ADVERTISEMENT

₹ 28 ಸಾವಿರಕ್ಕೆ ಸ್ಯಾಮ್ಸಂಗ್‌ ‘ಗ್ಯಾಲಕ್ಸಿ ನೋಟ್‌ 7 ಆರ್‌’?

ನೋಟ್‌ 7ನ ಅರ್ಧದ ಬೆಲೆ ಮಾರಲು ಚಿಂತನೆ

ಏಜೆನ್ಸೀಸ್
Published 13 ಮೇ 2017, 6:29 IST
Last Updated 13 ಮೇ 2017, 6:29 IST
₹ 28 ಸಾವಿರಕ್ಕೆ ಸ್ಯಾಮ್ಸಂಗ್‌ ‘ಗ್ಯಾಲಕ್ಸಿ ನೋಟ್‌ 7 ಆರ್‌’?
₹ 28 ಸಾವಿರಕ್ಕೆ ಸ್ಯಾಮ್ಸಂಗ್‌ ‘ಗ್ಯಾಲಕ್ಸಿ ನೋಟ್‌ 7 ಆರ್‌’?   

ನವದೆಹಲಿ: ಬ್ಯಾಟರಿ ದೋಷದಿಂದಾಗಿ ವಾಪಸ್‌ ಪಡೆದಿದ್ದ ಸ್ಯಾಮ್ಸಂಗ್‌ ಗ್ಯಾಲಕ್ಸಿ ನೋಟ್‌ 7 ಸ್ಮಾರ್ಟ್‌ಫೋನ್‌ನ ಹೊಸ ಆವೃತ್ತಿಯನ್ನು ಮಾರುಕಟ್ಟೆಗೆ ತರಲು ಕಂಪೆನಿ ಮುಂದಾಗಿದೆ. ‘ಸ್ಯಾಮ್ಸಂಗ್‌ ಗ್ಯಾಲಕ್ಸಿ ನೋಟ್‌ 7ಆರ್‌’ ಹೆಸರಿನ ಹೊಸ ಸ್ಮಾರ್ಟ್‌ಫೋನ್‌ ಅನ್ನು ಗ್ಯಾಲಕ್ಸಿ ನೋಟ್‌ 7ನ ಅರ್ಧದಷ್ಟು ಬೆಲೆಗೆ ಮಾರಲು ಕಂಪೆನಿ ನಿರ್ಧರಿಸಿದೆ ಎಂದು ವರದಿಯಾಗಿದೆ.

‘ನೋಟ್‌ 7ಆರ್‌’ ಮೇ ತಿಂಗಳ ಅಂತ್ಯಕ್ಕೆ ಅಥವಾ ಜೂನ್‌ ಮೊದಲಿಗೆ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ನೋಟ್‌ 7ನಲ್ಲಿದ್ದ ದೋಷಗಳನ್ನೆಲ್ಲಾ ನಿವಾರಿಸಿಕೊಂಡು ‘ನೋಟ್‌ 7ಆರ್‌’ ತಯಾರಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ಗೆ ಫೆಡರಲ್‌ ಕಮ್ಯುನಿಕೇಷನ್ಸ್‌ ಕಮಿಷನ್‌ನಿಂದ ಪ್ರಮಾಣಪತ್ರವೂ ಸಿಕ್ಕಿದೆ ಎಂದು ಕಂಪೆನಿ ಹೇಳಿದೆ.

ನೋಟ್‌ 7ಆರ್‌ ಸ್ಮಾರ್ಟ್‌ಫೋನ್‌ಗೆ ಕಂಪೆನಿ ಅಂದಾಜು ₹ 39,708 ಬೆಲೆ ನಿಗದಿಪಡಿಸಬಹುದು ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ನೋಟ್‌ 7 ಸ್ಮಾರ್ಟ್‌ಫೋನ್‌ನ ಅರ್ಧದಷ್ಟು ಬೆಲೆಗೆ ಅಂದರೆ ಸುಮಾರು ₹ 28 ಸಾವಿರಕ್ಕೆ ಈ ಹೊಸ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಂಪೆನಿ ಮುಂದಾಗಿದೆ ಎನ್ನುತ್ತವೆ ಮೂಲಗಳು. ‘ಗ್ಯಾಲಕ್ಸಿ ನೋಟ್‌ 7’ನ ಬೆಲೆ ₹59,900 ಆಗಿತ್ತು.

ADVERTISEMENT

ಕಳೆದ ವರ್ಷ ಆಗಸ್ಟ್‌ 19ರಂದು ಸ್ಯಾಮ್ಸಂಗ್‌ ಗ್ಯಾಲಕ್ಸಿ ನೋಟ್‌ 7 ಸ್ಮಾರ್ಟ್‌ಫೋನ್‌ ಅನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಸ್ಮಾರ್ಟ್‌ಫೋನ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಮೊಬೈಲ್‌ ಪರದೆ ಸುಟ್ಟು ಹೋಗಿರುವ ಮತ್ತು ಸ್ಪೋಟದಿಂದ ಕರಗಿರುವ ಚಿತ್ರ, ವಿಡಿಯೊಗಳನ್ನು ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

ಇಂತಹ ಘಟನೆಗಳು ಹೆಚ್ಚಾದ ಬಳಿಕ ಎಚ್ಚೆತ್ತುಕೊಂಡ ಕಂಪೆನಿ, ಜಾಗತಿಕ ಮಟ್ಟದಲ್ಲಿ 25 ಲಕ್ಷ ನೋಟ್‌ 7 ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಿಂದ ವಾಪಸ್‌ ಪಡೆದಿತ್ತು. ಈ ಸ್ಮಾರ್ಟ್‌ಫೋನ್‌ಗಳನ್ನು ವಿಮಾನಗಳಲ್ಲೂ ನಿಷೇಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.