ADVERTISEMENT

ಕೋವಿಡ್‌ಗೆ ಪರಿಣಾಮಕಾರಿ ಪ್ರತಿಜನಕ ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನ ಸಂಸ್ಥೆ

ಪಿಟಿಐ
Published 10 ಜನವರಿ 2024, 14:09 IST
Last Updated 10 ಜನವರಿ 2024, 14:09 IST
<div class="paragraphs"><p>ಕೊರೊನಾ ವೈರಾಣು– ಸಾಂಕೇತಿಕ ಚಿತ್ರ</p></div>

ಕೊರೊನಾ ವೈರಾಣು– ಸಾಂಕೇತಿಕ ಚಿತ್ರ

   

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (IISc) ಪ್ರಾಧ್ಯಾಪಕ ಹಾಗೂ ಅವರ ತಂಡವು ಸಂಶ್ಲೇಷಿತ ಪ್ರತಿಜನಕ (ಆ್ಯಂಟಿಜೆನ್)ವನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಕೋವಿಡ್‌–19 ಸೋಂಕಿಗೆ ಅತ್ಯಂತ ಪರಿಣಾಮಕಾರಿ ಲಸಿಕೆ ತಯಾರಿಕೆಯಲ್ಲಿ ಬಳಸಬಹುದಾಗಿದೆ.

IIScಯ ಆಣ್ವಿಕ ಜೈವಿಕಭೌತವಿಜ್ಞಾನ ವಿಭಾಗದ ಪ್ರಾಧ್ಯಾಪಕ ರಾಘವನ್ ವರದರಾಜನ್ ಅವರ ನೇತೃತ್ವದ ತಂಡ ಈ ಪ್ರತಿಜನಕವನ್ನು ಅಭಿವೃದ್ಧಿಪಡಿಸಿದ್ದು, ಇದು ಕೋವಿಡ್ ಮಾತ್ರವಲ್ಲದೇ ಸಾರ್ಸ್‌–ಕೋವಿ–2 ಹಾಗೂ ಸದ್ಯ ಇರುವ ಇತರ ಯಾವುದೇ ರೂಪಾಂತರ ವೈರಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ.

ADVERTISEMENT

ಎನ್‌ಪಿಜೆ ವ್ಯಾಕ್ಸಿನ್‌ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಈ ಅಂಶವನ್ನು ಹೇಳಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಲಸಿಕೆಯು ಸಾರ್ಸ್‌ ಕೋವಿ–2 ವಿರುದ್ಧ ಹೋರಾಡುವ ಉತ್ತಮ ಫಲಿತಾಂಶ ಹೊಂದಿದೆ. ಆದರೆ ವೈರಾಣುವಿನ ರೂಪಾಂತರ ತ್ವರಿತಗತಿಯಲ್ಲಿ ಆಗುತ್ತಿರುವುದರಿಂದ ಅದರ ಪ್ರತಿಕಾಯ ಸಾಮರ್ಥ್ಯ ಸಾಕಾಗುವುದಿಲ್ಲ. ಇದೇ ನಿಟ್ಟಿನಲ್ಲಿ ನಡೆಸಿದ ಸಂಶೋಧನೆ ಉತ್ತಮ ಫಲಿತಾಂಶ ನೀಡಿದೆ ಎಂದೆನ್ನಲಾಗಿದೆ.

ಪ್ರಯೋಗದಲ್ಲಿ ಸಾರ್ಸ್‌ ಕೋವಿ–2 ಪ್ರೊಟೀನ್ ಪಡೆದು ಅದರದ್ದೇ ಆರ್‌ಬಿಡಿಯನ್ನು ಅಭಿವೃದ್ಧಿಪಡಿಸಲಾಗಿತ್ತು. ಇದು ಹೆಚ್ಚಿನ ಪ್ರತಿರೋಧಕ ಶಕ್ತಿಯನ್ನು ಹೊಂದಿತ್ತು. ಇದನ್ನೇ ಹೋಲುವ ಹೈಬ್ರೀಡ್ ಪ್ರೊಟೀನ್‌ ಆರ್‌ಎಸ್‌2 ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದರು. ಈ ಎರಡನ್ನೂ ಸೇರಿಸಿ ಹೊಸ ಸಂಶ್ಲೇಷಿತ ಪ್ರತಿಜನಕವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವರದರಾಜನ್, ‘ಕೋವಿಡ್ ಭಾರತದಲ್ಲಿ ಪ್ರಬಲವಾಗುವ ಮೊದಲೇ ಈ ಲಸಿಕೆಯ ಅಭಿವೃದ್ಧಿ ಕುರಿತು ನಮ್ಮ ತಂಡವು ಸಂಶೋಧನೆ ಆರಂಭಿಸಿತ್ತು. ಆಗ ನಮಗೆ ಬಿಲ್ ಮತ್ತು ಮೆಲಿಂಡಾ ಗೇಟ್ಸ್‌ ಪ್ರತಿಷ್ಠಾನವು ಆರ್ಥಿಕ ನೆರವು ನೀಡುತ್ತಿತ್ತು’ ಎಂದಿದ್ದಾರೆ.

ಈ ಸಂಶೋಧಕರ ತಂಡವು 2000ನೇ ಇಸವಿಯಿಂದ ವೈರಾಣುಗಳಿಗೆ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದೆ. ಏಡ್ಸ್‌ ಹಾಗೂ ಇನ್‌ಫ್ಲುಯೆನ್ಜಾ ವಿರುದ್ಧ ಪ್ರತಿಜನಕವನ್ನು ಅಭಿವೃದ್ಧಿಪಡಿಸಿದ್ದಾರೆ. ಸದ್ಯ ಮಿನ್‌ವ್ಯಾಕ್ಸ್ ಎಂಬ ಸ್ಟಾರ್ಟ್‌ಅಪ್ ಜತೆಗೂಡಿ ಈ ಪ್ರತಿಜನಕವನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಸಂಪೂರ್ಣ ಸಂಶೋಧನೆ IIScಯಲ್ಲೇ ಆಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.