ADVERTISEMENT

ಸ್ಮಾರ್ಟ್‌ ಗ್ಯಾಜೆಟ್ಸ್‌ನಿಂದ ಬದಲಾದ ಮಕ್ಕಳ ದಿನಚರಿ

ಜಕ್ಕಣಕ್ಕಿ ಎಂ ದಯಾನಂದ
Published 23 ಮೇ 2017, 19:30 IST
Last Updated 23 ಮೇ 2017, 19:30 IST
ಸ್ಮಾರ್ಟ್‌ ಗ್ಯಾಜೆಟ್ಸ್‌ನಿಂದ ಬದಲಾದ ಮಕ್ಕಳ ದಿನಚರಿ
ಸ್ಮಾರ್ಟ್‌ ಗ್ಯಾಜೆಟ್ಸ್‌ನಿಂದ ಬದಲಾದ ಮಕ್ಕಳ ದಿನಚರಿ   

ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳ ಅತಿಯಾದ ಬಳಕೆಯಿಂದ ಮಕ್ಕಳ ದಿನಚರಿಯೇ ಬದಲಾಗಿದೆ. ಗ್ಯಾಜೆಟ್‌ಗಳ ಕಡೆ ಆಸಕ್ತಿ ವಹಿಸುವ ಮಕ್ಕಳ ಬಗ್ಗೆ  ಪೋಷಕರೂ ತಲೆಕೆಡಿಸಿಕೊಳ್ಳದ ಕಾರಣ  ಅವರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳ ಪರಿಚಯವಾದ ನಂತರ ಮಕ್ಕಳು ಮಲಗುವ ಸಂದರ್ಭದಲ್ಲಿನ ಹವ್ಯಾಸ (ಬೆಡ್‌ಟೈಮ್‌ ಹ್ಯಾಬಿಟ್‌)ಗಳಲ್ಲಿ  ಭಾರಿ ಬದಲಾವಣೆ ಆಗಿದೆ ಎಂದು ಎಂಸಿಎಎಫ್‌ಇಇ (McAfee) ಸೈಬರ್ ಸೆಕ್ಯುರಿಟಿ ಕಂಪೆನಿಯ ಅಧ್ಯಯನ ಹೇಳಿದೆ.

ಆನ್‌ಲೈನ್‌ನಲ್ಲಿ ಮಕ್ಕಳು ಚಾಟಿಂಗ್‌ ನಡೆಸುವುದು ಮತ್ತು  ಎಷ್ಟು ಗಂಟೆ ಅವರು  ಅದರಲ್ಲಿ ಕಳೆಯುತ್ತಾರೆ ಎಂಬುದರ  ಬಗ್ಗೆ ಪೋಷಕರು ಗಮನಿಸುತ್ತಾರೆ ಎಂದು ಜಾಗತಿಕ ಅಧ್ಯಯನವೊಂದು ವಿವರಿಸಿದೆ.

ADVERTISEMENT

‘ಇಂದಿನ ಇಂಟರ್‌ನೆಟ್ ಸಂಪರ್ಕದ ಪ್ರಪಂಚದಲ್ಲಿ ಮಕ್ಕಳಿಂದ ತಂತ್ರಜ್ಞಾನದ ಬಳಕೆ ಮತ್ತು ಅವುಗಳ ಪರಿಣಾಮಗಳ ಬಗ್ಗೆ ಪೋಷಕರು ತೀರ್ಮಾನಿಸಬೇಕು’ ಎಂದು ಎಂಸಿಎಎಫ್‌ಇಇ ದಕ್ಷಿಣ ಏಷ್ಯಾ ವ್ಯವಸ್ಥಾಪಕ ನಿರ್ದೇಶಕ ಆನಂದ್‌ ರಾಮಮೂರ್ತಿ ಹೇಳುತ್ತಾರೆ.

ಗ್ಯಾಜೆಟ್‌ಗಳ ಅತಿಯಾದ ಬಳಕೆಯಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಪೋಷಕರಿಗೆ ಅರಿವಿದೆ. ಶೇ 93 ರಷ್ಟು ಪೋಷಕರು ಮಕ್ಕಳಿಗೆ ಬುದ್ಧಿವಾದ ಹೇಳಿದ್ದಾರೆ.

ನಿದ್ರಾಹೀನತೆ ಸಮಸ್ಯೆ: ಗ್ಯಾಜೆಟ್‌ಗಳಿಗೆ ಮಕ್ಕಳು ವಿಪರೀತ ಅಂಟಿಕೊಳ್ಳುವುದರಿಂದ  ಅವರಲ್ಲಿ ನಿದ್ರಾಹೀನತೆ ಕಾಡುತ್ತದೆ. 16 ರಿಂದ 19 ವರ್ಷದವರೆಗಿನ 10 ಸಾವಿರ ಮಕ್ಕಳ ಪ್ರವೃತ್ತಿ ಕುರಿತು ನಡೆಸಿದ ಅಧ್ಯಯನದಿಂದ ಇದು ಸಾಬೀತಾಗಿದೆ. ನಾರ್ವೆಯಲ್ಲಿ ಈ ಅಧ್ಯಯನ ನಡೆಸಲಾಗಿದೆ.

ಮಕ್ಕಳು ಮಲಗುವ ಮೊದಲು ಮೊಬೈಲ್‌, ಟಿ.ವಿ. ಕಂಪ್ಯೂಟರ್‌, ಟ್ಯಾಬ್ಲೆಟ್‌ಗಳಿಂದ ಕನಿಷ್ಠ ಒಂದು ಗಂಟೆಯಾದರೂ ದೂರ ಇರಬೇಕು. 

ನಾಲ್ಕು ಗಂಟೆಗೂ ಅಧಿಕ ಕಾಲ ಡಿಜಿಟಲ್‌ ಸ್ಕ್ರೀನ್‌ ಅನ್ನು ನಿರಂತರವಾಗಿ ನೋಡಿದರೆ ಶೇ 49 ರಷ್ಟು ನಿದ್ರೆಗೆ ತೊಂದರೆಯಾಗುತ್ತದೆ. ಅವರು ನಿದ್ರೆಗೆ ಜಾರಲು ಒಂದು ಗಂಟೆ ತೆಗೆದುಕೊಳ್ಳುತ್ತಾರೆ. ಡಿಜಿಟಲ್‌ ಸ್ಕ್ರೀನ್‌ ಅನ್ನು ನೋಡುವುದರಿಂದ ಮಕ್ಕಳಲ್ಲಿ ಖಿನ್ನತೆ ಮತ್ತು ಆತಂಕದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಲಗುವ ಸಮಯದಲ್ಲಿ ಮೊಬೈಲ್‌ ನೋಡುವುದರಿಂದ ದೇಹದ ನರವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಚಯಾಪಚಯ ಕ್ರಿಯೆ ಸೂಕ್ಷ್ಮವಾಗಿರುವುದರಿಂದ ಹಾರ್ಮೋನ್‌ಗಳ ವ್ಯತ್ಯಾಸಕ್ಕೂ ಕಾರಣವಾಗಲಬಲ್ಲದು ಎಂದು ತಜ್ಞ ವೈದ್ಯರು  ಹೇಳಿದ್ದಾರೆ. ಟ್ಯಾಬ್ಲೆಟ್‌ಗಳ ಬಳಕೆಯಿಂದ ನಿದ್ರೆ ಉತ್ತೇಜಿಸುವ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಸಾಕಷ್ಟು ಜನ ರಾತ್ರಿ ವೇಳೆ ಸ್ಮಾರ್ಟ್ ಫೋನ್‌ ಮತ್ತು ಟ್ಯಾಬ್ಲೆಟ್‌ಗಳನ್ನು ದೂರ ಇಡಲು ಬಯಸುವುದಿಲ್ಲ. ಏಕೆಂದರೆ ಪ್ರಮುಖವಾದ ಮಾಹಿತಿ ನೋಡುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು ಎಂಬ ಭಾವನೆ ಅವರದು. ಇದರಿಂದಾಗಿಯೇ ಮಕ್ಕಳು ತಮ್ಮ ಪೋಷಕರ ಗ್ಯಾಜೆಟ್‌ಗಳನ್ನು ಬಳಸುತ್ತಾರೆ.

ಬೋಸ್ಟನ್‌ನಲ್ಲಿ ಅಧ್ಯಯನ

ನಿದ್ರೆ ಆರಂಭಿಸುವುದಕ್ಕೂ ಮೊದಲು ಪುಸ್ತಕ ಹಿಡಿದು ಓದುವುದು ಮತ್ತು ಐಪಾಡ್‌ಗಳಲ್ಲಿ ಓದುವ ಒಂದು ತುಲನಾತ್ಮಕ ಅಧ್ಯಯನವನ್ನು ಬೋಸ್ಟನ್‌ನ ಆಸ್ಪತ್ರೆಯೊಂದರಲ್ಲಿ ಮಾಡಲಾಗಿದೆ. 12 ಸದಸ್ಯರ ಎರಡು ತಂಡಗಳನ್ನು ಮಾಡಿ ಅದರಲ್ಲಿ ಒಂದು ತಂಡಕ್ಕೆ ನಿದ್ರೆ ಆರಂಭಿಸುವುದಕ್ಕಿಂತ ನಾಲ್ಕು ಗಂಟೆ ಮೊದಲು ಐಪಾಡ್‌  ಮತ್ತು ಪುಸ್ತಕ ಓದಲು ತಿಳಿಸಲಾಗಿತ್ತು. ಐದು ದಿನಗಳ ನಂತರ ಮುದ್ರಿತ ಪುಸ್ತಕ ಓದಿದವರಿಗಿಂತ ಐಪಾಡ್‌ನಲ್ಲಿ ಓದಿದವರ  ದೇಹದಲ್ಲಿ ಹಾರ್ಮೋನ್‌ಗಳ ವ್ಯತ್ಯಾಸವಾಗಿದ್ದವು.

**

ಅಧ್ಯಯನದ ಸಾರಾಂಶ

* 1-2 ಗಂಟೆ ಭಾರತದ ಪೋಷಕರಲ್ಲಿ ಶೇ 57 ರಷ್ಟು ಪೋಷಕರು ತಮ್ಮ ಮಕ್ಕಳು ದಿನದಲ್ಲಿ ಸ್ಮಾರ್ಟ್ ಸ್ಕ್ರೀನ್‌ ಬಳಸಲು ಬಿಡುತ್ತಾರೆ

* 84% ಮಕ್ಕಳಿಗೆ ಇಂಟರ್ನೆಟ್‌ ಸಂಪರ್ಕ ಹೊಂದಿರುವ ಗ್ಯಾಜೆಟ್‌ಗಳನ್ನು ಹಾಸಿಗೆಗೆ ಒಯ್ಯಲು ಬಿಡುವ ಭಾರತೀಯರು

* 21% ಮಕ್ಕಳನ್ನು ದಿನದಲ್ಲಿ ಒಂದು ಗಂಟೆಗೂ ಕಡಿಮೆ ಸ್ಮಾರ್ಟ್‌ ಸ್ಕ್ರೀನ್‌ ಬಳಸಲು ಬಿಡುವ ಪಾಲಕರ ಪ್ರಮಾಣ

* 54% ಮಕ್ಕಳು ಸೂಕ್ತವಲ್ಲದ ಅಂತರ್ಜಾಲ ತಾಣಗಳನ್ನು ನೋಡಿರುತ್ತಾರೆ ಎಂಬುದನ್ನು ಭಾರತದ ಪೋಷಕರು ಗಮನಿಸಿದ್ದಾರೆ. ಇತರ ದೇಶಗಳಲ್ಲಿ ಇದು ಶೇ 13 ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.