆಗಿದೆ. ಪಾಸ್‌ವರ್ಡ್‌ ಸುರಕ್ಷಿತ ಎಂದೆನಿಸಿಕೊಳ್ಳಲು ಅಕ್ಷರಗಳು, ಸಂಖ್ಯೆ ಮತ್ತು ಸಂಕೇತಗಳನ್ನು ಸೇರಿಸಿಕೊಂಡು ಒಟ್ಟು 8 ಅಕ್ಷರಗಳನ್ನು ಹೊಂದಿರಲೇಬೇಕು.

***
ವೈಯಕ್ತಿಕ ಮಾಹಿತಿ ವಿನಿಮಯ  ಪ್ರಮಾಣ

* 60% - 55% ಇ–ಮೇಲ್‌ ಪಾಸ್‌ವರ್ಡ್‌

* 55%- 43% ಸಾಮಾಜಿಕ ಜಾಲತಾಣದ  ಪಾಸ್‌ವರ್ಡ್‌

* 36%- 27% ಬಾಂಕ್‌ ಖಾತೆ ಹಂಚಿಕೊಳ್ಳುವುವವರು

***
ಅಧ್ಯಯನದ ವಿಶೇಷ
17 ಸಾವಿರ ಸಾಧನಗಳು
18 ಅಥವಾ ಅದಕ್ಕೂ ಹೆಚ್ಚಿನ ವಯೋಮಾನದವರು
17 ಮಾರುಕಟ್ಟೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT